Connect with us


      
ಸಾಮಾನ್ಯ

ಅಮ್ಮ ಎಂದರೆ ಬರೀ ಅಮ್ಮ ಮಾತ್ರವೇ?

Kumara Raitha

Published

on

ಶ್ರೀದೇವಿ ಕೆರೆಮನೆ

ಅಂಕಣ: ಮುಖಗಳು

ʼಟೀಚರ್ ನಾನು ಒಂದು ಮತ್ತು ಎರಡನೆ ತಾರೀಖಿನಂದು ಕೆಲಸಕ್ಕೆ ಬರೋದಿಲ್ಲʼ ಮನೆಕೆಲಸದ ಸಹಾಯಕಿ ಹೇಳಿದಾಗ ನನಗೆ ಅಷ್ಟೇನೂ ಅಚ್ಚರಿ ಎನ್ನಿಸಲಿಲ್ಲ. ಅವಳ ಮಗ ಹತ್ತನೆ ತರಗತಿ ಓದುತ್ತಿದ್ದಾನೆ. ತಾನು ಮನೆಗೆಲಸ ಮಾಡಿದರೂ ಮಗ ಒಳ್ಳೆಯ ಶಾಲೆಯಲ್ಲಿ ಓದಿ ಶಿಕ್ಷಣ ಪಡೆಯಲಿ ಎಂಬುದು ಅವಳ ಆಸೆ. ಹೀಗಾಗಿ ನಗರದ ಪ್ರತಿಷ್ಠಿತ ಖಾಸಗಿ ಶಾಲೆಯೊಂದಕ್ಕೆ ಡೊನೆಶನ್ ಕೊಟ್ಟು ಸೇರಿಸಿದ್ದಾಳೆ.

ಹೀಗಾಗಿ ಪರೀಕ್ಷೆಯಲ್ಲಿ ಓದಲಿ ಎಂದು ರಜೆ ಹಾಕುತ್ತಿದ್ದಾಳೆ ಎಂದು ಭಾವಿಸಿ ‘ಮಗನಿಗೆ ಓದಿಸಲು ರಜೆನಾ?’ ಎಂದೆ. ‘ಇಲ್ಲ ಟೀಚರ್ ಯುಗಾದಿ ಅಲ್ವಾ? ಊರಿಗೆ ಹೋಗಿ ಬರ್ತೀನಿ.’ ಎಂದಳು ಒಂದು ಕ್ಷಣ ನಾನು ಕಕ್ಕಾಬಿಕ್ಕಿಯಾದೆ. ಮಗನಿಗೆ ಪರೀಕ್ಷೆ ಅಲ್ವಾ? ಈಗ ಊರಿಗೆ ಹೋಗ್ತೀಯಾ? ಅಚ್ಚರಿಯಿಂದ ಕೇಳಿದೆ. ಹೂಂ ಟೀಚರ್. ಊರಲ್ಲಿ ಜಾತ್ರೆ ಇದೆ. ಮನೆಯಲ್ಲಿ ಬರಲೇಬೇಕು ಅಂದಿದ್ದಾರೆ ಹೋಗಿ ಬರ್ತೀವಿ. ಎಂದಳು. ‘ನಿನ್ನ ಗಂಡ ಇರ್ತಾನಲ್ಲ ಬಿಡು. ಅವನು ನೋಡ್ಕೋತಾನೆ’ ಎಂದು ನನ್ನನ್ನೇ ನಾನು ಸಮಾಧಾನ ಮಾಡಿಕೊಳ್ಳುವಂತೆ ಹೇಳಿಕೊಂಡೆ. ‘ಇಲ್ಲ ಟೀಚರ್ ಅವರೂ ಬರ್ತಾರೆ. ಮಗಳಿಗೆ ಪರೀಕ್ಷೆ ಮುಗಿದಿರುತ್ತದೆ. ಹೀಗಾಗಿ ಮೂವರೂ ಹೋಗ್ತೀವಿ. ಮಗನನ್ನು ಇಲ್ಲೇ ಸಂಬಂಧಿಕರ ಮನೆಲಿ ಬಿಟ್ಟು ಹೋಗಿರ್ತೀವಿ. ಹೇಗೂ ಎರಡೇ ದಿನಗಳಲ್ಲಿ ವಾಪಸ್ ಬರ್ತಿವಿ’ ಎಂದಳು.

ಮಗ ಎಲ್ಲಿರ್ತಾನೆ? ಎಂದು ಬಾಯಿಗೆ ಬಂದ ಪ್ರಶ್ನೆಯನ್ನು ಕೇಳಲೂ ಅವಕಾಶ ನೀಡದಂತೆ. ‘ಅಲ್ಲಾ. ಪರಿಕ್ಷೆ ಸಮಯದಲ್ಲಿ ಬೇರೆಯವರ ಮನೆಯಲ್ಲಿ ಸರಿಯಾಗಿ ಓದಿಕೊಳ್ಳುವುದಕ್ಕೆ ಆಗುತ್ತಾ?’ ಅನುಮಾನಿಸುತ್ತ ಕೇಳಿದೆ. ‘ಅವನಿಗೆ ಬೇಕು ಅಂದರೆ ಓದ್ಕೋತಾನೆ ಬಿಡಿ ಟೀಚರ್. ಅವರ ಬದುಕು, ಅವರ ಜೀವನ. ಓದ್ತಾನೆ ಅಂದರೆ ಎಲ್ಲಿತನಕ ಹೇಳ್ತಾನೋ ಅಲ್ಲಿಯವರೆಗೆ ಓದಿಸೋದು. ಓದಲ್ಲ ಅಂದರೆ ನಮ್ಮ ಹಾಗೆ ಎಲ್ಲೋ ಕೂಲಿ ಮಾಡ್ಕೊಂಡು ಬದ್ಕೋತಾನೆ.. ನಮಗೂ ಒಂದು ಬದುಕು ಖುಷಿ ಅಂತ ಇಲ್ವಾ? ನಾವಾದರೂ ಎಷ್ಟು ಅಂತ ಮಕ್ಕಳಿಗಾಗಿ ನಮ್ಮ ಖುಷಿ ಬಿಟ್ಟು ಕುಳ್ಳುವುದು? ನಮಗೂ ವಯಸ್ಸಾಗ್ತಾ ಬಂತು. ಇನ್ನೆಷ್ಟು ದಿನ ಈ ಜಾತ್ರೆಯ ಖುಷಿ ಸಿಗುತ್ತದೆ?’ ಮಾಮೂಲಿ ಎಂಬಂತೆ ನುಡಿದಳು. ಒಂದು ಕ್ಷಣ ಬೋಧಿವೃಕ್ಷದ ಕೆಳಗೆ ಬುದ್ಧನಿಗೆ ಆದ ಜ್ಞಾನೋದಯ ನನಗೂ ಆದಂತೆನಿಸಿತು. ಅಲ್ವಾ? ಅದೆಷ್ಟು ವರ್ಷ ಮಕ್ಕಳಿಗೆಂದು ನಮ್ಮ ಖುಷಿಯನ್ನು ಬಿಟ್ಟು ನಾವು ನೀರಸವಾಗಿ ಬದುಕುವುದು?

ಹಾಗೆಂದು ಈ ತರಹದ ಮಾತುಗಳು ನನಗೆ ಹೊಸದೇನೂ ಅಲ್ಲ. ಶಿಕ್ಷಕಿಯಾಗಿರುವುದರಿಂದ, ಅದರಲ್ಲೂ ಹೈಸ್ಕೂಲು ಶಿಕ್ಷಕಿಯಾಗಿರುವುದರಿಂದ, ಮತ್ತೂ ಹೇಳಬೇಕೆಂದರೆ ಇಂಗ್ಲೀಷ್ ಭಾಷೆಯನ್ನು ಕಲಿಸುವ ಶಿಕ್ಷಕಿಯಾಗಿರುವುದರಿಂದ ಅದಕ್ಕಿಂತ ಹೆಚ್ಚಾಗಿ ಈ ವರ್ಷ ಹತ್ತನೆ ತರಗತಿಯ ವರ್ಗ ಶಿಕ್ಷಕಿಯಾಗಿರುವುದರಿಂದ ಇಂತ ಬಹಳಷ್ಟು ಮಾತುಗಳನ್ನು ದಿನನಿತ್ಯ ಕೇಳುತ್ತಲೇ ಇರಬೇಕಾಗುತ್ತದೆ.

‘ಟೀಚರ್ ಶಿರಸಿಯ ಜಾತ್ರೆಗೆ ಹೋಗಬೇಕು. ಶನಿವಾರ ಅರ್ಧ ದಿನ ಬರೋದಿಲ್ಲ. ರವಿವಾರ ಮನೆಗೆ ವಾಪಸ್ ಬರ್ತೇವೆ. ಸೋಮವಾರ ಖಂಡಿತಾ ಶಾಲೆಗೆ ಬರ್ತಾಳೆ.’ ಹತ್ತನೆ ತರಗತಿಯ ವಿದ್ಯಾರ್ಥಿನೊಬ್ಬಳ ಅಮ್ಮ ಫೋನ್ ಮಾಡಿ ಅಂಗಲಾಚುವಂತೆ ಕೇಳುತ್ತಿದ್ದಳು. ಮಗಳು ಹತ್ತನೆ ಕ್ಲಾಸು. ಇದೊಂದು ವರ್ಷ ಶಿರಸಿಗೆ ಹೋಗದಿದ್ದರೆ ಮಾರಿಕಾಂಬೆ ಸಿಟ್ಟು ಮಾಡಿಕೊಳ್ಳುವುದಿಲ್ಲ. ಈ ವರ್ಷ ಜಾತ್ರೆ ಬೇಡ. ಮತ್ತೆ ಮುಂದಿನ ಸಲದ ಜಾತ್ರೆಗೆ ಹೋಗಬಹುದು.’ ನಾನು ಅನುನಯಿಸುವಂತೆ ಹೇಳಿದೆ. ಮುಂದಿನ ಸಲದ ಜಾತ್ರೆ ಇನ್ನು ಎರಡು ವರ್ಷಗಳ ನಂತರ ಬರುತ್ತದೆ ಟೀಚರ್. ಆಗ ಬದುಕಿರ್ತೇವೋ ಇಲ್ವೋ. ಈ ಕೊರೋನಾ ಬಂದಾಗಿನಿಂದ ಯಾರು ಯಾವಾಗ ಸಾಯ್ತರೆ ಅಂತ ಹೇಳೋದಕ್ಕೇ ಆಗುದಿಲ್ಲ. ಅದೂ ಅಲ್ದೆ ಮಕ್ಕಳ ಪರೀಕ್ಷೆ ಅಂದ್ಕೊಂಡು ಸುಮ್ನಿದ್ರೆ ನಾವು ಜಾತ್ರೆ ನೋಡುದಾದ್ರೂ ಯಾವಾಗ? ಶನಿವಾರ ಒಂದು ದಿನ ರಜೆ ಮಾಡಸ್ತೆ. ಸೋಮವಾರ ಕಳಸ್ತೆ.’ ನನ್ನ ಮಾತಿಗೂ ಅವಕಾಶಕೊಡದಂತೆ ಫೋನ್ ಕರೆಯನ್ನು ಕಟ್ ಮಾಡಿದ್ದಳು ಆ ತಾಯಿ.

ಶಿರಸಿಯಲ್ಲೇ ಹುಟ್ಟಿ ಬೆಳೆದು, ಅಲ್ಲಿಯೇ ಕಾಲೇಜು ಓದಿ, ಒಂದು ವರ್ಷವೂ, ಅಷ್ಟೇಕೆ ಜಾತ್ರೆಯ ಒಂದು ದಿನವನ್ನೂ ನಾನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಕಾಲೇಜು ದಿನಗಳಲ್ಲಿ ಓದಲು ಪ್ರಾರಂಭ ಮಾಡುವುದೇ ಶಿರಸಿ ಜಾತ್ರೆ ಮುಗಿದ ನಂತರ ಎಂಬ ಅಲಿಖಿತ ನಿಯಮವೊಂದನ್ನು ಹಾಕಿಕೊಂಡವರಂತೆ ಜಾತ್ರೆಯ ಪೇಟೆ ಸುತ್ತಿ ಮುಗಿದಾದ ಮೇಲೆ ಓದಲು ತೊಡಗುತ್ತಿದ್ದೆವು. ಇದರ ನಂತರ ಈಗ ಮದುವೆಯಾಗಿ ಹದಿನೆಂಟು ವರ್ಷ ಕಳೆದಿದೆ. ಇಷ್ಟು ವರ್ಷಗಳ ಕಾಲವೂ ಬಸಿರು ಬಾಣಂತನ ಮಕ್ಕಳ ಪರೀಕ್ಷೆ ಎಂದೆಲ್ಲ ಒತ್ತಡದಲ್ಲಿ ಶಿರಸಿ ಜಾತ್ರೆಗೆ ಹೋಗಬೇಕು ಎಂದು ಅಂದುಕೊಳ್ಳುತ್ತಿದ್ದರೂ ಹೋಗಲಾಗುದಿದ್ದುದಕ್ಕೆ ನನಗೆ ನಾನೇ ಶಪಿಸಿಕೊಳ್ಳುವಂತಾಯ್ತು.

‘ಟೀಚರ್ ನಾಡಿದ್ದು ತಂಗಿಯ ಮದುವೆ. ಮಗನನ್ನು ಕರ್ಕೊಂಡು ಹೋಗ್ತೇನೆ. ಮನೆಯಲ್ಲಿ ಎಲ್ಲರೂ ಹೊರಟಿದ್ದೇವೆ.’ ಮತ್ತೊಬ್ಬರು ಅಮ್ಮ ಶಾಲೆಗೇ ಬಂದಿದ್ದರು. “ಈಗಲಾ? ಪ್ರಿಪರೇಟರಿ ಪರೀಕ್ಷೆ ನಡಿತಿದೆ. ಹೇಗೆ ಕರ್ಕೊಂಡು ಹೋಗ್ತೀರಿ? ಸೋಮವಾರ ಕೂಡ ಪರೀಕ್ಷೆ ಇದೆ.’ ನನಗೆ ಗಡಿಬಿಡಿ ಹತ್ತಿದಂತಾಗಿತ್ತು. ‘ಬಿಡಿ ಟೀಚರ್, ಇದೇನು ವಾರ್ಷಿಕ ಪರೀಕ್ಷೆ ಅಲ್ವಲ್ಲ?’ ಒಂದು ಪರೀಕ್ಷೆ ತಪ್ಪಿದ್ರೆ ಏನಾಗೋದಿಲ್ಲ.’ ಅಮ್ಮ ನಿರಾಳವಾಗಿ ಹೇಳಿದ್ದು ಕೇಳಿಯೇ ನನಗೆ ಉಸಿರು ನಿಂತಂತಾಗಿತ್ತು. ಅಯ್ಯೋ ಹಾಗೇನಾದಾರೂ ಮಾಡಿ ಬಿಟ್ಟೀರಿ. ಇದು ರಾಜ್ಯಮಟ್ಟದ ಪ್ರಿಪರೇಟರಿ. ಸರಕಾರವೇ ಈ ಪರೀಕ್ಷೆ ನಡೆಸುತ್ತಿದೆ. ಇದರ ಅಂಕಗಳನ್ನು ಆನ್ ಲೈನ್ ನಲ್ಲಿ ಎಸ್ ಎ ಟಿ ಎಸ್ ನಲ್ಲಿ ತುಂಬಬೇಕು ಎಂದೆಲ್ಲ ಹೇಳಿದ ನಂತರ ‘ಸೋಮವಾರ ಕೊನೆಯ ಪರೀಕ್ಷೆ ಅಲ್ವಾ? ಅವನು ಅಜ್ಜಿ ಮನೆಯಿಂದಲೇ ಬರ್ತಾನೆ.’ ಎಂದಿದ್ದರು.

ಮದುವೆ ಮನೆಯ ಗಲಾಟೆಯಲ್ಲಿ ಏನು ಓದಲಾಗ್ತದೆ? ನೀವು ಪರೀಕ್ಷೆ ಮುಗಿಸಿ ಹೋಗಿ ಎಂದ ಮಾತಿಗೆ ಅವರಿಗೆ ಸಿಟ್ಟು ಬಂದುಬಿಟ್ಟಿತ್ತು. ‘ಚಿಕ್ಕಮ್ಮನ ಮದುವೆಗೂ ಹೊಗಬಾರದು ಅಂದರೆ ಹೇಗೆ? ಇವನಿಂದಾಗಿ ನಾನು ನನ್ನ ತಂಗಿ ಮದುವೆ ತಪ್ಪಿಸಿಕೊಳ್ಳಬೇಕಾ? ನನಗೆ ಈ ಮಕ್ಕಳನ್ನು ಬಿಟ್ಟು ಬೇರೆ ಏನೂ ಖುಷಿ ಅನ್ನೋದೇ ಬೇಡ್ವಾ? ಓದುವವನು ಎಲ್ಲಿದ್ದರೂ ಓದ್ತಾನೆ ಬಿಡಿ. ಇಲ್ಲದಿದ್ದರೆ ಅವನೇ ಅನುಭವಿಸ್ತಾನೆ,’ ಎನ್ನುತ್ತ ಆ ಅಮ್ಮ ಹೊರಟು ಹೋದಳು.

ಆಗೆಲ್ಲ ನನ್ನ ಅಪ್ಪ ಅಮ್ಮ ಕಣ್ಣ ಮುಂದೆ ಬರುತ್ತಾರೆ. ಮಕ್ಕಳ ಸಣ್ಣ ಸಾಧನೆಯನ್ನು ದೊಡ್ಡದೆಂಬಂತೆ ಖುಷಿಪಡುತ್ತ, ನಮ್ಮ ಸಣ್ಣ ಸೋಲಿಗೂ ತಾವೂ ಕುಗ್ಗಿ ಹೋಗುತ್ತ ಆದರೂ ನಮ್ಮೊಳಗೆ ಎಂದೂ ಕದಡದ ಆತ್ಮವಿಶ್ವಾಸ ಬೆಳೆಸಿದವರು. ‘ಯಾವತ್ತು ಕೆರೆಮನೆ ಸರ್ ಮಗಳು ಎನ್ನುವುದು ತಪ್ಪಿ ಶ್ರೀದೇವಿ ಕೆರೆಮನೆಯ ಅಪ್ಪಎಂದು ಜನ ಗುರುತಿಸುತ್ತಾರೋ ಅದೇ ನನ್ನ ಜೀವನದಲ್ಲಿ ಅತಿ ದೊಡ್ಡ ಹಬ್ಬದ ದಿನ’ ಎಂದಿದ್ದರು. ಯಾವತ್ತೋ ಒಂದುದಿನ ಅಚಾನಕ್ ಆಗಿ ಬಸ್ ನಲ್ಲಿ ಸಿಕ್ಕ ಖ್ಯಾತ ಬಂಡಾಯ ಕವಿಗಳಾದ ಆರ್ ವಿ ಬಂಢಾರಿಯವರು ‘ಶ್ರೀದೇವಿಯ ತಂದೆಯವರಲ್ವಾ?’ ಎಂದು ಕೇಳಿದ್ದಕ್ಕೆ ಖುಷಿ ಪಟ್ಟು ಮನೆಯಲ್ಲಿ ಪಾಯಸ ಮಾಡಲು ಹೇಳಿದ್ದು ನನಗಿನ್ನೂ ಚೆನ್ನಾಗಿ ನೆನಪಿದೆ. ಇವತ್ತಿಗೂ ಮಕ್ಕಳ ವಿಷಯ ಬಿಡಿ, ಮೊಮ್ಮಕ್ಕಳ ಪರೀಕ್ಷೆ ಎಂದರೆ ತಾವೇ ಪರೀಕ್ಷೆ ಎದುರಿಸುವವರಂತೆ ಚಡಪಡಿಸುವಷ್ಟು ಸೂಕ್ಷ್ಮ.

ಆದರೆ ಈಗ ಅಂತಹ ಭಾವನಾತ್ಮಕತೆಯ ಹಳೆಯ ನೀರು ಹರಿದು ಸಮುದ್ರ ಸೇರುವ ಹೊತ್ತು. ಅಪ್ಪನಿಗೆ ತನ್ನದೆ ನೌಕರಿಯ, ಪ್ರಮೋಶನ್ ನ್ನಿನ ಚಿಂತೆ. ಮನೆ ನಿಭಾಯಿಸುವುದು ಹೇಗೆ ಎನ್ನುವ ಕಳವಳ. ಅಮ್ಮನಿಗೂ ಅವಳದ್ದೇ ಆದ ಪ್ರತ್ಯೇಕ ಬದುಕಿದೆ. ಕರಿಯರ್ ಇದೆ. ಅವಳದ್ದೇ ಒಂದು ಲೋಕವಿದೆ. ಅದು ತಪ್ಪೇನೂ ಅಲ್ಲ.. ಅಮ್ಮ ಎಂದರೆ ಮಕ್ಕಳಿಗೋಸ್ಕರ ಬದುಕುವವಳು ಎನ್ನುವ ಟ್ರೆಂಡ್ ಈಗ ಬದಲಾಗುತ್ತಿದೆ.

ಒಂದು ರೀತಿಯಲ್ಲಿ ಇದು ಅಪೇಕ್ಷಿತ ಬದಲಾವಣೆ. ಹೆಣ್ಣೆಮದರೆ ತಾಯಿ, ಹೆಂಡತಿ, ಅಕ್ಕ ತಂಗಿ ಎಂದೆಲ್ಲ ಮಹಿಳಾ ದಿನಾಚರಣೆಯಂದು ಭಾಷಣ ಮಾಡುವುದನ್ನು ಕಂಡಾಗಲೆಲ್ಲ ಹೆಣ್ಣೆಂದರೆ ಬೇರೆಯವರಿಗೆ ಏನಾಗಬೇಕು ಎಂಬುದನ್ನು ಮಾತ್ರ ಯಾಕೆ ಗಮನಿಸುತ್ತೇವೆಯೆ ಹೊರತೂ ಅವಳೊಂದು ಸ್ವತಂತ್ರ ಜೀವಿ, ಅವಳಿಗೆ ಅವಳದ್ದೇ ಆದ ಅಸ್ತಿತ್ವವಿದೆ, ಅವಳದ್ದೇ ಆದ ಖಾಸಗಿ ಬದುಕಿದೆ ಎಂದೇ ಯೋಚಿಸುವ ಗೊಡವೆಗೆ ಹೋಗುವುದಿಲ್ಲ. ಹೀಗಾಗಿಯೇ ಇಂದಿನ ಅಮ್ಮ ತನ್ನದೂ ಒಂದು ಬದುಕಿದೆ ಎಂದು ಹೇಳಿದರೆ ಹೌಹಾರಿ ಬೀಳುತ್ತಿದ್ದೇವೆ. ಆದರೆ ನಿರೀಕ್ಷಿತ ಸುಸ್ಥಿರ ಸಮಾಜಕ್ಕಾಗಿ ಇಂದು ಆಕೆ ತನ್ನ ಅಸ್ಮಿತೆಯನ್ನು ತೋರಿಸುವುದು ಅತ್ಯಂತ ಹೆಚ್ಚು ಅಗತ್ಯ.

ಕೊರೋನ್ನೋತ್ತರ ಕಾಲಘಟ್ಟದಲ್ಲಿ ಮಕ್ಕಳೂ ಬದಲಾಗಿದ್ದಾರೆ. ಮೊದಲಿನಂತೆ ಓದಬೇಕು, ಹೆಚ್ಚಿಗೆ ಅಂಕ ಗಳಿಸಬೇಕು ಎನ್ನುವ ತುಡಿತವೂ ಕಡಿಮೆಯಾಗಿದೆ. ಓದು ಎನ್ನುವ ಶಿಕ್ಷಕರ, ಪಾಲಕರ ಒತ್ತಾಯಕ್ಕೆ ಓದುವವರಂತೆ ಒಂದಿಷ್ಟು ಕಾಟಾಚಾರದ ಓದು ಸಾಗುತ್ತಿದೆ.

ಲೇಖಕರ ಪರಿಚಯ:

ಕನ್ನಡ ಸಾರಸ್ವತ ಲೋಕದಲ್ಲಿ ಶ್ರೀದೇವಿ ಕೆರೆಮನೆ ಚಿರಪರಿಚಿತ ಹೆಸರು. ವೃತ್ತಿಯಲ್ಲಿ ಅಧ್ಯಾಪಕರು. ಕನ್ನಡನಾಡಿನ ಕರಾವಳಿಯವರು (ಉತ್ತರ ಕನ್ನಡ) ಹೊಸ ರೀತಿಯಲ್ಲಿ ಬರೆಯುತ್ತಿರುವ ಅವರು ಕಾವ್ಯ ಕಟ್ಟುವ ಕ್ರಿಯೆಯಲ್ಲಿ ಸಿದ್ಧಹಸ್ತರು.  ಕಥೆ, ಕಾದಂಬರಿ – ಲಲಿತ ಪ್ರಬಂಧ ಏನೇ ಬರೆದರೂ ಅವುಗಳು ಸಮಾಜದ ಒಳಿತು ಕೆಡುಕಗಳ ಬಗ್ಗೆ ಪಾತಾಳ ಗರಡಿ ಹಾಕಿ ಬರೆದವುಗಳೇ ಆಗಿರುತ್ತವೆ. ತೇಲಿಸಿ ಬರೆಯುವುದು ಅವರಿಗೆ ಗೊತ್ತಿಲ್ಲ. ದಿಟ್ಟ ಬರೆಹಗಳು. ಇವರ ಕೃತಿಗಳು ಜನಮೆಚ್ಚುಗೆ ಜೊತೆಜೊತೆಗೆ ವಿರ್ಮಶಕರ ಮೆಚ್ಚುಗೆಯನ್ನೂ, ನಾಡಿನ ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಗಳಿಸಿವೆ. ಇವರ ಅಂಕಣ ಬರೆಹಗಳು “ಮುಖಗಳು” ಹೆಸೆರಿನಲ್ಲಿ ಪ್ರತಿವಾರ ದೇಶದ ಪ್ರತಿಷ್ಠಿತ ಸುದ್ದಿಸಂಸ್ಥೆ ಯು.ಎನ್.ಐ. ಯಲ್ಲಿ ಪ್ರಕಟವಾಗುತ್ತವೆ ಎಂದು ತಿಳಿಸಲು ಸಂತೋಷವಾಗುತ್ತದೆ.

Share