Connect with us


      
ದೇಶ

ಆರ್ಯನ್ ಖಾನ್ ಡ್ರಗ್ ಕೇಸ್; ₹1.25 ಕೋಟಿ ಮಾನನಷ್ಟ ಮೊಕದ್ದಮೆ!

Iranna Anchatageri

Published

on

ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ಮಹಾರಾಷ್ಟ್ರದಲ್ಲಿ ತೀವ್ರ ಜಟಾಪಟಿಗೆ ಕಾರಣವಾಗಿದೆ. ಸಮೀರ್ ವಾಂಖೆಡೆ ವಿರುದ್ಧ ಜಿದ್ದಿಗೆ ಬಿದ್ದರುವಂತೆ ಆರೋಪಗಳನ್ನು ಮಾಡುತ್ತಿರುವ ನವಾಬ್ ಮಲಿಕ್ ವಿರುದ್ಧ ವಾಂಖೆಡೆ ತಂದೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಮಹಾರಾಷ್ಟ್ರ ಮಂತ್ರಿಯಾಗಿರುವ ನವಾಬ್ ಮಲಿಕ್ ವಿರುದ್ಧ ವಾಂಖೆಡೆ ತಂದೆ 1.25 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಪ್ರಕರಣ ಸೋಮವಾರ ವಿಚಾರಣೆಗೆ ಬರಲಿದೆ.


ಅಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ವಾಂಖೆಡೆ ಕುಟುಂಬದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಮಾಧ್ಯಮ ವರದಿಗಳನ್ನು ನಿಷೇಧಿಸುವಂತೆ ಕೋರಿ ವಾಂಖೆಡೆ ತಂದೆ ಪರ ವಕೀಲ ಅರ್ಷದ್ ಶೇಖ್ ಬಾಂಬೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ನ್ಯಾಯಾಲಯದಲ್ಲಿ ಸೋಮವಾರ ವಿಚಾರಣೆಗೆ ಬರಲಿದೆ.
ಮಹಾರಾಷ್ಟ್ರದ ಹಿರಿಯ ಸಚಿವ ಮಲಿಕ್ ಶನಿವಾರ ಟ್ವೀಟ್ ಮಾಡಿದ್ದು, “ಆರ್ಯನ್ ಖಾನ್ ಅವರನ್ನು ಅಪಹರಿಸಿ ಸುಲಿಗೆಗೆ ಬೇಡಿಕೆ ಇಟ್ಟಿರುವ ಸಮೀರ್ ದಾವೂದ್ ವಾಂಖೆಡೆ ವಿರುದ್ಧ ಎಸ್‌ಐಟಿ ತನಿಖೆಗೆ ನಾನು ಒತ್ತಾಯಿಸಿದ್ದೆ. ಈಗ ಎರಡು ಎಸ್‌ಐಟಿಗಳನ್ನು (ರಾಜ್ಯ ಮತ್ತು ಕೇಂದ್ರ) ರಚಿಸಲಾಗಿದೆ. ಈ ಸಂದರ್ಭದಲ್ಲಿ ತನಿಖೆಯ ನಂತರ ಸತ್ಯಾಸತ್ಯತೆ ಬಹಿರಂಗವಾಗಲಿದೆ ಅಂತಾ ಎನ್ ಸಿ ಪಿ ಮುಖಂಡ ನವಾಬ್ ಮಲಿಕ್ ತಿಳಿಸಿದ್ದಾರೆ.
ಕಳೆದ ತಿಂಗಳು ಕ್ರೂಸ್ ನಾರ್ಕೋಟಿಕ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಮತ್ತು ಕನಿಷ್ಠ 19 ಮಂದಿಯನ್ನು ಎನ್‌ಸಿಬಿ ಬಂಧಿಸಿದೆ. ಈ ವೇಳೆ ಎನ್ ಸಿ ಬಿ ಮುಂಬೈ ವಿಭಾಗದ ಅಧಿಕಾರಯಾಗಿದ್ದ ಸಮೀರ್ ವಾಂಖೆಡೆ ವಿರುದ್ಧ ಸುಲಿಗೆ ಆರೋಪಗಳು ಕೇಳಿಬಂದಿದ್ದವು. ಈ ಕಾರಣದಿಂದಾಗಿ ಆರ್ಯನ್ ಖಾನ್ ಡ್ರಗ್ ಕೇಸ್ ಸೇರಿದಂತೆ 6 ಪ್ರಕರಣಗಳನ್ನು ವಿಶೇಷ ತನಿಖಾ ಸಂಸ್ಥೆಗೆ ಹಸ್ತಾಂತರಿಸಲಾಗಿದ್ದು, ಸಂಜಯ್ ಕುಮಾರ್ ಸಿಂಗ್ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ. ಆದ್ರೆ, ಮುಂಬೈನ ಐಷಾರಾಮಿ ಕ್ರೂಸ್ ಡ್ರಗ್ ಕೇಸ್ ನಲ್ಲಿ ಸುಲಿಗೆ ಹಾಗೂ ಯಾವುದೇ ರೀತಿಯ ತನಿಖಾ ಲೋಪಗಳನ್ನು ಸಮೀರ್ ವಾಂಖೆಡೆ ತಳ್ಳಿ ಹಾಕಿದ್ದಾರೆ.

Share