Connect with us


      
ಸಾಮಾನ್ಯ

ಕಾಮನ್‌ವೆಲ್ತ್‌ ಗೇಮ್ಸ್‌: ಅಶ್ವಿನಿ ಪೊನ್ನಪ್ಪರಿಗೆ ರಾಜ್ಯ ಸರಕಾರದಿಂದ 15 ಲಕ್ಷ ನಗದು ಪುರಸ್ಕಾರ

Iranna Anchatageri

Published

on

ಬೆಂಗಳೂರು: ಆಗಸ್ಟ್ 09 (ಯು.ಎನ್.ಐ.) ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿರುವ ಭಾರತೀಯ ಕ್ರೀಡಾಪಟುಗಳಿಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಭಾರತದ ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕ ಗೆಲ್ಲುವ ಮೂಲಕ ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಬ್ಯಾಡ್ಮಿಂಟನ್ ಮಿಕ್ಸಡ್ ಡಬಲ್ಸ್‌ನಲ್ಲಿ ಬೆಳ್ಳಿ ಗೆದ್ದ ಕನ್ನಡತಿ ಅಶ್ವಿನಿ ಪೊನ್ನಪ್ಪ ಅವರಿಗೆ ರಾಜ್ಯ ಸರ್ಕಾರದಿಂದ 15 ಲಕ್ಷ ರೂ ನಗದು ಪುರಸ್ಕಾರವನ್ನು ಸಚಿವ ಡಾ.ನಾರಾಯಣಗೌಡ ಅವರು ಘೋಷಿಸಿದ್ದಾರೆ.

ಈಗಾಗಲೇ ಕ್ರಿಕೆಟ್‌ನಲ್ಲಿ ಬೆಳ್ಳಿ ಪದಕ ವಿಜೇತೆ ರಾಜೇಶ್ವರಿ ಗಾಯಕ್ವಾಡ್ ಅವರಿಗೆ 15 ಲಕ್ಷ ಹಾಗೂ ವೇಟ್ ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದ ಗುರುರಾಜ ಪೂಜಾರಿಗೆ 8 ಲಕ್ಷ ನಗದು ಪುರಸ್ಕಾರ ಘೋಷಿಸಲಾಗಿದೆ. ಇವರೆಲ್ಲರಿಗೂ ಶೀಘ್ರದಲ್ಲೇ ಮುಖ್ಯಮಂತ್ರಿಗಳ ಮೂಲಕ ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು. ಇದೇ ವೇಳೆ ಅಮೃತ ಕ್ರೀಡಾ ದತ್ತು ಯೋಜನೆಯಲ್ಲಿ ಆಯ್ಕೆಯಾಗಿರುವ ಕ್ರೀಡಾಪಟುಗಳನ್ನು ಸತ್ಕರಿಸಲಾಗುವುದು ಎಂದು ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದ್ದಾರೆ.

ಅಮೃತ ಕ್ರೀಡಾ ದತ್ತು ಯೋಜನೆ ಮೂಲಕ ಕ್ರೀಡಾಪಟುಗಳಿಗೆ ಪ್ರೋತ್ಸಾಹ

ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಲು ನಮ್ಮ ಸರ್ಕಾರ ಬದ್ದವಾಗಿದೆ. ಅಮೃತ ಕ್ರೀಡಾ ದತ್ತು ಯೋಜನೆ ಮೂಲಕ ಕರ್ನಾಟಕದ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಇನ್ನೂ ಹೆಚ್ಚಿನ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಹೆಚ್ಚಿನ ಪದಕಗಳನ್ನು ತಂದು ಕೊಡುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯ ಹಾಗೂ ಪ್ರೋತ್ಸಾಹ ನೀಡಲು ನಮ್ಮ ಸರ್ಕಾರ ಸಿದ್ದವಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದ್ದಾರೆ.

Share