Published
5 months agoon
ಬೆಂಗಳೂರು, ಡಿ 8 (ಯುಎನ್ಐ) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ ಮುಂದುವರಿದಿದೆ. ಮಾರಕಾಸ್ತ್ರಗಳನ್ನು ಹಿಡಿದುಕೊಂಡು ದುಷ್ಕರ್ಮಿಗಳ ಗುಂಪೊಂದು ಹುಳಿಮಾವು ಠಾಣೆ ರೌಡಿಶೀಟರ್ ಜೆಸಿಬಿ ನಾರಾಯಣನ ಹತ್ಯೆಗೆ ನಡೆಸಿದ್ದ ಸಂಚು ವಿಫಲವಾಗಿದೆ.
ಡಿಎಲ್ಎಫ್ ರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳ ತಂಡವೊಂದು ಹಾಡಹಗಲೇ ಜೆಸಿಬಿ ನಾರಾಯಣ ಕಾರುನ್ನು ಅಡ್ಡಗಟ್ಟಿ ಹಲ್ಲೆ ನಡೆಸಲು ಯತ್ನ ನಡೆಸಿತ್ತು. ಅಪಾಯದ ಮುನ್ಸೂಚನೆ ಅರಿತು ಕೂದಲೆಳೆ ಅಂತರದಲ್ಲಿ ಜೆಸಿಬಿ ನಾರಾಯಣ ಪಾರಾಗಿದ್ದಾರೆ.
ಮಚ್ಚು-ಲಾಂಗ್ ಹಿಡಿದುಕೊಂಡು ತಾವು ಹಾಕಿದ್ದ ಸ್ಕೆಚ್ ನಂತೆ ಜೆಸಿಬಿ ನಾರಾಯಣನಿಗೆ ದುಷ್ಕರ್ಮಿಗಳು ಕಾದು ಕುಳಿತಿದ್ದರು. ಈ ವೇಳೆ ನಾರಾಯಣ ರಸ್ತೆಗೆ ಬರುತ್ತಿದ್ದಂತೆ ಕಾರಿನಿಂದ ಇಳಿದ ದುಷ್ಕರ್ಮಿಗಳು ಮಾರಾಕಾಸ್ತ್ರಗಳೊಂದಿಗೆ ದಾಳಿ ಮಾಡಲು ಯತ್ನಿಸಿದ್ದಾರೆ. ಸಿನಿಮೀಯ ರೀತಿಯಲ್ಲಿ ನಡೆದ ಈ ಘಟನೆಯಿಂದಾಗಿ ತಬ್ಬಿಬ್ಬಾದ ನಾರಾಯಣ ಕಾರನ್ನು ರಿವರ್ಸ್ ಚಲಾಯಿಸಿ ಪ್ರಾಣ ಉಳಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.
ಹಾಕಿದ್ದ ಪ್ಲಾನ್ ವಿಫಲವಾಗುತ್ತಿದ್ದಂತೆ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಘಟನೆ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿ ಕ್ಯಾಮೆರಾ ದೃಶ್ಯಾವಳಿ ಹಾಗೂ ದೂರನ್ನ ಆಧರಿಸಿ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.