Connect with us


      
ಕರ್ನಾಟಕ

ಸಭಾಪತಿ, ಪರಿಷತ್ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ!

Iranna Anchatageri

Published

on

ಬೆಂಗಳೂರು: ಮೇ 16 (ಯು.ಎನ್.ಐ.) ಸಭಾಪತಿ ಹಾಗೂ ವಿಧಾನ ಪರಿಷತ್ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಅಲ್ಲದೆ ಯಾವುದೇ ಸ್ಥಾನಮಾನದ ಬಗ್ಗೆ ಚರ್ಚೆ ಮಾಡದೆ ನಾಳೆ ಬಿಜೆಪಿ ಸೇರ್ಪಡೆಯಾಗುವುದಾಗಿ ಅವರು ತಿಳಿಸಿದ್ದಾರೆ.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಸವರಾಜ್ ಹೊರಟ್ಟಿ, ಇಂದು ನಾನು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ವಿಧಾನಪರಿಷತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ. ಬದಲಾವಣೆ ಬಗ್ಗೆ ಕೆಲವೊಮ್ಮೆ ಮನಸ್ಸಿಗೆ ಸಣ್ಣ-ಪುಟ್ಟ ನೋವಾಗುತ್ತೆ. ನನಗೆ ದೇವೇಗೌಡರ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ಅವರ ಬಳಿಗೆ ಹೋಗಿ ಮಾತನ್ನಾಡಲು ಧೈರ್ಯ ಆಗಲಿಲ್ಲ. ಹಾಗಾಗಿ ಪತ್ರ ಬರೆದಿದ್ದೇನೆ. ಈಗಿನ ಪರಿಸ್ಥಿತಿ ನೋಡಿದ್ರೆ ರಾಜಕೀಯದಲ್ಲಿ ಇರಬಾರದು ಅನ್ಸುತ್ತೆ. ಜನರು ಈಗ ಹಾಗೇ ಇದ್ದಾರೆ, ರಾಜಕಾರಣಿಗಳು ಹಾಗೇ ಇದ್ದಾರೆ ಎಂದು ಹೇಳಿದರು.

ನಾಳೆ ಬಿಜೆಪಿಗೆ ಸೇರುತ್ತಿರುವುದಾಗಿ ತಿಳಿಸಿದ ಅವರು, ನಾನು ಸಾಮಾನ್ಯ ಮನೆತನದಲ್ಲಿ ಹುಟ್ಟಿ ಬೆಳೆದವನು. ಸಾಮಾನ್ಯ ಶಿಕ್ಷಕನಾಗಿ ಇಂದು ಇಷ್ಟು ದೊಡ್ಡ ಸ್ಥಾನ ಅನುಭವಿಸಿದ್ದೇನೆ. ಸಚಿವ ಸ್ಥಾನ ಸಿಕ್ಕಿಲ್ಲ ಅಂತ ಒಂದು ದಿವಸವಾದ್ರೂ ಹೇಳಿಕೆ ನೀಡಿಲ್ಲ. ಜೆಡಿಎಸ್ ವರಿಷ್ಡರನ್ನು ಉಪಕಾರ ಸ್ಮರಣೆ ಮಾಡುತ್ತೇನೆ. ಆಕಸ್ಮಿಕವಾಗಿ ಕೆಲವೊಮ್ಮೆ ಬದಲಾವಣೆಗಳು ತನ್ನಷ್ಟಕ್ಕೆ ತಾನೇ ಆಗುತ್ತವೆ. ಬದಲಾವಣೆ ನಿರ್ಧಾರದಲ್ಲಿ ಆತ್ಮೀಯರು ಹಾಗೂ ಶಿಕ್ಷಕರ ಒತ್ತಾಯವೂ ಇತ್ತು. ರಾಷ್ಟ್ರದಲ್ಲಿ ಯಾವ ಪಕ್ಷ ಜಾತಿ ಬಿಟ್ಟು ಇವೆ ಹೇಳಿ? ಎಲ್ಲ ಪಕ್ಷದಲ್ಲೂ ಮೊದಲು ಯಾವ ಜಾತಿ ಎಷ್ಟು ಖರ್ಚು ಮಾಡ್ತೀಯಾ ಅಂತ ಕೇಳುತ್ತಾರೆ. ಇದುವರೆಗೆ ಒಬ್ಬರನ್ನು ಬಿಟ್ಟು ಯಾರೂ ಕೂಡ ಬಿಜೆಪಿ ಸೇರುವುದಕ್ಕೆ ವಿರೋಧಿಸಿಲ್ಲ ಎಂದರು.

ಸ್ವತಂತ್ರವಾಗಿ ಆರಿಸಿ ಬಂದಾಗ ಯಾವುದಾದರೂ ಪಕ್ಷದ ಆಸರೆ ಬೇಕಾಗುತ್ತದೆ. ಶಿಕ್ಷಕರ ಸಮಸ್ಯೆ ಬಗೆಹರಿಸಬೇಕಾದರೆ ಯಾರಾದರೂ ಬೇಕಾಗುತ್ತದೆ. ಸದನದಲ್ಲಿ ಹೆಚ್ಚು ಸ್ಪಂದನೆ ಸಿಗುತ್ತದೆ. ೪೨ ವರ್ಷದ ರಾಜಕೀಯ ಜೀವನದಲ್ಲಿ ಇದು ಮೊಟ್ಟ ಮೊದಲ ಬಾರಿಗೆ ಹೀಗಾಗಿದೆ. ಎಲ್ಲ ಅಧಿಕಾರ ಅನುಭವಿಸಿದ್ದೇನೆ. ಈಗಲೂ ಎಂಎಲ್ಸಿ ಆಗುತ್ತೇನೆ. ಕೆಲವೊಂದು ಬಾರಿ ಅನಿವಾರ್ಯವಾಗಿ ತೀರ್ಮಾನ ಮಾಡಬೇಕಾಗುತ್ತದೆ. ದೇವೇಗೌಡ ಕುಟುಂಬದ ಬಗ್ಗೆ ನನಗೆ ಬೇಸರ ಪಡುವಂತ ಘಟನೆ ಎಂದೂ ಆಗಿಲ್ಲ. ಮಂತ್ರಿಯಾದಾಗಲೂ ಇಲ್ಲದಿದ್ದಾಗಲೂ ನಾನು ಅವರ ಜೊತೆಗೆ ಇದ್ದೆ. ದೇವೇಗೌಡ ಬಗ್ಗೆಯಾಗಲಿ ಉಳಿದವರ ಬಗ್ಗೆಯಾಗಲಿ ಅಸಮಾಧಾನ ಇಲ್ಲ. ಇಂದಿನ ರಾಜಕೀಯ ಪರಿಸ್ಥಿತಿ ಹದಗೆಟ್ಟಿದೆ. ಆದರೆ, ನಮಗೆಲ್ಲ ಡ್ರಗ್ ಅಡಿಕ್ಟ್ ತರಹ ರಾಜಕೀಯ. ವ್ಯವಸ್ಥೆಯಲ್ಲಿ ಮನಸ್ಸು ಇರುತ್ತದೆಯೋ ಬಿಡುತ್ತದೆಯೋ ಆದರೂ ಇರಬೇಕಾಗುತ್ತದೆ ಎಂದು ತಿಳಿಸಿದರು.

ಮತಾಂತರ ನಿಷೇಧ ಕಾಯ್ದೆ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, ಸದನದಲ್ಲಿ ಬಂದಾಗ ಹೇಳುತ್ತೇನೆ. ಮೋಹನ್ ಲಿಂಬಿಕಾಯಿಯವರ ವಿರೋಧದ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ನಿಯಮದ ಪ್ರಕಾರ ಉಪಸಭಾಪತಿಗಳಿಗೆ ಸಭಾಪತಿ ರಾಜೀನಾಮೆ ಸಲ್ಲಿಸಬೇಕು. ಆದರೆ ಉಪಸಭಾಪತಿ ಸ್ಥಾನ ಖಾಲಿ ಇದೆ. ಹಾಗಾಗಿ ಉಪ ಸಭಾಪತಿಗಳಿಗೆ ಪತ್ರ ಉಲ್ಲೇಖಿಸಿ ಪರಿಷತ್ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ ಎಂದು ಹೇಳಿ ರಾಜೀನಾಮೆ ಪತ್ರಕ್ಕೆ ಬಸವರಾಜ ಹೊರಟ್ಟಿ ಸಹಿ ಮಾಡಿದರು.

ಸಭಾಪತಿ ಹಾಗೂ ಪರಿಷತ್ ಸದಸ್ಯ ಸ್ಥಾನ ಎರಡಕ್ಕೂ ರಾಜೀನಾಮೆ ನೀಡಿದ ಬಳಿಕ ಹೊರಟ್ಟಿ, ಏಳು ಭಾರಿ ಜನರು ನನ್ನನ್ನ ಆರಿಸಿ ಕಳುಹಿಸಿದ್ದಾರೆ. ಶಿಕ್ಷಕರ ಕಷ್ಟಕ್ಕೆ ನಿರಂತರವಾಗಿ ಸ್ಪಂದಿಸುತ್ತಿದ್ದೇನೆ. ಇಡೀ ದೇಶದಲ್ಲಿ ನನ್ನ ರೀತಿ ಬೇರೆ ಯಾರನ್ನೂ ಆರಿಸಿ ಕಳುಹಿಸಿಲ್ಲ. ಇಂದು ಈ ಸ್ಥಾನಕ್ಕೆ ಬರಲು ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಮೊದಲು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಕಳೆದ ೨೦೦೦ದಿಂದ ಇಲ್ಲಿಯವರೆಗೂ ಜೆಡಿಎಸ್ ನಲ್ಲಿದ್ದೆ. ದೇವೇಗೌಡರು ಎಲ್ಲಾ ರೀತಿಯಲ್ಲೂ ಸಹಕಾರ ನೀಡಿದ್ದಾರೆ. ಕುಟುಂಬದ ಸದಸ್ಯರಂತೆ ನನ್ನನ್ನ ನೋಡಿಕೊಂಡಿದ್ದಾರೆ. ಶಿಕ್ಷಕರ ಒತ್ತಾಯದ ಕಾರಣ ಹಾಗೂ ಅನಿವಾರ್ಯವಾಗಿ ಪಕ್ಷ ಬದಲಿಸುತ್ತಿದ್ದೇನೆ. ಸ್ವತಂತ್ರವಾಗಿ ಸ್ಪರ್ಧಿಸಿದರೂ ಪಕ್ಷವೊಂದರ ಆಸರೆ ಬೇಕೇ ಬೇಕು. ಯಾವುದೇ ಪಕ್ಷದಿಂದ ನಿಂತರೂ ನಾನು ಎಂಎಲ್‌ಸಿ ಆಗುತ್ತೇನೆ. ನನ್ನ ಭವಿಷ್ಯದ ಬಗ್ಗೆ ಯಾರೂ ಚಿಂತೆ ಮಾಡುವ ಅಗತ್ಯವಿಲ್ಲ. ಯಾವುದೇ ಅಧಿಕಾರಕ್ಕಾಗಿ ಪಕ್ಷ ಬದಲಿಸುತ್ತಿಲ್ಲ ಎಂದು ಹೇಳಿದರು.

ಸ್ಥಾನಮಾನದ ಬಗ್ಗೆ ಚರ್ಚೆಯಾಗಿಲ್ಲ : ನಾಳೆ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸೇರ್ಪಡೆಯಾಗ್ತೀನಿ ಎಂದು ತಿಳಿಸಿದ ಹೊರಟ್ಟಿ, ಅಮಿತ್ ಶಾ ಅವರ ಜೊತೆ ಏನೂ ವಿಶೇಷ ಚರ್ಚೆ ಮಾಡಿಲ್ಲ. ಯಾವುದೇ ಸ್ಥಾನಮಾನದ ಬಗ್ಗೆಯೂ ಚರ್ಚೆಯಾಗಿಲ್ಲ ಎಂದು ಹೇಳಿದರು.

Share