Published
5 months agoon
ಬೆಂಗಳೂರು: ಡಿಸೆಂಬರ್ ೧೫ (ಯು.ಎನ್.ಐ.) ಬಿಡಿಎ ನಿರ್ಮಿತ ಹತ್ತಾರು ಹಳೆಯ ಲೇಔಟ್ಗಳಲ್ಲಿ ಮೂರು ದಶಕಗಳಿಂದ ಖಾಲಿಯಿದ್ದ ದುಬಾರಿ ಬೆಲೆಯ 10 ಸಾವಿರ ಮಧ್ಯದ ನಿವೇಶನಗಳನ್ನು ಗುರುತಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅವುಗಳನ್ನು -ಹರಾಜು ಮೂಲಕ ಮಾರಾಟ ಮಾಡಲು ನಿರ್ಧರಿಸಿದೆ.
ಸುಮಾರು 20 ರಿಂದ 30 ವರ್ಷಗಳ ಹಿಂದೆ ಬಿಡಿಎ ನಿರ್ಮಿಸಿದ ಹಳೆಯ ಲೇಔಟ್ಗಳಲ್ಲಿ ಸಾಕಷ್ಟು ನಿವೇಶನಗಳು ಮಾರಾಟವಾಗದೆ ಉಳಿದಿವೆ. ಈ ಪೈಕಿ ಕೆಲವು ನಿವೇಶನಗಳು ನ್ಯಾಯಾಲಯದಲ್ಲಿವೆ. ಇನ್ನು ಕೆಲವು ಗ್ರಾಹಕರಿಗೆ ಹಂಚಿಕೆಯಾಗಿದ್ದರೂ ಹಣ ಕಟ್ಟದಿರುವುದು ಅಥವಾ ಇತರೆ ಸಮಸ್ಯೆಗಳಿಂದ ಉಳಿದುಕೊಂಡಿರುವಂತಹ ನಿವೇಶನಗಳನ್ನು ಪತ್ತೆ ಮಾಡಲಾಗಿದೆ.
ನ್ಯಾಯಾಲಯದಲ್ಲಿ ದಾವೆ ಹೂಡಿ ಹತ್ತಾರು ವರ್ಷಗಳಿಂದ ಮಾರಾಟ/ಹಂಚಿಕೆಯಾಗದೆ ಉಳಿದಿದ್ದವು. ಈ ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಹಾಕುವುದು, ಹುಳ ಹುಪ್ಪಟೆಗಳ ವಾಸ ಸ್ಥಾನವಾಗಿ ಅದರ ಅಕ್ಕಪಕ್ಕದಲ್ಲಿ ಮನೆ ಕಟ್ಟಿಕೊಂಡಿರುವ ನಿವಾಸಿಗಳಿಗೆ ತೀವ್ರ ಸಮಸ್ಯೆಯಾಗಿತ್ತು. ಅಷ್ಟೇ ಅಲ್ಲದೆ ಕೋಟ್ಯಾಂತರ ರೂ. ಮೌಲ್ಯದ ನಿವೇಶನಗಳು ಮಾರಾಟವಾಗದ ಬಿಡಿಎಗೆ ಕೂಡ ಆರ್ಥಿಕವಾಗಿ ತೀವ್ರ ನಷ್ಟವಾಗಿತ್ತು. ಇದೀಗ ಸುಪ್ರೀಂ ಕೋರ್ಟ್ 2021ರ ನವೆಂಬರ್ 25ರಂದು ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಮಧ್ಯದ ನಿವೇಶನಗಳನ್ನು ಹರಾಜು ಮೂಲಕ ಮಾರಾಟ ಮಾಡಲು ಬಿಡಿಎ ಮುಂದಾಗಿದೆ. ಅವುಗಳನ್ನು ಮಾರಾಟ ಮಾಡಿ, ಅದರಿಂದ ಬರುವ ಆರ್ಥಿಕ ಸಂಪನ್ಮೂಲವನ್ನು ಬಿಡಿಎ ಕೈಗೊಂಡಿರುವ ಅಭಿವೃದ್ಧಿಪರ ಯೋಜನೆಗಳಿಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.
ಈಗಾಗಲೇ ಸರ್ವೆ ಮಾಡಿ ಖಾಲಿಯಿರುವ 10 ಸಾವಿರ ನಿವೇಶನಗಳನ್ನು ಗುರುತಿಸಲಾಗಿದೆ. ಈ ನಿವೇಶನಗಳ ಪೈಕಿ ಯಾವುದು ಯಾವ ಸಮಸ್ಯೆಯನ್ನು ಎದುರಿಸುತ್ತಿದೆ. ನ್ಯಾಯಾಲಯದಲ್ಲಿ ದಾವೆ ಹೂಡಿರುವ ಪೈಕಿ ಬಿಡಿಎ ಗೆದ್ದಿರುವ ನಿವೇಶನಗಳೆಷ್ಟು? ಗೆಲ್ಲುವ ಹಂತದಲ್ಲಿರುವ ನಿವೇಶನಗಳೆಷ್ಟು ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ. ಈ ನಿವೇಶನಗಳ ಇಸಿ ಮತ್ತಿತರ ಮಾಹಿತಿಗಳನ್ನು ಪರಿಶೀಲಿಸಲಾಗುತ್ತಿದೆ. ಅದಾದ ಬಳಿಕ ಹರಾಜು ಹಾಕಲು ಸೂಕ್ತವೆನಿಸಿದ ನಿವೇಶನಗಳನ್ನು ಹರಾಜು ಹಾಕಲಾಗುವುದು ಎಂದು ಬಿಡಿಎ ಮುಖ್ಯ ಎಂಜಿನಿಯರ್ ಶಾಂತರಾಜಣ್ಣ ತಿಳಿಸಿದರು.
ಎಲ್ಲೆಲ್ಲಿ ಖಾಲಿ ನಿವೇಶನಳ ಪತ್ತೆಯಾಗಿವೆ: ಇತ್ತೀಚೆಗೆ ನಿರ್ಮಾಣಗೊಂಡಿರುವ ನಾಡಪ್ರಭು ಕೆಂಪೇಗೌಡ ಬಡಾವಣೆ ಮತ್ತು ಅರ್ಕಾವತಿ ಲೇಔಟ್ಗಳನ್ನು ಹೊರತುಪಡಿಸಿ ಬೆಂಗಳೂರಿನಲ್ಲಿ ನಿರ್ಮಾಣಗೊಂಡಿರುವ ಇತರೆ ಎಲ್ಲ ಲೇಔಟ್ಗಳಲ್ಲಿ ಖಾಲಿ ನಿವೇಶನಗಳಿವೆ. ಮುಖ್ಯವಾಗಿ ಜಯನಗರ, ಬಿಟಿಎಂ ಲೇಔಟ್, ಬನಶಂಕರಿ, ಅಂಜನಾಪುರ, ಎಚ್ಎಎಲ್, ಎಚ್ಬಿಆರ್ ಲೇಔಟ್, ಜೆ.ಪಿ.ನಗರ, ನಾಗರಬಾವಿ, ಕೋರಮಂಗಲ, ಎಚ್ಎಸ್ಆರ್ ಲೇಔಟ್, ಇಂದಿರಾನಗರ ಹೀಗೆ ನಾನಾ ಬಡಾವಣೆಗಳಲ್ಲಿ ಸೈಟ್ ಸರ್ವೆ ಮಾಡಿ ಖಾಲಿ ನಿವೇಶನಗಳನ್ನು ಗುರುತಿಸಲಾಗಿದೆ.
ಗುರುತಿಸಿರುವ ನಿವೇಶನಗಳಿಗೆ ಕೋಟಿಗಟ್ಟಲೆ ಬೆಲೆ: ಇದೀಗ ಪ್ರತಿಷ್ಠಿತ ಬಡಾವಣೆಗಳಲ್ಲಿ ಗುರುತಿಸಿರುವ ನಿವೇಶನಗಳು ದುಬಾರಿ ಬೆಲೆಯನ್ನು ಹೊಂದಿವೆ. ಪ್ರತಿ ನಿವೇಶನ ಸುಮಾರು 1 ರಿಂದ 2 ಕೋಟಿ ರೂ.ವರೆಗೆ ಮೌಲ್ಯವನ್ನು ಹೊಂದಿವೆ. ಇವುಗಳ ಮಾರಾಟದಿಂದ ಸುಮಾರು 20 ಸಾವಿರ ಕೋಟಿ ಅನುದಾನ ಬಿಡಿಎ ಖಜಾನೆಗೆ ಬರಲಿದೆ. ಹೀಗೆ ಸಂಗ್ರಹವಾದ ಹಣವನ್ನು ಬಿಡಿಎ ಕೈಗೊಂಡಿರುವ ಬೆಂಗಳೂರಿನ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಲು ನಿರ್ಧರಿಸಿದೆ. ಈವರೆಗೆ ಮೂಲೆ ನಿವೇಶನಗಳನ್ನು ಹರಾಜು ಹಾಕಲಾಗುತ್ತಿತ್ತು. ಮಧ್ಯದ ನಿವೇಶನಗಳನ್ನು ಅರ್ಜಿ ಕರೆದು, ಜೇಷ್ಠತೆ ಆಧಾರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ನ ಸೂಚನೆ ಮೇರೆಗೆ ಹಾಗೂ ಬಿಡಿಎನಲ್ಲಿ ಹಣ ಇಲ್ಲದ ಹಿನ್ನೆಲೆಯಲ್ಲಿ ಆರ್ಥಿಕ ಮುಗ್ಗಟ್ಟನ್ನು ನಿವಾರಿಸಲು ಈ ನಿರ್ಧಾರ ಕೈಗೊಂಡಿದೆ.
ಬಿಡಿಎ ನಿರ್ಮಿಸಿದ ಎಲ್ಲಾ 64 ಬಡಾವಣೆಗಳಲ್ಲಿ ಲ್ಯಾಂಡ್ ಆಡಿಟ್ (ಭೂಮಿ ಪರಿಶೋಧನೆ) ಮಾಡಲಾಯಿತು. ಈ ವೇಳೆ 10 ಸಾವಿರ ನಿವೇಶನಗಳು ಖಾಲಿಯಿರುವುದು ಪತ್ತೆಯಾಗಿದೆ. ಯಾವ ಸರ್ವೆಯಲ್ಲಿ ಎಷ್ಟು ನಿವೇಶನಗಳಿವೆ? ಎಷ್ಟು ನ್ಯಾಯಾಲಯದಲ್ಲಿವೆ? ಎಷ್ಟು ಇತ್ಯರ್ಥವಾಗಿವೆ ಎಂಬುದರ ಮಾಹಿತಿಗಾಗಿ ನೋಂದಣಾಧಿಕಾರಿಗಳ ಕಚೇರಿಯಿಂದ ಎನಕಮರೆನ್ಸ್ ಸರ್ಟಿಫಿಕೇಟ್ ಪಡೆಯಲಾಗುತ್ತಿದೆ. ಬಿಡಿಎ ಪರವಾದ ನಿವೇಶನಗಳನ್ನು ಶೀಘ್ರದಲ್ಲಿ ಇ-ಹರಾಜು ಮೂಲಕ ಮಾರಾಟ ಮಾಡಲಾಗುವುದು.
-ರಾಜೇಶ್ಗೌಡ, ಆಯುಕ್ತರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ತಂತ್ರಜ್ಞಾನ ಸಾಕಷ್ಟು ಮುಂದುವರಿದಿದ್ದರೂ ಬಿಡಿಎ ಮಾತ್ರ ಈ ವಿಚಾರದಲ್ಲಿ ಸಾಕಷ್ಟು ಹಿಂದುಳಿದಿದೆ. ಎರಡು-ಮೂರು ದಶಕಗಳಿಂದ ತಾವೇ ಅಭಿವೃದ್ಧಿಪಡಿಸಿದ ಲೇಔಟ್ಗಳಲ್ಲಿ ಎಷ್ಟು ನಿವೇಶನಗಳು ಮಾರಾಟವಾಗಿವೆ? ಎಷ್ಟು ಖಾಲಿಯಿವೆ? ಯಾವುದರಲ್ಲಿ ಏನು ಸಮಸ್ಯೆಯಿದೆ ಎಂಬ ಮಾಹಿತಿ ಬಿಡಿಎ ಬಳಿಯಿಲ್ಲದೆ ಸಹಸ್ರಾರು ಕೋಟಿ ಮೌಲ್ಯದ ನಿವೇಶನಗಳು ಹತ್ತಾರು ವರ್ಷಗಳಿಂದ ಖಾಲಿಯಿರುವುದು ದುರಾದೃಷ್ಟ ಸಂಗತಿ. ನಿವೇಶನಗಳ ಮಾರಾಟ, ಖಾಲಿ, ಸಮಸ್ಯೆಗಳ ಕುರಿತು ಕಾಲ ಕಾಲಕ್ಕೆ ಅಪ್ಡೇಟ್ ಆಗುವಂತಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಿ ಎಂಬುದು ತಜ್ಞರ ಸಲಹೆಯಾಗಿದೆ.
ಪಶುವೈದ್ಯರಿಗೂ ಕಾನೂನಿನ ಅಡಿಯಲ್ಲಿ ರಕ್ಷಣೆ ನೀಡಿ: ರಾಜ್ಯ ಪಶುವೈದ್ಯಕೀಯ ಸಂಘ ಒತ್ತಾಯ
ನಗರದಲ್ಲಿ ಎಲ್ಲೆಡೆ ಕಳಪೆ ಕಾಮಗಾರಿ: ಎಚ್.ಡಿ.ಕುಮಾರಸ್ವಾಮಿ
ಪರಿಷತ್ ಟಿಕೆಟ್ ಹಂಚಿಕೆ: ಕಾಂಗ್ರೆಸ್ನಿಂದ ಒಮ್ಮತದ ಅಭ್ಯರ್ಥಿಗಳು ಶಿಫಾರಸು-ಡಿಕೆಶಿ
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ: ಈಶ್ವರಪ್ಪ ಪ್ರತಿಕ್ರಿಯೆ
ಮಳೆ ಅನಾಹುತ: ಸಚಿವರ ನೇತೃತ್ವದಲ್ಲಿ 8 ಕಾರ್ಯಪಡೆ ರಚನೆ
ಎಫ್ಡಿಐ ಹೂಡಿಕೆಯಲ್ಲಿ ರಾಜ್ಯಕ್ಕೆ ಸಿಂಹಪಾಲು: ಸಿಎಂ