Connect with us


      




ಕರ್ನಾಟಕ

ಬಿಡಿಎ; 300 ಕೋಟಿ ಮೌಲ್ಯದ ಆಸ್ತಿ ಮರುಸ್ವಾಧೀನ

Kumara Raitha

Published

on

ಬೆಂಗಳೂರು: ಜನೆವರಿ 04 (ಯು.ಎನ್.ಐ.) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ ಸ್ವತ್ತನ್ನು ಮರು ವಶಪಡಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿಸಿದ್ದು, ಕಳೆದ ಮೂರು ದಿನಗಳಲ್ಲಿ ಎರಡು ಪ್ರಮುಖ ಬಡಾವಣೆಗಳಲ್ಲಿ 300 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ.
ಮಂಗಳವಾರ ಬೆಳಗ್ಗೆ ರಾಜಾಜಿನಗರ 6ನೇ ಹಂತದ ಪ್ರಸನ್ನ ಚಿತ್ರಮಂದಿರದ ಬಳಿ 2 ಎಕರೆ 20 ಗುಂಟೆ ಬಿಡಿಎ ಜಾಗದಲ್ಲಿ ಅತಿಕ್ರಮವಾಗಿ ಐದು ತಾತ್ಕಾಲಿಕ ಶೆಡ್‍ಗಳು ಮತ್ತು ಒಂದು ಗ್ಯಾರೇಜ್ ನಿರ್ಮಾಣ ಮಾಡಲಾಗಿತ್ತು. ಹಲವು ಬಾರಿ ನೋಟಿಸ್ ನೀಡಿದ್ದರೂ ಅತಿಕ್ರಮ ತೆರವು ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್‍ಗೌಡ ಅವರ ಮಾರ್ಗದರ್ಶನದಲ್ಲಿ ಶೆಡ್‍ಗಳನ್ನು ತೆರವುಗೊಳಿಸಲಾಯಿತು.
ಬಿಡಿಎ ಪೆÇಲೀಸ್ ವರಿಷ್ಠಾಧಿಕಾರಿಗಳಾದ ಭಾಸ್ಕರ್ ಮತ್ತು ರವಿಕುಮಾರ್ ನೇತೃತ್ವದಲ್ಲಿ ಐದಕ್ಕೂ ಹೆಚ್ಚು ಜೆಸಿಬಿಗಳು ಮತ್ತು ಐವತ್ತಕ್ಕೂ ಹೆಚ್ಚು ಸಿಬ್ಬಂದಿಯಿಂದ ಅತಿಕ್ರಮವಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್‍ಗಳು ಮತ್ತು ಗ್ಯಾರೇಜ್ ತೆರವುಗೊಳಿಸಲಾಯಿತು. ಈ ಜಾಗದ ಅಂದಾಜು ಮೌಲ್ಯ 175 ಕೋಟಿ ರೂಪಾಯಿಗಳಾಗಿದೆ.
ಪೆಟ್ರೋಲ್ ಬಂಕ್, ಖಾಲಿ ಜಾಗ ವಶ:
ಈ ಮಧ್ಯೆ, ವಿಜಯನಗರ ಅತ್ತಿಗುಪ್ಪೆಯ ಕೆಂಪಾಪುರ ಅಗ್ರಹಾರದಲ್ಲಿ ಬಿಡಿಎಗೆ ಸೇರಿದ ಸರ್ವೆ ನಂಬರ್ 329/3 ರಲ್ಲಿ ಅತಿಕ್ರಮವಾಗಿ ನಿರ್ಮಾಣವಾಗಿದ್ದ ಪೆಟ್ರೋಲ್ ಬಂಕ್ ಮತ್ತು ಖಾಲಿ ಜಾಗ ಸೇರಿ ಒಟ್ಟು 1 ಎಕರೆ 9 ಗುಂಟೆ ಜಾಗವನ್ನು ವಶಪಡಿಸಿಕೊಳ್ಳಲಾಗಿದೆ.
ಭೂಮಾಲೀಕರು ಹೈಕೋರ್ಟ್‍ನಲ್ಲಿ ದಾವೆ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಅವರ ಪರವಾಗಿ ನೀಡಲಾಗಿದ್ದ ತೀರ್ಪನ್ನು ಪ್ರಶ್ನಿಸಿ ಬಿಡಿಎ ಮೇಲ್ಮನವಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಬಿಡಿಎ ಪರ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಪ್ರಾಧಿಕಾರದ ಅಧಿಕಾರಿಗಳು ಜಾಗವನ್ನು ಬಿಡಿಎ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಜಾಗದ ಅಂದಾಜು ಮೌಲ್ಯ 125 ಕೋಟಿ ರೂಪಾಯಿಗಳಾಗಿದೆ.
ಈ ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್, “ನೂರಾರು ಕೋಟಿ ರೂಪಾಯಿ ಮೌಲ್ಯದ ಬಿಡಿಎ ಆಸ್ತಿಯನ್ನು ಪತ್ತೆ ಮಾಡಿ ವಶಪಡಿಸಿಕೊಳ್ಳುವಲ್ಲಿ ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶ್ರಮ ಹಾಕಿದ್ದಾರೆ. ಬಿಡಿಎ ಆಸ್ತಿಯೆಂದರೆ ಅದು ಸಾರ್ವಜನಿಕರ ಆಸ್ತಿ. ಅದನ್ನು ಉಳಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡುವುದು ನಮ್ಮ ಕರ್ತವ್ಯವಾಗಿದೆ,” ಎಂದು ನುಡಿದರು

Share