Connect with us


      




ಕ್ರೀಡೆ

ಚೊಚ್ಚಲ ರಣಜಿ ಟ್ರೋಫಿ ಮುಡಿಗೇರಿಸಿಕೊಂಡ ಮಧ್ಯಪ್ರದೇಶ; ಆರ್ ಸಿಬಿ .. ಆರ್ ಸಿಬಿ ಎಂಬ ಕೂಗು

Lakshmi Vijaya

Published

on

ಬೆಂಗಳೂರು: ಜೂನ್ 26 (ಯು.ಎನ್.ಐ.) ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಣಜಿ ಫೈನಲ್‌ನಲ್ಲಿ 41 ಬಾರಿಯ ಚಾಂಪಿಯನ್ ಮುಂಬೈ ತಂಡವನ್ನು ಸೋಲಿಸಿದ ಮಧ್ಯಪ್ರದೇಶ ತನ್ನ ಮೊದಲ ರಣಜಿ ಟ್ರೋಫಿ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ. ಇದೇ ಕ್ರೀಡಾಂಗಣದಲ್ಲಿ 1999 ರಲ್ಲಿ ಕರ್ನಾಟಕ ವಿರುದ್ಧ ಫೈನಲ್‌ನಲ್ಲಿ ಸೋತಿದ್ದ ಮಧ್ಯಪ್ರದೇಶ ಭಾನುವಾರ ಆಲ್‌ರೌಂಡ್ ಪ್ರದರ್ಶನ ನೀಡಿತ್ತು. ಐಪಿಎಲ್ 2022 ರ ಅವಧಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡಿದ ರಜತ್ ಪಾಟಿದಾರ್ ಅವರು ತಮ್ಮ ತಂಡಕ್ಕೆ ಗೆಲುವಿನ ರನ್ ಗಳಿಸಿದರು. ಭಾನುವಾರ ಮಧ್ಯಪ್ರದೇಶದ ಮೊದಲ ರಣಜಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತಿದ್ದಂತೆ ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ ಜಮಾಯಿಸಿದ ಅಭಿಮಾನಿಗಳು ‘ಆರ್‌ಸಿಬಿ, ಆರ್‌ಸಿಬಿ’ ಎಂದು ಘೋಷಣೆ ಕೂಗಿದರು.

ಈ ವಿಡಿಯೋವನ್ನು ಬಿಸಿಸಿಐ ಡೊಮೆಸ್ಟಿಕ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ.

ಎಂಥಾ ಗೆಲುವು!  ಮಧ್ಯಪ್ರದೇಶವು ಮುಂಬೈಯನ್ನು 6 ವಿಕೆಟ್‌ಗಳಿಂದ ಸೋಲಿಸಿ ತನ್ನ ಚೊಚ್ಚಲ ರಣಜಿ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತು ಎಂದು  ವೀಡಿಯೊಗೆ ಬಿಸಿಸಿಐ ಶೀರ್ಷಿಕೆ ಮಾಡಿದೆ.

ಗೆಲುವು ದಾಖಲಿಸ್ತಿದ್ದಂತೆ ಮಧ್ಯಪ್ರದೇಶದ ಆಟಗಾರರು ಪಿಚ್‌ಗೆ ನುಗ್ಗಿ ಕ್ರೀಸ್‌ನಲ್ಲಿರುವ ಇಬ್ಬರು ಬ್ಯಾಟರ್‌ಗಳ ಮೇಲೆ ಜಿಗಿದು ಸಂಭ್ರಮಿಸಿದರು.   ಕೋಚ್ ಚಂದ್ರಕಾಂತ್ ಪಂಡಿತ್ ಭಾವುಕರಾಗಿ ಕಾಣಿಸಿಕೊಂಡರು.

ಫೈನಲ್‌ನಲ್ಲಿ ಮುಂಬೈ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.  ಸರ್ಫರಾಜ್ ಖಾನ್ ಅವರ 134 ರನ್ ಮತ್ತು ಯಶಸ್ವಿ ಜೈಸ್ವಾಲ್ ಅವರ 78 ರನ್‌ಗಳ ನೆರವಿನಿಂದ ಮುಂಬೈ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 374 ರನ್‌ಗಳ ಪ್ರಬಲ ಮೊತ್ತವನ್ನು ಗಳಿಸಿತು.

ಪ್ರತ್ಯುತ್ತರವಾಗಿ, ಯಶ್ ದುಬೆ (133), ಶುಭಂ ಶರ್ಮಾ (116) ಮತ್ತು ಪಾಟಿದಾರ್ (122) ಅವರ ಶತಕಗಳು ಮಧ್ಯಪ್ರದೇಶವನ್ನು 539 ರನ್‌ಗಳ ಬೃಹತ್ ಮೊತ್ತಕ್ಕೆ ಮುನ್ನಡೆಸಿದವು. ಮೊದಲ ಇನ್ನಿಂಗ್ಸ್ ನಲ್ಲಿ 162 ರನ್‌ಗಳ ಮುನ್ನಡೆಯನ್ನು ಪಡೆಯಿತು.

ಮುಂಬೈ ಎರಡನೇ ಇನ್ನಿಂಗ್ಸ್ ನಲ್ಲಿ ಬಲವಾದ ಆರಂಭವನ್ನು ಮಾಡಿತ್ತು. ಆದರೆ ಕುಮಾರ್ ಕಾರ್ತಿಕೇಯ ಅವರು ನಾಲ್ಕು ವಿಕೆಟ್‌ ಪಡೆದು ಮುಂಬೈ ವೇಗಕ್ಕೆ ಬ್ರೇಕ್ ಹಾಕಿದರು.  ಮುಂಬೈ  269 ರನ್‌ಗಳಿಗೆ ಆಲೌಟ್ ಆಯಿತು.

ಕೊನೆಯಲ್ಲಿ ಮಧ್ಯಪ್ರದೇಶದವರು 108 ರನ್‌ಗಳ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಿದರು. ಪಾಟಿದಾರ್ ಮತ್ತು ನಾಯಕ ಆದಿತ್ಯ ಶ್ರೀವಾಸ್ತವ ಕ್ರಮವಾಗಿ 30 ಮತ್ತು 1 ರನ್ ಗಳಿಸಿ ಅಜೇಯರಾಗುಳಿದರು.

Share