Connect with us


      




ಬೆಂಗಳೂರು

ಥಂಡಿ ಥಂಡಿ ಹವಾ; ಖುಷಿಯಾದ ಬೆಂಗಳೂರಿಗರು

Kumara Raitha

Published

on

ಬೆಂಗಳೂರು: ಮೇ ೧೨ (ಯು.ಎನ್.‌ಐ.) ೨೦೨೨ರ ಮಾರ್ಚ್‌ ಕೊನೆಯಿಂದ ಮೇ ಮೊದಲ ವಾರದವರೆಗೆ ಸೂರ್ಯನ ಪ್ರಖರತೆ ಏರುತ್ತಲೇ ಇತ್ತು. ಬೆಳಗ್ಗೆ ೯ಕ್ಕೆ ಅವನು ರವರವನೆ ಉರಿಯುತ್ತಿದ್ದ ಕಾರಣ ವಯಸ್ಸಾದವರಿರಲಿ ಯುವಕರು ಹೊರಗೆ ಕಾಲಿಡಲು ಹಿಂಜರಿಯುವ ಪರಿಸ್ಥಿತಿ ಇತ್ತು.

ಇಂಥ ಪರಿಸ್ಥಿತಿ ಈಗ ಬದಲಾಗಿದೆ. ಗರಿಷ್ಠ ೩೫ರ ಆಸುಪಾಸಿನಲ್ಲಿದ್ದ ಹವಾಮಾನ ೨೩ ಡಿಗ್ರಿ ಸೆಲ್ಸಿಯಸ್‌ ಗೆ ಕುಸಿದಿದೆ. ಬೇಸಿಗೆಯ ಮಳೆಯ ಬೆನ್ನ ಹಿಂದೆಯೇ ಉಂಟಾದ ಚಂಡ ಮಾರುತದ ಪರಿಣಾಮ ಬೆಂಗಳೂರು ಅಕ್ಷರಶಃ ಥಂಡಿಥಂಡಿಯಾಗಿದೆ. ಆಗಾಗ ಹಿಡಿದುಕೊಳ್ಳುವ ಜಿಟಿಜಿಟಿ ಮಳೆ ಹಲವರಿಗೆ ಆಹ್ಲಾದಕಾರಿಯೆನ್ನಿಸಿದೆ. ಬೆಳಂಬೆಳಗ್ಗೆಯೇ ಜಿಟಿಜಿಟಿ ಮಳೆ ಶುರುವಾದರೂ ಗೊಣಗುವವರ ಸಂಖ್ಯೆ ಕಡಿಮೆಯಾಗಿದೆ.

ನಾಲ್ಕು ದಶಕಗಳ ಹಿಂದೆ ಬಿರುಬೇಸಿಗೆಯಲ್ಲಿಯೂ ಉಷ್ಣಾಂಶ ೧೬ ಡಿಗ್ರಿ ಸೆಲ್ಸಿಯಸ್‌ ಅಷ್ಟು ಇರುತ್ತಿತ್ತು. ರಾತ್ರಿಯ ವೇಳೆಯಂತೂ ರಗ್ಗು ಹೊದ್ದು ಮಲಗಬೇಕಾಗಿತ್ತು ಎಂದು ಈಗಲೂ ಹಲವರು ನೆನಪಿಸಿಕೊಳ್ಳುತ್ತಾರೆ. ಈಗ ಅದೇ ಪರಿಸ್ಥಿತಿ ಉಂಟಾಗಿದೆ. ನಗರದ ಹೊರ ವಲಯ, ಎತ್ತರದ ಪ್ರದೇಶಗಳಲ್ಲಿ ಇರುವವರು ಮುಂಜಾನೆ, ರಾತ್ರಿ ಬೆಚ್ಚಗಿನ ಉಡುಪು ಧರಿಸುತ್ತಿದ್ದಾರೆ. ಇಂಥ ಹವಾಮಾನದ ಬಗ್ಗೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನವು 24.3 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ ಇದು 10 ವರ್ಷಗಳಲ್ಲಿ ಮೇ ತಿಂಗಳಲ್ಲಿ ಅತ್ಯಂತ ಚಳಿಯ ದಿನವಾಗಿದೆ. (ಪ್ರಸ್ತುತ ಸ್ವೆಟರ್ ಧರಿಸಲಾಗಿದೆ) ಎಂದು ಧನ್ಯ ರಾಜೇಂದ್ರಬ್‌ ಅವರು ಟ್ವೀಟ್‌ ಮಾಡಿದ್ದು ಜೊತೆಗೆ ಮನೋಹರವಾದ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

Share