Connect with us


      
ಸಾಮಾನ್ಯ

“ಬೆಟ್ಟದ ಹೂವು” ಸದಾ ಅಮರ

Kumara Raitha

Published

on

ಪುನೀತ್‌ ರಾಜಕುಮಾರ್‌ ಸಹಜಾಭಿನಯದ ಕಲಾವಿದ. ಅವರು ಸಂಭಾಷೆಣೆ ಹೇಳುವ ರೀತಿ, ಆಂಗಿಕ ಭಾಷೆ ಎಲ್ಲವೂ ಆಯಾ ಪಾತ್ರಕ್ಕೆ ಸರಿದೂಗುತ್ತಿತ್ತು. ಇದಕ್ಕೆ ಸಾಕಷ್ಟು ಸಿನೆಮಾಗಳನ್ನು ಉದಾಹರಣೆಯಾಗಿ ನೀಡಬಹುದು. ಬಾಲ್ಯದಲ್ಲಿ ಅವರು ಅಭಿನಯಿಸಿದ “ಬೆಟ್ಟದ ಹೂ” ಇಂಥ ಚಿತ್ರ. ಇದರಲ್ಲಿ ಅವರ ಅಭಿನಯ ಅನನ್ಯ. ಕಣ್ಣಿನಲ್ಲಿಯೇ ಭಾವನೆಗಳನ್ನು ಹೊರಹೊಮ್ಮಿಸುವ ಬಾಲಕ ಎಲ್ಲರ ಹೃದಯಗಳನ್ನು ಗೆಲ್ಲುತ್ತಾರೆ. ಪುನೀತ್‌ ಅವರ ಜನ್ಮದಿನ. ಈ ಸಂದರ್ಭದಲ್ಲಿ “ಬೆಟ್ಟದ ಹೂವು” ನೆನೆಯಲಾಗಿದೆ.

ಮಲೆನಾಡಿನ ಚಳಿಯಲ್ಲಿ ಹೊದ್ದುಕೊಳ್ಳಲು ಕಂಬಳಿ ಖರೀದಿಸಲೂ ಆಗದ ಬಡತನ ನೀಡುವ ಹಿಂಸೆ ಅಪಾರ. ಅದರಲ್ಲೂ ಸಣ್ಣಮಕ್ಕಳಿಗೆ ಆಗುವ ದೈಹಿಕ ಯಾತನೆ ಅಗಾಧ. ಇಂಥ ದುಸ್ಥಿತಿಯಲ್ಲಿಯೂ ಅರಳುವ ಚೆನ್ನದ ಹೂವಿನಂಥ ವ್ಯಕ್ತಿತ್ವಗಳ ಚಿತ್ರಣವನ್ನೂ “ಬೆಟ್ಟದ ಹೂವು” ಸಿನೆಮಾ ನೀಡುತ್ತದೆ. ಧಾರಾಳ ಮೆಲೋಡ್ರಾಮ ತುಂಬಲು ಸಾಧ್ಯವಿದ್ದರೂ ಅದಕ್ಕೆ ನಿರ್ದೇಶಕ ಎನ್.ಲಕ್ಷ್ಮೀನಾರಾಯಣ್ ಅವಕಾಶ ನೀಡದೇ ಕಥೆ ನಿರೂಪಿಸಿರುವ ರೀತಿ ಅನನ್ಯ.

ಕಾನನದ ಅಂಚಿನ ಪುಟ್ಟಹಳ್ಳಿ. ನಿಸರ್ಗ ಸೌಂದರ್ಯ ತುಂಬಿದ್ದರೂ ಅದೇನು ಹೊಟ್ಟೆ ತುಂಬಿಸುವುದಿಲ್ಲ. ಆದರೆ ವರ್ಷದ ಆರು ತಿಂಗಳು ಅಲ್ಲಿನ ಸೊಬಗು ಕಣ್ದುಂಬಿಕೊಳ್ಳಲು ಬರುವ ಪ್ರವಾಸಿಗರೇ ಹೆಚ್ಚಿನವರ ಆದಾಯದ ಮೂಲ. ಅವರು ಖರೀದಿಸುವ ತರಕಾರಿ, ಕಾಡಿನ ಉತ್ಪನ್ನಗಳ ಮಾರಾಟದಿಂದ ಬರುವ ಹಣದಿಂದಲೇ ಬದುಕು ನಡೆಯಬೇಕು. ಅವರು ತೆರಳಿದರೆಂದರೆ ಮತ್ತಾರು ತಿಂಗಳು ಗಂಜಿಗೂ ತತ್ವಾರ.

ಇಂಥ ಕುಟುಂಬದ ಪುಟ್ಟ ಬಾಲಕ ರಾಮು. ಇವನ ಓದಿನ ಆಸಕ್ತಿ – ವಯಸ್ಸಿಗೆ ಮೀರಿದ ಪ್ರಬುದ್ಧತೆ – ಆಲೋಚನಾ ಕ್ರಮಗಳನ್ನು ಹೇಳುವುದೇ “ಬೆಟ್ಟದ ಹೂವು” ಸಿನೆಮಾದ ಕೇಂದ್ರಪ್ರಜ್ಞೆ. ಆದರೆ ಇಷ್ಟಕ್ಕೆ ಅದು ಸುಮ್ಮನಾಗುವುದಿಲ್ಲ. ಬಾಲಕನನ್ನೇ ಕೇಂದ್ರವಾಗಿರಿಸಿಕೊಂಡು ಅನೇಕ ವಿಚಾರಗಳನ್ನು ಹೇಳುತ್ತಾ ಹೋಗುತ್ತದೆ. ಕಾಡಿಗೆ ಕೊರತೆಯಾಗುತ್ತಿರುವುದು ಅಂದರೆ ಕಾಡು ನಶಿಸುತ್ತಿರುವುದು. ಸಮೃದ್ಧಿಗೆ ಸಂಕೇತವಾದ ಹುಲಿ, ಕಥೆಗಳಲ್ಲಷ್ಟೇ ಕೇಳಲು ಉಳಿಯುವ ಅಪಾಯವನ್ನೂ ಹೇಳಲಾಗಿದೆ.

ದುಡಿಯುವ ಶಕ್ತಿ ಇರುವವರು ನಗರಗಳಿಗೆ ಹೋಗಿ ಯಾವುದಾದರೂ ಉದ್ಯೋಗ – ಕೂಲಿ –ನಾಲಿ ಮಾಡಿದರೆ ಇಲ್ಲಿರುವವರ ಜೀವನ ನಡೆಯುವಂಥ ಸ್ಥಿತಿ. ಮಲೆನಾಡಿನ ಕಾಡುಗಳಲ್ಲಿ ಬಹು ಸಮೃದ್ಧವಾಗಿದ್ದ “ಬೆಟ್ಟದ ಹೂವು” ಅಂದರೆ ಆರ್ಕೀಡ್ ವಿರಳವಾಗುತ್ತಿರುವುದು, ಕಾಡುವ ಬಡತನದಲ್ಲಿಯೂ ಹೃದಯ ಶ್ರೀಮಂತಿಕೆ ತುಂಬಿರುವ ಪಾತ್ರಗಳ ಪರಿಚಯ ಹೀಗೆ ಸಿನೆಮಾ ಅನೇಕ ವಿಚಾರಗಳ ಬಗ್ಗೆ ಹೇಳುತ್ತಾ ಇಂಥ ಸ್ಥಿತಿಯಲ್ಲಿಯೂ ರಾಮುವಿನ ವ್ಯಕ್ತಿತ್ವ ಕುಗ್ಗದೇ ಬೆಟ್ಟದೆತ್ತರಕ್ಕೆ ಬೆಳೆಯುತ್ತಾ ಹೋಗುವುದನ್ನು ಕಟ್ಟಿಕೊಡುತ್ತದೆ.

ನಿರ್ದೇಶಕ ಎನ್. ಲಕ್ಷ್ಮೀನಾರಾಯಣ್ ಇಲ್ಲಿಯೂ ಬಹುವಿವರ/ವಾಸ್ತವವಾದಿ ಕಥನ ಕ್ರಮವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಕಾಡುಹಳ್ಳಿಯ ಶಾಲೆ, ಅಲ್ಲಿನ ವಿದ್ಯಾರ್ಥಿಗಳು, ಅವರ ಸ್ಥಿತಿಗತಿ – ಶಾಲೆ ತೊರೆದವರು – ಶಾಲೆಯ ಮುಖವನ್ನೇ ಕಾಣದವರು, ಶಾಲಾ ವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿತಿ ತಿಳಿದೂ ಅಸಹಾಯಕಾರಾದ, ಮರುಗುವ ಮೇಷ್ಟ್ರು, ದಿನಸಿ ಜೊತೆ ಹಳೆಯ ಪುಸ್ತಕಗಳನ್ನೂ ಮಾರುವ ಅಂಗಡಿಯಾತನ ಸಹೃದಯತೆ, ಆರೋಗ್ಯ ಇಲಾಖೆಯ ಕಿರಿಯ ಸಹಾಯಕಿಯ ವಾತ್ಸಲ್ಯ , ತಳ್ಳುಗಾಡಿಯಲ್ಲಿ ತಿನಿಸುಗಳನ್ನಿಟ್ಟುಕೊಂಡು ಹಳ್ಳಿಹಳ್ಳಿಗೆ ಮಾರುವಾತನ ಹೃದಯ ವೈಶಾಲ್ಯ ಹೀಗೆ ಅನೇಕ ವಿಷಯಗಳನ್ನು ನಿರ್ದೇಶಕ ವಾಚ್ಯ ಮಾಡದೇ ಹೇಳಿರುವ ಕ್ರಮ ಬೆರಗು ಮೂಡಿಸುತ್ತದೆ.

ಬಡತನ – ಅನರಕ್ಷತೆ – ಶಾಲೆ ತೊರೆಯುವವರ ಸಂಖ್ಯೆ ಹೆಚ್ಚಳ, ವನ್ಯಪ್ರಾಣಿಗಳ ಸಂಖ್ಯೆ ಕುಗ್ಗುತ್ತಿರುವುದು ಇದ್ಯಾವುದರ ಬಗ್ಗೆಯೂ ಯಾವುದೇ ಪಾತ್ರಗಳು ಭಾಷಣ ಕುಟ್ಟುವುದಿಲ್ಲ. ಇಂಥ ಎಲ್ಲ ವಿಷಯಗಳನ್ನು ನಿರ್ದೇಶಕರು, ಪ್ರೇಕ್ಷಕರಿಗೆ ಸಮರ್ಥವಾಗಿ ದಾಟಿಸುತ್ತಾ ಹೋಗುತ್ತಾರೆ. ಇಲ್ಲಿ ರಾಮುವಿನಷ್ಟೇ ಆತನ ತಾಯಿ ತಂದೆಯ ಪಾತ್ರಗಳ ಆಲೋಚನಾ ಕ್ರಮಗಳನ್ನೂ ನಿರ್ದೇಶಕರು ಹೇಳುತ್ತಾರೆ. ಮಗ ಕೂಡಿಟ್ಟ ಪುಡಿಗಾಸನ್ನು ಅನಿರ್ವಾಯವಾಗಿ ಆತನಿಗೆ ಗೊತ್ತಿಲ್ಲದೇ ತಾಯಿ ತೆಗೆದುಕೊಳ್ಳುತ್ತಾಳೆ. ತೆಗೆದುಕೊಂಡಿದ್ದು ತಾನೇ ಎಂದುಹೇಳಿ ದುಡ್ಡು ಬಂದಾಕ್ಷಣ ಹಿಂದಿರುಗಿಸುತ್ತಾಳೆ. ಉದ್ಯೋಗ ಅರಸಿ ನಗರಕ್ಕೆ ಹೋಗುವ ಅಪ್ಪ ಅದರ ಅವಶ್ಯಕತೆ, ಜವಾಬ್ದಾರಿಗಳನ್ನು ಮಗನಿಗೆ ಸಮರ್ಥವಾಗಿ ತಿಳಿಸುತ್ತಾನೆ.

ಶಾಲೆ ಬಿಟ್ಟರೂ ಓದು ಬಿಡದ ರಾಮುವಿನ ದೊಡ್ಡ ಕನಸು “ ರಾಮಾಯಣ ದರ್ಶನಂ” ಪುಸ್ತಕ ಖರೀದಿಸುವುದು. ಅದರ ಬೆಲೆಯನ್ನು ಕಷ್ಟದಿಂದ ಹೊಂದಿಸಿಕೊಂಡು ಅಂಗಡಿಗೆ ಬಂದರೂ ಅದನ್ನು ತೆಗೆದುಕೊಳ್ಳಲು ಆತನ ಮನಸು ಒಪ್ಪುವುದಿಲ್ಲ. ಆತನಿಗೆ ಆ ಕ್ಷಣದಲ್ಲಿ ಮತ್ತೇನೋ ನೆನಪಾಗುತ್ತದೆ. ಇದಕ್ಕಿಂದ ಹಾಗೆ ರಾಮುವಿನ ವ್ಯಕ್ತಿತ್ವ ಹೆಮ್ಮರವಾಗುತ್ತದೆ.

ಶೆರ್ಲಿ ಎಲ್ ಆರೋರಾ ಅವರು ಬರೆದ “what then raaman” ಕೃತಿಯನ್ನಾಧರಿಸಿದ ಸಿನೆಮಾವಿದು. ಇದಕ್ಕೆ ಸಾಹಿತಿ ಚಿ. ಉದಯಶಂಕರ್ ಅವರು ರಚಿಸಿದ ಚಿತ್ರಕಥೆ ಸಶಕ್ತ. ಇದನ್ನು ನಿರ್ದೇಶಕ ಎನ್. ಲಕ್ಷ್ಮೀನಾರಾಯಣ್ ಎಳೆಎಳೆಯಾಗಿ ಸಿನೆಮ್ಯಾಟಿಕ್ ಭಾಷೆಯಲ್ಲಿ ಅಷ್ಟೇ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ.

ವಯೋವೃದ್ಧ ಪಾತ್ರದ ಬಾಲಕೃಷ್ಣ, ಆರೋಗ್ಯ ಸಹಾಯಕಿಯಾದ ರೂಪಾದೇವಿ, ತಳ್ಳುಗಾಡಿಯವರ ಪಾತ್ರದ ಹೊನ್ನವಳ್ಳಿ ಕೃಷ್ಣ, ಮೇಷ್ಟ್ರಾದ ಶಿವಪ್ರಕಾಶ್, ಬಟ್ಲರ್ ಆದ ಶಂಖನಾದ ಅರವಿಂದ್, ಅಂಗಡಿಯವರಾದ ಸದಾಶಿವ ಬ್ರಹ್ಮಾವರ್, ರಾಮುವಿನ ಅಪ್ಪನಾದ ಆಲೆಮನೆ ಮೋಹನ್ ಕುಮಾರ್ ಸೊಗಸಾಗಿ ಅಭಿನಯಿಸಿದ್ದಾರೆ. ತಾಯಿಯಾದ ಪದ್ಮಾವಾಸಂತಿ ಕಣ್ಣುಗಳೇ ಭಾವಗಳನ್ನು ಚೆಲ್ಲುತ್ತವೆ. ಇವರ ಅಭಿನಯ ಗಮನ ಸೆಳೆಯುತ್ತದೆ. ಆರ್ಕೀಡ್ ಖರೀದಿಸುವ ಮಹಿಳೆ ಪಾತ್ರದಲ್ಲಿ ಮಾರ್ಸಿಯಾ ಅಭಿನಯ ಚೆಂದ.

ಪುಟ್ಟರಾಮು ಪಾತ್ರದ ಒಳಗೆ ಮಾಸ್ಟರ್ ಪುನೀತ್ ಪರಕಾಯ ಪ್ರವೇಶ ಮಾಡಿದ್ದಾರೆ. ಇದು ಖಂಡಿತ ಅತಿಶಯೋಕ್ತಿಯಲ್ಲ. ಪುಟ್ಟ ಹುಡುಗ ಪುನೀತ್ ಮತ್ತೋರ್ವ ಪುಟ್ಟ ಹುಡುಗನ‌ ಪಾತ್ರದ ಭಾವನೆಗಳನ್ನು ತನ್ನದಾಗಿಸಿಕೊಂಡು ನಟಿಸಿರುವ ಪರಿ ಅನನ್ಯ. ಸಂಭಾಷಣೆ ಒಪ್ಪಿಸುವಿಕೆ, ಆಂಗಿಕ ಭಾಷೆ, ಮೌನವಾಗಿದ್ದರೂ ತನ್ನೊಳ್ಳಗಿನ ದುಗುಡುವನ್ನು ಮುಖದಲ್ಲಿ ವ್ಯಕ್ತಪಡಿಸುವ ರೀತಿ, ವಿಷಾದ – ಅಳಲು – ದುಃಖವನ್ನು ಕಣ್ಣುಗಳಲ್ಲೇ ತುಳುಕಿಸುವಿಕೆ ಗಮನಾರ್ಹ. ಇಂಥ ಮನೋಜ್ಞ ಅಭಿನಯಕ್ಕಾಗಿ ರಾಷ್ಟ್ರಮಟ್ಟದ “ ಅತ್ಯುತ್ತಮ ಬಾಲನಟ” ಪ್ರಶಸ್ತಿಯೂ ಪುನೀತ್ ಗೆ ಸಂದಿದೆ.

ಸಾಮಾನ್ಯವಾಗಿ ಗೌರೀಶಂಕರ್ ಛಾಯಾಗ್ರಹಣವೆಂದರೆ ಪ್ರಕೃತಿಯ ರಮ್ಯತೆಯನ್ನು ಸರೆ ಹಿಡಿದಿರುತ್ತದೆ. ಆದರೆ ಇಲ್ಲಿ ವಾಸ್ತವವಾದದ ಕಥನಾ ಕ್ರಮದ ನಿರೂಪಣೆ ಹಿನ್ನೆಲೆಯಲ್ಲಿ ನಿರ್ದೇಶಕ ಎನ್. ಲಕ್ಷ್ಮೀನಾರಾಯಣ್ ತಮಗೆ ಸೂಕ್ತವೆನ್ನಿಸಿದ ಕೆಲಸದ ಮಾದರಿಯನ್ನು ತೆಗೆದಿದ್ದಾರೆ. ಪಿ. ಭಕ್ತವತ್ಸಲಂ ಅವರ ಸಂಕಲನ ಕಾರ್ಯ, ರಾಜನ್ – ನಾಗೇಂದ್ರ ಅವರ ಸಂಗೀತ ಅಚ್ಚುಕಟ್ಟು. ಪಾರ್ವತಮ್ಮ ರಾಜ್ ಕುಮಾರ್ ಅವರು ನಿರ್ಮಿಸಿರುವ ಬೆಟ್ಟದ ಹೂವು 1985ರಲ್ಲಿ ತೆರೆಕಂಡಿದೆ. ರಾಷ್ಟ್ರ – ಅಂತರಾಷ್ಟ್ರೀಯ ಮಟ್ಟದ ಸಿನೆಮೋತ್ಸವಗಳಲ್ಲಿಯೂ ಪ್ರದರ್ಶನಗೊಂಡಿದೆ. ಸಾಕಷ್ಟು ಪ್ರಶಸ್ತಿಗಳನ್ನೂ ಪಡೆದಿದೆ. ಇಂಥ ಅತ್ಯುತ್ತಮ ಸಿನೆಮಾ ಎಂದಿಗೂ ಹಸಿರಾಗಿರುತ್ತದೆ.

Share