Connect with us


      
ಕ್ರೀಡೆ

ಡ್ರ್ಯಾಗನ್‌ಗೆ ಬಿಗ್ ಶಾಕ್ ; ಬೀಜಿಂಗ್ ಒಲಿಂಪಿಕ್ಸ್ ನ್ನು ರಾಜತಾಂತ್ರಿಕವಾಗಿ ಬಹಿಷ್ಕರಿಸಿದ ಆಸ್ಟ್ರೇಲಿಯಾ!

Iranna Anchatageri

Published

on

ಸಿಡ್ನಿ, ಡಿ 8 (ಯುಎನ್ಐ) ಅಮೆರಿಕದ ನಂತರ ಆಸ್ಟ್ರೇಲಿಯಾ ಕೂಡ ಬೀಜಿಂಗ್ ಒಲಿಂಪಿಕ್ಸ್ ಅನ್ನು ರಾಜತಾಂತ್ರಿಕವಾಗಿ ಬಹಿಷ್ಕರಿಸಲು ನಿರ್ಧರಿಸಿದೆ. ಈ ಮೂಲಕ ಕಮ್ಯೂನಿಸ್ಟ್ ರಾಷ್ಟ್ರ ಚೀನಾಕ್ಕೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಬೀಜಿಂಗ್ ಒಲಿಂಪಿಕ್ಸ್ ಅನ್ನು ರಾಜತಾಂತ್ರಿಕ ಬಹಿಷ್ಕಾರ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಈ ಹಿಂದೆ ಅಮೆರಿಕ, ಚೀನಾದ ಮಾನವ ಹಕ್ಕುಗಳ ಉಲ್ಲಂಘನೆಯ ಆಧಾರದ ಮೇಲೆ 2022 ರ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟವನ್ನು ರಾಜತಾಂತ್ರಿಕ ಬಹಿಷ್ಕಾರ ಮಾಡಿತ್ತು.

ಸ್ಕಾಟ್ ಮಾರಿಸನ್, ಆಸ್ಟ್ರೇಲಿಯಾ ಪ್ರಧಾನಿ

ಅಮೆರಿಕದ ಈ ನಡೆ ಚೀನಾಕ್ಕೆ ಬಲವಾದ ಪೆಟ್ಟು ಎನ್ನಲಾಗುತ್ತಿದೆ. ಅಮೆರಿಕದ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್, ಕ್ರೀಡಾಕೂಟವನ್ನು ಬಹಿಷ್ಕರಿಸುವ ಅಮೆರಿಕದ ನಿರ್ಧಾರವು ಒಲಿಂಪಿಕ್ ಮನೋಭಾವದ ಉಲ್ಲಂಘನೆಯಾಗಿದೆ ಎಂದು ಪ್ರತಿಕ್ರಿಯಿಸಿದ್ದರು.

ಕ್ಸಿ ಜಿನ್ ಪಿಂಗ್, ಚೀನಾದ ಅಧ್ಯಕ್ಷ

ಚೀನಾ ಸಹ ಅಮೆರಿಕದ ವಿರುದ್ಧ ಸೇಡಿನ ಕ್ರಮಕೈಗೊಳ್ಳುವ ಮಾತುಗಳನ್ನು ಆಡುತ್ತಿರುವ ಸಂದರ್ಭದಲ್ಲಿ ಯುಎಸ್ಎ ಈ ಘೋಷಣೆ ಮಾಡಿದೆ. ಈ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಮೆರಿಕದ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು, ಕ್ರೀಡಾಪಟುಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ ಕ್ರೀಡಾಕೂಟಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳಲ್ಲಿ ಅಮೆರಿಕ ಪಾಲ್ಗೊಳ್ಳುವುದಿಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಹೇಳಿದ್ದಾರೆ.

ಮುಂದಿನ ವರ್ಷ ಫೆಬ್ರವರಿ 4ರಿಂದ ಚೀನಾದ ಬೀಜಿಂಗ್ ನಲ್ಲಿ ಚಳಿಗಾಲದ ಒಲಿಂಪಿಕ್ಸ್  ಆರಂಭವಾಗಲಿದೆ. ಚೀನಾದ ಕ್ಸಿನ್‌ಜಿಯಾಂಗ್‌, ಟಿಬೆಟ್ ಮತ್ತು ಹಾಂಗ್ ಕಾಂಗ್‌ನಲ್ಲಿ ಚೀನಾ ಸರ್ಕಾರ ಅನೇಕ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದೇವೆ ಅಂತಾ ಅಮೆರಿಕ ತಿಳಿಸಿದೆ.

ರಾಜಕೀಯವಾಗಿ ಪ್ರಚೋದನಕಾರಿ ಕ್ರಮ: ಚೀನಾ

ಯುಎಸ್ ನಿರ್ಧಾರವನ್ನು ಆಕ್ಷೇಪಿಸಿದ ಚೀನಾ, ಫೆಬ್ರವರಿಯ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟವನ್ನು ಅಮೆರಿಕ ಬಹಿಷ್ಕಾರ ಮಾಡಿದರೆ ಬೀಜಿಂಗ್ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ಎಚ್ಚರಿಸಿದೆ. ಒಂದು ವೇಳೆ ಅಮೆರಿಕ ಹೀಗೆ ಮಾಡಿದರೆ ಅದು ರಾಜಕೀಯವಾಗಿ ಪ್ರಚೋದನಕಾರಿ ಕ್ರಮವಾಗುತ್ತದೆ ಎಂದು ಅಮೆರಿಕದಲ್ಲಿರುವ ಚೀನಾ ರಾಯಭಾರಿ ಕಚೇರಿಯ ವಕ್ತಾರ ಲಿಯು ಪೆಂಗ್ಯು ಹೇಳಿದ್ದಾರೆ. ಅಮೆರಿಕದ ಕ್ರಮವು ಒಲಿಂಪಿಕ್ ನ ಕ್ರೀಡಾ ಮನೋಭಾವನೆಯನ್ನು ವಿರೂಪಗೊಳಿಸಿದಂತೆ ಅಂತಾ ಚೀನಾ ಹೇಳಿದೆ.

ಜೋ ಬೈಡನ್, ಅಮೆರಿಕ ಅಧ್ಯಕ್ಷ

ಬೀಜಿಂಗ್‌ನಲ್ಲಿ 2022 ರ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟದ ರಾಜತಾಂತ್ರಿಕ ಬಹಿಷ್ಕಾರ ಮಾಡುವ ಹಾದಿಯಲ್ಲಿ ಕೆನಡಾ ಸಹ ಇದ್ದು, ಈ ವಿಷಯದ ಬಗ್ಗೆ ಮಿತ್ರರಾಷ್ಟ್ರಗಳೊಂದಿಗೆ ಸಮಾಲೋಚನೆ ಮುಂದುವರೆಸಿದೆ. ಗ್ಲೋಬಲ್ ಅಫೇರ್ಸ್ ಕೆನಡಾದ ವಕ್ತಾರ ಕ್ರಿಸ್ಟಲ್ ಚಾರ್ಟೆಂಡ್, ಚೀನಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಗೊಂದಲದ ವರದಿಗಳಿಂದ ಕೆನಡಾ ಕೂಡ ತೀವ್ರವಾಗಿ ವಿಚಲಿತವಾಗಿದೆ ಎಂದು ಹೇಳಿದರು. ಇನ್ನು ಇಟಲಿ ರಾಷ್ಟ್ರ, ಬೀಜಿಂಗ್ 2022 ರ ಚಳಿಗಾಲದ ಒಲಿಂಪಿಕ್ಸ್‌ನ ಯುಎಸ್ ರಾಜತಾಂತ್ರಿಕ ಬಹಿಷ್ಕಾರದ ಹಾದಿಯನ್ನು ಹಿಡಿಯುವ ಯೋಚಿಸಿಲ್ಲ ಅಂತಾ ಹೇಳಿದೆ. ಭಾರತ ಸರ್ಕಾರ ಬೀಜಿಂಗ್ ಒಲಿಂಪಿಕ್ ರಾಜತಾಂತ್ರಿಕವಾಗಿ ಬಹಿಷ್ಕರಿಸುವ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ಘೋಷಣೆ ಮಾಡಿಲ್ಲ.

Share