Connect with us


      




ರಾಜಕೀಯ

ಜನವರಿ 7 ರಿಂದ ಮೂರು ದಿನ ಚಿಂತನಾ ಬೈಠಕ್; ಸಿಟಿ ರವಿ

Kumara Raitha

Published

on

ಬೆಂಗಳೂರು: ಜನೆವರಿ 02 (ಯು.ಎನ್.ಐ.)   ರಾಜ್ಯದ  ಅಭಿವೃದ್ದಿ ಮತ್ತು ಪಕ್ಷದ ಚಟುವಟಿಕೆಗಳ ಕುರಿತು ಚರ್ಚಿಸಲು ಜನವರಿ 7ರಿಂದ 9 ರ ವರೆಗೆ ಪಕ್ಷದ  ಚಿಂತನಾ ಬೈಠಕ್ ನಡೆಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

ಈ ಕುರಿತು ಮಾಧ್ಯಮ ಗೋಷ್ಠಿಿಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ  ಮೂರು ದಿನ ಚಿಂತನಾ ಬೈಠಕ್ ನಡೆಯಲಿದ್ದು, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಚರ್ಚೆ ನಡೆಯಲಿದೆ. ಇತ್ತೀಚಿನ ಚುನಾವಣೆಯಲ್ಲಿನ ಸೋಲು ಗೆಲುವಿನ ಅವಲೋಕನ ಮಾಡಿಕೊಳ್ಳುತ್ತೇವೆ. ನಮ್ಮ ಪಕ್ಷ ಆಗಾಗ ಎಲ್ಲವನ್ನೂ ಅವಲೋಕನ ಮಾಡಿಕೊಂಡಿರುವುದಕ್ಕೇ ಇದುವರೆಗೂ ಸರ್ವೈವ್ ಆಗಿದೆ. ನಮ್ಮದು ಚಾ ಮಾರೋ ಪಾರ್ಟಿ ಅಂತ ಕೆಲವರು ಲೇವಡಿ ಮಾಡಿದ್ದರು. ಚಾ ಮಾರುವ ವ್ಯಕ್ತಿಯೇ ಎರಡು ಬಾರಿ ದೇಶದ ಪ್ರಧಾನಿಯಾದರು. ಕೆಲವು ಪಕ್ಷಗಳಿಗೆ ಮತಿಯೂ ಇಲ್ಲ. ಗತಿಯೂ ಇಲ್ಲ ಎಂದರು.

ಸಂಪುಟ ಪುನಾರಚನೆ, ಚುನಾವಣಾ ಸಂಪುಟ, ಪಕ್ಷ ಸಂಘಟನೆ ಎಲ್ಲವೂ ಚರ್ಚೆಗೆ ಬರಲಿದೆ. ಬಸನಗೌಡ ಪಾಟೀಲ್ ಯತ್ನಾಳ್  ಯಾವ ಉದ್ದೇಶದಿಂದ ಸಂಪುಟ ಬದಲಾವಣೆಯಾಗುತ್ತದೆ ಎಂದು ಹೇಳಿದ್ದಾರೋ ಗೊತ್ತಿಲ್ಲ.  ಪಕ್ಷ ಸೂಚಿಸುವ ಜವಾಬ್ದಾರಿಯನ್ನು ಎಲ್ಲರೂ ನಿಭಾಯಿಸಬೇಕು ಎಂದರು.

ಇನ್ನು ಚಿಂತನಾ ಸಭೆಗೆ ಕೇಂದ್ರ ಗೃಹ ಸಚಿವ ಅಮಿತ್ ಬರುವುದಿಲ್ಲ. ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಯಾವುದಾದರೂ ಒಂದು ಗೋಷ್ಠಿಗೆ ಬರುವ ಸಾಧ್ಯತೆ ಇದೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಆಗಮಿಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ ರಾಜ್ಯ ನಾಯಕರು ಈ ಬೈಠಕ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

Share