Connect with us


      




ಕರ್ನಾಟಕ

ಪಂಜಾಬ್ ರಾಜ್ಯ ಸರಕಾರ ವಜಾಕ್ಕೆ ಬಿಜೆಪಿ ನಿಯೋಗ ಆಗ್ರಹ

Vanitha Jain

Published

on

ಬೆಂಗಳೂರು: ಜನೆವರಿ 06 (ಯು.ಎನ್.ಐ.) ಪ್ರಧಾನಿಯವರಿಗೆ ಸರಿಯಾದ ಭದ್ರತೆ ಒದಗಿಸದೆ ತನ್ನ ಕರ್ತವ್ಯದಿಂದ ವಿಮುಖವಾಗಿರುವ ಪಂಜಾಬ್ ಸರ್ಕಾರವನ್ನು ವಜಾಗೊಳಿಸಬೇಕು ಮತ್ತು ಸರ್ಕಾರಿ ಯಂತ್ರವು ಖಲಿಸ್ತಾನ್ ಪರ ಅಂಶಗಳಿಂದ ಮುಕ್ತವಾಗುವವರೆಗೆ ಅಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ವಿಧಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದ ಬಿಜೆಪಿ ನಿಯೋಗವು ರಾಜ್ಯದ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.

ರಾಜ್ಯದ ರಾಜ್ಯಪಾಲರಾದ ಥಾವರ್ ಸಿಂಗ್ ಗೆಹಲೋಟ್ ಅವರನ್ನು ಇಂದು ನಳಿನ್ ಕುಮಾರ್ ಕಟೀಲ್ ನೇತೃತ್ವದ ಬಿಜೆಪಿ ನಿಯೋಗವು ಭೇಟಿ ಮಾಡಿ ಈ ಕುರಿತಂತೆ ಮನವಿ ಸಲ್ಲಿಸಿತು. ರಾಜ್ಯದ ಸಚಿವರುಗಳಾದ ಡಾ.ಅಶ್ವಥ್ ನಾರಾಯಣ, ಎಸ್ ಟಿ ಸೋಮಶೇಖರ್ ಮತ್ತು ಬೈರತಿ ಬಸವರಾಜು ಈ ನಿಯೋಗದಲ್ಲಿದ್ದರು.

ಪಂಜಾಬ್ ಸರ್ಕಾರದ ಖಲಿಸ್ತಾನ್ ಮತ್ತು ಇತರ ಪಡೆಗಳೊಂದಿಗಿನ ಕ್ರಿಮಿನಲ್ ಬಾಂಧವ್ಯದ ಮೂಲಕ ಪ್ರಧಾನಮಂತ್ರಿಯವರನ್ನು ಗಂಭೀರವಾದ ಭದ್ರತಾ ಅಪಾಯಕ್ಕೆ ತಳ್ಳುವ ಉದ್ದೇಶಪೂರ್ವಕ ಪ್ರಯತ್ನ ಮಾಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪಂಜಾಬ್ ಭೇಟಿಯ ಸಂದರ್ಭದಲ್ಲಿ ಭದ್ರತೆಯ ವಿಚಾರದಲ್ಲಿ ಅದು ನಿರ್ಲಕ್ಷ್ಯ ತೋರಿದೆ. ಖಲಿಸ್ತಾನ್ ಮತ್ತು ಭಾರತದ ಇತರ ಶತ್ರು ಶಕ್ತಿಗಳೊಂದಿಗೆ ಅದರ ಸ್ಪಷ್ಟವಾದ ಸಹಭಾಗಿತ್ವವನ್ನು ಇದು ಸಾಬೀತು ಪಡಿಸುವಂತಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದೆ.

ನರೇಂದ್ರ ಮೋದಿಯವರು ಸೇರಿದಂತೆ ರಾಷ್ಟ್ರೀಯವಾದಿಗಳ ವಿರುದ್ಧ ದೇಶವಿರೋಧಿ ಶಕ್ತಿಗಳು ಸಂಚು ಹೂಡಿವೆ. ಇದಕ್ಕೆ ಅಲ್ಲಿನ ಸರಕಾರವು ಕೈಜೋಡಿಸಿದೆ. ಇದು ಸಂಪೂರ್ಣವಾಗಿ ಆತಂಕಕಾರಿ ಮತ್ತು ಅಪಾಯಕಾರಿ ಆಯಾಮವಾಗಿದೆ, ಈ ಕ್ರಮ ಅಸ್ವೀಕಾರಾರ್ಹ ಮಾತ್ರವಲ್ಲದೆ ಅತ್ಯಂತ ಖಂಡನೀಯ ಎಂದು ತಿಳಿಸಲಾಗಿದೆ.

ಎಸ್‍ಪಿಜಿಗೆ ಪಂಜಾಬಿನ ಡಿಜಿಪಿ ಅನುಮತಿ ನೀಡಿದ ನಂತರವೇ ಪ್ರಧಾನಿಯವರು ಭಟಿಂಡಾ ವಾಯುನೆಲೆಯಿಂದ ರಸ್ತೆ ಮೂಲಕ ತೆರಳಿದರು. ಪ್ರತಿಕೂಲ ಹವಾಮಾನದಿಂದಾಗಿ ಪ್ರಧಾನಮಂತ್ರಿ ಹೆಲಿಕಾಪ್ಟರ್ ಟೇಕ್ ಆಫ್ ಆಗಲಿಲ್ಲ. ಪಂಜಾಬ್ ಪೊಲೀಸ್ ಮತ್ತು ಪಂಜಾಬ್ ಸರ್ಕಾರದ ಎಲ್ಲಾ ಅನುಮತಿಗಳನ್ನು ಪಡೆದ ನಂತರ ಪ್ರಧಾನಿಯವರ ಬೆಂಗಾವಲು ಪಡೆ ಭಟಿಂಡಾದಿಂದ ರಸ್ತೆಯ ಮೂಲಕ ಹೊರಟಿತ್ತು ಎಂದು ವಿವರಿಸಲಾಗಿದೆ.

ಪ್ರಧಾನಿಯವರ ಭದ್ರತೆಯ ವಿಚಾರದಲ್ಲಿ ವಿಫಲವಾಗಿರುವ ಪಂಜಾಬ್ ಸರ್ಕಾರವನ್ನು ತಕ್ಷಣವೇ ವಜಾಗೊಳಿಸಬೇಕೆಂದು ಕರ್ನಾಟಕ ಬಿಜೆಪಿ ಆಗ್ರಹಿಸುತ್ತದೆ. ಪಂಜಾಬ್ ಸರ್ಕಾರವು ಪ್ರಧಾನಿಯವರ ಜೀವದ ವಿಚಾರದಲ್ಲಿ ಚೆಲ್ಲಾಟವಾಡಲು ಮುಂದಾಗಿತ್ತು. ಪ್ರಧಾನಿಯವರು ಸುರಕ್ಷಿತವಾಗಿ ದೆಹಲಿಗೆ ಮರಳುವುದು ದೇವರ ಇಚ್ಛೆ ಮಾತ್ರ. 130 ಕೋಟಿ ಭಾರತೀಯರ ಸಾಮೂಹಿಕ ಪ್ರಾರ್ಥನೆಯೇ ಪ್ರಧಾನಿಯವರ ಜೀವ ಉಳಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Share