Connect with us


      
ರಾಜಕೀಯ

ನಿತಿನ್ ಗಡ್ಕರಿ ಔಟ್, ಬಿಎಸ್ ವೈ ಇನ್

Lakshmi Vijaya

Published

on

ನವದೆಹಲಿ: ಆಗಸ್ಟ್ 17 (ಯು.ಎನ್.ಐ.) ಬಿಜೆಪಿಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯಿಂದ ಹಿರಿಯರಾದ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಅವರನ್ನು ಕೈಬಿಡಲಾಗಿದೆ. ಈ ಮೂಲಕ ಪಕ್ಷದ ಅತ್ಯುನ್ನತ ಮಂಡಳಿಯಲ್ಲಿ ಮಹತ್ವದ ಭಾರೀ ಬದಲಾವಣೆಯಾಗಿದೆ. ಕರ್ನಾಟಕದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗು  ಇತ್ತೀಚಿಗೆ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೇರಿದ ದೇವೇಂದ್ರ ಫಡ್ನವಿಸ್ ಅವರಿಗೆ ಸ್ಥಾನ ನೀಡಲಾಗಿದೆ.

ರಾಜ್ಯದಲ್ಲಿ ಬಿಜೆಪಿಯನ್ನು ಅಭೂತಪೂರ್ವ ಎರಡನೇ ಅವಧಿಗೆ ಮುನ್ನಡೆಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನ ಹೊರಗಿಡಲಾಗಿದ್ದು ಅಚ್ಚರಿ ಮೂಡಿಸಿದೆ.

11 ಸದಸ್ಯರಿರುವ ಪಕ್ಷದ ಸಂಸದೀಯ ಮಂಡಳಿಯಲ್ಲಿ ಬಿ.ಎಸ್ ಯಡಿಯೂರಪ್ಪ, ಸರ್ಬಾನಂದ ಸೋನೋವಾಲ್, ಕೆ ಲಕ್ಷ್ಮಣ್, ಇಕ್ಬಾಲ್ ಸಿಂಗ್ ಲಾಲ್‌ಪುರ, ಸುಧಾ ಯಾದವ್ ಮತ್ತು ಸತ್ಯನಾರಾಯಣ್ ಜತಿಯಾ ಸೇರಿದಂತೆ ಆರು ಹೊಸ ಮುಖಗಳಿಗೆ ಸ್ಥಾನ ನೀಡಲಾಗಿದೆ.  ಇದರಿಂದಾಗಿ ನರೇಂದ್ರ ಮೋದಿ, ಅಮಿತ್ ಶಾ ಯುಗದಲ್ಲಿ ಪಕ್ಷದ ರಾಜಕೀಯ ಬದಲಾವಣೆಯನ್ನು ಈ ಬೆಳವಣಿಗೆ ಸೂಚಿಸುತ್ತದೆ.

ಸಂಸದೀಯ ಮಂಡಳಿಯು ಬಿಜೆಪಿಯ ಉನ್ನತ ಸಂಸ್ಥೆಯಾಗಿದೆ. ಇದು  ಮುಖ್ಯಮಂತ್ರಿಗಳು, ರಾಜ್ಯಗಳ ಮುಖ್ಯಸ್ಥರು ಮತ್ತು ಇತರ ಪ್ರಮುಖ ಪಾತ್ರಗಳನ್ನು ನಿರ್ಧರಿಸುತ್ತದೆ.

ಪ್ರಮುಖ ಸಮಿತಿಯಿಂದ ನಿತಿನ್ ಗಡ್ಕರಿ ಅವರನ್ನು ಕೈಬಿಟ್ಟಿರುವುದು ಈ ಪರಿಷ್ಕರಣೆಯಲ್ಲಿ ದೊಡ್ಡ ಬದಲಾವಣೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಹಿರಿಯ ಸಚಿವರು ಹಾಗು ಆರ್ ಎಸ್ ಎಸ್ ಗೆ ಆಪ್ತರಾಗಿರುವ ನಿತಿನ್ ಗಡ್ಕರಿ ಅವರು ಬಿಜೆಪಿಯ ಮಾಜಿ ಮುಖ್ಯಸ್ಥರಾಗಿದ್ದು, ಪಕ್ಷವು ತನ್ನ ಮಾಜಿ ಅಧ್ಯಕ್ಷರನ್ನು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಿಂದ ಹೊರಗಿಟ್ಟಿದೆ.

ಬಿಜೆಪಿಯ ಮಾಜಿ ಮುಖ್ಯಸ್ಥರೂ ಆಗಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂಸದೀಯ ಮಂಡಳಿಗೆ ಮರು ಎಂಟ್ರಿ ಕೊಟ್ಟಿದ್ದಾರೆ.

ಕಳೆದ ವರ್ಷ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ 77 ವರ್ಷ ವಯಸ್ಸಿನ ಪ್ರಭಾವಿ ಲಿಂಗಾಯತ ರಾಜಕಾರಣಿ ಬಿ.ಎಸ್. ಯಡಿಯೂರಪ್ಪನವರಿಗೆ ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಯಲ್ಲಿ ಮನ್ನಣೆ ನೀಡಲಾಗಿದೆ.

ಮಹಾರಾಷ್ಟ್ರದಲ್ಲಿ ಶಿವಸೇನೆಯ ಬಂಡಾಯಗಾರ ಏಕನಾಥ್ ಶಿಂಧೆ ಅವರೊಂದಿಗೆ ಉಪಮುಖ್ಯಮಂತ್ರಿ ಸ್ಥಾನಕ್ಕೇರಿದ ದೇವೇಂದ್ರ ಫಡ್ನವೀಸ್ ಅವರನ್ನು ಚುನಾವಣಾ ಸಮಿತಿಯಲ್ಲಿ ಸೇರಿಸಲಾಗಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನೂ ಸಂಸದೀಯ ಮಂಡಳಿಯಿಂದ ಕೈಬಿಡಲಾಗಿದ್ದು, 20 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿಗೆ ಭಾರಿ ಹೊಡೆತ ಬಿದ್ದಿದೆ.

ಪ್ರದಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಪಕ್ಷದ ಬಿ.ಎಲ್ ಸಂತೋಷ್ ಮಾತ್ರ ಮಂಡಳಿಗಳಲ್ಲಿ ಸ್ಥಿರವಾಗಿದ್ದಾರೆ.

Share