Connect with us


      
ರಾಜಕೀಯ

ಬಿಜೆಪಿಯ ಅತ್ಯುನ್ನತ ಮಂಡಳಿಯಲ್ಲಿ ಮಾಜಿ ಸಿಎಂ ಬಿಎಸ್ ವೈಗೆ ಸ್ಥಾನ

Lakshmi Vijaya

Published

on

ಬೆಂಗಳೂರು: ಆಗಸ್ಟ್ 17 (ಯು.ಎನ್.ಐ.) ಬಿಜೆಪಿ ಹೈಕಮಾಂಡ್ ನ ಅತ್ಯುನ್ನತ ಮಂಡಳಿಯಾದ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಸ್ಥಾನ ನೀಡಲಾಗಿದೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯರನ್ನಾಗಿಯೂ ಅವರನ್ನು  ನೇಮಕ ಮಾಡಲಾಗಿದೆ.  ಜೆ.ಪಿ ನಡ್ಡಾ ಅಧ್ಯಕ್ಷತೆಯ ಸಂಸದೀಯ ಮಂಡಳಿಯಲ್ಲಿ ಪ್ರಧಾನಿ ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ ಅವರೊಂದಿಗೆ ಬಿಎಸ್ ವೈ ಗೆ ಸ್ಥಾನ ನೀಡಲಾಗಿದೆ.  ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್. ಸಂತೋಷ್ ಅವರನ್ನೂ ಮಂಡಳಿಯಲ್ಲಿ ನೇಮಿಸಲಾಗಿದೆ.

ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ ಬಳಿಕ ಪಕ್ಷದಲ್ಲಿ ಅವರ ಸ್ಥಾನಮಾನಗಳ ಬಗ್ಗೆ ಹೆಚ್ಚು ಚರ್ಚೆಯಾಗಿತ್ತು. ಇತ್ತೀಚಿಗೆ ಅವರು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಬಗ್ಗೆ ಘೋಷಿಸಿದ ನಂತರವೂ ಅವರ ಸ್ಥಾನಮಾನವು ಸುದ್ದಿಯಾಗಿತ್ತು. ಮುಂದಿನ ವರ್ಷ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಬಿ.ಎಸ್. ಯಡಿಯೂರಪ್ಪನವರಿಗೆ ಪಕ್ಷದ ಅತ್ಯುನ್ನತ ಮಂಡಳಿಯಲ್ಲಿ ಸ್ಥಾನ ನೀಡಿರುವುದು ಮಹತ್ವ ಪಡೆದಿದೆ. ರಾಜ್ಯದ ನಾಯಕರಿಗೆ ಕೇಂದ್ರದ ಸಮಿತಿಯಲ್ಲಿ ಅವಕಾಶ ನೀಡಿರುವುದನ್ನ ಸಿಎಂ ಬೊಮ್ಮಾಯಿ ಸೇರಿದಂತೆ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಹಾಗು ಹಲವು ಪ್ರಮುಖ ನಾಯಕರು ಸ್ವಾಗತಿಸಿದ್ದು ಅಭಿನಂದಿಸಿದ್ದಾರೆ.

“ನಿಕಟ ಪೂರ್ವ ಮುಖ್ಯಮಂತ್ರಿ ಹಾಗೂ ರೈತ ನಾಯಕ ಶ್ರೀ ಬಿ. ಎಸ್. ಯಡಿಯೂರಪ್ಪ ಅವರು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯರಾಗಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ. ಪಕ್ಷದ ಅತ್ಯಂತ ಉನ್ನತವಾದ ಸಂಸದೀಯ ಮಂಡಳಿಗೆ ತಮ್ಮನ್ನು ನೇಮಕ ಮಾಡುವುದರ ಮೂಲಕ ಪಕ್ಷ ತಮಗೆ ಅತಿ ದೊಡ್ಡ ಗೌರವದ ಸ್ಥಾನ ನೀಡಿದೆ.” ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಹೇಳಿದ್ದಾರೆ.

ಯಡಿಯೂರಪ್ಪ ಅವರ ನೇಮಕಾತಿ ಆದೇಶ ಹೊರ ಬರುತ್ತಿದ್ದಂತೆಯೇ  ಸಿಎಂ ಅವರು ಯಡಿಯೂರಪ್ಪನವರಿಗೆ ಕರೆ ಮಾಡಿ ಶುಭ ಕೋರಿದರು.

ತಾವು ಈ ಹುದ್ದೆಗೆ ಏರಿರುವುದರಿಂದ ಕರ್ನಾಟಕ ಬಿಜೆಪಿಗೆ ಆನೆ ಬಲ ಬಂದಂತಾಗಿದೆ. ಕರ್ನಾಟಕ‌ ಬಿಜೆಪಿಗೆ ಅಭೂತಪೂರ್ವ ಬೆಂಬಲ ಸಿಕ್ಕಂತಾಗಿದೆ. 2023 ರಲ್ಲಿ ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ನಿಶ್ಚಿತ. ತಮ್ಮನ್ನು ಈ ಉನ್ನತ  ಹುದ್ದೆಗೆ ನೇಮಕ ಮಾಡಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಹಾಗೂ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶ್ರೀ ಜೆ ಪಿ ನಡ್ದಾ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ತಿಳಿಸಿದ್ದಾರೆ.

Share