Connect with us


      




ಕರ್ನಾಟಕ

ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮೂಲಕ ಕಿಡಿಕಾರಿದ ಬಿಜೆಪಿ

UNI Kannada

Published

on

ಬೆಂಗಳೂರು: ಮಾರ್ಚ್ 26 (ಯು.ಎನ್.ಐ.) ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದ ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ ಟ್ವಿಟರ್ ನಲ್ಲಿ ಕಿಡಿಕಾರಿದೆ.

ತಮ್ಮ ಹೇಳಿಕೆಯನ್ನ ತಿರುಚಲಾಗಿದೆ, ಇದು ಸ್ವಾಮೀಜಿಗಳಿಗೆ ಅರ್ಥವಾಗಿರುವುದರಿಂದಲೇ ಅವರೆಲ್ಲ ಮೌನವಾಗಿದ್ದಾರೆಂದಿದ್ದ ಸಿದ್ದರಾಯಯ್ಯನವರ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಜಟ್ಟಿ ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತಿದೆ ಸಿದ್ದರಾಮಯ್ಯನವರ ಧೋರಣೆ.

ಈ‌‌ ಹಿಂದೆ ಹಲವು ಮಠಾಧೀಶರ ವಿರುದ್ಧ ಅಗೌರವಯುತವಾಗಿ ನಡೆದುಕೊಂಡಿದ್ದ ಸಿದ್ದರಾಮಯ್ಯ ಅವರು ಈಗ ಸ್ವಾಮೀಜಿಗಳ‌ ಮೌನವನ್ನೂ ತಮ್ಮ ರಕ್ಷಣೆಗೆ ಬಳಸಿಕೊಳ್ಳುತ್ತಿದ್ದಾರೆ.
ಹೈಕೋರ್ಟ್ ತೀರ್ಪಿನ ಬಳಿಕ ಹಿಜಾಬ್ ವಿವಾದ ತಣ್ಣಗಾಗಿತ್ತು. ಆದರೆ ಹಿಜಾಬ್ ಧರಿಸಲು ಅವಕಾಶ ನೀಡಿ ಎಂದು ಸಿದ್ದರಾಮಯ್ಯ ಈಗ ಏಕಪಾತ್ರಾಭಿನಯ ಆರಂಭಿಸಿದ್ದಾರೆ.

ಕೋಮು ಸೌಹಾರ್ದ ಎಂಬುದು ಈ ದೇಶದಲ್ಲಿ‌ ಕನಸಾಗಿ ಉಳಿದಿರುವುದಕ್ಕೆ ಸಿದ್ದರಾಮಯ್ಯ ಅವರಂಥಹ ಅವಕಾಶವಾದಿ ರಾಜಕಾರಣಿಗಳೇ ಕಾರಣ.ಸಿದ್ದರಾಮಯ್ಯನವರು ಅನ್ಯ ಧರ್ಮದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಾಗ ಅವರನ್ನು ಓಲೈಸಲು ಅವರಂತೆ ಉಡುಗೆ, ತೊಡುಗೆ ತೊಡುತ್ತಾರೆ.

ಹಿಂದೂ ಧಾರ್ಮಿಕ, ಸಾಂಸ್ಕೃತಿಕ ಸಂಕೇತಗಳನ್ನು ಕಂಡರೆ ಸಿದ್ದರಾಮಯ್ಯನವರಿಗೆ ಅದೇಕೆ ಅಸಹನೆ?
ಕೇಸರಿ ವಸ್ತ್ರ, ಕುಂಕುಮ, ಪೇಟ ಎಲ್ಲದರ ಮೇಲೂ ದ್ವೇಷ. ಹಿಂದೂ ವಿರೋಧಿ ನಿಲುವು ಏಕೆ? ಎಂದು ಸರಣಿ ಟ್ವೀಟ್ ಮಾಡಿ ಆರೋಪಿಸಿದ್ದಾರೆ. ಮುಸ್ಲಿಂ ವಿದ್ಯಾರ್ಥಿನಿಯರಿಗೆ ತಲೆ ಮೇಲೆ ವಸ್ತ್ರ ಧರಿಸಲು ಅವಕಾಶ ಕೊಡಿ. ಸ್ವಾಮೀಜಿಗಳೇ ತಲೆ ಮೇಲೆ ಬಟ್ಟೆ ಹಾಕಿಕೊಳ್ಳುತ್ತಾರೆ ಎಂದಿದ್ದ ಸಿದ್ದರಾಮಯ್ಯನವರ ಮಾತು ವಿವಾದವೆಬ್ಬಿಸಿದೆ.

Share