Published
7 months agoon
ಅಲ್ಮಾಟಿ: ನ. 7 (ಯುಎನ್ಐ) ಕಜಕಿಸ್ತಾನದ ಗಣಿಯಲ್ಲಿ ಸ್ಫೋಟ ಸಂಭವಿಸಿದ್ದು, ಆರು ಜನ ಸಾವಿಗೀಡಾಗಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ದೇಶದ ತುರ್ತು ಪರಿಸ್ಥಿತಿಗಳ ಸಚಿವಾಲಯ ತಿಳಿಸಿದೆ.
ನವೆಂಬರ್ 7 ರಂದು ಮಧ್ಯ ಏಷ್ಯಾದ ಕರಗಂಡ ಪ್ರದೇಶದಲ್ಲಿ ಅರ್ಸೆಲರ್ ಮಿತ್ತಲ್ ಟೆಮಿರ್ಟೌನ್ ನಿರ್ವಹಿಸುತ್ತಿರುವ ಅಬಾಯಿ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ಸಮಯದಲ್ಲಿ 64 ಕಾರ್ಮಿಕರು ಗಣಿಯಲ್ಲಿದ್ದು, 56 ಮಂದಿ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ.
ಅನಿಲ ಮತ್ತು ಕಲ್ಲಿದ್ದಲು ಸ್ಫೋಟದಿಂದಾಗಿ ಅಪಘಾತ ಸಂಭವಿಸಿದೆ ಎಂದು ಆರ್ಸೆಲರ್ ಮಿತ್ತಲ್ ಹೇಳಿದೆ. ತುರ್ತು ಪರಿಸ್ಥಿತಿಗಳ ಸಚಿವ ಯೂರಿ ಇಲಿನ್ ನೇತೃತ್ವದ ಸರ್ಕಾರಿ ಆಯೋಗವನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ.
2008 ರಲ್ಲಿ ಅಬಾಯಿ ಗಣಿಯಲ್ಲಿ ಇದೇ ರೀತಿಯ ಸ್ಫೋಟ ಸಂಭವಿಸಿತ್ತು. ಆಗ ಸಂಭವಿಸಿದ ಮೀಥೇನ್ ಅನಿಲ ಸ್ಫೋಟದಲ್ಲಿ 30 ಜನರು ಮೃತಪಟ್ಟಿದ್ದು, 14 ಜನರು ಗಾಯಗೊಂಡಿದ್ದರು.