Published
6 months agoon
By
UNI Kannadaಬೆಂಗಳೂರು : ಜನವರಿ 04 (ಯು.ಎನ್.ಐ) ಅಂತಾರಾಷ್ಟ್ರೀಯ ಸಂಬಂಧಗಳ ವಿಚಾರದಲ್ಲಿ ಹೇಳಿಕೆ ನೀಡುವಾಗ ಅಧಿಕಾರದಲ್ಲಿರುವ ಸರ್ಕಾರದ ನಿರ್ಣಯಗಳಿಗೆ ಪೂರಕವಾಗಿ ಹೇಳಿಕೆ ನೀಡಬೇಕಾಗಿರುವುದು ರಾಷ್ಟ್ರೀಯ ಜವಾಬ್ದಾರಿಯಾಗಿದ್ದು, ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಜವಾಬ್ದಾರಿ ಮೆರೆಯಬೇಕು. ಇದನ್ನು ಅನುಸರಿಸಬೇಕೆಂದು ರಾಜ್ಯ ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿ ಹೇಳಿದ್ದಾರೆ.
ದೇಶದ ಜನತೆಯ ಪರವಾಗಿ ಆಗ್ರಹಿಸುತ್ತಾ ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿಯವರು ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಈ ರೀತಿಯ ಬೇಜವಾಬ್ದಾರಿಯ ಹೇಳಿಕೆಗಳನ್ನು ನೀಡಿ ಅಪಹಾಸ್ಯಕ್ಕೀಡಾಗಬಾರದೆಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕಾಂಗ್ರೆಸ್ ಅನ್ನು ಕಟುಕಿದ್ದಾರೆ. ಚೀನಾ ಗಡಿ ವಿಚಾರದಲ್ಲಿ ಪದೇಪದೇ ಸುಳ್ಳು ಸುದ್ದಿ ಹಬ್ಬಿಸಿ ಜನಮಾನಸದಲ್ಲಿ ಗೊಂದಲ ಸೃಷ್ಟಿ ಮಾಡುವುದನ್ನು ಮುಂದುವರಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಬೇಜವಾಬ್ದಾರಿಯ ರಾಷ್ಟ್ರವಿರೋಧಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸುವುದಾಗಿ ಅವರು ಹೇಳಿದ್ದಾರೆ.
ರಾಷ್ಟ್ರೀಯ ಪಕ್ಷವೊಂದು ಶತ್ರುರಾಷ್ಟ್ರದ ರಾಜಕೀಯ ಪಕ್ಷದ ಜೊತೆಗೆ ಮಾಡಿಕೊಂಡಿರುವ ಅನೈತಿಕ ಒಪ್ಪಂದದ ವಿವರಗಳನ್ನು ರಾಷ್ಟ್ರದ ಜನತೆಯಿಂದ ಮುಚ್ಚಿಟ್ಟಿರುವ ಕಾಂಗ್ರೆಸ್ ಪಕ್ಷ, ತನ್ನ ಎಡಬಿಡಂಗಿತನವನ್ನು ರಾಹುಲ್ ಗಾಂಧಿಯವರ ಮೂಲಕ ಮುಂದುವರಿಸುತ್ತಿರುವುದು ರಾಷ್ಟ್ರೀಯ ದುರಂತ. ರಾಷ್ಟ್ರ ಮಟ್ಟದ ಯಾವುದೇ ಅಧಿಕೃತ ಜವಾಬ್ದಾರಿ ಹೊಂದಿರದಿದ್ದರೂ ಶತ್ರುರಾಷ್ಟ್ರದ ರಾಯಭಾರಿಗಳೊಂದಿಗೆ ಕದ್ದುಮುಚ್ಚಿ ಸಂವಾದ ನಡೆಸುತ್ತಿರುವುದು ರಾಷ್ಟ್ರವಿರೋಧಿ ಚಿಂತನೆಗೆ ಸಾಕ್ಷಿಯಾಗಿದೆ.
ಗಾಲ್ವಾನ್ ಬಿಕ್ಕಟ್ಟಿನ ಸಂದರ್ಭದಲ್ಲೂ ಅನಗತ್ಯ ಕಪೋಲಕಲ್ಪಿತ ಹೇಳಿಕೆಗಳಿಂದ ಗೊಂದಲ ಸೃಷ್ಟಿ ಮಾಡಿ, ಸೈನಿಕರ ರಾಷ್ಟ್ರಭಕ್ತಿ, ತ್ಯಾಗ, ಬಲಿದಾನ ಮತ್ತು ಬದ್ಧತೆಯನ್ನು ಪ್ರಶ್ನೆ ಮಾಡಿದ ರಾಹುಲ್ ಗಾಂಧಿಯವರ ಇಂದಿನ ಹೇಳಿಕೆ ಅವರ ಬಾಲಿಶತನಕ್ಕೆ ಕೈಗನ್ನಡಿ ಎಂದು ಗಣೇಶ್ ಕಾರ್ಣಿಕ್ ಪತ್ರಿಕಾಪ್ರಕಟಣೆ ಮೂಲಕ ತಿಳಿಸಿದ್ದಾರೆ.
ನೆಹರೂರ ಮರಿ ಮೊಮ್ಮಗ ರಾಹುಲ್ ಗಾಂಧಿ ನೆಹರೂರವರ ಅಂದಿನ ದುಸ್ಸಾಹಸ ಇಂದಿಗೂ ದೇಶದ ಪಾಲಿಗೆ ಮಗ್ಗಲಿನ ಮುಳ್ಳಾಗಿ ಕಗ್ಗಂಟಾಗಿರುವುದನ್ನು ಮರೆತಂತಿದ್ದು, ರಾಷ್ಟ್ರ ಮೊದಲು ಎನ್ನುವ ವಿಚಾರಕ್ಕೆ ವಿರುದ್ಧವಾಗಿ ಶತ್ರುರಾಷ್ಟ್ರವನ್ನೇ ಓಲೈಸುವತ್ತ ಮುಂದಾಗಿರುವುದು ಅವರ ಗೊಂದಲದ ಮನಸ್ಸಿನ ಪ್ರತೀಕ. ಭಾರತ ಮತ್ತು ಚೀನಾದ ಗಡಿಯನ್ನು ಗಡಿ ಎಂದು ಕರೆಯದೆ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್ಎಸಿ) ಎಂದು ಯಾಕೆ ಕರೆಯಲಾಗುತ್ತಿದೆ ಎನ್ನುವುದರ ಕುರಿತು ಸ್ವಲ್ಪವಾದರೂ ಪರಿಜ್ಞಾನವಿದ್ದಲ್ಲಿ ಈ ರೀತಿಯ ಅಪ್ರಬುದ್ಧ ಹೇಳಿಕೆಗಳನ್ನು ನೀಡಲು ರಾಹುಲ್ ಗಾಂಧಿಯವರು ಮುಂದಾಗುತ್ತಿರಲಿಲ್ಲ. ಕಾಂಗ್ರೆಸ್ನಲ್ಲಿ ಅಳಿದುಳಿದಿರುವ ಕೆಲವಾದರೂ ಹಿರಿಯ ನಾಯಕರುಗಳು ಈ ಕುರಿತಾಗಿ ರಾಹುಲ್ ಗಾಂಧಿಯವರಿಗೆ ತಿಳುವಳಿಕೆ ನೀಡುವುದು ಸೂಕ್ತ ಎಂದು ಭಾವಿಸಿರುವುದಾಗಿ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ಆಭರಣ ಅಂಗಡಿಗೆ ನುಗ್ಗಿ ದರೋಡೆ, ಮಾಲೀಕನಿಗೆ ಗುಂಡೇಟು; ಸಿಸಿಕ್ಯಾಮೆರಾದಲ್ಲಿ ಕೃತ್ಯ ಸೆರೆ
ಸಿಧು ಮೂಸೆವಾಲಾರ ಕೊನೆಯ ಹಾಡನ್ನ ಯೂಟ್ಯೂಬ್ ನಿಂದ ತೆಗೆದುಹಾಕಿರೋದೇಕೆ?
ಹಕ್ಕುಗಳನ್ನು ರಕ್ಷಿಸುವುದು ಅಪರಾಧವಲ್ಲ; ತೀಸ್ತಾ ಸೆತಲ್ವಾಡ್ ಪರ ವಿಶ್ವಸಂಸ್ಥೆ ಅಧಿಕಾರಿ ದನಿ
“ರಾಷ್ಟ್ರೀಯ ಭದ್ರತೆಗೆ ಡ್ರಗ್ಸ್ ದೊಡ್ಡ ಸವಾಲು” : ಷಾ
ಸಿಎಂ ಭೇಟಿಯಾಗಲು ಪ್ರವಾಹದ ನೀರಲ್ಲಿ ಪರದಾಡಿದ ಅಸ್ಸಾಂ ಯುವಕ
ಸಿಎಂ ಯೋಗಿ ಆದಿತ್ಯನಾಥ್ ಪ್ರಯಾಣಿಸ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ