Connect with us


      




ವಿದೇಶ

ಚೀನಾದ ಚಂದದ ಮಾತಿಗೆ ಬೆರಗಾದ ಲಂಕಾ! ಮುಂದೇನಾಯ್ತು ಗೊತ್ತಾ..!?

Iranna Anchatageri

Published

on

ಕೋಲಂಬೊ, ಜನವರಿ 04 (ಯು.ಎನ್.ಐ.) ಬಡ ರಾಷ್ಟ್ರಗಳನ್ನು ಗುರಿಯಾಗಿರಿಸಿಕೊಂಡು ಸಾಲ ನೀಡಿ, ಆ ರಾಷ್ಟ್ರವನ್ನು ದಿವಾಳಿ ಮಾಡುವ ಕಾಯಕವನ್ನು ಡ್ರ್ಯಾಗನ್ ರಾಷ್ಟ್ರ ಚೀನಾ ಮಾಡಿಕೊಂಡು ಬರುತ್ತಿದೆ. ಈ ಕುತಂತ್ರಕ್ಕೆ ದಕ್ಷಿಣ ಆಫ್ರಿಕಾ ಖಂಡದ ರಾಷ್ಟ್ರಗಳು, ಏಷ್ಯಾದ ಪಾಕಿಸ್ತಾನ, ಶ್ರೀಲಂಕಾ, ಮಾಲ್ಡೀವ್ಸ್ ಸೇರಿದಂತೆ ಅನೇಕ ದೇಶಗಳು ಚೀನಾದ ಗುಲಾಮಿ ತನಕ್ಕೆ ಒಳಪಡುತ್ತಿವೆ.

ಚೀನಾದ ಸಾಲದ ಬಲೆಯಲ್ಲಿ ಸಿಲುಕಿರುವ ದೇಶಗಳ ಪಟ್ಟಿಗೆ ಭಾರತದ ನೆರೆಯ ರಾಷ್ಟ್ರ ಶ್ರೀಲಂಕಾ ಮತ್ತು ಯುರೋಪಿಯನ್ ದೇಶ ಲಿಥುವೇನಿಯಾ ಕೂಡ ಸೇರಿಕೊಂಡಿವೆ. ಶ್ರೀಲಂಕಾದ ಮೇಲೆ ಚೀನಾದ ಸುಮಾರು 37 ಸಾವಿರ ಕೋಟಿ ರೂಪಾಯಿ ಸಾಲವಿದೆ. ಈ ಎಲ್ಲ ಮೊತ್ತವನ್ನು ಶ್ರೀಲಂಕಾ ಈ ವರ್ಷ ಪಾವತಿಸಬೇಕಾಗಿದೆ. ಪ್ರಸ್ತುತ ಲಂಕಾ ಖಜಾನೆಯಲ್ಲಿ ಸುಮಾರು 11 ಸಾವಿರ ಕೋಟಿ ವಿದೇಶಿ ವಿನಿಮಯ ಮೀಸಲು ಮಾತ್ರ ಉಳಿದುಕೊಂಡಿದೆ.

ವಿಶ್ವದ ಬೇರೇ ಬೇರೆ ರಾಷ್ಟ್ರಗಳಿಂದ ಒಟ್ಟಾರೆ 54 ಸಾವಿರ ಕೋಟಿ ರೂಪಾಯಿ ಸಾಲವನ್ನು ಶ್ರೀಲಂಕಾ ಪಡೆದುಕೊಂಡಿದೆ. ಅದರಲ್ಲಿ ಚೀನಾ ಪಾಲು ಸುಮಾರು 68% ರಷ್ಟಿದೆ. ಮತ್ತೊಂದೆಡೆ ಯುರೋಪ್ ದೇಶ ಲಿಥುವೇನಿಯಾದ ವಿದೇಶಾಂಗ ಸಚಿವ ಗ್ರಿಬ್ರಿಯೆಲ್ಸ್ ಲ್ಯಾಂಡ್‌ಬರ್ಗಿಸ್ ಸೋಮವಾರ ವಿಶ್ವದ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದು, ಚೀನಾ ತಂತ್ರಗಳನ್ನು ಹೆಣೆದು ಸಾಲ ನೀಡಿ ಆರ್ಥಿಕ ದಾಳಿ ನಡೆಸುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ತೈವಾನ್ ಅನ್ನು ಬೆಂಬಲಿಸುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಮೇಲೆ ಚೀನಾ ದಾಳಿ ಮಾಡುತ್ತಿದೆ. ಲಿಥುವೇನಿಯಾದ ಮೇಲಿನ ಇಂತಹ ದಾಳಿಗಳು ಇಡೀ ಯುರೋಪಿಗೆ ದೊಡ್ಡ ಎಚ್ಚರಿಕೆಯಾಗಿದೆ ಎಂದು ಸಚಿವ ಗ್ರಿಬ್ರಿಯೆಲ್ಸ್ ಹೇಳಿದ್ದಾರೆ.

ಚೀನಾದ ಬಲೆಗೆ ನಾವು ಹೇಗೆ ಬಿದ್ದೆವು?

ಚೀನಾದ ಕುತಂತ್ರದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ಸಚಿವ ಲ್ಯಾಂಡ್‌ಬರ್ಗಿಸ್, ಚೀನಾ ಮೊದಲು ತನ್ನ ಮಾರುಕಟ್ಟೆಯನ್ನು ತೆರೆಯುವ ಮೂಲಕ ನಾವು ಅವರ ಮೇಲೆ ಅವಲಂಬನೆಯಾಗುವ ಹಾಗೇ ಮಾಡುತ್ತದೆ. ನಂತರ ತನ್ನ ರಾಜಕೀಯ ಕಾರ್ಯಸೂಚಿಯನ್ನು ಹೇರುವ ಮೂಲಕ ಮಾರುಕಟ್ಟೆಯನ್ನು ನಿಯಂತ್ರಣಕ್ಕೆ ತರುತ್ತದೆ. ಲಿಥುವೇನಿಯನ್ ದೇಶದ 60 ಕಂಪನಿಗಳನ್ನು ಚೀನಾ ಕತ್ತು ಹಿಸುಕಿದೆ. ಇದರೊಂದಿಗೆ ನಮ್ಮ ದೇಶದ ಕಂಪನಿಗಳ ಉತ್ಪನ್ನ ನಿಂತು ಹೋಗಿದೆ. ಇದರಿಂದ ರಫ್ತಿನ ಮೂರನೇ ಒಂದು ಭಾಗದಷ್ಟು ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.

ಶ್ರೀಲಂಕಾ ಹಣದುಬ್ಬರ ದರ 22%

ಶ್ರೀಲಂಕಾದಲ್ಲಿ ಹಣದುಬ್ಬರ ದರ 22% ಕ್ಕೆ ಏರಿದೆ. ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆಯ ನಡುವೆ ಸೇನೆಯ ಉಸ್ತುವಾರಿಯಲ್ಲಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಆಹಾರ ಪದಾರ್ಥಗಳನ್ನು ಖರೀದಿಸಲು ಜನರ ಬಳಿ ಹಣವಿಲ್ಲ. ಒಂದು ಕೆಜಿ ಹಾಲಿನ ಪುಡಿಯನ್ನು 200 ಗ್ರಾಂ ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಏಕೆಂದರೆ ಜನರ ಬಳಿ ಒಂದು ಕೆಜಿ ಹಾಲಿನ ಪ್ಯಾಕೆಟ್ ಖರೀದಿಸುವಷ್ಟೂ ಹಣವಿಲ್ಲ ಎಂದು ಶ್ರೀಲಂಕಾದ ನಾಗರಿಕ ಅನಿರುದ್ಧ ಹೇಳುತ್ತಾರೆ.

ವಿಶ್ವಬ್ಯಾಂಕ್ ಅಂಕಿಅಂಶಗಳ ಪ್ರಕಾರ, ಕರೊನಾ ಅವಧಿಯಲ್ಲಿಯೇ 2 ಕೋಟಿ ಜನಸಂಖ್ಯೆ ಇರುವ ಶ್ರೀಲಂಕಾದಲ್ಲಿ ಸುಮಾರು 5 ಲಕ್ಷ ಜನ ಬಡತರ ರೇಖೆಗಿಂತ ಕೆಳಮಟ್ಟಕ್ಕೆ ಇಳಿದರು. ಅಲ್ಲದೆ, 2 ಲಕ್ಷ ಉದ್ಯೋಗಗಳು ಬಂದ್ ಆಗಿವೆ ಎಂದು ವರದಿ ನೀಡಿದೆ.

ಚೀನಾದಿಂದ 23 ಸಾವಿರ ಕೋಟಿ ಸಾಲ ಪಡೆದ ಮಾಲ್ಡಿವ್ಸ್!

ಎಡ್ಡಾಟಾ ರಿಸರ್ಚ್ ಲ್ಯಾಬ್ ವರದಿ ಪ್ರಕಾರ, ಚೀನಾದ ಸಾಲದ ಬಲೆ ದಕ್ಷಿಣ ಏಷ್ಯಾದ ಇತರ ದೇಶಗಳ ಮೇಲೂ ಬಿಗಿಯಾಗುತ್ತಿದೆ. ಚೀನಾ ಸುಮಾರು 23 ಸಾವಿರ ಕೋಟಿ ಸಾಲವನ್ನು ಮಾಲ್ಡೀವ್ಸ್ ಗೆ ನೀಡಿದೆ. ಇದು ಮಾಲ್ಡೀವ್ಸ್‌ನ ಜಿಡಿಪಿಯ ಸುಮಾರು 53% ಆಗಿದೆ. ವಾಣಿಜ್ಯ ಸಾಲದ ಹೆಸರಿನಲ್ಲಿ ಷರತ್ತುಗಳೊಂದಿಗೆ ಹೆಚ್ಚಿನ ಬಡ್ಡಿ ದರದಲ್ಲಿ ಮಾಲ್ಡೀವ್ಸ್ ಚೀನಾದಿಂದ ಸಾಲ ಪಡೆದುಕೊಂಡಿದೆ.

Share