Connect with us


      




ದೇಶ

ಚೀನಾದ ಕಂಪನಿಗಳು ಭಾರತದ ಕಾನೂನು ಪಾಲಿಸಬೇಕು: ವಿದೇಶಾಂಗ ಸಚಿವಾಲಯ

Iranna Anchatageri

Published

on

ನವದೆಹಲಿ: ಜುಲೈ 07 (ಯು.ಎನ್‌.ಐ.) ಚೀನಾದ ಮೊಬೈಲ್ ಕಂಪನಿಯಾಗಿರುವ ವಿವೋದ ಸ್ಥಳಗಳ ಮೇಲಿನ ತನಿಖಾ ಸಂಸ್ಥೆಗಳ ಕ್ರಮದ ಕುರಿತು ಚೀನಾ ರಾಯಭಾರ ಕಚೇರಿಯ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ. ಅಲ್ಲದೆ, ದೇಶದಲ್ಲಿ ಕಾರ್ಯನಿರ್ವಹಿಸುವ ಯಾವುದೇ ವಿದೇಶಿ ಕಂಪನಿಯು ಭಾರತದ ಕಾನೂನುಗಳಿಗೆ ಬದ್ಧವಾಗಿರಬೇಕು ಎಂದು ಹೇಳಿದೆ.

ವಿವೋ ಮೊಬೈಲ್ ಕಂಪನಿಯ ಕಾರ್ಯವೈಖರಿ ಮತ್ತು ತನಿಖಾ ಸಂಸ್ಥೆಗಳ ಕ್ರಮದ ಬಗ್ಗೆ ಕೇಳಿದಾಗ, ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, “ಇಲ್ಲಿ ಕಾರ್ಯನಿರ್ವಹಿಸುವ ಕಂಪನಿಗಳು ನೆಲದ ಕಾನೂನನ್ನು ಅನುಸರಿಸಬೇಕಾಗುತ್ತದೆ. ನಮ್ಮ ಕಾನೂನು ಸಂಸ್ಥೆಗಳು ದೇಶದ ಕಾನೂನಿನ ಆಧಾರದ ಮೇಲೆ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಈ ವಿಷಯದ ಬಗ್ಗೆ ಯಾವುದೇ ಟಿಪ್ಪಣಿ ಇರಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಅವರು ತಿಳಿಸಿದರು.

ಭಾರತದಿಂದ ವಿವೋ ಕಂಪನಿಯ ಇಬ್ಬರು ನಿರ್ದೇಶಕರು ಪರಾರಿಯಾಗಿರುವ ಬಗ್ಗೆ ಕೇಳಿದಾಗ, ಬಾಗ್ಚಿ, “ನಮಗೆ ಸರ್ಕಾರಿ ಸಂಸ್ಥೆಗಳಿಂದ ಅಂತಹ ಯಾವುದೇ ಮಾಹಿತಿ ಇಲ್ಲ” ಎಂದು ಹೇಳಿದರು. ಇದು ಕಾನೂನು ಸಮಸ್ಯೆಯಾಗಿದೆ. ಎರಡೂ ರಾಷ್ಟ್ರಗಳ ಮಧ್ಯೆ ಪರಸ್ಪರ ಸಹಕಾರಕ್ಕಾಗಿ ನಾವು ಕಾರ್ಯವಿಧಾನವನ್ನು ಹೊಂದಿದ್ದೇವೆ ಎಂದು ತಿಳಿಸಿದರು.

ಇಂದು ಬಾಲಿಯಲ್ಲಿ ನಡೆದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವಿನ ಸಭೆಯ ವೇಳೆ, ಸೇನಾ ಕಮಾಂಡರ್‌ಗಳ ಮಟ್ಟದ ಸಭೆಯ ದಿನಾಂಕಗಳನ್ನು ನಿಗದಿಪಡಿಸಿದೆಯೇ ಎಂದು ಬಾಗ್ಚಿ ಅವರನ್ನು ಪ್ರಶ್ನೆ ಮಾಡಿದಾಗ, “ಮಿಲಿಟರಿ ಕಮಾಂಡರ್‌ಗಳ ಸಭೆಯನ್ನು ಶೀಘ್ರವಾಗಿ ಕರೆಯಲು ವಿದೇಶಾಂಗ ಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಆದರೆ, ಯಾವುದೇ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ ಎಂದು ಹೇಳಿದರು.

Share