Connect with us


      
ಸಾಮಾನ್ಯ

ಕಪ್ಪುಬಿಳುಪಿನ ತ್ರಿಶಂಕು ಸ್ವರ್ಗದಲ್ಲಿ ಆಧುನಿಕತೆಯ ತೊಳಲಾಟ

Kumara Raitha

Published

on

ಸಾತ್ವಿಕ್‌ ಹಂದೆ

ಅಂಕಣ: ಸಿನೆನೋಟ – ೩

(ಯು.ಎನ್.‌ಐ.) ಹಲವು ಅಂತರಾಷ್ಟ್ರೀಯ ಚಲನಚತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ಹಾಲಿವುಡ್  ಸ್ಟಾರ್ ನಟ ವಾಕೀನ್ ಫೀನಿಕ್ಸ್ ಅಭಿನಯದ ಕಮಾನ್ ಕಮಾನ್ ಸಿನಿಮಾದ ಬಗ್ಗೆ ಮಾತನಾಡುವುದು ಬಹಳಷ್ಟಿದೆ. ಹೀತ್ ಲೆಜ್ಜರ್ ನಟಿಸಿ ಸೈ ಎನಿಸಿಕೊಂಡಿದ್ದ ಜೋಕರ್ ಪಾತ್ರದಲ್ಲಿ ಮಿಂಚಿ , ಅವನ ನಟನೆಗೂ ಸೆಡ್ಡು ಹೊಡೆಯುವಷ್ಟು ಅದ್ಭುತ ಕೌಶಲ್ಯ ತೋರಿದ ವಾಕೀನ್ ಫೀನಿಕ್ಸ್ , ಆ ಪಾತ್ರಕ್ಕೆ ತನ್ನದೇ ಮ್ಯಾನರಿಸಂ ಮುದ್ರೆಯನ್ನು ಒತ್ತಿದ್ದಾರೆ. ಇನ್ನು ಜೋಕರ್ ನಂತರದ ಇವರ ಸಿನಿಮಾ ಪಯಣ ಹೇಗಿರಬಹುದೆಂಬ ಸಹಜ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ. ಅಭಿಮಾನಿಗಳು ಮತ್ತು ಸಿನಿಪ್ರೀಯರ ನಂಬಿಕೆ ಹುಸಿಮಾಡದಂತೆ ಮತ್ತೊಂದು ವಿಶಿಷ್ಟ ಪಾತ್ರದೊಂದಿಗೆ ವೀಕ್ಷಕರ ಮುಂದೆ ಬಂದಿದ್ದಾರೆ ಫೀನಿಕ್ಸ್ .

ಹರ್ ಸಿನಿಮಾದ ವಿಚಿತ್ರ ಕಥೆಯೇ ಆಗಲಿ , ಜೋಕರ್ ಸಿನಿಮಾದಲ್ಲಿನ ವಿಚಿತ್ರ ಪಾತ್ರವೇ ಆಗಲಿ ಇವೆರಡರಲ್ಲೂ ಫೀನಿಕ್ಸ್ ಅವರ ನಟನೆಯ ಕೊಡುಗೆ ಅಪಾರವಾದದ್ದು . ಒಬ್ಬ ಪ್ರಬುದ್ಧ ಮತ್ತು ಒಳ್ಳೆಯ ನಟ , ಸಾಧಾರಣವೆನಿಸುವ ಕಥೆಯನ್ನೂ ಎತ್ತರದ ಸ್ಥಾಯಿಗೆ ಕೊಂಡೊಯ್ಯಬಲ್ಲನೆಂಬ ಮಾತು ಸುಳ್ಳಲ್ಲ ಆದರೆ ಇಲ್ಲಿನ ವಿಷಯವೇ ಬೇರೆ . ಈ ಸಿನಿಮಾದ ವಿಚಾರದಲ್ಲಿ ಕಥೆ , ಚಿತ್ರಕಥೆ ಮತ್ತು ನಟನೆ , ಸಂಭಾಷಣೆ ಇವೆಲ್ಲವೂ ಪಾತ್ರಕ್ಕೆ ಮತ್ತು ಸನ್ನಿವೇಶಗಳಿಗೆ ಒಪ್ಪುವoತದ್ದಾಗಿದೆ  . ರೇಡಿಯೋ ಜರ್ನಲಿಸ್ಟ್ ಪಾತ್ರದಲ್ಲಿ ನಟಿಸಿರುವ ಫೀನಿಕ್ಸ್ ತಮ್ಮ ಪಾತ್ರವನ್ನು ಅನುಭವಿಸಿದ್ದಾರೆ .

ಬದಲಾಗುತ್ತಿರುವ ಸಾಮಾಜಿಕ ಸವಾಲುಗಳಿಗೆ ಹೊಸ ಉತ್ತರಗಳನ್ನು ಹುಡುಕಿಹೊರೆಟ ಮನುಷ್ಯ , ಹಲಬಗೆಯ ಸಾಧ್ಯತೆಗಳನ್ನು ಪ್ರಯತ್ನಿಸುತ್ತಿದ್ದಾನೆ. ಮಾನಸಿಕ ಖಿನ್ನತೆ , ಒಂಟಿತನ ಇವುಗಳೆಲ್ಲ ತೀರಾ ಎಲ್ಲರನ್ನೂ ಕಾಡುವ ಸಮಸ್ಯೆಗಳೇನೋ ಎನ್ನಿಸುವಷ್ಟು ಸಾಮಾನ್ಯವಾದ ವಿಚಾರವಾಗಿದೆ. ವಯಸ್ಸಾದಂತೆಲ್ಲ ಮನುಷ್ಯನನ್ನು ಒಂಟಿತನ ಆವರಿಸಿಬಿಡುತ್ತದೆ . ಅದರಲ್ಲೂ ಕೊವಿಡ್ ನಂತರದ ಜಗತ್ತು ಮತ್ತಷ್ಟು ಒಂಟಿಯಾಗಿಬಿಟ್ಟಿದೆ. ಆನ್ಲೈನ್ ಮೀಟಿoಗುಗಳೆಂಬ ಇಂಟರ್ನೆಟ್ ದುನಿಯಾದ ಸತ್ಯಾಸತ್ಯತೆಗಳೆನ್ನೆಲ್ಲ ಆ ಭಗವಂತನೇ ಬಲ್ಲ. ಇಂತಹ ಕಾಲಘಟ್ಟದಲ್ಲಿ,  ಕಾಲಕ್ಕೆ ತಕ್ಕ ಸಿನಿಮಾವೊಂದು ತೆರೆಕoಡಾಗ, ಇಳಿಸಂಜೆಯ ನೀರವ ಮೌನದಲ್ಲಿ ಒಂದು ಲಾಂಗ್ ವಾಕಿಗೆ ಹೋದ ಅನುಭವವಾಗುತ್ತದೆ .

ಕಥೆ

ಮೊದಲನೆಯದಾಗಿ ಇದೊಂದು ಬ್ಲ್ಯಾಕ್ ಆಂಡ್ ವೈಟ್ ಸಿನಿಮಾ ,ಹೀಗಾಗಿ ಪಾತ್ರಗಳ ಪೇಲವತೆ ಕಥೆಯನ್ನೂ ಆವರಿಸಿಬಿಟ್ಟಿದೆ. ಕಥಾನಾಯಕ ಜಾನಿ (ತಾರಾಗಣದಲ್ಲಿ ವಾಕೀನ್ ಫೀನಿಕ್ಸ್ ) ಒಬ್ಬ ರೇಡಿಯೋ ಜರ್ನಲಿಸ್ಟ್ ಆಗಿರುತ್ತಾನೆ . ಡೆಟ್ರಾಯಿಟ್ ನಗರದ ನಿವಾಸಿಯಾದ ಜಾನಿ, ತನ್ನ ಸಹೋದರಿಯಾದ ವೀವ್ ಜೊತೆ ಆಗಾಗ ದೂರವಾಣಿಯ ಸಂಪರ್ಕದಲ್ಲಿ ಇರುತ್ತಾನೆ . ಇಳಿವಯಸ್ಸಿನಲ್ಲಿ ಒಂಟಿತನವನ್ನು ಕಳೆಯುವ ಹಲಬಗೆಗಳಲ್ಲಿ ಇದೂ ಒಂದು. ಆಟೋಮೋಟಿವ್ ಉತ್ಪನ್ನಗಳ ತಯಾರಿಕೆಯ ಹಬ್ ಎಂದೇ ಕರೆಯಲ್ಪಡುವ ಡೆಟ್ರಾಯಿಟ್ ನಗರದ ರಸ್ತೆಗಳ ಉದ್ದುದ್ದ ಟ್ರಾಫಿಕ್ ಜಾಮ್ ಗಳನ್ನು ಈ ಸಿನಿಮಾದಲ್ಲಿ ನೋಡಬಹುದಾಗಿದೆ. ಇದನ್ನು ನಮ್ಮ ಸಮಕಾಲೀನ ಕಾಲಘಟ್ಟದ ಆಧುನಿಕತೆಯೆಂದು ಪರಿಗಣಿಸಬಹುದು. ಹೀಗಾಗಿ ಆಧುನಿಕತೆಯನ್ನು ವಿಶುವಲ್ ಎಫೆಕ್ಟ್ ಗಳಿಂಡಲೋ ಅಥವಾ ಹೊಸಬಗೆಯ ತಂತ್ರಗಾರಿಕೆಯಿಂದಲೋ ಹೇಳುವುದಕ್ಕಿಂತ ಇದು ಪರಿಣಾಮಕಾರಿ . ಅದರಲ್ಲೂ ಇಂತಹದ್ದನ್ನು ಕಪ್ಪುಬಿಳುಪು ಬಣ್ಣಗಳಲ್ಲಿ ವರ್ಣಿಸುವುದು ಕವಿತೆಯಷ್ಟೇ ಶ್ರೇಷ್ಠ , ಏಕೆಂದರೆ ಇಲ್ಲಿ ವೀಕ್ಷಕನ ಊಹೆಗೂ ಸಾಕಷ್ಟು ಅವಕಾಶಗಳಿರುತ್ತವೆ .

ಕಥೆ ಮುಂದುವರೆಯುತ್ತಾ , ವೀವ್ ಅದೊಂದು ದಿನ ಜಾನಿಗೆ ಕರೆ ಮಾಡಿ, ಅನಾರೋಗ್ಯ ಪೀಡಿತನಾದ ತನ್ನ ಪತಿಯ ಶುಶ್ರೂಷೆಗಾಗಿ ಓಕ್ಲ್ಯಾಂಡ್ ನಗರಕ್ಕೆ  ತೆರಳಬೇಕಾಗಿ ಬಂದಿದ್ದು , ತನ್ನ ಅನುಪಸ್ಥಿತಿಯಲ್ಲಿ ,ಮಗ ಜೆಸ್ಸಿಯನ್ನು ನೋಡಿಕೊಳ್ಳಲು ವಿನಂತಿಸಿಕೊಳ್ಳುತ್ತಾಳೆ. ಹೀಗಾಗಿ ಜಾನಿ, ಲಾಸ್ ಏಂಜಲೀಸ್ ನಗರಕ್ಕೆ ತೆರಳಬೇಕಾಗುತ್ತದೆ . ಮನಸ್ಸಿಲ್ಲದ ಮನಸಿನಲ್ಲಿ , ಆತ ವೀವ್ ನ ಮಗನಾದ ಜೆಸ್ಸಿಯನ್ನು ನೋಡಿಕೊಳ್ಳಲು ಹೊರಡುತ್ತಾನೆ . ಇಲ್ಲಿಗೆ ಡೆಟ್ರಾಯಿಟ್ ನಗರದ ಅಧ್ಯಾಯ ಕೊನೆಗೊಳ್ಳುತ್ತದೆ . ಲಾಸ್ ಏಂಜಲಿಸ್ ನಗರವೂ ಡೆಟ್ರಾಯ್ಟಿನಂತೆಯೇ ನಗರ ಪ್ರದೇಶವಾದರೂ ಇಲ್ಲಿಯ ಸಮುದ್ರ ತೀರ ಜಾನಿಯ ಆಲೋಚನೆಗಳಿಗೆ ಹೊಸ ಆಯಾಮವನ್ನು ನೀಡುತ್ತದೆ . ಜಾನಿ ಮತ್ತು ಜೆಸ್ಸಿ ಪರಸ್ಪರ ಹೊಂದಿಕೊಳ್ಳುವಷ್ಟರಲ್ಲಿ , ಜಾನಿಗೆ ಕೆಲಸದ ಕರೆ ಮತ್ತು ಆಫೀಸಿನ ಒತ್ತಡಗಳು ಎದುರಾಗುತ್ತವೆ . ಇದನ್ನು ವೀವ್ ನ ಬಳಿ ವಿವರಿಸಿದರೂ ,ಆಕೆ ಮರಳುವಂತೆ ಇರಲಿಲ್ಲ . ಆಕೆಯ ಪತಿಯ ಆರೋಗ್ಯ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಲೇ ಇರುತ್ತದೆ . ಜಾನಿ , ಮತ್ತಷ್ಟು ದಿನಗಳ ಕಾಲ ಕಾಯಲು ಒಪ್ಪುವನಾದರೂ , ಅವನಿಗೆ ಕೆಲಸಕ್ಕೆ ಮರಳುವ ಅವಶ್ಯಕತೆಯಿರುತ್ತದೆ . ಇತ್ತ ಜೆಸ್ಸಿಯ ಪಾತ್ರ ಇತರೆ ಮಕ್ಕಳ ಪಾತ್ರಗಳಿಗಿಂತ ವಿಭಿನ್ನವಾಗಿ ಬರೆಯಲಾಗಿದೆ . ಈತ ಬೇರೆ ಮಕ್ಕಳಂತೆ ಹೆಚ್ಚು ವಾಚಾಳಿಯಲ್ಲ . ಹಾಗಂತ ತೀರಾ ಅಂತರ್ಮುಖಿಯೂ ಅಲ್ಲ . ಇಂತಹ ವಿಭಿನ್ನ ಪಾತ್ರವನ್ನು ವುಡ್ಡಿ ನಾರ್ಮನ್ (ಬಾಲ ನಟ ) ಅದ್ಭುತವಾಗಿ ನಿಭಾಯಿಸಿದ್ದಾರೆ .

ಕಾಲ ಕಳೆದಂತೆ ಜಾನಿಯು ಕೆಲಸಕ್ಕೆ ಮರಳಲೇಬೇಕಾದ ಅನಿವಾರ್ಯ ಸ್ಥಿತಿಯು ಎದುರಾಗುತ್ತದೆ ಆದರೆ ಇತ್ತ ವೀವ್ ವಾಪಾಸು ಬರುವ ಲಕ್ಷಣಗಳೇ ಇಲ್ಲ . ಈ ತ್ರಿಶಂಕು ಸ್ಥಿತಿಯು , ಗಿರೀಶ್ ಕಾಸರವಳ್ಳಿಯವರ “ಇಲ್ಲಿರಲಾರೆ , ಅಲ್ಲಿಗೆ ಹೋಗಲಾರೆ ” ಎಂಬ ಸಿನಿಮಾದ ಭಾವವನ್ನು ನೆನಪಿಸುತ್ತದೆ . ಮಾನಸಿಕ ದ್ವಂದ್ವಗಳು ಮನುಷ್ಯಸಹಜ ಭಾವನೆಗಳಾದ , ಸಿಟ್ಟು , ಬೇಸರ , ಹತಾಶೆಗಳಿಗೀಡುಮಾಡುತ್ತದೆ . ಈ ಎಲ್ಲಾ ಭಾವಗಳಲ್ಲಿ ಫೀನಿಕ್ಸ್ ರ  ನಟನೆಯನ್ನು ಕಣ್ತುಂಬಿಕೊಳ್ಳುವ ಹಬ್ಬಕ್ಕೆ ಸಿನಿಮಾ ಎನ್ನುತಾರೇನೋ ಎನಿಸಿಬಿಡುತ್ತದೆ .

ಕಲರ್ ಗ್ರೇಡಿಂಗ್:

ಮೋನೋಕ್ರೊಮ್ ಸಿನೆಮ್ಯಾಟಿಕ್ ಕಲರ್ ಗ್ರೇಡಿಂಗ್ ಬಗ್ಗೆ ಮಾತನಾಡುವುದಾದರೆ , ಇನ್ಸೈಡ್ ಲ್ಯುವಿನ್ ಡೇವಿಸ್ ಎಂಬ ಸಿನಿಮಾದಲ್ಲಿನ ನಿರಾಶಾದಾಯಕ ಮೂಡನ್ನು ಕಟ್ಟಿಕೊಡುವ ಕಲರ್  ಗ್ರೇಡಿಂಗ್ ವೀಕ್ಷಕನ ಮೇಲೆ ಅಗಾಧ ಪರಿಣಾಮ ಬೀರಿತ್ತು  ಆ ಸಿನಿಮಾದಲ್ಲಿ ಕಪ್ಪು ಬಿಳುಪನ್ನು ಹೊರತುಪಡಿಸಿ ಇತರೆ ಬಣ್ಣಗಳೂ ಇದ್ದವು . ಆದರೆ ಪ್ರಸ್ತುತ “ಕಮಾನ್ ಕಮಾನ್ ” ಸಿನಿಮಾದಲ್ಲಿ ಒಂದು ಹೆಜ್ಜೆ ಮುನ್ನಡೆದು ಇಡೀ ಕಥೆಯನ್ನು ಕಪ್ಪು ಬಿಳುಪನ್ನಾಗಿಸಿದ್ದಾರೆ . ಇಲ್ಲಿಯೂ ಸಾಕಷ್ಟು ವೈಶಿಷ್ಟ್ಯಗಳಿವೆ . ಮೋನೋಕ್ರೊಮ್ ಕಲರ್ ಗ್ರೇಡಿಂಗ್ ನಲ್ಲಿಯೂ ಸಹ ಕಪ್ಪು ಬಣ್ಣಕ್ಕೆ ಹೆಚ್ಚು ಒತ್ತು ನೀಡಿರುವಂತಿದೆ .

“ಬಿಗಿನ್ನರ್ಸ್” ಮತ್ತು “20th ಸೆಂಚುರಿ ವುಮೆನ್ ” ತರಹದ ಸಿನಿಮಾಗಳನ್ನು ನಿರ್ದೇಶಿಸಿದ್ದ ಮೈಕ್ ಮಿಲ್ಸ್ , ಈ ಸಿನಿಮಾದ ಮುಖಾಂತರ ವಿಭಿನ್ನ ಪ್ರಯೋಗವೊಂದನ್ನು ಯತ್ನಿಸಿದ್ದಾರೆ . ಅದರಲ್ಲೂ ಸ್ಟಾರ್ ನಟರೊಬ್ಬರೊಂದಿಗೆ ಕಪ್ಪು ಬಿಳುಪು ಸಿನಿಮಾವೊಂದನ್ನು ನಿರ್ಮಿಸುವ ಆಲೋಚನೆಯೇ ವಿಶಿಷ್ಟ.

Continue Reading
Share