Connect with us


      
ಸಾಮಾನ್ಯ

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಕನ್ನಡಿಗರಿಗೆ ಅಭಿನಂದನೆ

Lakshmi Vijaya

Published

on

ಬೆಂಗಳೂರು: ಆಗಸ್ಟ್ 16 (ಯು.ಎನ್.ಐ.) ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೌರವಿಸಿದರು.

ಬ್ಯಾಡ್ಮಿಂಟನ್ ಮಿಕ್ಸ್ ಡ್ ಡಬಲ್ಸ್ ನಲ್ಲಿ ಬೆಳ್ಳಿ ಗೆದ್ದ ಕನ್ನಡತಿ ಅಶ್ವಿನಿ ಪೊನ್ನಪ್ಪ ಅವರಿಗೆ ರಾಜ್ಯ ಸರ್ಕಾರದಿಂದ 15 ಲಕ್ಷ ರೂ.  ಕ್ರಿಕೆಟ್‌ನಲ್ಲಿ ಬೆಳ್ಳಿ ಪದಕ ವಿಜೇತೆ ರಾಜೇಶ್ವರಿ ಗಾಯಕ್ವಾಡ್ ಅವರಿಗೆ 15 ಲಕ್ಷ  ರೂ. ಹಾಗೂ ವೇಟ್ ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದ ಗುರುರಾಜ ಪೂಜಾರಿಗೆ 8 ಲಕ್ಷ ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಜೊತೆಗೆ ಅಮೃತ ಕ್ರೀಡಾ ದತ್ತು ಯೋಜನೆಯಡಿ ಆಯ್ಕೆಯಾದ 75 ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು.  ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ನಾರಾಯಣಗೌಡ, ಕರ್ನಾಟಕ ಒಲಿಂಪಿಕ್ ಅಧ್ಯಕ್ಷ ಕೆ.ಗೋವಿಂದರಾಜು ಮತ್ತು ಇಲಾಖಾ ಅಧಿಕಾರಿಗಳು ಭಾಗಿಯಾಗಿದ್ದರು.

ಅಭಿನಂದನಾ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ‌ ಬಳಿ ಕ್ರೀಡಾಪ್ರೋತ್ಸಾಹಕ್ಕೆ ಮನವಿ ಮಾಡಿದ ಪದಕ ವಿಜೇತ ಗುರುರಾಜ್ ಪೂಜಾರಿ, ಕರ್ನಾಟಕದ ಕ್ರೀಡಾಪಟುಗಳಿಗೆ ಮತ್ತಷ್ಟು ಬೆಂಬಲ ಸಿಕ್ಕರೆ ಇನ್ನೂ ಹೆಚ್ಚು ಪದಕ ಸಿಗುತ್ತದೆ. ದೇಶದ ಒಟ್ಟು 61 ಪದಕಗಳಲ್ಲಿ ಕರ್ನಾಟಕಕ್ಕೆ 3 ಪದಕ ಬಂದಿದೆ. ಬೇರೆ ರಾಜ್ಯಗಳಲ್ಲಿ ಪ್ರೋತ್ಸಾಹ ಧನ ಹೆಚ್ಚಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿನ ಪ್ರೋತ್ಸಾಹ ಧನ ಕಡಿಮೆ. ಇನ್ನೂ ಹೆಚ್ಚಿನ ಪ್ರೋತ್ಸಾಹ ಧನ ಸಿಕ್ಕರೆ ಕರ್ನಾಟಕದ ಕ್ರೀಡಾಪಟುಗಳು ಮತ್ತಷ್ಟು ಪದಕಗಳನ್ನು ಗಳಿಸುತ್ತಾರೆ. ಹಾಗು ಕ್ರೀಡಾಪದಕ ವಿಜೇತರಿಗೆ ಸರ್ಕಾರಿ ಉದ್ಯೋಗ ಕೂಡ ನೀಡಬೇಕೆಂದು ಮನವಿ ಮಾಡಿದರು.

ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ, ಕ್ರೀಡಾ ಮನೋಭಾವದಿಂದ ಮನುಷ್ಯನಿಗೆ ಶಿಸ್ತು ಬರುತ್ತದೆ. ಕ್ರೀಡೆಯಿಂದ ಒಂದು ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ನಮ್ಮ ರಾಜ್ಯದಲ್ಲಿ ಅನೇಕ ಕ್ರೀಡಾಪಟುಗಳಿದ್ದಾರೆ. ಕೆಲಸಕ್ಕಾಗಿ ನೀವು ಆಟಬಾರದು. ದೇಶಕ್ಕೋಸ್ಕರ ಆಟ ಆಡಿ. ನಿಮ್ಮ ಆತಂಕ,ಭಯ ನನಗೆ ಅರ್ಥ ಆಗುತ್ತೆ ಅದಕ್ಕೆ ಸರ್ಕಾರ ಎಲ್ಲಾ ಕ್ರಮ ತೆಗೆದುಕೊಳ್ಳುತ್ತದೆ . ನಾವು ಈಗಾಗಲೇ ಪೋಲಿಸ್ ಮತ್ತು ಫಾರೆಸ್ಟ್ ಇಲಾಖೆಗಳಲ್ಲಿ 2% ಕ್ರೀಡಾ ಮೀಸಲಾತಿ ನೀಡಿದ್ದೇವೆ. ಮುಂದೆ ಎಲ್ಲಾ ಇಲಾಖೆಗಳಿಗೂ ವಿಸ್ತರಣೆ ಮಾಡಿ 2% ಕ್ರೀಡಾ ಮೀಸಲಾತಿ ನೀಡ್ತೀವಿ ಎಂದರು.

Share