Connect with us


      




ರಾಜಕೀಯ

ಚರ್ಚೆಗೆ ಕಾಂಗ್ರೆಸ್‌ ಶಾಸಕರ ಆಗ್ರಹ; ಅಮಾನತು

Kumara Raitha

Published

on

ಬೆಳಗಾವಿ: (ಸುವರ್ಣ ವಿಧಾನಸೌಧ) ಡಿಸೆಂಬರ್‌ ೧೫ (ಯು.ಎನ್.ಐ.) ಹಾಲಿ ಮತ್ತು ಮಾಜಿ ಸಚಿವರ ವಿರುದ್ಧ ಗುರುತರ ಆರೋಪ ಉಂಟಾಗಿದೆ. ಚರ್ಚೆಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ಮಾಡಿದರು.

ಇಂದು ವಿಧಾನ ಪರಿಷತ್‌ ನಲ್ಲಿ ಪ್ರತಿಪಕ್ಷ ನಾಯಕ ಎಸ್.ಆರ್.‌ ಪಾಟೀಲ್‌ ಅವರು ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನವಿ ಮಾಡಿದರು. ಪ್ರಶ್ನೋತ್ತರ ವೇಳೆ ನಂತರ ಚರ್ಚೆಗೆ ಅವಕಾಶ ನೀಡುವುದಾಗಿ ಸಭಾಪತಿ ತಿಳಿಸಿದಾಗ ಕಾಂಗ್ರೆಸ್‌ ಸಚೇತಕ ನಾರಾಯಣಸ್ವಾಮಿ ಅವರು ಒಪ್ಪಲಿಲ್ಲ. ಪ್ರತಿಪಕ್ಷ ನಾಯಕರು ಬಹುಮುಖ್ಯ ವಿಷಯ ಪ್ರಸ್ತಾಪಿಸಿದ್ದಾರೆ. ಹಾಲಿ ಮತ್ತು ಮಾಜಿ ಸಚಿವರ ವಿರುದ್ಧ ಕ್ರಿಮಿನಲ್‌ ಪ್ರಕರಣ ಹೂಡಲು ನ್ಯಾಯಾಲಯ ಆದೇಶಿಸಿದೆ. ಈಗಲೇ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು.

ಸಚಿವ ಆರ್.‌ ಅಶೋಕ್‌ ಅವರು ವಿಷಯ ನ್ಯಾಯಾಲಯದ ಮುಂದಿದೆ. ಆದ್ದರಿಂದ ಚರ್ಚೆಗೆ ಅವಕಾಶವಿರುವುದಿಲ್ಲ ಎಂದರು. ನಿಯಮದ ಪ್ರಕಾರ ಕಲಾಪ ನಡೆಯಬೇಕು. ಎಂದು ಸಭಾಪತಿ ಮನವೊಲಿಸಿದಾಗ ಕಾಂಗ್ರೆಸ್‌ ಸದಸ್ಯರು ತಮ್ಮ ಪ್ರತಿಭಟನೆ ನಿಲ್ಲಿಸಿದರು. ಭೋಜನ ವಿರಾಮದ ನಂತರ ಪರಿಷತ್‌ ಮುಂದುವರಿದಾಗ ಚರ್ಚೆಗೆ ಅವಕಾಶ ನೀಡಬೇಕು, ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಸ್.ಆರ್.‌ ಪಾಟೀಲ್‌, ನಾರಾಯಣಸ್ವಾಮಿ, ಬಿ.ಕೆ, ಹರಿಪ್ರಸಾದ್‌ ಮತ್ತಿತರರು ಒತ್ತಾಯ ಮಾಡಿದರು. ಸಭಾಪತಿ ಪೀಠದ ಮುಂದಿನ ಬಾವಿಗಿಳಿದು ಪ್ರತಿಭಟನೆ ಆರಂಭಿಸಿದರು.

ಪರಿಷತ್‌ ನಲ್ಲಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅವರು ಕಾಂಗ್ರೆಸ್‌ ಸದಸ್ಯರ ಒತ್ತಾಯಕ್ಕೆ ಮಣಿಯಲು ಸಾಧ್ಯವಿಲ್ಲ. ಚರ್ಚೆಗೆ ಅವಕಾಶವಿರುವುದಿಲ್ಲ ಎಂದರು.

ಪ್ರತಿಭಟನೆ ಕೈಬಿಟ್ಟು ತಮ್ಮತಮ್ಮ ಸ್ಥಾನಗಳಿಗೆ ಸದಸ್ಯರು ತೆರಳಬೇಕೆಂದು ಸಭಾಪತಿ ಹೇಳಿದರೂ ಕಾಂಗ್ರೆಸ್‌ ಸದಸ್ಯರು ಓಗೂಡಲಿಲ್ಲ. ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು. ಭ್ರಷ್ಟರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಬರೆದಿದ್ದ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟಿಸಿದರು.

ಪ್ರತಿಭಟನೆ ನಿಲ್ಲಿಸದಿದ್ದರೆ ಒಂದು ದಿನದ ಮಟ್ಟಿಗೆ ಅಮಾನತು ಮಾಡಬೇಕಾಗುತ್ತದೆ ಎಂದು ಸಭಾಪತಿ ಎಚ್ಚರಿಸಿದರೂ ಕಾಂಗ್ರೆಸ್‌ ಸದಸ್ಯರು ಬಾವಿಯಿಂದ ಹಿಂದೆ ಸರಿಯಲಿಲ್ಲ. ಭ್ರಷ್ಟರನ್ನು ಕೈಬಿಡಿ ಎಂದು ಘೋಷಣೆಗಳನ್ನು ಕೂಗತೊಡಗಿದರು. ಆಗ ಸಭಾಪತಿ ಹೊರಟ್ಟಿ ಅವರು ತುಸು ಸಮಯ ಎದ್ದು ಹೊರನಡೆದರು.

ಸಭಾಪತಿ ಸ್ಥಾನದಲ್ಲಿ ಕುಳಿತ ಬಿಜೆಪಿ ಸದಸ್ಯೆ ತೇಜಸ್ವಿನಿ ರಮೇಶ್‌ ಅವರು ಪ್ರತಿಭಟನೆ ನಿಲ್ಲಿಸುವಂತೆ, ಘೋಷಣೆ ಕೂಗದಂತೆ ಮತ್ತೆಮತ್ತೆ ಮನವಿ ಮಾಡಿದರು. ಆಗಲೂ ಕಾಂಗ್ರೆಸ್‌ ಸದಸ್ಯರು ತಮ್ಮ ಪ್ರತಿಭಟನೆ ಮುಂದುವರಿಸಿದರು. ಆಗ ಸಭಾಪತಿ ಪೀಠದ ಮುಂದಿನ ಬಾವಿಗಳಿದು ಪ್ರತಿಭಟನೆ ಮಾಡುತ್ತಿದ್ದ ಕಾಂಗ್ರಸ್‌ ಸದಸ್ಯರನ್ನು ಹೆಸರಿಸಿದ ಸಭಾಪತಿ ತೇಜಸ್ವಿನಿ ರಮೇಶ್‌ ಅವರೆಲ್ಲರನ್ನೂ ಒಂದು ದಿನದ ಮಟ್ಟಿಗೆ ಅಮಾನತು ಮಾಡುವುದಾಗಿ ಘೋಷಿಸಿದರು. ಈ ಬಳಿಕ ತಮ್ಮ ಪೀಠಕ್ಕೆ ಹಿಂದಿರುಗಿದ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದಸನವನ್ನು ನಾಳೆಗೆ ಮುಂದೂಡಿದರು.

ನಗರಾಭಿವೃದ್ಧಿ ಸಚಿವ ಭೈರತಿ ಬಸವರಅಜ್‌, ಮಾಜಿ ಸಚಿವ ಆರ್‌ ಶಂಕರ್‌ ವಿರುದ್ಧ ಭೂ ಕಬಳಿಕೆ ಆರೋಪವನ್ನು ಕಾಂಗ್ರೆಸ್‌ ಮಾಡಿದೆ. ಅಕ್ರಮ ಎಸಗಿದವರ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಕೋರ್ಟ್ ಹೇಳಿದೆ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹಾಗೂ ಆರ್.ಶಂಕರ್ ವಿರುದ್ಧ ಆದೇಶ ಹೊರಡಿಸಲಾಗಿದೆ. ಒಟ್ಟು ೩೫ ಎಕರೆ ಜಾಗವನ್ನು ಅವರು ತಮ್ಮ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ಹಾಗಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಭೈರತಿ ಬಸವರಾಜ್‌ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಕಾಂಗ್ರೆಸ್‌ ನಾಯಕರು ಇಂದು ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿ ಆಗ್ರಹಿಸಿದ್ದರು.

ಭೈರತಿ ಬಸವರಾಜ್‌ ಪ್ರತಿಕ್ರಿಯೆ: ಇದೇ ವಿಚಾರವಾಗಿ ಮಾದ್ಯಮಗಳೊಂದಿಗೆ ಮಾತನಾಡಿದ ಭೈರತಿ ಬಸವರಾಜ್ ವಿರೋಧ ಪಕ್ಷದವರು ಮಾಡಿದ ಈ ಆಪಾದನೆಗಳೆಲ್ಲ ಸತ್ಯಕ್ಕೆ ದೂರವಾದ ಮಾತುಗಳು. 2003 ರಲ್ಲಿ ಜಮೀನನ್ನ ಖರಿದಿಸಿ ನಿವೇಶನ ಮಾಡಿ ಮಾರಾಟ  ಮಾಡಿದೆ. ವರ್ಷಗಳ ಬಳಿಕ ಈಗ ಅದನ್ನು ಉದ್ದೇಶ ಪೂರ್ವಕವಾಗಿ  ತಂದಿದ್ದಾರೆ. ನಾನು ಇದರ ಸಂಬಂಧ ನ್ಯಾಯಾಲದಲ್ಲಿ ದಾವೆಯನ್ನ ಹೂಡಿದ್ಧೇನೆ. ನ್ಯಾಯಾಲಯ ಏನು ತೀರ್ಮಾನ ಕೈಗೊಳ್ಳುತ್ತೋ ಅದಕ್ಕೆ ಬದ್ದನಾಗಿದ್ದೇನೆ. ಪರಿಷತ್ ನಲ್ಲಿ ಕಾಂಗ್ರೆಸ್ ನವರು ಗದ್ದಲ ಮಾಡಿದರೇ ನಾನೇನ್ ಮಾಡೋಕೆ ಆಗುತ್ತೆ ವಿನಾ ಕಾರಣ ನನ್ನ ತೇಜೋವದೆ ಮಾಡುವುದಕ್ಕಾಗಿ ಹೀಗೆಲ್ಲ ಮಾಡ್ತಿದ್ದಾರೆ ಎಂದು ಹೇಳಿದರು.

Share