Connect with us


      




ಭಾಷೆ

ಕನ್ನಡಕ್ಕೆ ಬೇಕು ಸಮಕಾಲೀನ ನಿಘಂಟು

Kumara Raitha

Published

on

ಲೇಖಕರು: ಕೆ. ರಾಜಕುಮಾರ್

ವಾಟ್ಸಪ್ ಗುಂಪೊಂದರಲ್ಲಿ ಅದರ ಸದಸ್ಯರೊಬ್ಬರು ಓತೋಪ್ರೇತ ಎಂಬ ಪದ ತಮ್ಮ ಬಳಿಯಿದ್ದ ಯಾವ ನಿಘಂಟಿನಲ್ಲೂ ನಮೂದಾಗಿಲ್ಲ. ಇಂಗ್ಲಿಷಿನ ನಿಘಂಟುಗಳಾದರೆ, ಅದರಲ್ಲಿ ಎಲ್ಲ ಪದಗಳಿಗೂ ಅರ್ಥ ಕೊಟ್ಟಿರುತ್ತಾರೆ ಎಂದು ಬರೆದಿದ್ದರು. ಓತೋಪ್ರೇತ ಎಂದರೆ ಏನು ಎಂದು ತಿಳಿಸಿ ಎಂದಿದ್ದರು.‌ ಅದರ ಅರ್ಥ ಹೀಗಿದೆ:

ಸರಿಯಾದ ಪದ ಓತಪ್ರೋತ. ಓತೋಪ್ರೇತವಲ್ಲ. ನಿಮ್ಮಲ್ಲಿ ಸುಮಾರು ನಿಘಂಟುಗಳಿವೆ ಎಂದಿದ್ದೀರಿ.‌ ದಯವಿಟ್ಟು ಯಾವುವೆಂದು ಪಟ್ಟಿ ಕೊಡಿ. ಉಪಕಾರವಾದೀತು. ಪ್ರೋತಕ್ಕೆ ಅರ್ಥ ಹುಡುಕುವ ಬದಲು ಪ್ರೇತ ಹುಡುಕಿದರೆ ಹೇಗೆ? ಓತಪ್ರೋತ ಎಂದರೆ ನಿರಂತರ ಎಂದರ್ಥ. ಹಾಸುಹೊಕ್ಕು ಎಂಬ ಅರ್ಥವೂ ಇದೆ. ಇಂಗ್ಲಿಷಿನಲ್ಲಿ ಇರುವ ನಿಘಂಟುಗಳಲ್ಲಿ ಆ ಭಾಷೆಯ ಎಲ್ಲ ಪದಗಳೂ ಇರುತ್ತವೆ ಎಂಬುದು ಭ್ರಮೆ. ಕನ್ನಡ ನಿಘಂಟುಗಳಲ್ಲಿ ಇಲ್ಲ ಎಂಬುದು ಸಹ ಪೂರ್ವಗ್ರಹಪೀಡಿತ ನಿರ್ಧಾರ. ಅದರಿಂದ ಹೊರಬನ್ನಿ. ನಿಘಂಟುಗಳನ್ನು ಸಾಮಾನ್ಯ ಮತ್ತು ನಿರ್ದಿಷ್ಟ ವಿಷಯ ಸಂಬಂಧೀ ಎಂದು ಎರಡು ರೀತಿಯಾಗಿ ವರ್ಗೀಕರಿಸಲಾಗಿರುತ್ತದೆ. ಯಾವುದೇ ನಿಘಂಟು  ಸ್ವಯಂ ಪರಿಪೂರ್ಣವಲ್ಲ.

ವಿ. ಕೃಷ್ಣ ಎಂಬ ಕನ್ನಡದ ಭಾಗ್ಯವಿಧಾತ ಸತತ 40 ವರ್ಷಗಳ ಪರಿಶ್ರಮದಿಂದ  ರಚಿಸಿದ 160000 ಪದಗಳುಳ್ಳ ಏಕಮೇವಾದ್ವಿತೀಯ/ಏಕಂ ಏವಾ ಅದ್ವಿತೀಯ ನಿಘಂಟಿದು. ಅಲರ್ ಕನ್ನಡ-ಇಂಗ್ಲಿಷ್ ನಿಘಂಟಿನ ಸಂಪುಟಗಳನ್ನು ಕೊಳ್ಳಿ. ಅದೊಂದು ಅದ್ಭುತ ಏಕವ್ಯಕ್ತಿ ಸಾಧನೆ. ಒಟ್ಟು 4700 ಪುಟಗಳ ನಿಘಂಟು. ಕಿಟೆಲ್ ನಿಘಂಟಿನಲ್ಲಿ 60000 ಪದಗಳು ಮಾತ್ರ. ಇದನ್ನು ಮಿಂದೆರೆ/ಆನ್‌ಲೈನ್‌ನಲ್ಲಿ ಉಚಿತವಾಗಿ ಪರಾಮರ್ಶಿಸುವ ಅವಕಾಶವುಂಟು. ಇದರಲ್ಲಿ ಸೇರಿಸಬಹುದಾದ ಪದಗಳನ್ನು ಸೂಚಿಸುವ ಅವಕಾಶವುಳ್ಳ ಜಗತ್ತಿನ ಏಕಮಾತ್ರ ‘ಮುಕ್ತ ಸಂಪನ್ಮೂಲ ಬೃಹತ್ ನಿಘಂಟು’ (Open source dictionary). ಇದು ಕನ್ನಡದ ಸೌಭಾಗ್ಯಗಳಲ್ಲಿ ಒಂದು. ಇದನ್ನು ನೋಡಿ. ಓತಪ್ರೋತ ಇರುತ್ತದೆ; ಇರಲೇಬೇಕು.

ಕಸಾಪದ ಬೃಹತ್ ಕನ್ನಡ ನಿಘಂಟನ್ನು ಪರಾಮರ್ಶಿಸಿ. ಎಂಟು ಸಂಪುಟಗಳು. ಒಟ್ಟು 9200 ಪುಟಗಳಿವೆ. ಅದೊಂದು ಭಂಡಾರ. ಕರಗದ ಆಸ್ತಿ. ನಿಜದ ಬೆರಗು. ಅಷ್ಟೇಕೆ? ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ನಿಘಂಟಿನಲ್ಲಿಯೇ ಓತಪ್ರೋತವಿದೆ.

ನಮಗೆ ಬೇಕು, ಸಮಕಾಲೀನ ನಿಘಂಟು. ಕನ್ನಡದಲ್ಲಿ ಆಡುಮಾತಿನ ನಿಘಂಟು ಇಲ್ಲ = ಸಮಕಾಲೀನ ಪದಗಳ ನಿಘಂಟು ಇಲ್ಲ.  ನಮಗೆ ‘CONTEMPORARY KANNADA DICTIONARY’ ಬೇಕಾಗಿದೆ. ಇದನ್ನು  ಆಗುಮಾಡಲು ವಿಶ್ವವಿದ್ಯಾಲಯ, ಸಂಘ-ಸಂಸ್ಥೆ, ವ್ಯಕ್ತಿ; ಹೀಗೆ ಯಾರಾದರೂ ಮುಂತೊಡಗಬೇಕಿದೆ.

ಲೇಖಕರ ಪರಿಚಯ:

ಕೆ. ರಾಜಕುಮಾರ್‌ ಅವರು ಚಿಂತಕ, ಸಾಹಿತಿ, ಬೋಧಕ ಮತ್ತು ಹೋರಾಟಗಾರ. ಕನ್ನಡದ ಅಸ್ಮಿತೆಗೆ ಅಪಾಯವಿದೆ ಎನಿಸಿದಾಗಲೆಲ್ಲ‌ ತಕ್ಷಣವೇ ಹೋರಾಟದ ಕಹಳೆ ಮೊಳಗಿಸುವವರು. ಗೋಕಾಕ ಚಳವಳಿಯಲ್ಲಿಯೂ ಪಾಲ್ಗೊಂಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಹಂತಗಳ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

Share