Connect with us


      
ಸಿನೆಮಾ

ಹಿಂದಿ ರಾಷ್ಟ್ರಭಾಷೆ ವಿವಾದ ; ಅಜಯ್‌ ದೇವಗಣ್ಗೆ ಟಾಂಗ್‌ ನೀಡಿದ ಸೋನು ನಿಗಮ್‌

Kumara Raitha

Published

on

ಮುಂಬೈ: ಮೇ ೦೩ (ಯು.ಎನ್.‌ಐ.) ‘ಹಿಂದಿ ನಮ್ಮ ರಾಷ್ಟ್ರೀಯ ಭಾಷೆ ಎಂದು ಎಲ್ಲಿಯೂ ಬರೆಯಲಾಗಿಲ್ಲ’ ಎಂದು ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್‌ ಅವರು ಅಜಯ್‌ ದೇವಗಣ್‌ ಅವರ ವಿರುದ್ಧ ಕಿಡಿ ಕಾರಿದ್ದಾರೆ.

ಹಿಂದಿ ರಾಷ್ಟ್ರ ಭಾಷೆಯೇ ಅಥವಾ ಅಲ್ಲವೇ ಎಂಬ ವಿಷಯದ ಕುರಿತು ಅಜಯ್ ದೇವಗನ್-ಕಿಚ್ಚ ಸುದೀಪ್ ಅವರ ವಿವಾದಾತ್ಮಕ ಟ್ವಿಟ್ಟರ್ ಚರ್ಚೆಗೆ ಗಾಯಕ ಸೋನು ನಿಗಮ್ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ಪತ್ರಕರ್ತ ಸುಶಾಂತ್‌ ಮೆಹ್ತಾ ಅವರು ನಡೆಸಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  “ಸಂವಿಧಾನದಲ್ಲಿ ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದು ಎಲ್ಲಿಯೂ ಬರೆದಿಲ್ಲ. ಅದು ಹೆಚ್ಚು ಮಾತನಾಡುವ ಭಾಷೆಯಾಗಿರಬಹುದು, ಆದರೆ ರಾಷ್ಟ್ರ ಭಾಷೆಯಲ್ಲ. ವಾಸ್ತವವಾಗಿ, ತಮಿಳು ಅತ್ಯಂತ ಹಳೆಯದು. ಭಾಷೆ, ಸಂಸ್ಕೃತ ಮತ್ತು ತಮಿಳಿನ ನಡುವೆ ಚರ್ಚೆ ನಡೆಯುತ್ತಿದೆ, ಆದರೆ, ಇಡೀ ಪ್ರಪಂಚದಲ್ಲಿ ತಮಿಳು ಅತ್ಯಂತ ಹಳೆಯ ಭಾಷೆ ಎಂದು ಜನರು ಹೇಳುತ್ತಾರೆ ಎಂದಿದ್ದಾರೆ.

ಈ ಬಗ್ಗೆ ಮತ್ತಷ್ಟೂ ಪ್ರತಿಕ್ರಿಯಿಸಿರುವ ಸೋನು ನಿಗಮ್ “ನಾವು ಇತರ ದೇಶಗಳೊಂದಿಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಅಲ್ಲವೇ ? ನಾವು ನಮ್ಮದೇ ಆದ ಒಂದನ್ನು ಪ್ರಾರಂಭಿಸುತ್ತಿದ್ದೇವೆ”  ಎಂದು ಅರ್ಥಗರ್ಭಿತವಾಗಿ ಹೇಳಿ, ಈ ಚರ್ಚೆ ಇನ್ನೂ ಏಕೆ ನಡೆಯುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಕೆಲವು ದಿನಗಳ ಹಿಂದೆ  ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯಶ್ ಅಭಿನಯದ ‘ಕೆಜಿಎಫ್: ಅಧ್ಯಾಯ 2’ ನ ರಾಷ್ಟ್ರವ್ಯಾಪಿ ಯಶಸ್ಸನ್ನು ಕನ್ನಡ ಚಿತ್ರರಂಗದವರು ಆಚರಿಸಿದ ಸಂದರ್ಭದಲ್ಲಿ ಸುದೀಪ್ ನೀಡಿದ ಹೇಳಿಕೆಯು ಅನಗತ್ಯವಾಗಿ ವಿವಾದಕ್ಕೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ಅವರು   “ಹಿಂದಿ  ರಾಷ್ಟ್ರ ಭಾಷೆಯಾಗಿಲ್ಲ” ಎಂದು ಹೇಳಿದ್ದರು.

ಸುದೀಪ್ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ, ಅಜಯ್  ಕನ್ನಡದ ತಾರಾನಟನಿಗೆ ಟ್ವೀಟ್ ಮಾಡಿದ್ದು, ಹಿಂದಿ ಭಾರತದ ರಾಷ್ಟ್ರ ಭಾಷೆಯಲ್ಲದಿದ್ದರೆ, ವಿವಿಧ ಭಾಷೆಗಳಲ್ಲಿ ತಯಾರಾದ ಸಿನಿಮಾಗಳನ್ನು ಅಂತಿಮವಾಗಿ ಹಿಂದಿಗೆ ಏಕೆ ಡಬ್ ಮಾಡಲಾಗುತ್ತದೆ ಎಂದಿದ್ದರು. ಈ ಹೇಳಿಕೆಯೇ ಸೋನು ನಿಗಮ್‌ ಅವರು ಸಿಟ್ಟಿಗೇಳುವಂತೆ ಮಾಡಿದೆ.

Share