Connect with us


      




ದೇಶ

ಕೊರೊನಾ ಭೀತಿ: ತಮಿಳುನಾಡಿನ ಕುಟುಂಬಸ್ಥರ ವಿಷ ಸೇವನೆ

Iranna Anchatageri

Published

on

ಮಧುರೈ : ಜನೆವರಿ 10 (ಯು.ಎನ್.ಐ.) ದೇಶದಲ್ಲಿ ಪ್ರತಿ ದಿನ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರ ದುಗುಡ ಅಧಿಕಾರವಾಗುತ್ತಿದೆ. ಈ ಮಧ್ಯೆ, ತಮಿಳುನಾಡಿನ ಕುಟುಂಬವೊಂದು ಸೋಂಕಿಗೆ ಹೆದರಿ ವಿಷ ಸೇವನೆ ಮಾಡಿರುವುದು ಬೆಳಕಿಗೆ ಬಂದಿದೆ. ತಾಯಿ ಜೊತೆಗೆ ಮೂರು ವರ್ಷದ ಮಗು ಸಾವನ್ನಪ್ಪಿದೆ.

ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು ತಮಿಳುನಾಡಿನ ಮಧುರೈಯಲ್ಲಿ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮಧುರೈ ಸಮೀಪದ ಹಳ್ಳಿಯೊಂದರಲ್ಲಿ ಕೊರೊನಾ ಸೋಂಕಿನ ಭಯದಿಂದ ಒಂದೇ ಕುಟುಂಬದ ಐವರು ವಿಷ ಸೇವನೆ ಮಾಡಿದ್ದರು. ಇದರಲ್ಲಿ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, 23 ವರ್ಷದ ಮಹಿಳೆ ಮತ್ತು ಅವರ ಮೂರು ವರ್ಷದ ಮಗ ಸಾವಿಗೀಡಾಗಿದ್ದಾರೆ ಎಂದು ತಿಳಿಸಿದ್ದಾರೆ. ಕೋವಿಡ್ ಭೀತಿಯಿಂದ ಸಾವಿಗೀಡಾಗಿರುವ ವಿಚಾರ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅಲರ್ಟ್ ಆಗಿದ್ದು, ಇಂತಹ ಪರಿಸ್ಥಿತಿ ಎದುರಾದಲ್ಲಿ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕ ಮಾಡುವಂತೆ ಜನರನ್ನು ಒತ್ತಾಯಿಸಿದ್ದಾರೆ.

ಮೃತ ಮಹಿಳೆಗೆ ಜನವರಿ 8ರಂದು ಕೊರೊನಾ

ಇಬ್ಬರು ಪುತ್ರರು, ಒಬ್ಬ ಮಗಳು ಹಾಗೂ ಮೊಮ್ಮಗನೊಂದಿಗೆ ಲಕ್ಷ್ಮಿ ಎಂಬವರು ಹಳ್ಳಿಯಲ್ಲಿ ವಾಸವಾಗಿದ್ದರು. ಮಗಳು ಜ್ಯೋತಿಕಾ, ತನ್ನ ಗಂಡನಿಂದ ಬೇರ್ಪಟ್ಟ ನಂತರ ತಾಯಿಯೊಂದಿಗೆ ಜೀವನ ಸಾಗಿಸುತ್ತಿದ್ದರು. ಈ ವೇಳೆ, ವೃದ್ಧೆ ಲಕ್ಷ್ಮಿ ಅವರ ಪತಿ ಡಿಸೆಂಬರ್ ನಲ್ಲಿ ತೀರಿಕೊಂಡಿದ್ದರು. ಅಂದಿನಿಂದ ಇಡೀ ಕುಟುಂಬ ದುಃಖದಲ್ಲಿದ್ದಾಗ ಜನೆವರಿ 8ರಂದು ಜ್ಯೋತಿಕಾ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ.

ಕೊರೊನಾ ಸೋಂಕು ಇರುವ ಬಗ್ಗೆ ಮಾಹಿತಿ ಗೊತ್ತಾದ ಮೇಲೆ ವೃದ್ಧೆ ಲಕ್ಷ್ಮಿಯ ಇಡೀ ಕುಟುಂಬ ವಿಷ ಸೇವಿಸಿದೆ. ಇದರಲ್ಲಿ ಲಕ್ಷ್ಮಿ, ಲಕ್ಷ್ಮಿಯ ಇಬ್ಬರು ಮಕ್ಕಳು ಹಾಗೂ ಜ್ಯೋತಿಕಾ, ಜ್ಯೋತಿಕಾ ಅವರ ಮಗ ಸೇರಿದ್ದಾರೆ. ವರದಿಯ ಪ್ರಕಾರ, ವಿಷ ಸೇವನೆ ಮಾಡಿದ ಮರು ದಿನ ಪೊಲೀಸರಿಗೆ ನೆರೆಹೊರೆಯವರು ಮಾಹಿತಿ ತಿಳಿಸಿದ್ದಾರೆ. ಆದರೆ, ಪೊಲೀಸರು ಬರುವ ಮೊದಲೇ ಜ್ಯೋತಿಕಾ ಹಾಗೂ ಅವರ ಮೂರು ವರ್ಷದ ಮಗ ಸಾವನ್ನಪ್ಪಿದ್ದರು. ಆದರೆ ಜ್ಯೋತಿಕಾ ಅವರ ತಾಯಿ ಹಾಗೂ ಸಹೋದರರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಆದರೆ, ಬೆಳಕಿಗೆ ಬಂದಿರುವ ಮಾಹಿತಿ ಪ್ರಕಾರ, ಜ್ಯೋತಿಕಾ ಕುಟುಂಬ ಕೊರೊನಾ ಸೋಂಕು ಹಾಗೂ ಅದರ ದುಷ್ಪರಿಣಾಮಗಳ ಬಗ್ಗೆ ಚಿಂತೆ ಮಾಡಿ ವಿಷ ಸೇವಿಸಿರುವುದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದು, ಹೆಚ್ಚಿನ ಮಾಹಿತಿ ಹೊರಬರಬೇಕಾಗಿದೆ.

Share