Connect with us


      




ದೇಶ

“ತುರ್ತು ಪರಿಸ್ಥಿತಿಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ”: ಮೋದಿ

Iranna Anchatageri

Published

on

ನವದೆಹಲಿ: ಜೂನ್ 26 (ಯು.ಎನ್‌.ಐ.) ತುರ್ತು ಪರಿಸ್ಥಿತಿಯಲ್ಲಿ ದೇಶದ ಪ್ರಜಾಪ್ರಭುತ್ವವನ್ನು ಹತ್ತಿಕ್ಕಲಾಯಿತು. ಸಾಮಾನ್ಯ ಜನರ ಹಕ್ಕುಗಳನ್ನು ಕಸಿದುಕೊಂಡಿದ್ದ ಆ ದಿನವನ್ನು ದೇಶದ ಮುಂದಿನ ಪೀಳಿಗೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಆಕಾಶವಾಣಿಯಲ್ಲಿಂದು ಪ್ರಸಾರವಾದ ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 1975ರ ಜೂನ್ ತಿಂಗಳಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿ ಹೇರುವ ಮೂಲಕ ಜನರ ಹಕ್ಕುಗಳನ್ನು ಕಸಿದುಕೊಂಡು ಪ್ರಜಾಪ್ರಭುತ್ವಕ್ಕೆ ಕಡಿವಾಣ ಹಾಕುವ ಕೆಲಸ ನಡೆದಿದೆ. ಈ ಸಮಯವನ್ನು ದೇಶದ ಮುಂದಿನ ಪೀಳಿಗೆ ಎಂದಿಗೂ ಮರೆಯುವುದಿಲ್ಲ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಜನರ ಹಕ್ಕುಗಳನ್ನು ಕಿತ್ತುಕೊಳ್ಳಲಾಯಿತು ಮತ್ತು ಅವರ ಮೇಲೆ ಹಲವಾರು ನಿರ್ಬಂಧಗಳನ್ನು ಹೇರಲಾಯಿತು ಎಂದು ಪ್ರಧಾನಿ ಹೇಳಿದರು.

ಆ ಕಾಲದಲ್ಲಿ ಸಾಂವಿಧಾನಿಕ ಸಂಸ್ಥೆಗಳಿಗೆ ಹಾನಿಗೊಳಿಸಲಾಯಿತು. ಆದರೆ ಸಂವಿಧಾನವನ್ನು ದೇಶ ಜನ ಜೀವಂತವಾಗಿಟ್ಟರು. ಪ್ರಜಾಪ್ರಭುತ್ವವನ್ನು ಜೀವಂತವಾಗಿಡಲು ಪ್ರಜಾಸತ್ತಾತ್ಮಕವಾಗಿ ಹೋರಾಟ ನಡೆಸಿದರು. ಇದರೊಂದಿಗೆ ತುರ್ತು ಪರಿಸ್ಥಿತಿ ತೆಗೆದು ಹಾಕಿ ಪ್ರಜಾಪ್ರಭುತ್ವವನ್ನು ಮರಳಿ ಸ್ಥಾಪಿಸಿದರು. ಜನರು ಸರ್ವಾಧಿಕಾರ ಮತ್ತು ಸರ್ವಾಧಿಕಾರಿ ಮನಸ್ಥಿತಿಯನ್ನು ಸೋಲಿಸಿದರು ಎಂದರು.

ಇಂತಹ ಉದಾಹರಣೆ ಜಗತ್ತಿನಲ್ಲಿ ಬೇರೆಲ್ಲೂ ಸಿಗುವುದಿಲ್ಲ ಎಂದ ಪ್ರಧಾನಿ ಮೋದಿ, ಇಂದು ಸ್ವಾತಂತ್ರ್ಯದ 75ನೇ ವರ್ಷದಲ್ಲಿ ದೇಶವು ಸ್ವಾತಂತ್ರ್ಯದ ಅಮೃತ ಹಬ್ಬವನ್ನು ಆಚರಿಸುತ್ತಿದೆ. ಇತಿಹಾಸದ ಎಲ್ಲ ಪ್ರಮುಖ ಹಂತಗಳಿಂದ ಕಲಿಯುತ್ತಾ ನಾವೆಲ್ಲರೂ ಮುನ್ನಡೆಯಬೇಕಾಗಿದೆ ಎಂದು ಪ್ರಧಾನಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ತಿಳಿಸಿದರು.

Share