Connect with us


      
ಸಾಹಿತ್ಯ

ಮುಗಿಯದ ಮುಜುಗರಗಳು

Kumara Raitha

Published

on

ಶ್ರೀದೇವಿ ಕೆರೆಮನೆ

ಅಂಕಣದ ಹೆಸರು: ಮುಖಗಳು – 1

(ಯು.ಎನ್.ಐ.) “ಹತ್ತು ನಿಮಿಷದ ಕೆಲಸ. ಎರಡು ಸಾವಿರ ಕೊಡ್ತೇನೆ. ಬರ್ತೀಯಾ” ಇನ್ನೂ ಮದುವೆ ಆಗದಂತಿರುವ ಯುವಕನೊಬ್ಬ ಬಂದು ಕೇಳಿದಾಗ ಆಕೆ ಅಕ್ಷರಶಃ ನಡುಗಿ ಹೋಗಿದ್ದಳು. ತಾನು ಏನು ಕೇಳಿಸಿಕೊಳ್ಳುತ್ತಿದ್ದೇನೆ ಎಂದೇ ಆಕೆಗೆ ಅರ್ಥವಾಗಿರಲಿಲ್ಲ. ಬಹುಶಃ ತನ್ನ ಕಿರಿಯ ಸಹೋದರನಷ್ಟು ವಯಸ್ಸಿನವನೊಬ್ಬ ಹೀಗೆ ನೇರನೇರ ಬಂದು ಕೇಳಬಹುದು ಎನ್ನುವ ಯೋಚನೆಯೇ ಅವಳಿಗೆ ಅಸಹ್ಯ ಹುಟ್ಟಿಸಿಬಿಟ್ಟಿತ್ತು. ಹಾಗೆ ಕೇಳಿದ ಆ ಯುವಕರ ಬಗ್ಗೆ ಅಸಹ್ಯ, ಈ ಸಮಾಜದ ಬಗ್ಗೆ ಅಸಹ್ಯ, ಹೊರಗೆ ಕೆಲಸ ಮಾಡಬೇಕಾದ ಕುರಿತು ಅಸಹ್ಯ, ಕೊನೆಗೆ ಅವಳಿಗೆ ತನ್ನ ಬಗ್ಗೆ ತನಗೇ ಅಸಹ್ಯ ಹುಟ್ಟಿ ಅದು ಪರಾಕಾಷ್ಟೆಗೆ ತಲುಪುವ ಹಂತದಲ್ಲಿದ್ದಾಗ ಯಾವುದೋ ಸಂದರ್ಭದಲ್ಲಿ ನನ್ನನ್ನು ಭೇಟಿಯಾಗಿದ್ದಳು.
ಕೊರೊನಾ ಕಾರಣದಿಂದಾಗಿ ಅವಳು ಮತ್ತವಳ ಪತಿ ಸೇರಿ ನಡೆಸುತ್ತಿದ್ದ ಹೊಟೇಲ್ ಮುಚ್ಚಿಕೊಂಡಿತ್ತು. ಜಿಲ್ಲಾ ಕೇಂದ್ರದ ಆಯಕಟ್ಟಿನ ಸ್ಥಳದಲ್ಲಿ ಇದ್ದುದರಿಂದ ಕೊರೊನಾ ಪೂರ್ವಕಾಲದಲ್ಲಿ ಚೆನ್ನಾಗಿಯೆ ಸಂಪಾದನೆಯಾಗುತ್ತಿತ್ತು.  ನಂತರ ಹೊಟೇಲ್‌ನ ಬಾಡಿಗೆ ಕಟ್ಟಲೂ ಹಣವಿಲ್ಲದಂತಾಗಿ ಮುನ್ಸಿಪಾಲ್ಟಿ ಕಟ್ಟಡದಲ್ಲಿದ್ದ ಅದನ್ನು ಬೇರೆಯವರಿಗೆ ಬಿಟ್ಟುಕೊಟ್ಟಿದ್ದರು. ಮಾಡಲು ಬೇರೆ ಕೆಲಸವೂ ಇಲ್ಲದೇ ದೈನಂದಿನ ಜೀವನವೂ ಕಷ್ಟವಾಗುತ್ತ ಕೊನೆಗೆ ನಾಲ್ಕು ಜನವಷ್ಟೇ ಇರುವ ಮನೆಯವರೂ ಒಂದು ಹೊತ್ತಿನ ಊಟ ಮಾಡಬೇಕಾದ ಸಂದರ್ಭ ಬರುವುದಕ್ಕೂ ನಿರ್ಬಂಧ ತುಸು ಸಡಿಲಿಕೆಯಾಗುವುದಕ್ಕೂ ಸಮವಾಗಿತ್ತು.

ಹೀಗಾಗಿ ರಸ್ತೆ ಪಕ್ಕದಲ್ಲಿ ಒಂದು ಗೂಡಂಗಡಿಯನ್ನಿಟ್ಟುಕೊಂಡು ಮತ್ತೆ ಚಹಾ ತಿಂಡಿಯ ವ್ಯಾಪಾರ ಪ್ರಾರಂಬಿಸಿದ್ದರು. ಗಂಡ ಬೇರೆ ಬೇರೆ ಆಫೀಸುಗಳಿಗೆ ಚಹ ತೆಗೆದುಕೊಂಡು ಹೋಗುತ್ತಿದ್ದರು. ಹಿಂದಿನಿಂದಲೂ ಅವರ ಪರಿಚಯವಿದ್ದುದರಿಂದ ಸಹಜವಾಗಿಯೇ ಹಳೆಯ ಗ್ರಾಹಕರು ಅವರನ್ನು ಹುಡುಕಿಕೊಂಡು ಬಂದರು. ಹೀಗಾಗಿ ಮತ್ತೆ ಬದುಕು ಒಂದು ಹಂತಕ್ಕೆ ಬಂತು ಎಂದುಕೊಳ್ಳುತ್ತ ನಿಟ್ಟುಸಿರು ಬಿಡುವಂತಾಗಿತ್ತು.
ಹಾಗೆ ನೋಡಿದರೆ ಆಕೆ ತುಂಬಾ ಚಂದದ, ನೋಡಿದ ತಕ್ಷಣ ಆಕರ್ಷಿಸುವ ವ್ಯಕ್ತಿತ್ವ ಹೊಂದಿದವಳಲ್ಲ. ಸೀದಾ ಸಾದ ಹೆಂಗಸು. ಮುಖದಲ್ಲಿ ಇನ್ನೂ ಒಂದಿಷ್ಟು ಮುಗ್ಧತೆಯಿದೆ. ಒಂದಿಷ್ಟು ಕೆಳವರ್ಗದ ಕಳೆಯೂ ಇದೆ. ಒಂದು ಸಾದಾ ಸೀರೆಯುಟ್ಟು ಅಡುಗೆಗೆ ನಿಂತಳೆಂದರೆ ಅವಳ ಊಟ ತಿಂಡಿಯ ರುಚಿಯನ್ನು ಬಾಯಲ್ಲಿ ವರ್ಣಿಸಿ ತಿಳಿದುಕೊಳ್ಳಲು ಸಾದ್ಯವಿಲ್ಲ. ಬಾಯಿಗಿಟ್ಟೇ ತಿಳಿಯಬೇಕು. ಅಷ್ಟು ಅದ್ಭುತ ಸ್ವಾದ. ಹೀಗೆಂದೇ ಅವಳ ಹೋಟೆಲಿಗೆ ಸದಾ ಜನಜಂಗುಳಿ.
ಇಂತಹುದ್ದೇ ಒಂದು ಮಧ್ಯಾಹ್ನದ ಹೊತ್ತು. ಗಂಡ ಚಹಾ ತೆಗೆದುಕೊಂಡು ಆಫೀಸ್‌ಗಳಿಗೆ ಹೋಗಿದ್ದಾನೆ. ಯಾಕೋ ಅಂದು ಜನರೂ ತೀರಾ ಕಡಿಮೆ. ಅಷ್ಟೇ ಹೊತ್ತಿಗೆ ಬಂದ ಇಬ್ಬರು ಯುವಕರು ಗಲ್ಲಾ ಪೆಟ್ಟಿಗೆಯ ಬಳಿ ಬಂದು, “ಇತ್ತೀಚೆಗೆ ಈ ಲಾಕ್ ಡೌನ್‌ನಿಂದ ಜೀವನ ಕಷ್ಟ ಆಗ್ತಿರಬೇಕಲ್ಲ? ಎಂದು ಮಾತಿಗೆಳೆದಿದ್ದಾರೆ. ಅವಳೋ ಸಹಜವಾಗಿ “ಹೌದಪ್ಪ, ನಮ್ಮಂತಹ ಬಡವರು ಈ ಲಾಕ್ ಡೌನ್‌ನಿಂದಾಗಿ ಜೀವನ ಮಾಡೋದೇ ಕಷ್ಟ ಆಗಿದೆ. ದಿನದ ಒಂದು ಹೊತ್ತಿಗಾದರೂ ಸರಿಯಾಗಿ ಊಟ ಸಿಕ್ಕರೆ ಸಾಕು ಅನ್ನಿಸುವಂತಾಗಿದೆ…..”

ಅವಳ ಮಾತು ಮುಂದುವರೆಯುತ್ತಲೇ ಇತ್ತು. ಆದರೆ ಅಜಾನಕ್ ಆಗಿ “ಎರಡು ಸಾವಿರ ಕೊಡ್ತೀವಿ. ಕೇವಲ ಹತ್ತು ನಿಮಿಷದ ಕೆಲಸ. ಬರ‍್ತೀಯಾ?” ಅಂದಿದ್ದು ಕೇಳಿಸಿತು. ಆಕೆಯ ಬಾಯಿ ಕಟ್ಟಿಹೋಯಿತು. ತಾನು ಕೇಳಿದ್ದು ನಿಜವೇ ಎಂದುಕೊಂಡು ಭ್ರಮೆಗೆ ಒಳಗಾಗುವಂತಾಯಿತು. ಯಾರು ಎತ್ತ, ಮನೆ ಎಲ್ಲಿ, ಉದ್ಯೋಗ ಏನು ಎಂಬುದೆಲ್ಲ ತಿಳಿದಿರದಿದ್ದರೂ ಪದೆಪದೇ ನೋಡುತ್ತಿರುವ ಹುಡುಗರೇ. ಆಗಾಗ್ಗೆ ಬಂದು ಚಹಾ ಕುಡಿದು ಹೋಗುವವರೇ. ಅದಕ್ಕೂ ಹೆಚ್ಚಾಗಿ ಪುಟ್ಟ ತಮ್ಮನೊಬ್ಬನಿದ್ದರೆ ಹೀಗೇ ಇರುತ್ತಿದ್ದ ಎಂದುಕೊಂಡಂತ ಹುಡುಗರು. ಆಕೆ ನಡುಗಿ ಹೋದಳು.
ಒಮ್ಮೆ ಕೈ ಎತ್ತಿ ಬೀಸಿ ಕೆನ್ನೆಗಪ್ಪಳಿಸಬೇಕು, ಅತ್ತಿತ್ತ ನೋಡಿದರೆ ಕೆಲವರು ಮುಂದೆ ಹಾಕಿದ್ದ ದೊಡ್ಡದಾದ ಕೊಡೆಯ ಕೆಳಗೆ ಕುಳಿತು ಚಹಾ ಕುಡಿಯುತ್ತಿದ್ದಾರೆ. ಈಗ ತಾನು ಹಾಗೆ ಮಾಡಿದರೆ ಈ ಗಿರಾಕಿಗಳೆಲ್ಲ ಎದ್ದು ಹೊರಟು ಹೋಗುತ್ತಾರೆ. ನಾಳೆ ಅಂಗಡಿಯ ಕಡೆ ತಲೆಯೂ ಹಾಕುವುದಿಲ್ಲ. ಮೊದಲೇ ತಲೆಗೆಳೆದರೆ ಕಾಲಿಗಿಲ್ಲ, ಕಾಲಿಗೆಳೆದರೆ ತಲೆಗಿಲ್ಲ ಎನ್ನುವ ಬದುಕು. ಈಗ ಗಲಾಟೆ ಮಾಡಿ ಸೀನ್ ಕ್ರಿಯೇಟ್ ಮಾಡಿಕೊಂಡರೆ ಅಷ್ಟೇ ಗತಿ. ಅದಕ್ಕಿಂತ ಹೆಚ್ಚಾಗಿ ಗಂಡನಿಗೆ ಈ ವಿಷಯ ಗೊತ್ತಾದರೆ ನೀನೇ ಏನೋ ಮಾಡಿದ್ದೀಯ. ಅವರ ಜೊತೆ ಹಲ್ಲು ಕಿರಿದು ಮಾತಾಡಿದ್ದೀಯ. ಅದಕ್ಕೇ ಹಾಗೆ ಕೇಳಿದ್ದಾರೆ ಎಂದು ಬಿಡ್ತಾನೆ ಎನ್ನುವ ಭಯದಲ್ಲಿ ಸಿಟ್ಟನ್ನು ಅಡಗಿಸಿಕೊಂಡಳು.

“ನಾನು ನಿಮ್ಮ ಹಿರಿಯಕ್ಕನ ವಯಸ್ಸಿನವಳು. ನನಗೇ ಹೀಗೆ ಕೇಳ್ತೀರಲ್ಲ? ಒಂದು ಕೆನ್ನೆಗೆ ಹೊಡೆದರೆ ಇಲ್ಲಿರುವ ಎಲ್ಲರೂ ಸೇರಿ ನಿಮ್ಮನ್ನು ತದುಕಿ ಸಾಯಿಸಿ ಬಿಡ್ತಾರೆ. ತಿರುಗಿ ನೋಡದೇ ಇಲ್ಲಿಂದ ಹೊರಟು ಬಿಡಿ” ಮುಖದಲ್ಲಿಷ್ಟು ವ್ಯಗ್ರತೆ ತುಂಬಿಕೊAಡು ಹೇಳಿದಳು. ಅವಳು ದೊಡ್ಡ ದನಿ ತೆಗೆದರೆ ತಮ್ಮದು ನಾಯಿಪಾಡು ಎಂಬ ಅರಿವಿದ್ದರೂ “ಏನೋ ನಿನಗೆ ಸಹಾಯ ಆಗುತ್ತೆ ಅಂತ ಕೇಳಿದೆವು. ಬೇಡ ಬಿಡು” ಎಂದು ಏನೋ ಉಪಕಾರ ಮಾಡಲು ಬಂದವರಂತೆ ಫೋಸು ಕೊಟ್ಟು ಹೊರಟು ಹೋದರಂತೆ.

“ಇದೇಕೆ ಎಲ್ಲ ವಯಸ್ಸಿನ ಗಂಡಸರಿಗೂ ಇಂತಹುದ್ದೊಂದು ಚಪಲ? ಯಾರನ್ನು ಏನು ಕೇಳಬೇಕು ಎನ್ನುವ ಪ್ರಜ್ಞೆಯೂ ಇರುವುದಿಲ್ಲವಲ್ಲ” ಅವಳ ಕಣ್ಣಲ್ಲಿ ನೀರು. ಗಂಡನಿಗೆ ಹೇಳಿದೆಯಾ ಎಂದರೆ “ಆತನೂ ಗಂಡಸುವೇ ತಾನೇ? ನಾನೇ ಏನೋ ಚೆಲ್ಲುಚೆಲ್ಲಾಗಿ ವರ್ತಿಸಿದ್ದೇನೆ ಎಂದು ನನ್ನ ಮೇಲೇಯೇ ಅರೋಪ ಹೊರೆಸಿ ನಂತರ ಚುಚ್ಚಿ ಚುಚ್ಚಿ ಕೊಲ್ಲುತ್ತಾನೆ. ಅದಕ್ಕಿಂತ ಹೇಳದೇ ಇರುವುದೇ ಕ್ಷೇಮ” ಎಂದು ಕಣ್ಣೊರೆಸಿಕೊಂಡಳು.
ಇದೊಂದು ಚಿಕ್ಕ ಉದಾಹರಣೆ ಮಾತ್ರ. ಹೆಣ್ಣು ಒಂದಿಷ್ಟು ಪ್ರೀ ಆಗಿ ಮಾತನಾಡುತ್ತಾಳೆಂದರೆ ಸೀದಾ ಹಾಸಿಗೆಗೆ ಬರುತ್ತಾಳೆಂದು ಭಾವಿಸುವ ಅದೆಷ್ಟೋ ಗಂಡುಗೂಳಿಗಳಿಗೆ ಮಾತು ಬೇರೆ ವ್ಯವಹಾರಬೇರೆ ಎಂದು ಅರ್ಥವಾಗುವುದಾದರೂ ಹೇಗೆ?
ಒಬ್ಬ ಅಧಿಕಾರಿ ತನ್ನ ಕೈಕೆಳಗೆ ಕೆಲಸ ಮಾಡುವ ವಿಧವೆಯೊಬ್ಬಳನ್ನು ಕೆಣಕಿ ಛೀಮಾರಿ ಹಾಕಿಸಿಕೊಂಡಿದ್ದರು. ಅವಳು ಯಾರದ್ದೋ ಜೊತೆಗೆ ಓಡಾಡ್ತಾಳೆ. ನನ್ನ ಜೊತೆಗೆ ಬರೋದಕ್ಕೇನು ಎಂಬುದು ಆ ಅಧಿಕಾರಿಯ ಪ್ರಶ್ನೆ. ಒಬ್ಬಳು ತನಗೆ ಇಷ್ಟವಾದವನ ಜೊತೆ ಇರುವುದಕ್ಕೂ, ಆಕೆ ಹಾಗೆ ಇದ್ದಾಳೆ ಎಂಬ ಕಾರಣಕ್ಕೆ ಆಕೆ ತನ್ನೊಡನೆಯೂ ಹಾಗೇ ಇರಲಿ ಎಂದು ಬಯಸುವುದು ಎಷ್ಟು ಮುರ್ಖತನದ ಯೋಚನೆ ಎಂಬುದು ಮತ್ತು ಇಷ್ಟಪಟ್ಟವನ ಜೊತೆಗಿದ್ದರೆ ಇಡೀ ಗಂಡಸುಕುಲದ ಜೊತೆಗೆ ಹಾಗೇ ಇರಬೇಕು ಎಂದು ಆಶಿಸುವುದು ತಪ್ಪು ಎನ್ನುವುದು ಅರ್ಥವಾಗುವುದಾದರೂ ಎಂದು?
ನೀವು ಏನೇ ಹೇಳಿ. ಆಧುನಿಕತೆ, ಇಪ್ಪತ್ತೊಂದನೆಯ ಶತಮಾನ, ಹೆಂಗಸರೆಲ್ಲ ಮುಂದುವರೆದಿದ್ದಾರೆ, ನಾಗರಿಕತೆ ಮುಂದುವರೆದಿದೆ ಇಂತಹ ಮಣ್ಣುಮಸಿ ಮಾತುಗಳೆಲ್ಲ ಬರೀ ಪುಸ್ತಕದ ಬದನೆಕಾಯಿ. ಆಡಲು, ಕೇಳಲು ಚಂದದ ಪರಿಕಲ್ಪನೆ ಅಷ್ಟೆ. ಆದರೆ ವಾಸ್ತವ ಮಾತ್ರ ಬೇರೆಯೇ ಇದೆ. ಹೆಣ್ಣು ಇಂತಹ ಅವಮಾನಗಳನ್ನು ಮತ್ತೆ ಮತ್ತೆ ಎದುರಿಸುತ್ತಲೇ ಇರುತ್ತಾಳೆ. ಅದರಲ್ಲೂ ಇತ್ತೀಚೆಗಂತೂ ಧರ್ಮ, ಸಂಪ್ರದಾಯಗಳ ಹೆಸರಿನಲ್ಲಿ ಹೆಣ್ಣನ್ನು ಕಟ್ಟಿ ಹಾಕಿಡುವ ಪ್ರಯತ್ನಗಳು ಎಡಬಿಡದೆ ನಡೆಯುತ್ತವೆ. ಇದನ್ನು ನಾನು ಕೇವಲ ಒಂದು ಧರ್ಮವನ್ನು ಉದ್ದೇಶಿಸಿ ಹೇಳುತ್ತಿಲ್ಲ. ಬಹುತೇಕ ಎಲ್ಲಾ ಧರ್ಮಗಳೂ ಮೂಲಭೂತವಾಗಿ ಹೆಣ್ಣಿನ ದನಿಯ್ನು ಅಡಗಿಸಿ ಮನೆಯೊಳಗೆ ಬಂಧಿಯನ್ನಾಗಿಸುವ ಕೆಲಸವನ್ನು ಪ್ರಜ್ಞಾಪೂರ್ವಕವಾಗಿ ಮಾಡುತ್ತಿವೆ.

ಹಾಗೆ ಒಪ್ಪದೆ ಹೊರಗಿನ ಕೆಲಸಗಳಲ್ಲಿ ನಿರತವಾಗುವ ಹೆಣ್ಣಿನ ಮೇಲೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಆಕ್ರಮಣ ನಡೆಸಿ ಅಸಹಾಯಕರಾಗುವಂತೆ ಮಾಡುವ ಸನ್ನಿವೇಶಗಳನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಗುತ್ತಿದೆ. ಕೆಲವೊಮ್ಮೆ ಧೈರ್ಯವಾಗಿ ವಿರೋಧಿಸಬಹುದು. ಎಷ್ಟೋ ಸಲ ಸ್ವಂತ ಮನೆಯವರ ಬಳಿಯೂ ಹೇಳಿಕೊಇಳ್ಳಲಾಗದ ಪರಿಸ್ಥಿತಿಯಿರಬಹುದು. ಹಾಗೆಂದ ಮಾತ್ರಕ್ಕೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಕಿರುಕುಳಕ್ಕೆ ಒಳಗಾಗುವು ಸಂದರ್ಭಗಳೇ ಇಲ್ಲ ಎಂದು ಭಾವಿಸುವಂತಿಲ್ಲ. ಇತ್ತೀಚಿನ ದಿನಗಳಲ್ಲಿ ತುಂಬ ಸೂಕ್ಷ್ಮವಾಗಿ ಹಿಂಸಿಸುವ, ಮುಜುಗರಕ್ಕೀಡುಮಾಡುವ ಪ್ರಸಂಗಗಳು ಹೆಚ್ಚುತ್ತಲೇ ಹೋಗುತ್ತಿವೆ.

ಸೂಕ್ಷ್ಮವಾಗಿ ಅವಲೋಕಿಸಿದರೆ ಇದು ಒಂದು ಹಿಡನ್ ಅಜೆಂಡಾದಂತೆ ಕೆಲಸ ಮಾಡುತ್ತಿರುವುದನ್ನು ಗಮನಿಸಬಹುದು. ಎಲ್ಲ ಧರ್ಮಗಳ ತಾಲಿಬಾನಿ ಮನಸ್ಥಿತಿಯ ಹಿಂದಿರುವುದು ಹೆಣ್ಣನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಹುನ್ನಾರ. ಪ್ರೀತಿಯ ಹೆಸರಿನಲ್ಲಿ, ಬೆದರಿಕೆಯ ಆಕ್ರಮಣದಲ್ಲಿ, ಆಕ್ರೋಶದ ಬೆನ್ನ ಹಿಂದೆ ಹಾಗೂ ಸಂಪ್ರದಾಯದ ಮುಖವಾಡದಲ್ಲಿ ಇರುವುದು ಇಷ್ಟೇ. ನ ಸ್ತ್ರೀ ಸ್ವಾತಂತ್ರ ಅರ್ಹತಿ. ಇಂತಹ ಬಂಧನಗಳನ್ನು ಕಳಚಿ ಹೆಣ್ಣು ಹೊರಬರುವುದು ಯಾವಾಗ?

ಲೇಖಕರ ಪರಿಚಯ: ಕನ್ನಡ ಸಾರಸ್ವತ ಲೋಕದಲ್ಲಿ ಶ್ರೀದೇವಿ ಕೆರೆಮನೆ ಚಿರಪರಿಚಿತ ಹೆಸರು. ವೃತ್ತಿಯಲ್ಲಿ ಅಧ್ಯಾಪಕರು. ಕನ್ನಡನಾಡಿನ ಕರಾವಳಿಯವರು (ಉತ್ತರ ಕನ್ನಡ) ಹೊಸ ರೀತಿಯಲ್ಲಿ ಬರೆಯುತ್ತಿರುವ ಅವರು ಕಾವ್ಯ ಕಟ್ಟುವ ಕ್ರಿಯೆಯಲ್ಲಿ ಸಿದ್ಧಹಸ್ತರು.  ಕಥೆ, ಕಾದಂಬರಿ – ಲಲಿತ ಪ್ರಬಂಧ ಏನೇ ಬರೆದರೂ ಅವುಗಳ ಸಮಾಜದ ಒಳಿತು ಕೆಡುಕಗಳ ಬಗ್ಗೆ ಪಾತಾಳ ಗರಡಿ ಹಾಕಿ ಬರೆದವುಗಳೇ ಆಗಿರುತ್ತವೆ. ತೇಲಿಸಿ ಬರೆಯುವುದು ಅವರಿಗೆ ಗೊತ್ತಿಲ್ಲ. ದಿಟ್ಟ ಬರೆಹಗಳು. ಇವರ ಕೃತಿಗಳು ಜನಮೆಚ್ಚುಗೆ ಜೊತೆಜೊತೆಗೆ ವಿರ್ಮಶಕರ ಮೆಚ್ಚುಗೆಯನ್ನೂ, ನಾಡಿನ ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಗಳಿಸಿವೆ. ಇವರ ಅಂಕಣ ಬರೆಹಗಳು “ಮುಖಗಳು” ಹೆಸೆರಿನಲ್ಲಿ ಪ್ರತಿವಾರ ದೇಶದ ಹಳೆಯ, ಪ್ರತಿಷ್ಠಿತ ಯು.ಎನ್.ಐ. ಯಲ್ಲಿ ಪ್ರಕಟವಾಗುತ್ತವೆ ಎಂದು ತಿಳಿಸಲು ಸಂತೋಷವಾಗುತ್ತದೆ.

Share