Connect with us


      




ಕ್ರೀಡೆ

ಟಿ-20 ವಿಶ್ವಕಪ್; ಸೆಮಿಫೈನಲ್ ರೇಸ್ ನಿಂದ ಟೀಮ್ ಇಂಡಿಯಾ ಔಟ್!

Iranna Anchatageri

Published

on

ಅಬುಧಾಬಿ, ನ 7 (ಯುಎನ್ಐ) ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕನಸು ಇಂದು ಛಿದ್ರಗೊಂಡಿದೆ. ಹೌದು.. ನ್ಯೂಜಿಲೆಂಡ್ ವಿರುದ್ಧ ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ಸೋತಿದೆ. ಇದರಿಂದ ಸೆಮಿ ಫೈನಲ್ ಗೆ ಹೋಗುವ ಕನಸು ಕಂಡಿದ್ದ ವಿರಾಟ್ ಕೊಹ್ಲಿ ಪಡೆ ಬರಿಗೈಯಲ್ಲಿ ವಾಪಸ್ ಆಗೋದು ಫಿಕ್ಸ್ ಆಗಿದೆ.
ಅಬುದಾಭಿಯ ಶೇಕ್ ಝಯೇದ್ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 8 ವಿಕೆಟ್ ನಷ್ಟಕ್ಕೆ 124 ರನ್ ಗಳನ್ನು ಗಳಿಸಿತ್ತು. ಆಫ್ಘನ್ನರು ನೀಡಿದ್ದ 125 ರನ್ ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ್ದ ನ್ಯೂಜಿಲೆಂಡ್ 8 ವಿಕೆಟ್ ಗಳ ಅಂತರದಿಂದ ಜಯ ದಾಖಲಿಸಿತು. ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಎಚ್ಚರಿಕೆ ಆಟವಾಡಿ 42 ಎಸೆತಗಳಲ್ಲಿ 40 ರನ್ ಗಳಿಸಿದರು. ಡೇವನ್ ಕಾನ್ವೆ (36), ಮಾರ್ಟಿನ್ ಗಪ್ಟಿಲ್ (28) ಡೇರಿಲ್ ಮಿಚೆಲ್ (17) ರನ್ ಗಳ ಸಹಾಯದಿಂದ ನ್ಯೂಜಿಲೆಂಡ್ ತಂಡ ಗೆಲುವು ಸಾಧಿಸಿತು.


ಸೆಮಿ ಫೈನಲ್ ರೇಸ್ ನಿಂದ ಹೊರಬಿದ್ದ ಕೊಹ್ಲಿ ಪಡೆ!
ಅಬುಧಾಬಿಯ ಇವತ್ತಿನ ಪಂದ್ಯ ಗೆಲುವಿನೊಂದಿಗ ಪಾಯಿಂಟ್ ಪಟ್ಟಿಯಲ್ಲಿ ನ್ಯೂಜಿಲೆಂಡ್ 8 ಅಂಕಗಳನ್ನು ಪಡೆದುಕೊಂಡಿದೆ. ಇದರಿಂದ ಕೇನ್ ವಿಲಿಯಮ್ಸನ್ ಅವರ ನೇತೃತ್ವದ ನ್ಯೂಜಿಲೆಂಡ್ ತಂಡ ಗ್ರುಪ್ 2ರಲ್ಲಿ 2ನೇ ಸ್ಥಾನ ಪಡೆದುಕೊಂಡಿತು. ಈಗಾಗಲೇ ಅಗ್ರ ಸ್ಥಾನದಲ್ಲಿ ಪಾಕಿಸ್ತಾನವಿದ್ದು, ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ. ನೆಟ್ ರನ್ ರೇಟ್ ಗೊಂದಲದಲ್ಲಿ ಸಿಲುಕದೆ ನ್ಯೂಜಿಲೆಂಡ್ ತಂಡ, ಸೆಮಿ ಫೈನಲ್ ಹಂತಕ್ಕೆ ಜಿಗಿದಿದೆ. ಇದರೊಂದಿಗೆ ಅರಬ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಈ ಬಾರಿಯ ಟಿ-20 ವಿಶ್ವಕಪ್ ನಲ್ಲಿ ಭಾರತ ತನ್ನ ಅಧ್ಯಾಯವನ್ನು ಮುಗಿಸಿದಂತಾಗಿದೆ.
ಸೆಮಿಫೈನಲ್ ತಲುಪಲು ನ್ಯೂಜಿಲೆಂಡ್ ತಂಡಕ್ಕೆ ಕೇವಲ 1 ಗೆಲುವು ಮಾತ್ರ ಬೇಕಾಗಿತ್ತು. ಆ ಜಯವನ್ನು ಅಫ್ಘಾನಿಸ್ತಾನದ ವಿರುದ್ಧ ನ್ಯೂಜಿಲೆಂಡ್ ಪೂರ್ಣಗೊಳಿಸಿಕೊಂಡಿತು. ಕಿವೀಸ್ ಪಡೆ ಇದುವರೆಗೆ ಭಾರತ, ಸ್ಕಾಟ್ಲೆಂಡ್, ನಮೀಬಿಯಾ ಮತ್ತು ಇಂದು ಅಫ್ಘಾನಿಸ್ತಾನವನ್ನು ಸೋಲಿಸಿದೆ.
ಈಡೇರದ ಭಾರತೀಯರ ಪ್ರಾರ್ಥನೆ
ಹೇಗಾದ್ರೂ ಮಾಡಿ ಇಂದು ನ್ಯೂಜಿಲೆಂಡ್ ತಂಡವನ್ನು ಅಫ್ಘಾನಿಸ್ತಾನ ಸೋಲಿಸಬೇಕೆಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದರು. ಆದರೆ, ದೇವರಿಗೆ ಕ್ರಿಕೆಟ್ ಅಭಿಮಾನಿಗಳ ಪ್ರಾರ್ಥನೆ ಕೇಳಲಿಲ್ಲ ಅನ್ನಿಸುತ್ತದೆ. ಹೀಗಾಗಿ, ಬಲಿಷ್ಠ ತಂಡಗಳಿಗೂ ಮಣ್ಣು ಮುಕ್ಕಿಸಿದ್ದ ಅಫ್ಘಾನಿಸ್ತಾನ ತಂಡದ ಬ್ಯಾಟಿಂಗ್, ಸ್ಪಿನ್ ಬೌಲಿಂಗ್ ಪಡೆ ಇಂದು ನ್ಯೂಜಿಲೆಂಡ್ ವಿರುದ್ಧ ಸಿಡಿಯಲಿಲ್ಲ. ಹೀಗಾಗಿ, ಕೇನ್ ವಿಲಿಯಮ್ಸನ್ ನೇತೃತ್ವದ ತಂಡ ಎದುರಾಳಿ ಪಡೆಗೆ ಯಾವದೇ ಅವಕಾಶ ನೀಡದೆ ಸೆಮಿಫೈನಲ್ ಹಂತಕ್ಕೆ ಜಿಗಿಯಿತು.
ನಮೀಬಿಯಾ ವಿರುದ್ಧ ಭಾರತದ ಕೊನೆ ಪಂದ್ಯ
ಭಾರತದ ಪಾಲಿಗೆ ನಾಳೆ ದುಬೈನಲ್ಲಿ ಸಂಜೆ 7;30ಕ್ಕೆ ನಮೀಬಿಯಾ ವಿರುದ್ಧ ತನ್ನ ಕೊನೆಯ ಹಾಗೂ ಔಪಚಾರಿಕ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿನ ಗೆಲುವು ಅಥವಾ ಸೋಲು ಟೂರ್ನಿಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಈ ಹಿನ್ನೆಲೆಯಲ್ಲಿ ಆಲ್ ರೌಂಡರ್ ಆಟಗಾರ ರವೀಂದ್ರ ಜಡೇಜಾ ಹೇಳಿದಂತೆ ಭಾರತ ತಂಡದ ಆಟಗಾರರು ಗಂಟು-ಮೂಟೆ ಕಟ್ಟಿಕೊಂಡು ಮನೆಗೆ ಹಿಂದಿರಗಬೇಕಾಗಿದೆ.

Share