Connect with us


      
ಅಪರಾಧ

ಬರುತ್ತಿದೆ ಕ್ರಿಮಿನಲ್ ಪ್ರೊಸೀಜರ್ ಬಿಲ್! 75 ವರ್ಷ ಅಪರಾಧಿ ಗುರುತು ಸಂಗ್ರಹ

Iranna Anchatageri

Published

on

ಹೊಸದಿಲ್ಲಿ: ಮಾರ್ಚ್ 30 (ಯು.ಎನ್.ಐ.) ಕೇಂದ್ರ ಸರ್ಕಾರವು ಕ್ರಿಮಿನಲ್ ಪ್ರೊಸೀಜರ್ ಐಡೆಂಟಿಫಿಕೇಷನ್ ಬಿಲ್-2022 ಅನ್ನು ಲೋಕಸಭೆಯಲ್ಲಿ ಮಂಡಿಸಿದೆ. ಈ ಮಸೂದೆಯ ಕಾನೂನು ರೂಪವನ್ನು ಪಡೆದ ನಂತರ, ಬಂಧಿತ ವ್ಯಕ್ತಿಗೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿಯನ್ನು ಅಂದರೆ ರೆಟಿನಾ, ಪಾದದ ಗುರುತುಗಳು ಮತ್ತು ಬ್ರೈನ್ ಮ್ಯಾಪಿಂಗ್‌ನಿಂದ ಮಾಹಿತಿ ಸಂಗ್ರಹಿಸುವ ಹಕ್ಕು ಪೊಲೀಸರಿಗೆ ದೊರೆಯಲಿದೆ. ಇದು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಪ್ರತಿಪಕ್ಷಗಳು ಹೇಳುತ್ತಿವೆ. ಪ್ರತಿಪಕ್ಷಗಳ ವಿರೋಧದ ಮಧ್ಯೆಯೂ ಸೋಮವಾರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದರು.

ಮಸೂದೆಯಲ್ಲಿನ ನಿಬಂಧನೆಗಳೇನು? ಈ ಕಾನೂನು ಜಾರಿಗೆ ಬಂದರೆ ಯಾರಿಗೆ ಅನ್ವಯಿಸುತ್ತದೆ? ಅಪರಾಧಿಯ ಈ ಡೇಟಾ ಹೇಗೆ ಸಂಗ್ರಹಿಸಲಾಗುತ್ತದೆ? ಎಂಬುದನ್ನು ಅರ್ಥ ಮಾಡಿಕೊಳ್ಳೋಣ…

ಬಂಧನಕ್ಕೊಳಗಾದ ಯಾವುದೇ ವ್ಯಕ್ತಿಯ ವೈಯಕ್ತಿಕ ಜೈವಿಕ ದತ್ತಾಂಶವನ್ನು ಸಂಗ್ರಹಿಸಲು ಮಸೂದೆ ಅನುಮತಿ ನೀಡಲಿದೆ. ಇದರಲ್ಲಿ ಬೆರಳಚ್ಚು, ರೆಟಿನಾ ಸ್ಕ್ಯಾನ್, ಭೌತಿಕ ಹಾಗೂ ಜೈವಿಕ ಮಾದರಿಗಳು ಮತ್ತು ಅವುಗಳ ವಿಶ್ಲೇಷಣೆ, ಸಹಿ, ಕೈಬರಹ ಅಥವಾ ಇತರ ರೀತಿಯ ಡೇಟಾವನ್ನು ಸಂಗ್ರಹಿಸಲು ಪೊಲೀಸರಿಗೆ ಅವಕಾಶ ನೀಡಲಾಗುತ್ತದೆ.

ಆದರೆ, ವಿರೋಧ ಪಕ್ಷಗಳು ಇದನ್ನು ಖಾಸಗಿತನದ ಉಲ್ಲಂಘನೆ ಎಂದು ಆರೋಪಿಸುತ್ತಿದೆ. ಈ ಮಸೂದೆಯು ಕಾನೂನಿನ ರೂಪವನ್ನು ಪಡೆದರೆ, ಇದು ಖೈದಿಗಳ ಗುರುತಿಸುವಿಕೆ ಕಾಯಿದೆ-1920ಅನ್ನು ಬದಲಾಯಿಸಲಿದೆ. ಹಳೆ ಕಾಯ್ದೆ ಕೇವಲ ಶಿಕ್ಷೆಗೊಳಗಾದ ಅಥವಾ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ಬಗ್ಗೆ ಸೀಮಿತ ಮಾಹಿತಿಯನ್ನು ಮಾತ್ರ ಸಂಗ್ರಹಿಸುವ ಅವಕಾಶ ಇತ್ತು. ಅಂದರೆ ಕೇವಲ ಬೆರಳಚ್ಚು ಮತ್ತು ಹೆಜ್ಜೆ ಗುರುತುಗಳನ್ನು ಮಾತ್ರ ತೆಗೆದುಕೊಳ್ಳಲಾಗುತ್ತಿತ್ತು.

ಹೊಸ ಕಾನೂನು ಯಾರಿಗೆ ಅನ್ವಯಿಸುತ್ತದೆ?
ಪ್ರಸ್ತಾವಿತ ಕಾನೂನು ಮೂರು ರೀತಿಯ ಜನರಿಗೆ ಅನ್ವಯಿಸಲಿದೆ. ಯಾವುದೇ ಅಪರಾಧಕ್ಕಾಗಿ ಶಿಕ್ಷೆಗೆ ಒಳಗಾದಂತಹ ಜನರು ಮೊದಲು. ಎರಡನೆಯದಾಗಿ ಯಾವುದೇ ಕಾನೂನಿನ ಅಡಿಯಲ್ಲಿ ಶಿಕ್ಷೆಯ ನಿಬಂಧನೆಗಳನ್ನು ವಿಧಿಸಲಾದಂತಹ ಬಂಧಿತ ವ್ಯಕ್ತಿಗಳು. ಮೂರನೆಯದ್ದಾಗಿ CrPC ಯ ಸೆಕ್ಷನ್ 117ರ ಅಡಿಯಲ್ಲಿ ಶಾಂತಿ ಕಾಪಾಡಲು ಕ್ರಮ ತೆಗೆದುಕೊಳ್ಳಲಾದ ಜನರ ಮೇಲೆ ಈ ಕಾನೂನು ಅನ್ವಯವಾಗಲಿದೆ.

ಯಾರಾದ್ರೂ ಮಾದರಿಯನ್ನು ನೀಡಲು ನಿರಾಕರಿಸಬಹುದೇ?
ಮಸೂದೆಯ ಪ್ರಕಾರ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ಪ್ರಕರಣಗಳನ್ನು ಹೊರತುಪಡಿಸಿ, ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಯ ಆರೋಪಿಗಳು ತಮ್ಮ ಜೈವಿಕ ಮಾದರಿಗಳನ್ನು ನೀಡಲು ನಿರಾಕರಿಸಬಹುದು. ಮ್ಯಾಜಿಸ್ಟ್ರೇಟ್ ಲಿಖಿತ ಆದೇಶವನ್ನು ಹೊರತುಪಡಿಸಿ ಆರೋಪಿಯನ್ನು ವಿಚಾರಣೆಯಿಲ್ಲದೆ ಬಿಡುಗಡೆ ಮಾಡಿದರೆ ಅಥವಾ ಖುಲಾಸೆಗೊಳಿಸಿದರೆ ಅವರ ಡೇಟಾವನ್ನು ಸಹ ನಾಶಪಡಿಸಬಹುದು ಎಂದು ಮಸೂದೆ ಹೇಳುತ್ತದೆ.

ಈ ಡೇಟಾವನ್ನು ಹೇಗೆ ಸಂಗ್ರಹಿಸಲಾಗುತ್ತದೆ?
ಮಸೂದೆಯ ಪ್ರಕಾರ ಈ ಡೇಟಾವನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ನಲ್ಲಿ ಇರಿಸಲಾಗುತ್ತದೆ. NCRB ಈ ದಾಖಲೆಗಳನ್ನು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಆಡಳಿತ ಅಥವಾ ಯಾವುದೇ ಇತರ ಕಾನೂನು ಸಂಸ್ಥೆಯಿಂದ ಸಂಗ್ರಹಿಸುತ್ತದೆ. ಎನ್‌ಸಿಆರ್‌ಬಿ ಈ ಡೇಟಾವನ್ನು ಸಂಗ್ರಹಿಸಲು, ರಕ್ಷಿಸಲು ಮತ್ತು ನಾಶಪಡಿಸುವ ಅಧಿಕಾರವನ್ನು ಹೊಂದಿರುತ್ತದೆ. ಈ ಡೇಟಾವನ್ನು 75 ವರ್ಷಗಳವರೆಗೆ ಸುರಕ್ಷಿತವಾಗಿರಿಸಬಹುದು. ಅದರ ನಂತರ ಅದನ್ನು ನಾಶಗೊಳಿಸಲಾಗುತ್ತದೆ. ಆದಾಗ್ಯೂ, ಶಿಕ್ಷೆಯನ್ನು ಪೂರ್ಣಗೊಳಿಸಿದ ಅಥವಾ ನ್ಯಾಯಾಲಯದಿಂದ ಖುಲಾಸೆಗೊಂಡ ಸಂದರ್ಭದಲ್ಲಿ ಡೇಟಾವನ್ನು ಮೊದಲೇ ಅಳಸಿ ಹಾಕಬಹುದು.

ಡೇಟಾವನ್ನು 75 ವರ್ಷಗಳವರೆಗೆ ಇರಿಸಿದರೆ ಏನಾಗುತ್ತದೆ?
ಮಸೂದೆಯನ್ನು ಮಂಡಿಸಿ ಮಾತನಾಡಿದ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ, ಈಗಿರುವ ಕಾನೂನು 102 ವರ್ಷಗಳಷ್ಟು ಹಳೆಯದಾಗಿದೆ. ಕಳೆದ 102 ವರ್ಷಗಳಲ್ಲಿ ಅಪರಾಧದ ಸ್ವರೂಪವು ತೀವ್ರವಾಗಿ ಬದಲಾಗಿದೆ. ಆದ್ದರಿಂದ ಕಾನೂನಿನಲ್ಲಿ ಬದಲಾವಣೆ ಅಗತ್ಯ. ಈ ಬದಲಾವಣೆಯು ಅಪರಾಧಿಗಳ ಜೈವಿಕ ಮತ್ತು ಭೌತಿಕ ಅಂಶಗಳನ್ನು ದಾಖಲಿಸಲು ಆಧುನಿಕ ತಂತ್ರಜ್ಞಾನದ ಬಳಕೆಗೆ ಅವಕಾಶ ದೊರೆಯಲಿದೆ. ಇಡೀ ಜಗತ್ತು ಅಪರಾಧ ಮತ್ತು ಅಪರಾಧಿಗಳನ್ನು ಹತ್ತಿಕ್ಕಲು ಕಾನೂನಿನಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದೆ ಎಂದು ಹೇಳಿದರು.

ಮಸೂದೆ ಕಾನೂನುಬದ್ಧವಾದ ನಂತರ ಒಬ್ಬ ಅಪರಾಧಿ ಪುನರಾವರ್ತಿತ ಅಪರಾಧಗಳ ಸಂದರ್ಭದಲ್ಲಿ ಸಾಕ್ಷ್ಯದ ಕೊರತೆಯ ಸಮಸ್ಯೆ ಉದ್ಭವವಾಗುವುದಿಲ್ಲ. ಎಲ್ಲಾ ಅಪರಾಧಿಗಳ ಎಲ್ಲಾ ರೀತಿಯ ಡೇಟಾ ಪೊಲೀಸರ ಬಳಿ ಲಭ್ಯವಿರುತ್ತದೆ. ಇದರಿಂದ ತನಿಖೆ ಮತ್ತು ಸಾಕ್ಷ್ಯ ಸಂಗ್ರಹಿಸಲು ಪೊಲೀಸರಿಗೆ ಅನುಕೂಲವಾಗುತ್ತದೆ. ಈ ಮಸೂದೆಯು ಬಂಧಿಸಲ್ಪಟ್ಟ ಯಾವುದೇ ವ್ಯಕ್ತಿಯ ವೈಯಕ್ತಿಕ ಜೈವಿಕ ಡೇಟಾವನ್ನು ಸಂಗ್ರಹಿಸುವ ಅಧಿಕಾರ ದೊರೆಯುತ್ತದೆ. ಇದರಲ್ಲಿ ಬೆರಳಚ್ಚು, ರೆಟಿನಾ ಸ್ಕ್ಯಾನ್, ಭೌತಿಕ, ಜೈವಿಕ ಮಾದರಿಗಳು ಮತ್ತು ಅವುಗಳ ವಿಶ್ಲೇಷಣೆ, ಸಹಿ, ಕೈಬರಹ ಅಥವಾ ಇತರ ರೀತಿಯ ಡೇಟಾವನ್ನು ಸಂಗ್ರಹಿಸಲು ಪೊಲೀಸರಿಗೆ ಅವಕಾಶ ನೀಡಲಾಗುತ್ತದೆ.

Share