Connect with us


      
ಕರ್ನಾಟಕ

ರಾಮನಗರದಲ್ಲಿ ಸಚಿವರ ವರ್ತನೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್

UNI Kannada

Published

on

ಮೈಸೂರು: ಜನವರಿ 03,(ಯು.ಎನ್.ಐ.) ರಾಮನಗರದ ಘಟನೆ ಒಬ್ಬ ಸಚಿವರ ದುರಹಂಕಾರದ ಪರಮಾವಧಿ. ಸಚಿವ ಅಶ್ವಥ್ ನಾರಾಯಣ ಅವರು ಮುಖ್ಯಮಂತ್ರಿಗಳಿರುವ ವೇದಿಕೆಯಲ್ಲಿ ಏನು ಮಾತನಾಡಬೇಕು? ಅವರಿಗೆ ಯಾವ ರೀತಿ ಗೌರವ ಕೊಡಬೇಕು ಎಂಬ ಪರಿಜ್ಞಾನ ಇರಬೇಕು ಎಂದು ಸಚಿವರ ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜಕಾರಣದಲ್ಲಿ ಜೈಕಾರ ಹಾಕುವವರು, ಧಿಕ್ಕಾರ ಕೂಗುವವರು, ಕಲ್ಲು, ಮೊಟ್ಟೆ, ಟೊಮೆಟೋ ಹೊಡೆಯುವವರು ಇರುತ್ತಾರೆ. ಯಾವುದೋ ಸನ್ನಿವೇಶದಲ್ಲಿ ದಲಿತರಿಗೆ ನೋವಾಗಿದ್ದು, ಅವರು ಘೋಷಣೆ ಕೂಗಿದ್ದಾರೆ. ಇಂತಹ ಘಟನೆಯನ್ನು ನಾವೂ ಎದುರಿಸಿದ್ದೇವೆ ಎಂದರು.

ಸಭೆಯನ್ನು ಹೇಗೆ ನಿಭಾಯಿಸಬೇಕು. ಸಿಎಂ ಬಂದ ಸಂದರ್ಭದಲ್ಲಿ ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಕನಿಷ್ಟ  ಜ್ಞಾನ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಇರಬೇಕು. ಅವರಿಗೆ ಆ ಜ್ಞಾನ ಇಲ್ಲವೋ, ಸಮಯಪ್ರಜ್ಞೆ ಇಲ್ಲವೋ, ಇದು ಅವರ ಸಂಸ್ಕೃತಿಯೋ ಗೊತ್ತಿಲ್ಲ. ನನ್ನ ಸೋದರಿ ಅನಿತಾ ಅವರ ಮನಸಿಗೂ ನೋವಾಗಿದೆ. ವಿಡಿಯೋದಲ್ಲಿ ಮುಖ್ಯಮಂತ್ರಿಗಳು ಕೂಡ ಆ ರೀತಿ ಮಾತಾಡುವುದು ಬೇಡ, ನಿಲ್ಲಿಸು ಎಂದು ಆ ಸಚಿವರಿಗೆ ಸನ್ನೆ ಮಾಡುತ್ತಾರೆ. ಆದರೂ ಅವರು ನಿಲ್ಲಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮನಗರ ಜಿಲ್ಲೆ ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆ, ದೇವೇಗೌಡರು, ಕುಮಾರಸ್ವಾಮಿ ಅವರನ್ನು,  ಎಸ್.ಎಂ. ಕೃಷ್ಣ ಅವರನ್ನು ಸಿಎಂ ಆಗಿ ಕೊಟ್ಟಂತಹ ಜಿಲ್ಲೆ. ಪ್ರತಿ ಮನೆಗೂ ರಾಜಕಾರಣ ಗೊತ್ತಿದೆ. ನಾವು ಅಶ್ವತ್ ನಾರಾಯಣ್ ಅವರಷ್ಟು ದೊಡ್ಡವರಲ್ಲ, ಎಳಸು ಇರಬಹುದು.  ಆದರೆ ರಾಮನಗರ ಜಿಲ್ಲೆಯವರು ಅವರ ಬೆದರಿಕೆಗೆ ಹೆದರುವ ಮಕ್ಕಳಲ್ಲ ಎಂದರು.

ಅವರು ಬಂದಿರುವುದು ಬೆಂಗಳೂರು ಕಟ್ಟಿದ ಕೆಂಪೇಗೌಡರು, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಪ್ರತಿಮೆ ಅನಾವರಣಕ್ಕೆ. ಅದನ್ನು ಮಾಡಿಸಿದ್ದು ಇವರಲ್ಲ. ಜಿಲ್ಲಾ ಮಂತ್ರಿಯಾಗಿದ್ದಾಗ ನಾನು ಹಾಗೂ ಎಲ್ಲರೂ ಸೇರಿ ನಿರ್ಮಾಣ ಮಾಡಿದ ಪ್ರತಿಮೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅನಿತಕ್ಕ ಹಾಗೂ ಮುಖ್ಯಮಂತ್ರಿಗಳೇ ಅವರ ಮಾತು ಸರಿಯಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಮೇಲೆ ಅದರ ಬಗ್ಗೆ ನಾನು ಹೇಳುವುದಾದರೂ ಏನಿದೆ. ಅವರ ಎಲ್ಲ ಸವಾಲುಗಳನ್ನು ಎದುರಿಸಲು ನಾವು ಸಿದ್ಧ.

ಇದು ಮುಖ್ಯಮಂತ್ರಿ, ಅವರ ಪಕ್ಷ, ಆರೆಸ್ಸೆಸ್, ಜಿಲ್ಲಾಡಳಿತ, ಜಿಲ್ಲೆಯ ಜನರಿಗೆ ಆಗಿರುವ ಅಪಮಾನ. ಇಂತಹವರು ಮಂತ್ರಿಯಾಗಿರುವುದೇ ದೊಡ್ಡ ಅವಮಾನ. ಅವರು ಯಾವ ಅಭಿವೃದ್ಧಿ ಮಾಡಿದ್ದಾರೆ. ಅಭಿವೃದ್ಧಿ ಎಂದರೆ ಏನು ಎಂದು ನನಗೂ ತಿಳಿಸಲಿ. ನಾನು ಏಳು ಬಾರಿ ಶಾಸಕನಾಗಿದ್ದೇನೆ, ನನಗೂ ತಿಳಿಸಲಿ. ನಾಳೆ ಅವರೇ ಸಮಯ ನಿಗದಿ ಮಾಡಲಿ. ನಾವು ಬಂದು ತಿಳಿದುಕೊಳ್ಳುತ್ತೇವೆ. ಅಂಬೇಡ್ಕರ್ ಪ್ರತಿಮೆ ಅವರು ನಿರ್ಮಿಸಿದರಾ? ಅವರೇನು ಆಣೆಕಟ್ಟು ಕಟ್ಟಿದ್ದಾರಾ? ನರೇಗಾ ಯೋಜನೆಯಲ್ಲಿ ಯಾವುದಾದರೂ ಊರಿನ ಅಂತರ್ಜಲ ಹೆಚ್ಚಿಸಿದ್ದಾರಾ? ಕಟ್ಟಡ ಕಟ್ಟಿದ್ದಾರಾ? ರಸ್ತೆ ಮಾಡಿಸಿದ್ದಾರಾ? ಶಾಲೆ ನಿರ್ಮಿಸಿದ್ದಾರಾ? ಎಂದು ಪ್ರಶ್ನೆ ಮಾಡಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ನಾವು ಗೌರವ ನೀಡುತ್ತೇವೆ. ಅವರನ್ನು ವೈಯಕ್ತಿಕವಾಗಿ ನಾವು ಮೆಚ್ಚಿಕೊಳ್ಳುತ್ತೇವೆ. ಹಾಗೆಂದು ಅವರ ಸಮ್ಮುಖದಲ್ಲಿ ಮಂತ್ರಿಯೊಬ್ಬರು ಹೇಳಿದ್ದನ್ನೆಲ್ಲ ಕೇಳಿಸಿಕೊಂಡು ಕೂರಲು ಸಾಧ್ಯವೇ? ನಮಗೂ ಸ್ವಾಭಿಮಾನ ಇದೆ. ವೇದಿಕೆ ಮೇಲೆ ಕೂರಿಸಿ ನೀವು ಗಂಡಸಾ ಎಂದು ಕೇಳಿದರೆ ಸುಮ್ಮನೆ ಕೂರಲು ಸಾಧ್ಯವೇ? ರಾಜಕೀಯ, ಅಧಿಕಾರ ಬರುತ್ತದೆ ಹೋಗುತ್ತದೆ. ಆದರೆ ಅವರಿಗೆ ಗೊತ್ತಿರಲಿ. ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರಿನ ಜನರ ರಕ್ತವೇ ಬೇರೆ ಎಂದು ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

Share