Connect with us


      




ಕರ್ನಾಟಕ

ಬಿಡಿಎ ಬಡಾವಣೆ ಮನೆಗಳ ಸಕ್ರಮಕ್ಕೆ ನಿರ್ಧಾರ: ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್

Lakshmi Vijaya

Published

on

ಬೆಂಗಳೂರು: ಮೇ 16 (ಯು.ಎನ್.ಐ.) ಬಿಡಿಎ ಬಡಾವಣೆಗಳಲ್ಲಿ ನಿರ್ಮಾಣವಾಗಿರುವ ಮನೆಗಳನ್ನು ಸಕ್ರಮ ಮಾಡಲಾಗುತ್ತದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಿಡಿಎ ಸ್ವಾಧೀನಪಡಿಸಿಕೊಂಡಿರುವ ಪ್ರದೇಶಗಳಲ್ಲಿ ಸುಮಾರು 95 ಸಾವಿರ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈ ಮನೆಗಳನ್ನು ಬಿಡಿಎದಿಂದ ನೋಂದಣಿ ಮಾಡಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಬಿಡಿಎ ಬಡಾವಣೆಗಳಲ್ಲಿರುವ ಮನೆಗಳನ್ನು 38ಡಿ ಅಡಿಯಲ್ಲಿ ಸಕ್ರಮಗೊಳಿಸಲು ನಿರ್ಧರಿಸಲಾಗಿದೆ ಎಂದರು.

ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಸಕ್ತಿ ತೋರಿ ಈ ಮನೆಗಳನ್ನು ಸಕ್ರಮಗೊಳಿಸಲು ನಿರ್ಧರಿಸಿದ್ದರು. ಅದರಂತೆ ಬಿಡಿಎ ಪ್ರಾಧಿಕಾರದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ವಿಚಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಗಮನಕ್ಕೂ ತರಲಾಗಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸದ್ಯದಲ್ಲೇ ಅನುಮೋದನೆ ಮಾಡಿ ಕಳುಹಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಹಿಂದೆ 20*30 ಅಳತೆಯ ನಿವೇಶನಕ್ಕೆ ಶೇ.10 ರಷ್ಟು, 30*40 ಗೆ ಶೇ.20 ಮತ್ತು 50*80 ಕ್ಕೆ ಶೇ.50 ರಷ್ಟು ಮಾರ್ಗಸೂಚಿ ದರವನ್ನು ಪಾವತಿಸಿ ಸಕ್ರಮ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ದುಬಾರಿ ಶುಲ್ಕವಾಗುವುದರಿಂದ ತಮಗೆ ಪಾವತಿಸಿ ಸಕ್ರಮ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಶುಲ್ಕವನ್ನು ಕಡಿಮೆ ಮಾಡಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದರಿಂದ ಪರಿಷ್ಕರಣೆ ಮಾಡಿ ಈ ಹಿಂದೆ ನಿಗದಿಪಡಿಸಲಾಗಿದ್ದ ದರಕ್ಕಿಂತ ಶೇ.50 ರಷ್ಟು ಕಡಿಮೆ ಮಾಡಿ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.

ಈ ಅಕ್ರಮ ಸಕ್ರಮದಿಂದ ಬಿಡಿಎಗೆ ಸುಮಾರು 9 ರಿಂದ 10 ಸಾವಿರ ಕೋಟಿ ಆದಾಯ ಬರುವ ನಿರೀಕ್ಷೆ ಇದ್ದು, ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕೆಂದು ವಿಶ್ವನಾಥ್ ಸಾರ್ವಜನಿಕರಿಗೆ ಮನವಿ ಮಾಡಿದರು.

Share