Connect with us


      
ಸಾಮಾನ್ಯ

ಒಲವು ತುಂಬಿದ ದಾರಿ; ಸಾಮಾನ್ಯನೊಬ್ಬನ ಉತ್ಕಟ ಪ್ರೇಮದ ಹಂಬಲ !

Kumara Raitha

Published

on

ದೀಪಾ ದೇವಕತೆ

ಅಂಕಣ: ಪರಿಚಯ ವಿಮರ್ಶೆ – ೪

ಇಂಗ್ಲಿಷ್ ಸಾಹಿತ್ಯದ ರೊಮ್ಯಾಂಟಿಕ್ ಯುಗದಲ್ಲಿ ಕಾದಂಬರಿಗಳು ಪ್ರಧಾನವೆಸಿದ್ದವು. ಇಂತಹ ‘ಕ್ಲಾಸಿಕ್ ಫಿಕ್ಷನ್’ ಗಳ ಮೆರುಗನ್ನು ಹೆಚ್ಚಿಸುವ ಸ್ವೈರ ಕಲ್ಪನೆ ಮತ್ತು ಪ್ರಣಯಗಳಿಂದ ಸೊಗಸುಗೊಂಡಿದ್ದರೂ, ಅಂದಿನ ದಿನಗಳಲ್ಲಿ ವಾಸ್ತವತೆಯೇ ಮೇಲುಗೈ ಸಾಧಿಸುತ್ತದೆ. ವಿಜ್ಞಾನದ ಆವಿಷ್ಕಾರಗಳು ಮೇರಿ ಶೆಲಿಯ ಫ್ರಾಂಕೆನ್‌ಸ್ಟೈನ್‌ ನಂತಹ ಕಾದಂಬರಿಗಳು ಭೀಭತ್ಸತೆಯನ್ನು ಹೆಚ್ಚಿಸಿದರೆ, ರಮ್ಯ ಕಲ್ಪನೆ ಮತ್ತು ಪ್ರಣಯದಂತಹ ಕಥೆಗಳನ್ನು ಥಾಮಸ್ ಹಾರ್ಡಿ, ಬ್ರಾಂಟೆ ಸಹೋದರಿಯರು, ಆಸ್ಟೀನ್, ಎಲಿಯಟ್ ಕಾದಂಬರಿಗಳಲ್ಲಿ ಕಾಣಬಹುದು ; ಡಿಕನ್ಸ್‌, ವಿಲಿಯಮ್ ಮೇಕ್ಪೀಸ್, ವಾಲ್ಟರ್ ಸ್ಕಾಟ್ ಕಾದಂಬರಿಗಳು ಸಾಮಾಜಿಕ ವಿಡಂಬನೆ ಮತ್ತು ವಾಸ್ತವತೆಯ ಕಥಾವಸ್ತುಗಳನ್ನು ಒಳಗೊಂಡಿವೆ.

ಇಂತಹ ರೂಕ್ಷ, ರಮ್ಯ, ಪ್ರಣಯದ ಸಂದೇಶವುಳ್ಳ ನಾಲ್ಕು ಕಾದಂಬರಿಗಳ ಮರುಕಥನವನ್ನು ಕೇಶವ ಮಳಗಿ ಅವರ ‘ಒಲವು ತುಂಬಿದ ದಾರಿ’ ಹೊತ್ತಗೆಯು ಒಳಗೊಂಡಿದೆ. ಇಂಗ್ಲಿಶ್ ಭಾಷೆಯ ‘ಫಾರ್ ಫ್ರಮ್ ದಿ ಮ್ಯಾಡಿಂಗ್ ಕ್ರೌಡ್’, ‘ವುದರಿಂಗ್ ಹೈಟ್ಸ್’; ಫ್ರೆಂಚ್ ಭಾಷೆಯ ‘ಸರಸ್ಸೀನ್’ ಮತ್ತು ರಶ್ಯನ್ ಭಾಷೆಯ ‘ಡಾಕ್ಟರ್ ಜ಼ಿವಾಗೋ’ – ಕಾದಂಬರಿಗಳನ್ನು ಇಲ್ಲಿ ಮರುಕಥಿಸಿ ಅನುವಾದಿಸಲಾಗಿದೆ. ಅನುವಾದದೊಂದಿಗೆ ಮರುಕಥನಗೊಂಡ ಬರಹವು ಹೆಚ್ಚಿನ ಪರಿಶ್ರಮದದ್ದು. ಅದರಲ್ಲೂ ಬೃಹದಾಕಾರದ ‘ಡಾಕ್ಟರ್ ಜ಼ಿವಾಗೋ’ ಕಾದಂಬರಿಯನ್ನು ಅನುವಾದಕರು ಸಂಕ್ಷೇಪಗೊಳಿಸಿರುವುದು ಸೃಜನಶೀಲ ಅನುವಾದಕ್ಕೆ ಮಾದರಿಯೆನಿಸುತ್ತದೆ. ಲೇಖಕರ ‘ಕಡಲಾಚೆಯ ಚೆಲುವೆ’, ಫ್ರೆಂಚ್ ಕಥಾ ಸಾಹಿತ್ಯದ ‘ಸಂಕಥನ’, ‘ಗುಂಡಿಗೆಯ ಬಿಸಿರಕ್ತ’ ಕೃತಿಗಳ ಮೂಲಕ ಕನ್ನಡಿಗರಿಗೆ ವಿದೇಶೀಯ ಭಾಷೆಗಳ ಸಾಹಿತ್ಯವನ್ನು ಅನುವಾದದ ಮುಖೇನ ತಲುಪಿಸಿದ್ದು ಶ್ಲಾಘನೀಯ.

‘ಒಲವು ತುಂಬಿದ ದಾರಿ’ ಕಾದಂಬರಿಯ ಸಾಮಾನ್ಯನೊಬ್ಬನ ಉತ್ಕಟ ಪ್ರೇಮದ ಹಂಬಲ ಸಫಲವಾಗುವುದರ ಹಿಂದೆ ಅಪಾರ ಸಹನೆಯಿದೆ. ಕೈಗಾರೀಕರಣದ ಯಾಂತ್ರಿಕತೆಯಿಂದ ದೂರವುಳಿದು ಹಳ್ಳಿಗಾಡಿನ ಬದುಕನ್ನು ಕುರಿತು ಬರೆಯಲಾದ ಕಾದಂಬರಿ ಇದು. ಹುಚ್ಚರ ಸಂತೆಯ ಕೋಲಾಹಲಗಳಿಂದ ದೂರವುಳಿದು ‘ಒಲವು ತುಂಬಿದ ದಾರಿ’ಗುಂಟ ಸಾಗುವ ಚತುಷ್ಕೋನ ಪ್ರೇಮ ಕಥನವಿಲ್ಲಿದೆ. ಥಾಮಸ್ ಗ್ರೆ ಬರೆದ ಎಲಿಜಿಯ ಸಾಲುಗಳನ್ನು ಪ್ರಸ್ತುತ ಕಾದಂಬರಿಯ ಶೀರ್ಷಿಕೆಯಾಗಿ ಬಳಸಲಾಗಿದೆ. ಈ ಪದ್ಯವೊಂದರ(ಎಲಿಜಿ) ಅನುವಾದದ ಸಾಲುಗಳು ಹೀಗಿವೆ:

ಹುಚ್ಚರ ಸಂತೆಯ ಕೋಲಾಹಲಗಳಿಂದ ದೂರ ಬಹುದೂರ
ಅವರ ಸಂಯಮದ ಬಯಕೆಗಳೆಂದೂ ತಪ್ಪುವುದಿಲ್ಲ ದಾರಿ
ಸುತ್ತಿ ಸುಳಿವ ತಂಗಾಳಿಯ ಕಣಿವೆಯ ಏಕಾಂತ ನಿಸೂರ
ಅಬ್ಬರಗಳಿಲ್ಲದ ಅವರದು ಒಲವು ತುಂಬಿದ ದಾರಿ

ಗೇಬ್ರಿಯಲ್, ಟ್ರಾಯ್, ಬಾಲ್ಡವುಡ್ ಮೂವರು ಬಾಥಶೀಬಳ ಒಲವಿಗಾಗಿ ತಹತಹಿಸುವುದರ ಹಿಂದೆ ಉತ್ಕಟತೆ, ಆಕರ್ಷಣೆ, ಮೋಹಗಳ ಸೆಳಕಿದೆ. ಆದರೆ ಬಾಥಶೀಬಳು ನೈಜ ಒಲವನ್ನು ಕಂಡುಕೊಳ್ಳುವಲ್ಲಿ ಸೋತು ಗೆಲ್ಲುತ್ತಾಳೆ. ವೈಭೋಗದ ಬದುಕು, ಹುಡುಗಾಟದ ಸ್ವಭಾವದಿಂದ ಬಾಲ್ಡವುಡ್ ವಿನಾಕಾರಣ ಮೋಹದಲ್ಲಿ ಸಿಲುಕುವಂತೆ ಮಾಡಿದರೆ, ಟ್ರಾಯ್ ತನ್ನ ಒಲವನ್ನು ಹುಡುಕುವಲ್ಲಿ ವೈಫಲ್ಯ ಹೊಂದಿ, ಗೇಬ್ರಿಯಲ್ ತಳೆದಿರುವ ತಾಳ್ಮೆಯ ಉತ್ಕಟ ಒಲವು ಗಮ್ಯವನ್ನು ತಲುಪುತ್ತದೆ.

‘ವುದರಿಂಗ್ ಹೈಟ್ಸ್’- ಕಣಿವೆಯ ಬಂಗಲೆಯ ಒಲವಿನ ಕಾದಂಬರಿ ರೂಕ್ಷ ಮತ್ತು ರುದ್ರ ಚೆಲುವಿನ ಪ್ರೇಮ ಕಥನ. ಎಮಿಲಿ ಬ್ರಾಂಟೆಯ ಸಂಕೀರ್ಣ ನಿರೂಪಣೆಯ ಕಾದಂಬರಿ ಇದಾಗಿದೆ. ಇದರಲ್ಲಿ ಬರುವ ಹೀಥ್ ಕ್ಲಿಫ್ ಪಾತ್ರದ ಸೃಷ್ಟಿಯು ರೂಕ್ಷವಾದುದು. ಅವನ ಒರಟಾದ ವರ್ತನೆ, ದ್ವೇಷ, ಸೇಡು ಒಂದೆಡೆಯಾದರೆ, ಅವನು ಪ್ರೀತಿಸಿದ ಕ್ಯಾಥರೀನ್ ಬಗೆಗಿನ ನವಿರು ಭಾವನೆಗಳು ಮನುಷ್ಯ ಸ್ವಭಾವವನ್ನು ತೆರೆದಿಡುತ್ತವೆ. ಮೇರಿ ಶೆಲಿಯ ಫ್ರಾಂಕೆನ್‌ಸ್ಟೈನ್‌ ಪಾತ್ರವನ್ನು ಹೋಲುವ ಹೀಥ್ ಕ್ಲಿಫ್ ಅತೀವ ದುರಾಸೆ, ರಾಕ್ಷಸೀಯ ಪ್ರವೃತ್ತಿ ವಿಮರ್ಶಕರನ್ನು ಕೂಡ ಬೆರಗಾಗಿಸಿದೆ. ಕಾಥರೀನಳಿಗಾಗಿ ಮಾತ್ರ ಮನುಷ್ಯನಾಗಿ ತೋರುವ ಹೀಥ್ ಕ್ಲಿಫ್ ಒಲವು, ಸ್ನೇಹ, ಸಾವಿನ ನಂತರ ಗೋರಿಯಲ್ಲಿ ನಿಕಟವಾಗಬಯಸುವ ಅವನ ಬಯಕೆ ಅದ್ಭುತ! ಬಹುಶಃ ಎಮಿಲಿ ದೀರ್ಘಾಯುಷಿಯಾಗಿದ್ದಲ್ಲಿ ಅವನಿಗೆ ಸರಿಸಾಟಿಯಾಗಬಲ್ಲ ಪಾತ್ರವೊಂದನ್ನು ಮತ್ತೊಮ್ಮೆ ಮರುಸೃಷ್ಟಿಸುತ್ತಿದ್ದಳೋ ಏನೋ!?

ಆನರೆ ದ ಬಾಲ್ಜಾಕ್ ಬರೆದಿರುವ ‘ಸರಸ್ಸೀನ್’ ಕಾದಂಬರಿಯ ಏಕಮುಖ ಪ್ರೇಮದ ದುರಂತ ನಂಬಲಸಾಧ್ಯವಾದ ವಿಚಿತ್ರ ಪ್ರೇಮ ಕಥನ. ಹತ್ತೊಂಭತ್ತನೆಯ ಶತಮಾನದ ಫ್ರಾನ್ಸಿನ ಜನರು ಆದರ್ಶವಾದ ಮತ್ತು ರೊಮ್ಯಾಂಟಿಸಿಸಂ(ಭಾವ ಪ್ರಧಾನತೆ) ಎರಡನ್ನೂ ತಿರಸ್ಕರಿಸಿ ‘ವಾಸ್ತವಿಕತೆ’ಯನ್ನು ಆಪ್ತವಾಗಿಸಿಕೊಂಡರು. ವಾಸ್ತವಿಕ ಬದುಕು ತೋರುವ ಅಸಂಗತತೆ ಸರಸ್ಸಿನ್ ಕಥನದ ಆಶಯವಾಗಿದೆ. ಜಂಬಿನೆಲ್ಲಳ ಗಳಿಗೆಯ ವಿನೋದ ಸರಸ್ಸೀನನನ್ನು ಆಜೀವಪರ್ಯಂತ ವ್ಯಾಕುಲತೆಗೆ ತಳ್ಳುವಂತಹುದು. ಜಂಬಿನೆಲ್ಲ ಪಾತ್ರವನ್ನು ಮೊದಲು ಹೆಣ್ಣಾಗಿ, ನಂತರದಲ್ಲಿ ಗಂಡಾಗಿ ನಿರೂಪಿಸಿದ್ದು ಸಂಕೀರ್ಣವೆನಿಸಿದರೂ, ಅದು ಕಾದಂಬರಿಕಾರನ ಕಥೆಯ ಕಟ್ಟೋಣವಷ್ಟೇ! ಕಥೆಯ ವಿಶ್ಲೇಷಣೆ ಇಲ್ಲಿ ಸಮರ್ಪಕವೆನಿಸುವುದಿಲ್ಲ. ಒಲವಿನ ದುರಂತದ ಅಂತ್ಯವು ಅಸಂಗತತೆಯನ್ನು ಅರಹುತ್ತದೆ. ಓದಿನುದ್ದಕ್ಕೂ ಕುತೂಹಲವನ್ನು ಉಂಟುಮಾಡುವ ಕಾದಂಬರಿ ಇದಾಗಿದೆ.

ಒಂಟಿ ದನಿಯ ‘ಡಾಕ್ಟರ್ ಜ಼ಿವಾಗೋ’ ಬೃಹದಾಕಾರದ ಕಾದಂಬರಿಯಾಗಿದ್ದರೂ, ಅನುವಾದಕರ ಮರುಕಥನವು ಕನ್ನಡ ಓದುಗರಿಗೆ ರಶ್ಯನ್ ನೆಲದ ಸಂಕಷ್ಟಗಳನ್ನು ತಿಳಿಯುವಲ್ಲಿ ಸಹಾಯಕವಾಗಿದೆ. ಎರಡನೆಯ ಜಾಗತಿಕ ಯುದ್ಧ ಮತ್ತು 1905ರ ರಷ್ಯನ್ ಕ್ರಾಂತಿಯ ಅನುಭವ, ಉಗ್ರತೆ, ನೆತ್ತರು, ಕ್ರೌರ್ಯಗಳು ತುಂಬಿದ್ದ ವ್ಯವಸ್ಥೆಯ ವಿಡಂಬನೆ ಕೃತಿಯ ಆಶಯವಾಗಿದೆ. ಡಾಕ್ಟರ್ ಮತ್ತು ಕವಿಯಾಗಿದ್ದ ಯೂರಿ ಜ಼ಿವಾಗೋ ಈ ಕಾಲಮಾನದವನು. ಕಾದಂಬರಿಯಲ್ಲಿ ಕಂಡುಬರುವ ಯುದ್ಧದ ಸನ್ನಿವೇಶ ಮತ್ತು ಯುದ್ಧದ ನಂತರದಲ್ಲಿ ಬದುಕನ್ನು ಪುನಃ ಕಟ್ಟಿಕೊಳ್ಳುವ ಉತ್ಸಾಹ ಅವರ್ಣನೀಯವಾದುದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಲಾರಾಳೆಡೆಗೆ ಜ಼ಿವಾಗೋ ತೋರುವ ಒಲವು ಅಪರೂಪದ್ದು. ಸಂಸಾರಸ್ಥನಾಗಿರುವ ಜ಼ಿವಾಗೋ ಕಲ್ಪನೆಯ ಸುಖದೊಂದಿಗೆ, ಬಂಧನವಿರದ ಪ್ರೇಮದ ಸೆಳಕಿಗೆ ಒಳಗಾಗುತ್ತಾನೆ. ಮನುಷ್ಯನಲ್ಲಿ ಪ್ರೇಮ ನವಿರು ಭಾವವನ್ನು ಹುಟ್ಡಿಸುವುದಾದರೂ ಏಕೆ? ಸಾಂಸಾರಿಕ ಬಂಧನದಲ್ಲೇಕೆ ಇದೆಲ್ಲ ಅಸಾಧ್ಯವೆನಿಸಿದೆ? ಕಾರಣ ಇಷ್ಟೇ, ಪ್ರೇಮಕ್ಕೆ ಸಕಾರಣವೆಂಬುದಿಲ್ಲ. ವಾಲ್ಶ್ ಎಂಬ ವಿಜ್ಞಾನಿಯ ಪ್ರಕಾರ, “ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಇಬ್ಬರು ವ್ಯಕ್ತಿಗಳೊಡನೆ ಭಾವುಕ ಪ್ರೇಮ ಹೊಂದಿರಲು ಸಾಧ್ಯವಿಲ್ಲ.” ಅಂತೆಯೇ ಯೂರಿಯ ಒಲವಿನ ದಾರಿ ಲಾರಾಳಲ್ಲಿಗೆ ಕವಲೊಡೆದು ನಿಂತಿದೆ. ಆದಾಗ್ಯೂ ತನ್ನ ನೈಜ ಬದುಕಿಗೆ ಆಗಾಗ್ಗೆ ಎಚ್ಚರಗೊಂಡು ಹಿಮ್ಮರಳುತ್ತಾನೆ.

ಈ ಕೃತಿಯು  ಓದುಗನನ್ನು ಬಡಿದೆಬ್ಬಿಸಿ ಎಚ್ಚರಿಸಿದ ಅನುಭವ ಉಂಟಾಗುವುದಂತೂ ಖಾತ್ರಿ. ಈ ಅನುವಾದಿತ ಕಾದಂಬರಿಗಳ ಆಯ್ಕೆ ಮತ್ತು ಅನುವಾದ ಸೊಗಸಾಗಿದೆ.

ಲೇಖಕರ ಪರಿಚಯ:

ದೀಪಾ ದೇವಕತೆ ಅವರು ಶಾಲಾಶಿಕ್ಷಕರು. ಕನ್ನಡ ಸಾಹಿತ್ಯವನ್ನು ಅಗಾಧವಾಗಿ ಓದಿಕೊಂಡವರು, ಅದನ್ನು ನಿರಂತರವಾಗಿ ಮುಂದುವರಿಸುತ್ತಿರುವವರು. ಪುಸ್ತಕ ಪರಿಚಯವಿಮರ್ಶೆ ಇವರ ಬಹು ಇಷ್ಟದ ಕಾಯಕ. ಮೂಲಕ ಉತ್ತಮ ಪುಸ್ತಕಗಳಿಗೆ ಮತ್ತಷ್ಟೂ ಓದುಗರು ದೊರೆಯುವಂತೆ ಮಾಡುವ ಸದಾಶಯ ಹೊಂದಿದ್ದಾರೆ. ಇವರು ಬರೆಯುವ ಪುಸ್ತಕ ಪರಿಚಯವಿಮರ್ಶೆಗಳು ರಾಷ್ಟ್ರೀಯ ಸುದ್ದಿಸಂಸ್ಥೆ ಯು.ಎನ್.. ಕನ್ನಡದಲ್ಲಿ ಪ್ರಕಟವಾಗುತ್ತದೆ ಎಂದು ತಿಳಿಸಲು ಹರ್ಷವಾಗುತ್ತದೆ.

-ಕುಮಾರ ರೈತ

ಮುಖ್ಯಸ್ಥ, ಯು.ಎನ್.‌ಐ., ಕರ್ನಾಟಕ

Share