Connect with us


      
ಕರ್ನಾಟಕ

ಬೆಂಗಳೂರಿಗೆ ಕೇಜ್ರಿವಾಲ್‌: ಏಪ್ರಿಲ್ 21ರಂದು ರೈತರ ಬೃಹತ್ ಸಮಾವೇಶ

Iranna Anchatageri

Published

on

ಬೆಂಗಳೂರು: ಏಪ್ರಿಲ್ 18 (ಯು.ಎನ್.ಐ.) ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಏಪ್ರಿಲ್‌ 21ರಂದು ಬೆಂಗಳೂರಿಗೆ ಆಗಮಿಸಲಿದ್ದು, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದಲ್ಲಿ ನಡೆಯಲಿರುವ ಬೃಹತ್‌ ರೈತ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, “ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಗುರುವಾರ ಬೆಳಗ್ಗೆ 11 ಗಂಟೆಗೆ ಸಮಾವೇಶ ಆರಂಭವಾಗಲಿದೆ. ದೆಹಲಿ ಮಾದರಿಯಿಂದ ಪ್ರೇರಣೆ ಹೊಂದಿರುವ ರಾಜ್ಯ ರೈತ ಸಂಘವು ಸಿಎಂ ಕೇಜ್ರಿವಾಲ್‌ರವರಿಗೆ ವಿಶೇಷ ಆಹ್ವಾನ ನೀಡಿದ್ದು, ಅವರು ಆಗಮಿಸಿ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಾಡಿನ ಸುಮಾರು 50 ಸಾವಿರ ರೈತರು ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಇದೊಂದು ಐತಿಹಾಸಿಕ ದಿನವಾಗಲಿದೆ” ಎಂದು ಹೇಳಿದರು.

“ಜನಸಾಮಾನ್ಯರ ಕುಂದುಕೊರತೆಗಳನ್ನು ಅರಿತುಕೊಂಡು ಬದಲಾವಣೆ ತರುತ್ತಿರುವ ಏಕೈಕ ಪಕ್ಷವೆಂದರೆ ಆಮ್‌ ಆದ್ಮಿ ಪಾರ್ಟಿ. ಪ್ರಾಮಾಣಿಕ ವ್ಯಕ್ತಿಗಳು ರಾಜಕಾರಣಕ್ಕೆ ಬಂದರೆ ಜನಪರ ಕೆಲಸಗಳನ್ನು ದೊಡ್ಡ ಮಟ್ಟದಲ್ಲಿ ಮಾಡಬಹುದು, ಭ್ರಷ್ಟಾಚಾರವಿಲ್ಲದ ಆಡಳಿತ ನೀಡಬಹುದು ಎಂಬುದನ್ನು ದೆಹಲಿಯ ಕೇಜ್ರಿವಾಲ್‌ ನೇತೃತ್ವದ ಸರ್ಕಾರ ಕಳೆದ ಏಳು ವರ್ಷಗಳಲ್ಲಿ ತೋರಿಸಿಕೊಟ್ಟಿದೆ. ತೆರಿಗೆ ಹಣವು ಕಳ್ಳ ರಾಜಕಾರಣಿಗಳ ಜೇಬು ಸೇರುವುದನ್ನು ತಪ್ಪಿಸಿ, ಅಲ್ಲಿನ ಆರೋಗ್ಯ, ಶಿಕ್ಷಣ, ನೀರು, ವಿದ್ಯುತ್ ಮುಂತಾದ ಮೂಲಸೌಕರ್ಯ ನೀಡುವುದಕ್ಕೆ ಬಳಸಲಾಗಿದೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.

“ಕಳೆದ 75 ವರ್ಷಗಳಲ್ಲಿ ಕರ್ನಾಟಕದ ರೈತರು ಮೂರೂ ಪಕ್ಷಗಳಿಗೆ ಮತ ನೀಡಿ ಗೆಲ್ಲಿಸಿ ಕಳಿಸಿದರು. ಮೂರೂ ಪಕ್ಷಗಳಲ್ಲಿ ಯಾರೂ ರೈತನ ಬವಣೆ ಅರ್ಥ ಮಾಡಿಕೊಳ್ಳಲಿಲ್ಲ. ಎಲ್ಲರಿಂದ ಅನ್ಯಾಯ ಎದುರಿಸಿ ತಾವೇ ರಾಜಕಾರಣಕ್ಕಿಳಿಯಲು ರೈತರು ತೀರ್ಮಾನಿಸಿದ್ದಾರೆ. ಅವರ ಮುಂದಿರುವ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸಿ, ಆಮ್ ಆದ್ಮಿ ಪಾರ್ಟಿಯೊಂದೇ ತಮಗೆ ನ್ಯಾಯ ದೊರಕಿಸಿಕೊಡಲು ಸಾಧ್ಯ ಎಂಬ ತೀರ್ಮಾನಕ್ಕೆ ರೈತರು ಬಂದಿದ್ದಾರೆ” ಎಂದು ಪೃಥ್ವಿ ರೆಡ್ಡಿ ತಿಳಿಸಿದರು.

Share