Published
4 weeks agoon
By
Vanitha Jainಮಾಗಡಿ: ಜೂನ್ 08 (ಯು.ಎನ್.ಐ.) ಮುಂಗಾರು ಸಂದರ್ಭದಲ್ಲಿ ರಸಗೊಬ್ಬರ ಕೊರತೆ, ಕಾಳ ಸಂತೆಯಲ್ಲಿ ಮಾರಾಟ ಹಾಗೂ ರಸಗೊಬ್ಬರ ಕಲಬೆರಕೆ ರೈತರನ್ನು ಕಂಗಾಲಾಗಿಸಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಾವೇ ಖದ್ದಾಗಿ ರೈತರನ್ನು ಭೇಟಿ ಮಾಡಿ ಅವರ ಸಮಸ್ಯೆ ಆಲಿಸಿದರು.
ರೈತರು ರಸಗೊಬ್ಬರ ವಿಚಾರವಾಗಿ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು. ರೈತರ ಜತೆ ಸಂವಾದ ಮುಗಿಯುತ್ತಿದ್ದಂತೆ ತಾಲೂಕು ಎಪಿಎಂಸಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಸಗೊಬ್ಬರ ಮಳಿಗೆಗಳಿಗೆ ಭೇಟಿ ನೀಡಿದ ಅವರು, ಯೂರಿಯಾ, ಇತರೆ ರಸಗೊಬ್ಬರಗಳ ಕಳೆದ ವರ್ಷದ ಬೆಲೆ ಹಾಗೂ ಪ್ರಸಕ್ತ ವರ್ಷದಲ್ಲಿನ ಬೆಲೆಯ ಮಾಹಿತಿ ಪಡೆದು ಬೆಲೆ ಏರಿಕೆ ವ್ಯತ್ಯಾಸ ಪರಿಶೀಲಿಸಿದರು. ನಂತರ ಬೀದಿ ಬದಿಯ ವ್ಯಾಪಾರಿಗಳನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಳೆದ ಆರೇಳು ವರ್ಷಗಳಿಂದ ರಸಗೊಬ್ಬರ ಬೆಲೆ 50 % ರಿಂದ 60 % ರಷ್ಟು ಬೆಲೆ ಏರಿಕೆಯಾಗಿದೆ. ರೈತರಿಗೆ ಸಬ್ಸಿಡಿಯನ್ನು ನೇರವಾಗಿ ನೀಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ರೈತ ಮಾರುಕಟ್ಟೆಯಲ್ಲಿ ಹೆಚ್ಚುವರಿ ಹಣ ಕೊಟ್ಟು ರಸಗೊಬ್ಬರ ಖರೀದಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ರೈತನಿಗೆ ವೇತನ, ಬಡ್ತಿ, ಪಿಂಚಣಿ ಹಾಗೂ ಲಂಚ ಯಾವುದೂ ಇಲ್ಲ. ಕಾಳಸಂತೆ ಹೆಚ್ಚಾಗಿದ್ದು, ಇಲಾಖೆ ರೈತರತ್ತ ಗಮನ ಹರಿಸಬೇಕು. ನಾನು ತಾಲೂಕು ಎಪಿಎಂಸಿಗೂ ಭೇಟಿ ನೀಡಿದ್ದು ಇಲ್ಲಿರುವ ರಸಗೊಬ್ಬರ ವ್ಯಾಪಾರಿಗಳ ಭೇಟಿ ಮಾಡಿದ್ದೇನೆ. ಈ ವ್ಯಾಪಾರಿಗಳಿಗೆ ಸರಿಯಾದ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆಯಾಗುತ್ತಿಲ್ಲ ಎಂದು ಹೇಳಿದರು.
ರೈತ ಈಗ ಬದುಕುವುದು ಕಷ್ಟವಾಗಿದೆ. ರೈತರಿಗೆ ಹಾಲಿನ ಬೆಲೆ ಹೆಚ್ಚಳ ಮಾಡಿಲ್ಲ. ಹಾಲಿನ ಬೆಲೆ ಹೆಚ್ಚಿಸಿದರೆ ಸಮಸ್ಯೆ ಏನು? ಹಸುಗಳ ಮೇವಿನ ಬೆಲೆಗಳು ಹೆಚ್ಚಾಗಿದ್ದು, ರೈತನಿಗೆ ವೆಚ್ಚ ಹೆಚ್ಚಿದೆ. ರೈತರು ಹೈನುಗಾರಿಕೆ ಮೇಲೆ ಹೆಚ್ಚಿನ ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಪ್ರೋತ್ಸಾಹ ನೀಡಬೇಕಾಗುತ್ತದೆ.ಈ ಸರ್ಕಾರ ರೈತನ ಕೈ ಬಲಪಡಿಸಲು ಸಂಪೂರ್ಣವಾಗಿ ವಿಫಲವಾಗಿವೆ. ರಾಗಿ ಖರೀದಿ ವಿಚಾರದಲ್ಲೂ ಸಾಕಷ್ಟು ಸಮಸ್ಯೆ ಎದುರಾಗಿದ್ದವು. ಇದರ ವಿರುದ್ಧ ಧ್ವನಿ ಎತ್ತಲಾಗಿತ್ತು ಎಂದು ಹೇಳಿದರು.
ಇನ್ನು ಈ ಭಾಗದಲ್ಲಿ ಅರಣ್ಯ ಪ್ರದೇಶದಲ್ಲಿನ ರೈತರನ್ನು ಒಕ್ಕಲೆಬ್ಬಿಸುವ ಕಾರ್ಯ ನಡೆಯುತ್ತಿದ್ದು, ಯಾವ ರೈತರನ್ನು ಒಕ್ಕಲೆಬ್ಬಿಸಬಾರದು. ಈ ವಿಚಾರವಾಗಿ ನಮ್ಮ ಸಂಕಲ್ಪ ಶಿಬಿರದಲ್ಲಿ ತೀರ್ಮಾನಿಸಲಾಗಿದೆ. ಯಾರೆಲ್ಲಾ 25 ವರ್ಷಗಳಿಂದ ಅಲ್ಲಿ ಸಾಗುವಳಿ ಮಾಡುತ್ತಿದ್ದಾರೋ ಅವರಿಗೆ ಆ ಭೂಮಿ ನೀಡಬೇಕು. ಯಾವುದೇ ರೈತ ತಮ್ಮ ಜಮೀನನ್ನು ಬಿಟ್ಟುಕೊಡಬಾರದು.
ಮೋದಿ ಸರ್ಕಾರ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು. ಅಂದರೆ ಅವರು ಖರೀದಿ ಮಾಡುವ ವಸ್ತುಗಳ ಬೆಲೆ ಅರ್ಧಕ್ಕೆ ಇಳಿಯಬೇಕು. ಅವರ ಬೆಳೆಗಳಿಗೆ ದುಪ್ಪಟ್ಟು ದರ ಸಿಗಬೇಕು. ಆದರೆ ಅದು ಸಾಧ್ಯವಾಗಿಲ್ಲ. ರೈತರ ಪ್ರತಿ ವಸ್ತುವಿನ ಬೆಲೆ ಗಗನಕ್ಕೇರುತ್ತಿದೆ. ಬೆಳೆಗೆ ಸರಿಯಾದ ಬೆಂಬಲ ಬೆಲೆ ನೀಡುತ್ತಿಲ್ಲ. ಈ ಮಧ್ಯೆ ಎಪಿಎಂಸಿ ತೆಗೆಯಲು ಮುಂದಾಗಿದ್ದಾರೆ. ಇದೆಲ್ಲವೂ ರೈತರಿಗೆ ಸಾಕಷ್ಟು ಸಮಸ್ಯೆ ತಂದಿವೆ. ರಸಗೊಬ್ಬರ ವಿಚಾರವಾಗಿ ನನಗೆ ರಾಜ್ಯದ ಬೇರೆ ಬೇರೆ ಕಡೆಗಳಿಂದ ಕರೆ ಮಾಡಿ ಈ ವಿಚಾರ ಹೇಳುತ್ತಿದ್ದರು. ಹೀಗಾಗಿ ನನ್ನ ಕಣ್ಣಾರೆ ಪರಿಸ್ಥಿತಿ ನೋಡಬೇಕು ಎಂದು ಇಲ್ಲಿಗೆ ಬಂದಿದ್ದೇನೆ. ನಾನು ವಾಸ್ತವ ಸ್ಥಿತಿ ಅರಿತ ನಂತರ ಅಧಿಕಾರಿಗಳ ಜತೆ ಮಾತನಾಡುತ್ತೇನೆ ಎಂದರು.
ಹಣಮಂತ ನಿರಾಣಿಗೆ ಶುಭಾಶಯ ತಿಳಿಸಿದ ಮುರುಗೇಶ್ ನಿರಾಣಿ
ಸಚಿವ ಉಮೇಶ ಕತ್ತಿ ಹೇಳಿಕೆ ಕಟುವಾಗಿ ಖಂಡಿಸಿದ ಕನ್ನಡ ಸಾಹಿತ್ಯ ಪರಿಷತ್ತು
ಜುಲೈ ೧ ರಿಂದ ಕಬ್ಬನ್ ಪಾರ್ಕಿನಲ್ಲಿ ಶ್ವಾನ ಪ್ರವೇಶ ನಿಷೇಧ
ಕೊಮ್ಮಘಟ್ಟದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮ ಹೀಗಿದೆ!
ಬೆಂಗಳೂರಿಗೆ ಡಾಕ್ಯುಮೆಂಟ್: ಸಿಎಂ ಬೊಮ್ಮಾಯಿ
ಕಾಲಮಿತಿಯಲ್ಲಿ ಕಾಮಗಾರಿಗಳು ಪೂರ್ಣ: ಸಿಎಂ ಬೊಮ್ಮಾಯಿ