Connect with us


      
ರಾಜಕೀಯ

ಕುಟುಂಬದ ತಂಟೆಗೆ ಬರಬೇಡಿ , ಬಿಜೆಪಿಗೆ   ಹೆಚ್ ಡಿಕೆ  ಎಚ್ಚರಿಕೆ

UNI Kannada

Published

on

ಕುಟುಂಬದ ತಂಟೆಗೆ ಬರಬೇಡಿ , ಬಿಜೆಪಿಗೆ   ಹೆಚ್ ಡಿಕೆ  ಎಚ್ಚರಿಕೆ

ಬೆಂಗಳೂರು,ನ 15 (ಯುಎನ್ಐ) ಭಾರತೀಯ ಸಂವಿಧಾನದಲ್ಲಿ ನಿರ್ಧಿಷ್ಟವಾಗಿ ಇಂಥವರೇ ರಾಜಕೀಯಕ್ಕೆ ಬರಬೇಕು ಎಂದು ಗೆರೆ ಎಳೆಯಲಾಗಿದೆಯಾ?

ಸ್ಕೂಟರ್ ಗೆ ಪೆಟ್ರೋಲ್ ಹಾಕಿಸಲು ದುಡ್ಡು ಇಲ್ಲದೆ ಇದ್ದವರು ಈಗ ಹೇಗಿದ್ದಾರೆ ಎನ್ನುವುದೂ ಗೊತ್ತಿದೆ  ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಿದೆ, ಪಕ್ಷ ಕೇವಲ ದೇವೇಗೌಡರ  ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ ಎಂದು ಟ್ವೀಟರ್ ನಲ್ಲಿ  ಬಿಜೆಪಿ ಮಾಡಿದ್ದ ಟೀಕೆಗೆ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ ಅವರು “ಬಿಜೆಪಿ ಕುಟುಂಬ ರಾಜಕಾರಣದಲ್ಲಿ ತೊಯ್ದಾಡುತ್ತಿದೆ. ತನ್ನ ಹುಳುಕನ್ನು ಮರೆಮಾಚಲು ಜೆಡಿಎಸ್ ಮೇಲೆ ಕೆಸರು ಎರಚುತ್ತಿದೆ ದೂರಿದರು.

ಬಿಜೆಪಿಯಲ್ಲಿ ಕುಟುಂಬ ರಾಜಕಾರಣ  ಇಲ್ಲವೇ? ನಾವೂ ಒಂದು ಪಟ್ಟಿ ಕೊಟ್ಟಿದ್ದೇವೆ. ಇನ್ನು ಬೇಕಾದಷ್ಟು ಪಟ್ಟಿಗಳಿವೆ. ಹೇಳುತ್ತಾ ಹೋದ್ದರೆ ಅದು ಮುಗಿಯದ ಕಥೆ ಆಗುತ್ತದೆ. ಸುಮ್ಮನೆ ನಮ್ಮ ಕುಟುಂಬದ ತಂಟೆಗೆ ಬರುವುದು ಬೇಡ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದರು.

ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ರಾಜಕಾರಣಕ್ಕೆ ಬರಬಹುದು. ಎಲ್ಲ ವೃತ್ತಿಗಳಲ್ಲೂ ಇರುವಂತೆ ರಾಜಕೀಯದಲ್ಲೂ ಕುಟುಂಬ ಸದಸ್ಯರು ರಾಜಕಾರಣಕ್ಕೆ ಬರುವುದು ಹೊಸತೇನಲ್ಲ. ಚಿತ್ರರಂಗ, ವೈದ್ಯ ಕ್ಷೇತ್ರದಲ್ಲೂ ಇದೆಯಲ್ಲವೇ? ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳಲ್ಲೂ ಕುಟುಂಬ ರಾಜಕಾರಣ ಇದೆ. ಬಿಜೆಪಿ ನಿರ್ದಿಷ್ಟವಾಗಿ ನಮ್ಮ ಕುಟುಂಬ ಮತ್ತು ನಮ್ಮ ಪಕ್ಷದ ಬಗ್ಗೆ ಮಾತನಾಡುವುದು ಏಕೆ? ಸುಖಾಸುಮ್ಮನೆ ಟ್ವೀಟ್ ಮಾಡುವುದು, ಮಾತನಾಡುವುದನ್ನು ನಿಲ್ಲಿಸದಿದ್ದರೆ ನಾವು ಕೂಡ ಅದೇ ಧಾಟಿಯಲ್ಲಿ ಉತ್ತರ ಕೊಡಬೇಕಾಗುತ್ತದೆ ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.

ಬಿಟ್ ಕಾಯಿನ್ ಮತ್ತು ಜನಧನ್ ಖಾತೆಗಳ ಹಗರಣಗಳ ಬಗ್ಗೆ ಹೇಳಿಕೆ ನೀಡಿರುವ ಕುಮಾರಸ್ವಾಮಿ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿ ತನಿಖೆಗೆ ಸಹಕಾರ ಪಡೆಯಲಿ ಎಂಬ  ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕಿಯೆ ನೀಡಿದರು ಮಾಜಿ ಮುಖ್ಯಮಂತ್ರಿಗಳು.

ಜನಧನ್ ಖಾತೆಯಿಂದ ಹಣ ಎತ್ತಿರುವ ವಿಚಾರವನ್ನು ನಾನು ಹೇಳಿದ್ದೇನೆ. ಆ ಮಾಹಿತಿ ಎಲ್ಲ ಕಡೆ ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ಜನರಿಗೆ ಸತ್ಯ ತಿಳಿಸಬೇಕಾದ ಕರ್ತವ್ಯ ಸರಕಾರದ್ದು. ಅವರು ನನಗೆ ನೋಟಿಸ್ ಕೊಟ್ಟು ಏನು ಮಾಡುತ್ತಾರೆ? ಎರಡು ಬಾರಿ ಸಂಸದರಾದವರು ಸ್ವಲ್ಪ ಜವಾಬ್ದಾರಿಯಿಂದ ಮಾತನಾಡಲಿ ಎಂದು ಕುಮಾರಸ್ವಾಮಿ ಅವರು ಅಸಮಾಧಾನ ಹೊರ ಹಾಕಿದರು.

Share