Connect with us


      




ಕರ್ನಾಟಕ

“ಬೆಂಗಳೂರಿನ ಕಸ ನಮ್ಮೂರಿಗೆ ಬೇಡವೇ ಬೇಡ” – ವಿಧಾನಸಭೆಯಲ್ಲಿ ಚರ್ಚೆ

Iranna Anchatageri

Published

on

“ಬೆಂಗಳೂರಿನ ಕಸ ನಮ್ಮೂರಿಗೆ ಬೇಡವೇ ಬೇಡ” – ವಿಧಾನಸಭೆಯಲ್ಲಿ ಚರ್ಚೆ

ಬೆಂಗಳೂರಿನ ಕಸ ನಮ್ಮೂರಿಗೆ ಬೇಡವೇ ಬೇಡ ಎಂದು ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣ್ಣಯ್ಯ ಆಗ್ರಹಿಸಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಆಗುತ್ತಿರುವ ಅವೈಜ್ಞಾನಿಕ ಘನತ್ಯಾಜ್ಯ ಸಂಸ್ಕರಣೆ ಕುರಿತ ಗಮನ ಸೆಳೆಯುವ ಸೂಚನೆ ಮೇಲೆ ಚರ್ಚೆ ವಿಧಾನಸಭೆಯಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ಎಂಎಸ್‌ಜಿಪಿ ಕಂಪನಿಯ ಅವೈಜ್ಞಾನಿಕ ರೀತಿಯಲ್ಲಿ ಕಸವನ್ನು ದೊಡ್ಡಬಳ್ಳಾಪುರದಲ್ಲಿ ವಿಲೇವಾರಿ ಮಾಡುತ್ತಿದೆ ಎಂದರು.

ಎಂಎಸ್‌ಜಿಪಿ ಕಂಪನಿಯ ಸುಳ್ಳಿನ ಅಂಕಿ-ಅಂಶಗಳನ್ನು ಬಿಚ್ಚಿಟ್ಟ ಅವರು, ಪ್ರತಿ ದಿನ 500 ಮೆಟ್ರಿಕ್ ಟನ್ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ ಎಂದು ಎಂಎಸ್‌ಜಿಪಿ ಕಂಪನಿ ಹೇಳುತ್ತಿದೆ. ಆದರೆ, ವಾಸ್ತವವಾಗಿ 1,500 ಮೆಟ್ರಿಕ್ ಟನ್ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಇದರಿಂದ ದೊಡ್ಡಬಳ್ಳಾಪುರದಲ್ಲಿ ಕಲ್ಯಾಣ ಮಂಟಪ, ಹೊಟೇಲ್ ಹಾಗೂ ವಿಮಾನ ನಿಲ್ದಾಣದಿಂದ 13,64,356 ಮೆಟ್ರಿಕ್ ಟನ್ ತಂದು ಸುರಿದಿದ್ದಾರೆ. ಆದರೆ ಇದು ಸುಳ್ಳು ಮಾಹಿತಿ. ಈಗ ಅಲ್ಲಿ ಇರೋದು ಬರೋಬ್ಬರಿ 30 ಲಕ್ಷ ಮೆಟ್ರಿಕ್ ಟನ್ ಆಗಿದೆ ಎಂದರು. ಅಲ್ಲದೆ, ಸಂಸ್ಕರಣಾ ಘಟಕದಲ್ಲಿ ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿಲ್ಲ. ಒಂದೇ ಒಂದು ಯಂತ್ರ ಇಟ್ಟುಕೊಂಡು ಹೆಸರಿಗಷ್ಟೇ ಸಾವಯವ ಗೊಬ್ಬರ ಉತ್ಪಾದಿಸಲಾಗುತ್ತಿದೆ. ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ 19 ಚೆಕ್ ಡ್ಯಾಮ್ ನಿರ್ಮಾಣ ಮಾಡಲಾಗಿದೆ. ಅಲ್ಲದೆ, ಬೈರಗೊಂಡ್ಲು ಮತ್ತು ಮಾವತ್ತೂರು ಕೆರೆಗಳಿಗೆ ಕಸದ ಕೊಳಕು ನೀರು ಸೇರ್ಪಡೆಯಾಗಿ ಕಲುಷಿತಗೊಳ್ಳುತ್ತಿದೆ. ಇದಲ್ಲದೆ ಸುತ್ತಲಿನ ಗ್ರಾಮಗಳ ಬೋರ್ ವೆಲ್ ನೀರಿನಲ್ಲಿ ಕಪ್ಪು ನೀರು ಬರುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು ಹಾಗೂ ಸ್ಥಳೀಯರು ಎಂಎಸ್‌ಜಿಪಿ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ಭಾಗದಲ್ಲಿ ಘನ ತ್ಯಾಜ್ಯ ಘಟಕ ಹಾಗೂ ಬೆಂಗಳೂರಿನ ಕಸದ ಸಹವಾಸವೇ ಬೇಡ ಎಂದು ದೊಡ್ಡಬಳ್ಳಾಪುರ ಶಾಸಕರು ಆಗ್ರಹಿಸಿದರು.

ನಂತರ ಮಾತನಾಡಿದ ಕೃಷ್ಣ ಬೈರೇಗೌಡ, ದೊಡ್ಡಬಳ್ಳಾಪುರದಲ್ಲಿ ಸುರಿಯುತ್ತಿರುವ ಬೆಂಗಳೂರಿನ ಕಸ ಬೆಟ್ಟದ ಗಾತ್ರದಲ್ಲಿ ನಿರ್ಮಾಣವಾಗಿದೆ. ಇದರಿಂದ ಸೊಳ್ಳೆ, ನೋಣಗಳು ಹುಟ್ಟಿ ಜನರ ಆರೋಗ್ಯ ಹದಗೆಟ್ಟಿದೆ. ಮೊನ್ನೆ ಸುರಿದ ಭಾರಿ ಮಳೆಗೆ ಕಸದ ರಸ ನೀರಿನ ಮೂಲಗಳಿಗೆ ಸೇರಿಕೊಂಡು ಕಲುಷಿತಗೊಂಡಿದೆ. ದೊಡ್ಡಬಳ್ಳಾಪುರ ಅಷ್ಟೇ ಅಲ್ಲ ತುಮಕೂರು ವರೆಗಿನ ಜಲ ಮೂಲಗಳು ಕಲುಷಿತಗೊಂಡಿದೆ. ರಾಸಾಯನಿಕ ವಿಷಯುಕ್ತ ನೀರಿನ ವಿರದುಧ ಜನರು ಹೋರಾಟ ಮಾಡುತ್ತಿದ್ದಾರೆ. ನಿಮ್ಮ ಸಹವಾಸವೇ ಬೇಡ. ದೊಡ್ಡಬಳ್ಳಾಪುರಕ್ಕೆ ಕಸ ತಂದ ಸುರಿಯಬೇಡಿ ಎಂದು ಅಲ್ಲಿನ ಆಗ್ರಹಿಸುತ್ತಿದ್ದಾರೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ದೊಡ್ಡಬಳ್ಳಾಪುರದ ಕಸದ ಬಗ್ಗೆ ಉತ್ತರಿಸಿದ ಕಾನೂನು ಸಚಿವ ಮಾಧುಸ್ವಾಮಿ, ಶಾಸಕರ ಮಾಹಿತಿ ಮೇರೆಗೆ ತಾವು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಮಳೆಯಿಂದಾಗಿ ಕಸದ ರಸವಾಗಿ ಜಲ ಮೂಲಗಳಿಗೆ ಸೇರ್ಪಡೆಯಾಗಿರುವ ಎಂಎಸ್‌ಜಿಪಿ ಕಂಪನಿಯ ಬೇಜವಾಬ್ದಾರಿಯಾಗಿದೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು, 24 ಗಂಟೆಯಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಸಚಿವರು ತಿಳಿಸಿದರು.

ಬೆಂಗಳೂರಿನ ಕಸವನ್ನು ದೊಡ್ಡಬಳ್ಳಾಪುರವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯೆ ಕೊಟ್ಟ ಮಾಧುಸ್ವಾಮಿ, ಇದಕ್ಕೆ ಬೇರೇ ಯಾವುದೇ ದಾರಿ ಇದ್ದರೆ ತಿಳಿಸಿ ಎಂದು ಹೇಳಿದರು. ಬಳಿಕ ಕೃಷ್ಣಬೈರೇಗೌಡ, ಬೆಂಗಳೂರಿನ ಸುತ್ತಮುತ್ತಲಿನಲ್ಲಿ ಡಿ ಪಂಕ್ಟ್ ಕ್ವಾರಿಪಿಟ್ಸ್ ನಿರ್ಮಿಸಬೇಕೆಂದು ಹೇಳಿದರು. ಇದೊಂದು ಗಂಭೀರ ವಿಚಾರವಾಗಿರುವುದರಿಂದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಕರೆಯುತ್ತೇವೆ. ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸಲು ಕ್ರಮಕೈಗೊಳ್ಳುತ್ತೇವೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

Share