Connect with us


      
ಕರ್ನಾಟಕ

ಭಾರತದ ಆತ್ಮಜ್ಞಾನದ‌ ಸ್ವರೂಪ ಬದಲಾಗಿಲ್ಲ

Iranna Anchatageri

Published

on

ಬೆಂಗಳೂರು, ಡಿಸೆಂಬರ್ 12 (ಯು.ಎನ್.ಐ.) ಆಧುನಿಕತೆ-ತಂತ್ರಜ್ಞಾನದ ಪ್ರಭಾವದಿಂದ ಜಗತ್ತಿನಾದ್ಯಂತ ಸಾಕಷ್ಟು ಬದಲಾವಣೆಗಳು ಆಗುತ್ತಿದ್ದರೂ ಭಾರತ ಮಾತ್ರ ತನ್ನ ಮೂಲ ಆತ್ಮಜ್ಞಾನದ ಸ್ವರೂಪವನ್ನು ಬದಲಿಸದು. ಭಾರತದ ಹಿರಿಮೆಗೆ ಈ ಸಂಸ್ಕೃತಿಯೇ ಸಾಕ್ಷಿ’ ಎಂದು ಖ್ಯಾತ ವಿಮರ್ಶಕ ಡಾ. ಜಿ.ಬಿ. ಹರೀಶ್ ಅಭಿಪ್ರಾಯಪಟ್ಟರು.
ನಗರದ ಚರ್ಚ್‍ಸ್ಟ್ರೀಟ್‍ನ ಬ್ಲಾಸಮ್ ಬುಕ್ ಹೌಸ್‍ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಬುಕ್ ಬ್ರಹ್ಮ ಪ್ರಕಟನೆಯ `ಆಜಾದ್ ದ ಇನ್‍ವಿನ್ಸಿಬಲ್’ ಕೃತಿಯ ಲೇಖಕ ಡಾ. ಬಾಬು ಕೃಷ್ಣಮೂರ್ತಿ ಅವರೊಂದಿಗೆ ನಡೆಸಿದ ಸಂವಾದದಲ್ಲಿ ಭಾನುವಾರ ಅವರು ಮಾತನಾಡಿದರು.
ನಮ್ಮ ರಾಷ್ಟ್ರ ಉತ್ತಮವಾದದ್ದನ್ನು ಮಾತ್ರ ಒಪ್ಪಿಕೊಳ್ಳುತ್ತದೆ. ಭಾರತದ ಸಂಸ್ಕತಿಯು ವೈಶಾಲ್ಯತೆಯ ವಿಸ್ತಾರವೂ ಹಾಗೂ ಬೀಜ ರೂಪದ ಸೂಕ್ಷ್ಮತೆಯಾಗಿಯೂ ಇದೆ. ಭಾರತೀಯ ಸಂಸ್ಕøತಿಯು ಪುರಾಣ-ರಾಮಾಯಣ- ಮಹಾಭಾರತದಂತಹ ಮಹಾಕಾವ್ಯಗಳಿಂದ ಜೀವಂತವಾಗಿದೆ ಎಂದರು.
ದೇಶಭಕ್ತ ಚಂದ್ರಶೇಖರ ಆಜಾದ್ ಅವರ ಜೀವನ ಗಾಥೆ ಕುರಿತು ಲೇಖಕ ಡಾ. ಬಾಬು ಕೃಷ್ಣಮೂರ್ತಿ ಬರೆದ `ಅಜೇಯ’ ಕೃತಿಯ ಇಂಗ್ಲಿಷ್ ಅನುವಾದ `ಆಜಾದ್ ದ ಇನ್‍ವಿನ್ಸಿಬಲ್’ ಕೃತಿಯು ಭಾರತೀಯ ಸಾಂಸ್ಕøತಿಕ ಧ್ವನಿಯಾಗಿದೆ ಎಂದ ಅವರು, ಗಂಗಾ ನದಿಯ ದಡದ ಮೇಲೆ ವೇಗವಾಗಿ ಓಡುತ್ತಿರುವ ಬಾಲಕ ಚಂದ್ರಶೇಖರನ ಚಿತ್ರಣ ನೀಡುತ್ತಾ ಆರಂಭವಾಗುವ ಈ ಕಾದಂಬರಿಯು, ಗಂಗಾನದಿಯ ಪಾವಿತ್ರ್ಯತೆ, ಭಾರತೀಯ ಸಂಸ್ಕøತಿಯನ್ನು ಧ್ವನಿಸುತ್ತದೆ. ಈ ಸಂಸ್ಕøತಿಯು ಎಂದಿಗೂ ಮತ್ತೊಬ್ಬರ ಅಂದರೆ ಬ್ರಿಟೀಷರ ದಾಸನಾಗುವುದಿಲ್ಲ ಎಂಬ ಸಂದೇಶ ನೀಡುತ್ತದೆ. ದೇಶಭಕ್ತಿಯ ಸಂದೇಶದ ಮೂಲಕವೇ ಭಾರತೀಯ ಸಂಸ್ಕøತಿಯ ಹಿರಿಮೆಯನ್ನು ಸಾರುತ್ತದೆ. ಜತೆಗೆ, ಚಂದ್ರಶೇಖರ ಆಜಾದ್ ಅವರ ದೇಶದ ಸ್ವಾತಂತ್ರ್ಯ, ತ್ಯಾಗ -ಬಲಿದಾನಗಳ ಪರಿಕಲ್ಪನೆಗಳ ಮೌಲ್ಯಗಳನ್ನು ಪರಿಚಯಿಸುತ್ತದೆ. ಆಜಾದ್ ಎಂದರೆ ಅದು ಭಾರತೀಯ ಸಂಸ್ಕ-ತಿ. ಅದೇ `ಆಜಾದತ್ವ’ ಎಂದರು.
`ಆಜಾದ್ ದ ಇನ್‍ವಿನ್ಸಿಬಲ್’ ರಂಗಕ್ಕಿಳಿಸುವ ಚಿಂತನೆಯಿದೆ
ರಂಗಕರ್ಮಿ ಹಾಗೂ ಚಲನಚಿತ್ರ ನಟ ಪ್ರಕಾಶ್ ಬೆಳವಾಡಿ ಮಾತನಾಡಿ, ಭಾರತೀಯ ಸಂಸ್ಕøತಿಯನ್ನು ಬಿಂಬಿಸುವ ಗುಣಮಟ್ಟದ ಕೃತಿಗಳ ಅನುವಾದದ ಕೆಲಸವಾಗಬೇಕು. ಪುರಾಣ, ರಾಮಾಯಣ, ಮಹಾಭಾರತದಂತಹ ಕಥೆಗಳನ್ನು ಯಾರು ಓದುತ್ತಾರೆ ಎಂದಲ್ಲ. ಲಾಕ್‍ಡೌನ್‍ನಂತಹ ಸಂದರ್ಭದಲ್ಲಿ ದೂರದರ್ಶನದಲ್ಲಿ ಪ್ರಸಾರವಾದ `ಮಹಾಭಾರತ’ ಹಳೆಯ ಧಾರಾವಾಹಿಯು ಹೆಚ್ಚು ವೀಕ್ಷಕರನ್ನು ಆಕರ್ಷಿಸಿದೆ. ಭಾರತೀಯರಿಗೆ ಏನು ಕೊಡಬೇಕು ಎಂಬುದರ ಸ್ಪಷ್ಟತೆ ನಮ್ಮಲ್ಲಿರಬೇಕು. ಭಾರತೀಯ ಸಂಸ್ಕøತಿಯನ್ನು ಉಸಿರಾಡುವ `ಅಜೇಯ’ ಕಾದಂಬರಿ, ಇದೀಗ ಇಂಗ್ಲೀಷಿಗೆ ಅನುವಾದಗೊಂಡ `ಆಜಾದ್ ದ ಇನ್‍ವಿನ್ಸಿಬಲ್’ ಕೃತಿಯನ್ನು ರಂಗಕ್ಕಿಳಿಸುವ ಬಗ್ಗೆ ಚಿಂತಿಸಲಾಗುವುದು ಎಂದರು.
ಪೂರ್ವಾಗ್ರಹ ಪೀಡಿತರಾದ ಕೆಲವರು ದೇಶಭಕ್ತಿಯನ್ನು ವಿಶಾಲ ಅರ್ಥದಲ್ಲಿ ನೋಡದೇ, ನೈಜ ದೇಶಭಕ್ತರನ್ನು ಕಡೆಗಣಿಸಿ, ಜನಸಾಮಾನ್ಯರಿಗೆ ತಪ್ಪು ಮಾಹಿತಿ ನೀಡುತ್ತಾ ವಂಚಿಸಿದ್ದಾರೆ. ಈ ಕಾರಣಕ್ಕಾಗಿ, ಚಂದ್ರಶೇಖರ ಆಜಾದ್ ಅಂತವರ ಸಾಹಸಮಯ ಕೆಲಸಗಳು ಅವರಿಗೆ ವಿಶೇಷವಾಗಿ ಎಡಪಂಥೀಯರಿಗೆ ದೇಶಭಕ್ತಿಯಾಗಿ ಕಾಣದು ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.
ಕೃತಿಯ ಲೇಖಕ ಡಾ. ಬಾಬು ಕೃಷ್ಣಮೂರ್ತಿ ಮಾತನಾಡಿ, `ಸುಮಾರು 40 ವರ್ಷಗಳ ಹಿಂದೆ ಬರೆದ `ಅಜೇಯ’ ಕಾದಂಬರಿಯು (1974) ಈಗ ಮಂಜುಳಾ ಟೇಕಲ್ ಅವರಿಂದ ಇಂಗ್ಲಿಷ್‍ಗೆ ಅನುವಾದಗೊಂಡು ಪ್ರಕಟವಾಗುತ್ತಿರುವುದು ಸಂತಸದ ಸಂಗತಿ. ಚಂದ್ರಶೇಖರ ಆಜಾದ್ ಅವರ ಕುರಿತಂತೆ ಒಂದೆರಡು ಪ್ರಸಂಗಗಳ ಕುರಿತು ಮಾತನಾಡುವುದು ಬಿಟ್ಟರೆ ಆತನ ಸಮಗ್ರ ಜೀವನ ಕುರಿತು ನಮ್ಮಲ್ಲಿ ಯಾವುದೇ ಕೃತಿಗಳು ಇರಲಿಲ್ಲ. ಆದ್ದರಿಂದ, ದೇಶದ ನಾನಾ ಭಾಗಗಳಿಂದ ಮಾಹಿತಿ ಸಂಗ್ರಹಿಸಿ, ಹಿರಿಯ ಬರಹಗಾರರನ್ನು ಸಂಪರ್ಕಿಸಿ ಬರೆಯಲಾಯಿತು ಎಂದು ಕೃತಿ ರಚನೆಯ ಹಿಂದಿನ ತಮ್ಮ ಶ್ರಮವನ್ನು ಸ್ಮರಿಸಿಕೊಂಡರು.

Share