Connect with us


      
ಕರ್ನಾಟಕ

ದಕ್ಷತೆ, ಪ್ರಾಮಾಣಿಕತೆ, ಸಮಯಪ್ರಜ್ಞೆಯಿಂದ ಕರ್ತವ್ಯ ನಿರ್ವಹಿಸಬೇಕು: ಸಿಎಂ

pratham

Published

on

ಬೆಂಗಳೂರು: ಅ. 31(ಯುಎನ್ಐ) ಜನರಿಗೆ ಒಳಿತಾಗುವ ಕೆಲಸವನ್ನು ದಕ್ಷತೆ, ಪ್ರಾಮಾಣಿಕತೆ, ನಿಗದಿತ ಸಮಯದಲ್ಲಿ ಸ್ಥಿತಪ್ರಜ್ಞೆ ಮತ್ತು ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದರು.

ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಅವರು ಇಂದು ಮಾತನಾಡಿದರು.

ವಿಧಾನಸೌಧ ಒಂದು ಶಕ್ತಿ ಕೇಂದ್ರ. ನಾವೆಲ್ಲರೂ ಸರ್ಕಾರದ ಒಂದು ಭಾಗವಾಗಿದ್ದೇವೆ. ಜನತಂತ್ರದ ಮುಖಾಂತರ ಜನರ ಶ್ರೇಯೋಭಿವೃದ್ಧಿಗೆ ನಾವೆಲ್ಲರೂ ದುಡಿಯಬೇಕಿದೆ. ನಮ್ಮೆಲ್ಲರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಜನರ ಏಳಿಗೆಗಾಗಿ ದುಡಿದಾಗ ಮಾತ್ರ ಸರ್ಕಾರಿ ಕೆಲಸ, ದೇವರ ಕೆಲಸ ಎಂಬುದು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಪಟೇಲ್ ದಿಟ್ಟ ಧೀಮಂತ ಮತ್ತು ದಕ್ಷ ನಾಯಕ : ವಿವಿಧ ಭಾಷೆ ಪ್ರಾಂತ್ಯಗಳಲ್ಲಿ ಹಂಚಿ ಹೋಗಿದ್ದ ಈ ದೇಶವನ್ನು ಒಗ್ಗೂಡಿಸಿ ಗಣರಾಜ್ಯವನ್ನಾಗಿಸಿ, ಜನತಾಂತ್ರಿಕ ವ್ಯವಸ್ಥೆಯನ್ನು ತರುವಲ್ಲಿ ಪಟೇಲರ ಪಾತ್ರ ಬಹಳ ಹಿರಿದಾಗಿದೆ. ಇಡೀ ದೇಶದ ರೈತ ಬಾಂಧವರು ಮತ್ತು ಕಾರ್ಮಿಕ ವರ್ಗದವರು ಜಾಗೃತಗೊಂಡು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸುವಲ್ಲಿ ಪಟೇಲರು ಪ್ರಮುಖ ಪಾತ್ರ ವಹಿಸಿದ್ದಾರೆ. ಗುಜರಾತ್ ನ ಬಾರ್ಡೋಲಿ ರೈತ ಸತ್ಯಾಗ್ರಹ  ಹಾಗೂ ಬಿಹಾರದ ಚಂಪಾರಣ್ ಪ್ಲಾಂಟೇಷನ್ ಕಾರ್ಮಿಕರ ಸತ್ಯಾಗ್ರಹದ ನೇತೃತ್ವವನ್ನು ವಹಿಸಿದ ಪಟೇಲರು ಬ್ರಿಟೀಷರು ಈ ದೇಶವನ್ನು ಬಿಟ್ಟುತೊಲಗುವಂತೆ ಮಾಡಿದರು. ಪಟೇಲರ ಸಂಘತನಾತ್ಮಕ ಶಕ್ತಿಯನ್ನು ಈ ದೇಶ ಗುರುತಿಸುತ್ತಿದೆ ಎಂದರು.

ದೇಶದ ಗಡಿಗಳ ಸವಾಲನ್ನು ಎದುರಿಸಲು ಆಂತರಿಕ ಏಕತೆ, ಭದ್ರತೆ ಮುಖ್ಯ: ದೇಶದಲ್ಲಿ ವಿವಿಧ ಭಾಷೆ, ಭೌಗೋಳಿಕವಾಗಿ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ವಿವಿಧ ರಾಜ್ಯಗಳಾಗಿದ್ದರೂ ಸಹ, ಇಡೀ ದೇಶ ಏಕತೆ ಮತ್ತು ಅಖಂಡತೆಯಿಂದಿರುವುದು ಬಹಳ ಮುಖ್ಯ. ಈ ದೇಶದ ಗಡಿಗಳಲ್ಲಿನ ಸವಾಲುಗಳನ್ನು ಎದುರಿಸಬೇಕಾದರೆ, ಆಂತರಿಕವಾಗಿ ಏಕತೆ, ಅಖಂಡತೆಯನ್ನು ಮತ್ತು ಭದ್ರತೆ ಇರುವುದು ಬಹಳ ಅವಶ್ಯಕ. ಆ ನಿಟ್ಟಿನಲ್ಲಿ ಪಟೇಲರ ಕಾರ್ಯವನ್ನು ಸ್ಮರಿಸುತ್ತೇವೆ ಎಂದರು.

ಸ್ವತಂತ್ರ, ಸ್ವಾಭಿಮಾನಿ ಹಾಗೂ ಸ್ವಾವಲಂಬಿ ಭಾರತ : ಸ್ವಾತಂತ್ರ್ಯದ ಬಳಿಕ ದೇಶದಲ್ಲಿ ನಡೆದ ಪ್ರಮುಖ ಘಟನಾವಳಿಗಳಲ್ಲಿ ಹಸಿರು ಕ್ರಾಂತಿ ಪ್ರಮುಖವಾದದ್ದು. ದೇಶದಲ್ಲಿ 30 ಕೋಟಿ ಇದ್ದ ಜನಸಂಖ್ಯೆ 130 ಕೋಟಿ ಆದರೂ ಕೂಡ ಎಲ್ಲರಿಗೂ ಅನ್ನ ಬೆಳೆದು ಸ್ವತಂತ್ರ, ಸ್ವಾಭಿಮಾನಿ ಹಾಗೂ ಸ್ವಾವಲಂಬಿ ದೇಶವಾಗಿದೆ.

ಇಂದು ರಾಷ್ಟ್ರೀಯ ಏಕತಾ ದಿನದಂದು ಸ್ಮರಿಸಿಕೊಂಡು ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರು ನಡೆಯಬೇಕಿದೆ ಎಂದು ತಿಳಿಸಿದರು.

Share