Connect with us


      




ದೇಶ

ಜೈಶಂಕರ್ ಮತ್ತು ರಾಜನಾಥ್ ಸಿಂಗ್ ಅಮೆರಿಕಕ್ಕೆ ಭೇಟಿ

Iranna Anchatageri

Published

on

ಹೊಸದಿಲ್ಲಿ: ಏಪ್ರಿಲ್ 07 (ಯು.ಎನ್.ಐ.)ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಏಪ್ರಿಲ್ 11 ಮತ್ತು 12 ರಂದು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. 4ನೇ ಭಾರತ-ಅಮೆರಿಕ ಸಚಿವರ 2+2 ಸಂವಾದಕ್ಕೆ ಭಾರತದ ನಿಯೋಗವನ್ನು ರಕ್ಷಣಾ ಸಚಿವರು ಮತ್ತು ವಿದೇಶಾಂಗ ಸಚಿವರು ಮುನ್ನಡೆಸಲಿದ್ದಾರೆ ಎಂದು ಬಾಗ್ಚಿ ಹೇಳಿದರು. ಏಪ್ರಿಲ್ 11 ರಂದು ವಾಷಿಂಗ್ಟನ್ ಡಿಸಿಯಲ್ಲಿ 2+2 ಸಭೆ ನಡೆಯಲಿದೆ ಎಂದು ಇದೇ ವೇಳೆ ತಿಳಿಸಿದರು.

ಈ ಸಂವಾದವು ವಿದೇಶಾಂಗ ನೀತಿ, ರಕ್ಷಣೆ ಮತ್ತು ಭದ್ರತೆಗೆ ಸಂಬಂಧಿಸಿದ ಭಾರತ-ಯುಎಸ್ ದ್ವಿಪಕ್ಷೀಯ ಕಾರ್ಯಸೂಚಿಯಲ್ಲಿನ ಸಮಸ್ಯೆಗಳನ್ನು ಸಮಗ್ರವಾಗಿ ಪರಿಶೀಲಿಸಲು ಅನುವು ಮಾಡಿಕೊಡುತ್ತದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಅಮೆರಿಕದ ಆಂಟೋನಿ ಬ್ಲಿಂಕೆನ್ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ ಎಂದು ಹೇಳಿದರು.

ಭಾರತ-ಯುಎಸ್ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದಕ್ಕೆ ಕೊಂಡೊಯ್ಯಲು ಜೈಶಂಕರ್ ಅವರು ಯುಎಸ್ ಆಡಳಿತದ ಹಿರಿಯ ಸದಸ್ಯರೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ. ರಷ್ಯಾದೊಂದಿಗಿನ ವ್ಯಾಪಾರದ ಮೇಲೆ ಪಾಶ್ಚಿಮಾತ್ಯ ಒತ್ತಡದ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ಯಾವುದೇ ಒತ್ತಡವಿಲ್ಲ ಎಂದು ಬಾಗ್ಚಿ ಹೇಳಿದರು. ನಿರ್ಬಂಧಗಳ ಬಗ್ಗೆ ಚರ್ಚೆ ಇದೆ. ಆದರೆ ಅದು ಇಡೀ ವ್ಯವಹಾರದಲ್ಲಿ ಅಲ್ಲ. ನಮ್ಮ ಗಮನವು ರಷ್ಯಾದೊಂದಿಗೆ ಆರ್ಥಿಕ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಮತ್ತು ಸ್ಥಿರಗೊಳಿಸುವುದಾಗಿದೆ ಎಂದು ಹೇಳಿದರು.

ರಷ್ಯಾದೊಂದಿಗಿನ ವ್ಯಾಪಾರದ ಕುರಿತು ಯುಎಸ್ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ದಲೀಪ್ ಸಿಂಗ್ ಅವರ ಟೀಕೆಗಳ ಕುರಿತ ಪ್ರತಿಕ್ರಿಯಿಸಿದ ಅವರು, ನಾವು ರಷ್ಯಾದೊಂದಿಗೆ ಆರ್ಥಿಕ ಸಂಬಂಧಗಳನ್ನು ಹೊಂದಿದ್ದೇವೆ. ಪ್ರಸ್ತುತ ಪರಿಸ್ಥಿತಿಗಳಲ್ಲಿ ಈ ಸಂಬಂಧಗಳನ್ನು ಸ್ಥಿರಗೊಳಿಸುವುದು ನಮ್ಮ ಗಮನ ಕೇಂದ್ರಿಕೃತವಾಗಿದೆ ಎಂದು ಬಾಗ್ಚಿ ತಿಳಿಸಿದರು.

ಲಡಾಖ್ ಬಳಿಯ ವಿದ್ಯುತ್ ವಿತರಣಾ ಕೇಂದ್ರಗಳನ್ನು ಗುರಿಯಾಗಿಸಲು ಚೀನಾದ ಹ್ಯಾಕರ್‌ಗಳು ಮಾಡಿದ ಎರಡು ವಿಫಲ ಪ್ರಯತ್ನಗಳ ಕುರಿತು ಪ್ರತಿಕ್ರಿಯಿಸಿದ ಅವರು, “ನಮ್ಮ ನಿರ್ಣಾಯಕ ಮೂಲಸೌಕರ್ಯವನ್ನು ರಕ್ಷಿಸಲು ನಾವು ವ್ಯವಸ್ಥೆ, ಕಾರ್ಯವಿಧಾನವನ್ನು ಹೊಂದಿದ್ದೇವೆ” ಎಂದು ತಿಳಿಸಿದರು.

ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು:
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತಿದ್ದೇವೆ. ಭಾರತವ ಶ್ರೀಲಂಕಾದ ನೆರೆ ರಾಷ್ಟ್ರವಾಗಿದ್ದು, ಆತ್ಮೀಯ ಸ್ನೇಹ ಕೂಡ ಎಂದು ತಿಳಿಸಿದರು. ಕಳೆದ ಎರಡು-ಮೂರು ತಿಂಗಳಲ್ಲಿ ಶ್ರೀಲಂಕಾಕ್ಕೆ $ 2.5 ಶತಕೋಟಿ ನೆರವು ನೀಡಿದ್ದೇವೆ. ಇದು ಹೆಚ್ಚು ಅಗತ್ಯವಿರುವ ಇಂಧನ ಮತ್ತು ಆಹಾರಕ್ಕಾಗಿ ಸಾಲ ಸೌಲಭ್ಯವನ್ನು ಸಹ ಒಳಗೊಂಡಿದೆ. ಮಾರ್ಚ್ ಮಧ್ಯದಿಂದ ಶ್ರೀಲಂಕಾಕ್ಕೆ 2.70 ಲಕ್ಷ ಮೆಟ್ರಿಕ್ ಟನ್‌ಗೂ ಹೆಚ್ಚು ಡೀಸೆಲ್-ಪೆಟ್ರೋಲ್ ತಲುಪಿಸಲಾಗಿದೆ ಎಂದು ಬಾಗ್ಚಿ ಹೇಳಿದರು. ಒಂದು ಬಿಲಿಯನ್ ಡಾಲರ್ ಸಾಲ ಸೌಲಭ್ಯದ ಹೊರತಾಗಿ ಶ್ರೀಲಂಕಾಕ್ಕೆ 40 ಸಾವಿರ ಟನ್ ಅಕ್ಕಿಯನ್ನು ಸಹ ಪೂರೈಸಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಬಾಗ್ಚಿ ತಿಳಿಸಿದರು. .

ಯೆಮೆನ್‌ನಲ್ಲಿ ಕದನ ವಿರಾಮ: 
ಏಪ್ರಿಲ್ 2 ರಿಂದ ಪ್ರಾರಂಭವಾಗುವ ಯೆಮೆನ್ ವಿವಾದದಲ್ಲಿ ಎರಡು ತಿಂಗಳ ಕದನ ವಿರಾಮದ ಘೋಷಣೆ ಮಾಡಿರುವುದನ್ನು ಭಾರತ ಸ್ವಾಗತಿಸಿದೆ ಎಂದು ಅರಿಂದಮ್ ಬಾಗ್ಚಿ ಹೇಳಿದರು.

ಪಾಕಿಸ್ತಾನದ ರಾಜಕೀಯ ಬಿಕ್ಕಟ್ಟು:
ಪಾಕಿಸ್ತಾನದಲ್ಲಿನ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಅವರ ಆಂತರಿಕ ವಿಷಯ ಎಂದು ಬಾಗ್ಚಿ ಹೇಳಿದರು. ಸದ್ಯಕ್ಕೆ ನಾನು ಈ ಬಗ್ಗೆ ಪ್ರತಿಕ್ರಿಯಿಸಲಾರೆ. ನಾವು ಅಲ್ಲಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ. ಆದರೆ ಪಾಕಿಸ್ತಾನದ ಆಂತರಿಕ ವಿಷಯಗಳ ಬಗ್ಗೆ ನಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

Share