Connect with us


      
ಕೃಷಿ

ಪೊಟ್ಯಾಷ್ ರಸಗೊಬ್ಬರ ದುಬಾರಿ

Kumara Raitha

Published

on

ಬೆಂಗಳೂರು:ಜನೆವರಿ 09 (ಯು.ಎನ್.ಐ.) ರಾಜ್ಯದಲ್ಲಿ ಪೊಟ್ಯಾಷ್ ರಸಗೊಬ್ಬರ ದರ ದಿಢೀರೆಂದು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ದರ ಏರಿಕೆ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಗೊಬ್ಬರದ ಕೊರತೆಯು ಉಂಟಾಗಿದೆ. ಪೊಟ್ಯಾಷ್ ಗೊಬ್ಬರ ಸಿಗದೆ ಕಬ್ಬು, ಬಾಳೆ, ತೆಂಗು, ಕಲ್ಲಂಗಡಿ ಬೆಳೆಗಾರರು ಕಂಗಾಲಾಗಿದ್ದಾರೆ.
ಕಳೆದ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ 50 ಕೆ.ಜಿ. ಪೊಟ್ಯಾಷ್‍ಗೆ 950-1050 ರೂ. ಇದ್ದುದು ದಿಢೀರ್ 1700 ರೂ. ಗೆ ಏರಿಕೆಯಾಗಿ ರೈತರನ್ನು ಕಂಗೆಡಿಸಿದೆ. ಒಂದೆಡೆ ಕೃಷಿ ಇಲಾಖೆಯು ರಸಗೊಬ್ಬರದ ಕೊರತೆಯಿಲ್ಲ ಎನ್ನುತ್ತಿದೆ. ಆದರೆ ಮಾರಾಟಗಾರರು ಪೊಟ್ಯಾಷ್ ಸ್ಟಾಕ್ ಇಲ್ಲ. ಇದಕ್ಕೆ ಬದಲಿಯಾಗಿ ಎಸ್‍ಒಪಿ (ಫಾಸ್ಪರಸ್ ಆಫ್ ಸಲ್ಫೇಟ್) ಯನ್ನು ಬಳಸಿ ಎಂದು ರೈತರಿಗೆ ಸಲಹೆ ನೀಡುತ್ತಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಡಿಎಪಿ, ಪೊಟ್ಯಾಷ್ ಮೊದಲಾದ ರಸಗೊಬ್ಬರಗಳ ಬೆಲೆಯಲ್ಲಿ ಶೇ.30ರವರೆಗೆ ಏರಿಕೆ ಮಾಡಲಾಗಿತ್ತು. ಇದನ್ನು ಸುಧಾರಿಸಿಕೊಳ್ಳುವ ಮುನ್ನವೇ ಪೊಟ್ಯಾಷ್ ದರ ಏರಿಕೆ ಮಾಡಲಾಗಿದೆ. ವರ್ಷಕ್ಕೆ ಎರಡು ಮೂರು ಬಾರಿ ರಸಗೊಬ್ಬರಗಳ ದರ ಹೆಚ್ಚಿಸಿದರೆ ಅನ್ನದಾತರು ಏನು ಮಾಡಬೇಕು ಎಂದು ರೈತ ಮುಖಂಡರು ಪ್ರಶ್ನಿಸುತ್ತಿದ್ದಾರೆ.
ಇಳುವರಿಗೆ ಪೊಟ್ಯಾಷ್ ಬೇಕು :
ಕಬ್ಬು, ಬಾಳೆ, ತೆಂಗು, ಕಲ್ಲಂಗಡಿ, ಟೊಮ್ಯಾಟೊ ಸೇರಿದಂತೆ ನಾನಾ ಬೆಳೆಗಳಿಗೆ ಪೊಟ್ಯಾಷ್ ಬಳಸಿದರೆ ಉತ್ತಮ ಇಳುವರಿ ಬರಲಿದೆ. ಅದರಲ್ಲೂ ತೆಂಗು, ಬಾಳೆ, ಅಡಕೆ, ಮಾವು ಮತ್ತಿತರ ವಾಣಿಜ್ಯ ಬೆಳೆಗಳಿಗೆ ಸಕಾಲದಲ್ಲಿ ಪೊಟ್ಯಾಷ್ ಗೊಬ್ಬರ ಹಾಕದಿದ್ದರೆ ಗೊನೆ ಉತ್ತಮ ಫಸಲು ಸಿಗುವುದಿಲ್ಲ. ದುಬಾರಿ ಬೆಲೆ ಕೊಟ್ಟು ಖರೀದಿಸೋಣ ಎಂದರೆ ಬೆಂಗಳೂರು, ಮೈಸೂರು ಭಾಗಗಳಲ್ಲಿ ಎಲ್ಲಿ ಹುಡುಕಿದರೂ ಪೊಟ್ಯಾಷ್ ಖಾಲಿಯಾಗಿದೆ ಎನ್ನುತ್ತಿದ್ದಾರೆ ಎಂದು ತುಮಕೂರು ಭಾಗದ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

`ಟೊಮೇಟೊ ಹೂವು ಬಿಟ್ಟಿದೆ. ಇದೀಗ ಪೊಟ್ಯಾಷ್ ಹಾಕಬೇಕು. ಕಳೆದ ನಾಲ್ಕು ದಿನದಿಂದ ಹುಡುಕುತ್ತಿದ್ದೇನೆ. ಎಲ್ಲಿಯೂ ಸಿಗುತ್ತಿಲ್ಲ. ಬಹುತೇಕ ಮಾರಾಟಗಾರರು ಖಾಲಿಯಾಗಿದೆ. ಸ್ಟಾಕ್ ಇಲ್ಲ ಎನ್ನುತ್ತಿದ್ದಾರೆ’ ಎಂದು ಕೋಲಾರ ಜಿಲ್ಲೆ ಹೂವಳ್ಳಿಯ ರೈತ ಶ್ರೀನಿವಾಸ್ ಹೇಳುತ್ತಾರೆ.

ಆರು ತಿಂಗಳಲ್ಲಿ ದುಪ್ಪಟ್ಟು ಏರಿಕೆ

ಕೊರೊನಾ ಕಾರಣದಿಂದ ಕಬ್ಬಿಣ, ಪೇಪರ್, ಪ್ಲಾಸ್ಟಿಕ್ ಎಲ್ಲವೂ ದುಬಾರಿಯಾಗಿದೆ. ಆದರೆ ಇವುಗಳು ಶೇ.20-30ರಷ್ಟು ಏರಿಕೆಯಾಗಿವೆ. ಅದೇ ರಸಗೊಬ್ಬರಗಳ ದರ ಮಾತ್ರ ಶೇ.70-100ರಷ್ಟು ಏರಿಕೆ ಯಾಕೆ? ಕಳೆದ ಒಂದು ವರ್ಷದಿಂದೀಚೆಗೆ ಸಂಗ್ರಹದಲ್ಲಿ ಕೊರತೆ ಸೃಷ್ಟಿಸುತ್ತಾ ಒಂದೇ ವರ್ಷದಲ್ಲಿ ಪೊಟ್ಯಾಷ್‍ನ ದರದಲ್ಲಿ ಏಕಾಏಕಿ ದುಪ್ಪಟ್ಟು ಮಾಡಿರುವುದರ ಹಿಂದೆ ಕಮಿಷನ್‍ನ ದಂಧೆಯ ಅನುಮಾನ ಮೂಡುತ್ತಿದೆ ಎಂದು ಬಾಳೆ ಬೆಳೆಗಾರ ನವೀಶ್ ಸರಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಏರಿಕೆಗೆ ಕಾರಣವೇನು?

ಕಚ್ಚಾವಸ್ತುಗಳ ದರ ಏರಿಕೆಯಾದ ಹಿನ್ನೆಲೆಯಲ್ಲಿ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ದರ ಏರಿಕೆ ಮಾಡಲಾಗಿದೆ. ಚೀನಾ, ಆಫ್ರಿಕಾ, ದುಬೈ ಮತ್ತಿತರ ದೇಶಗಳಿಂದ ರಸಗೊಬ್ಬರದ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ಇದೀಗ ಕೋವಿಡ್‍ನಿಂದಾಗಿ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಜತೆಗೆ ಶಿಪ್ ಕಂಟೈನರ್ ದರ ಕೂಡ ಏರಿಕೆಯಾಗಿದೆ. ಹೀಗಾಗಿ ಪೊಟ್ಯಾಷ್ ದರದಲ್ಲಿ ಏರಿಕೆಯಾಗಿದೆ. ಬೆಲೆ ಏರಿಕೆಯಾಗಿದ್ದರೂ, ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ. ರೈತರಿಗೆ ಬೇಡಿಕೆಗೆ ತಕ್ಕಂತೆ ಗೊಬ್ಬರ ಪೂರೈಕೆಯಾಗುತ್ತಿದೆ. ಜನವರಿ ತಿಂಗಳಲ್ಲಿ ಎಲ್ಲಾ ಬಗೆಯ ರಸಗೊಬ್ಬರಗಳಿಗೆ ರೈತರಿಂದ 3 ಲಕ್ಷ ಮೆಟ್ರಿಕ್ ಟನ್‍ಗೂ ಅಧಿಕ ಬೇಡಿಕೆಯಿದ್ದು, ಕೇಂದ್ರ ಸರಕಾರ 3.45 ಲಕ್ಷ ಮೆಟ್ರಿಕ್ ಟನ್‍ಗೂ ಹೆಚ್ಚು ರಸಗೊಬ್ಬರಗಳನ್ನು ಪೂರೈಸಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ರೈತರ ಮಾತು
ಹಣ್ಣು, ತರಕಾರಿ, ವಾಣಿಜ್ಯ ಬೆಳೆಗಳು ಹಾಗೂ ಹೂವು ಸೇರಿದಂತೆ ಬಹುತೇಕ ಬೆಳೆಗಳಿಗೆ ಒಂದು ಅಥವಾ ಎರಡು ಬಾರಿ ಪೆÇಟ್ಯಾಷ್ ಹಾಕಲೇಬೇಕು. ಡಿಸೆಂಬರ್‍ನಲ್ಲಿ 50 ಕೆ.ಜಿ.ಯ ಬ್ಯಾಗ್‍ಗೆ 1,040-1050 ರೂ. ಇದ್ದುದು, ಇದೀಗ 1,700 ರೂ.ಗೆ ಏರಿಕೆಯಾಗಿದೆ. ಅಷ್ಟೇ ಅಲ್ಲ, ಕಳೆದ ಒಂದು ವರ್ಷದ ಹಿಂದೆ ಪೊಟ್ಯಾಷ್‍ನ ಬೆಲೆ ಕೇವಲ 900-950 ರೂ. ಇತ್ತು. ಇದೀಗ ಸುಮಾರು ಒಂದು ಸಾವಿರ ರೂ.ನಷ್ಟು ಏರಿಕೆ ಮಾಡಲಾಗಿದೆ. ಅಷ್ಟು ಹಣ ಕೊಟ್ಟು ರಸಗೊಬ್ಬರ ಹಾಕಿ ಬೆಳೆ ಬೆಳೆದರೂ ಕೂಡ ನಮಗೆ ಬೆಲೆ ಸಿಗುತ್ತದೆ ಎಂಬ ಗ್ಯಾರಂಟಿಯೇ ಇಲ್ಲವಲ್ಲ. ಸರಕಾರ ಪೂರ್ವನಿಯೋಜಿತವಾಗಿಯೇ ರೈತರನ್ನು ನಾಶ ಮಾಡುತ್ತಿದೆ – ಬೈರೇಗೌಡ, ಕೊಮ್ಮಘಟ್ಟ

ಕೃಷಿ ಇಲಾಖೆ ಅಂಕಿ-ಅಂಶ
ಜನವರಿ ತಿಂಗಳ ರಸಗೊಬ್ಬರ ಹಂಚಿಕೆ (ಮೆ. ಟನ್‍ಗಳಲ್ಲಿ)
ಬೇಡಿಕೆ ಕೇಂದ್ರ ಸರಕಾರದ ಹಂಚಿಕೆ
ಡಿಎಪಿ 32,054 33,425
ಎಂಒಪಿ 23,316 23,500
ಕಾಂಪ್ಲೆಕ್ಸ್ 1,37,076 1,37,080
ಯೂರಿಯಾ 1,08,523 1,51,200
ಒಟ್ಟು 3,00,969 3,45,205

Share