Connect with us


      
ದೇಶ

ಪಂಜಾಬ್ ನಲ್ಲಿ ಕಿಂಗ್ ಮೇಕರ್ ಆಗ್ತಾರಾ ರೈತರು? ವಿಶ್ಲೇಷಣೆ

Iranna Anchatageri

Published

on

ಚಂಡೀಗಢ : ಜನೆವರಿ 08 (ಯು.ಎನ್.ಐ.) ದೆಹಲಿಯಲ್ಲಿ ರೈತರ ಕೋಪ ತಾಪ.. ದೀರ್ಘ ಕಾಲದ ಹೋರಾಟ.. ಕೇಂದ್ರ ಸರ್ಕಾರವನ್ನೇ ಮಣಿಸಿ ಹೊಸ ಇತಿಹಾಸವನ್ನೇ ರೈತರು ಅಚ್ಚು ಒತ್ತಿದ್ದಾರೆ. ಈ ಆತ್ಮವಿಶ್ವಾಸದೊಂದಿಗೆ ಪುಟಿದೆದ್ದಿರುವ ರೈತರು ಮೊದಲ ಬಾರಿ ಪಂಜಾಬ್ ವಿಧಾನಸಭಾ ಅಖಾಡಕ್ಕೆ ಧುಮಕಲು ಸಜ್ಜಾಗಿದ್ದಾರೆ.
ರೈತರ ಯಶಸ್ವಿ ಆಂದೋಲನದ ನಂತರ 22 ಸಂಘಟನೆಗಳು ಸಂಯುಕ್ತ ಸಮಾಜ ಮೋರ್ಚಾವನ್ನು ರಚನೆ ಮಾಡಿಕೊಂಡಿವೆ. ಈ ಮೂಲಕ 117 ಸ್ಥಾನಗಳಲ್ಲಿ ಸ್ಪರ್ಧೆ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಪಂಜಾಬ್‌ನ 117 ವಿಧಾನಸಭಾ ಕ್ಷೇತ್ರಗಳ ಪೈಕಿ 77 ಕ್ಷೇತ್ರಗಳ ಮೇಲೆ ರೈತರ ಹೆಚ್ಚಿನ ಪ್ರಭಾವ ಇದೆ.
ಈ 77 ಕ್ಷೇತ್ರಗಳು ಗ್ರಾಮೀಣ ಅಥವಾ ನಗರ-ಗ್ರಾಮೀಣವನ್ನು ಒಳಗೊಂಡಿವೆ. ಒಂದೆಡೆ ಕ್ಯಾಪ್ಟನ್ ಅಮರಿಂದರ್ ರಾಜೀನಾಮೆ ಮತ್ತೊಂದೆಡೆ ಕೇಂದ್ರ ಸರ್ಕಾರದ ವಿರುದ್ಧ ಗೆಲುವು ಪಂಜಾಬ್‌ನಲ್ಲಿ ರೈತರು ರಾಜಕೀಯವಾಗಿ ಕಿಂಗ್ ಮೇಕರ್ ಆಗುತ್ತಾರಾ? ಅಥವಾ ಅಧಿಕಾರದ ಗದ್ದುಗೆ ಹಿಡಿಯುತ್ತಾರಾ ಅನ್ನೋದು ಕಾಂಗ್ರೆಸ್ ಹಾಗೂ ಬಿಜೆಪಿ ಪಾಲಿಗೆ ದೊಡ್ಡ ಪ್ರಶ್ನೆಯಾಗಿದೆ. ರೈತ ಚಳವಳಿಯ ಸಂದರ್ಭದಲ್ಲಿ ಸಿಕ್ಕ ಬೆಂಬಲದಿಂದಾಗಿ ರೈತರನ್ನು ಚುನಾವಣೆಗೆ ಸ್ಪರ್ಧಿಸುವ ಘೋಷಣೆ ಮಾಡಿರುವುದು ಎಲ್ಲ ರಾಜಕೀಯ ಪಕ್ಷಗಳಲ್ಲಿ ಸಂಚಲನ ಮೂಡಿಸಿದೆ.
ಪಂಜಾಬ್‌ನ ಆರ್ಥಿಕತೆಯು ಕೃಷಿಯನ್ನು ಆಧರಿಸಿದೆ. 75% ಜನಸಂಖ್ಯೆಯು ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿಯೊಂದಿಗೆ ಸಂಪರ್ಕ ಹೊಂದಿದ್ದಾರೆ. ನೇರವಾಗಿ ಅಂದ್ರೆ ಇದರಲ್ಲಿ ರೈತರು, ಹೊಲಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಅವರಿಂದ ಬೆಳೆ ಖರೀದಿಸುವ ವ್ಯಾಪಾರಿಗಳು ಮತ್ತು ರಸಗೊಬ್ಬರ ಹಾಗೂ ಕೀಟನಾಶಕಗಳ ಮಾರಾಟಗಾರರು ಸೇರಿದ್ದಾರೆ. ಈ ಎಲ್ಲ ಜನರು ಕೃಷಿಯ ಮೂಲಕ ನೇರವಾಗಿ ಪರಸ್ಪರ ಸಂಬಂಧ ಹೊಂದಿದ್ದು, ಇವರೇ ರೈತ ಶಕ್ತಿಯಾಗಿದ್ದಾರೆ.
ಪಂಜಾಬ್ ರಾಜಕೀಯದಲ್ಲಿ ರೈತರ ಶಕ್ತಿ
ಪಂಜಾಬ್‌ನ ಒಟ್ಟು 117 ವಿಧಾನಸಭಾ ಸ್ಥಾನಗಳಲ್ಲಿ 40 ನಗರ, 51 ಅರೆ ನಗರ ಮತ್ತು 26 ಸಂಪೂರ್ಣ ನಗರ ಸ್ಥಾನಗಳಿವೆ. ಕೇವಲ 40 ಸ್ಥಾನಗಳಲ್ಲಿ ನಗರ ಸಮುದಾಯದವರು ಹೆಚ್ಚಿನ ಮತಬ್ಯಾಂಕ್ ಹೊಂದಿದ್ದಾರೆ. ಉಳಿದ 77 ಸ್ಥಾನಗಳಲ್ಲಿ ಗ್ರಾಮೀಣ ಅಥವಾ ರೈತ ಮತ ಬ್ಯಾಂಕ್‌ಗಳು ಪ್ರಾಬಲ್ಯ ಹೊಂದಿವೆ. ಇಲ್ಲಿ ರೈತನ ಮತ ಸೋಲು-ಗೆಲುವನ್ನು ನಿರ್ಧರಿಸುತ್ತದೆ.

ಶಿರೋಮಣಿ ಅಕಾಲಿದಳ (ಬಾದಲ್):
ಅಕಾಲಿದಳ ತನ್ನನ್ನು ಪಂಥಕ್ ಪಕ್ಷ ಎಂದು ಕರೆದುಕೊಳ್ಳುತ್ತದೆ. ಗ್ರಾಮೀಣ ಸಿಖ್ ಅವರ ಪ್ರಮುಖ ಮತ ಬ್ಯಾಂಕ್ ಆಗಿದೆ. ರೈತರು ಚುನಾವಣೆಗೆ ಸ್ಪರ್ಧಿಸಿದರೆ ಹಳ್ಳಿಗಳಲ್ಲಿ ಅಕಾಲಿದಳದ ಮತ ಬ್ಯಾಂಕ್ ವಿಭಜನೆಯಾಗುತ್ತದೆ. ಅಕಾಲಿದಳವು ಈಗಾಗಲೇ ಕೃಷಿ ಕಾಯಿದೆಗೆ ತನ್ನ ಬೆಂಬಲ ಸೂಚಿಸಿ, ಅದರ ಪರಿಣಾಮ ಎದುರಿಸಿದೆ.

ಕಾಂಗ್ರೆಸ್:
ರೈತರು ಅಖಾಡಕ್ಕೆ ಇಳಿದಿರುವುದು ಪಂಜಾಬ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ನವಜೋತ್ ಸಿಧು ಮತ್ತು ಸಿಎಂ ಚರಂಜಿತ್ ಚನ್ನಿ ಜೋಡಿಗೆ ದೊಡ್ಡ ಹಿನ್ನಡೆಯಾಗಿದೆ. ಸಿಖ್ ಧರ್ಮದಿಂದ ದೂರ ಇರುವ ಕಾಂಗ್ರೆಸ್ ಗೆ ಜಾತಿ ಲೆಕ್ಕಾಚಾರದಲ್ಲಿ ಹಿಂದೆ ಉಳಿದಿದೆ. ನಗರಗಳಲ್ಲಿ ಕಾಂಗ್ರೆಸ್‌ಗೆ ಯಾವುದೇ ಪ್ರಬಲ ನಾಯಕರಿಲ್ಲ. ಮೊದಲು ಆಂದೋಲನದ ವಿಚಾರವಾಗಿ ರೈತರನ್ನು ಓಲೈಸುತ್ತಿದ್ದ ಕಾಂಗ್ರೆಸ್, ಬಳಿಕ ರೈತರ ಸ್ಮಾರಕ, ಸಾಲ ಮನ್ನಾ, ಪರಿಹಾರ ಕೈಗೊಂಡಿತ್ತು.

ಎಎಪಿ:
ಆಮ್ ಆದ್ಮಿ ಪಕ್ಷದ ನೆಲೆ ಹಳ್ಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿತ್ತು. ಕಳೆದ ಬಾರಿ 20 ಸ್ಥಾನಗಳಲ್ಲಿ ಹೆಚ್ಚಿನವು ಗ್ರಾಮೀಣ ಪ್ರದೇಶಗಳ ಬೆಂಬಲದಿಂದ ಆಯ್ಕೆಯಾಗಿದ್ದರು. ಆದರೆ ಈ ಬಾರಿ ರೈತರೇ ಚುನಾವಣೆಗೆ ಸ್ಪರ್ಧಿಸಿದರೆ ಎಎಪಿಗೆ ಭಾರೀ ಹಿನ್ನಡೆಯಾಗಲಿದೆ. ಆದರೆ ರೈತರೊಂದಿಗೆ ಎಎಪಿ ಮೈತ್ರಿ ಮಾಡಿಕೊಂಡರೆ ಗ್ರಾಮೀಣ ಪ್ರದೇಶದಲ್ಲಿ ಲಾಭವಾಗಬಹುದು.

ಬಿಜೆಪಿ:
ರೈತರ ರಾಜಕೀಯ ಪ್ರವೇಶ ಬಿಜೆಪಿಗೆ ಲಾಭವು ಇದೆ.. ನಷ್ಟವೂ ಉಂಟು. ಮೊದಲಿನಿಂದಲೂ ರೈತರು ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದರು. ಆದರೆ, ಈ ಬಾರಿ ಬಿಜೆಪಿಯವರು ಬಹಿರಂಗವಾಗಿ ಹೇಳಲು ಸಾಧ್ಯವಾಗಲಿದೆ. ರೈತರಿಗೆ ನಗರಗಳಲ್ಲಿ ಹೆಚ್ಚಿನ ನೆಲೆಯಿಲ್ಲ ಅನ್ನೋದು ಬಿಜೆಪಿಗೆ ಲಾಭವಾಗಲಿದೆ. ಆದರೆ ರೈತರ ಹೋರಾಟ ಬಿಜೆಪಿ ಪಾಲಿಗೆ ಭಾರಿ ನಷ್ಟ ಉಂಟು ಮಾಡುವ ಸಾಧ್ಯತೆ ಇದೆ.

ಕ್ಯಾಪ್ಟನ್ ಅಮರಿಂದರ್ ಸಿಂಗ್:
ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಯಾಪ್ಟನ್ ಅಮರಿಂದ್ ಸಿಂಗ್, ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷ ಸ್ಥಾಪನೆ ಮಾಡಿದ್ದಾರೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳ ನಾಯಕರೊಂದಿಗೆ ಒಳ್ಳೆಯ ಸಂಬಂಧ ಹಾಗೂ ಉತ್ತಮ ಹೆಸರು ಗಳಿಸಿದ್ದಾರೆ. ಈ ಎಲ್ಲ ವಿಚಾರಗಳು ಕ್ಯಾಪ್ಟನ್ ಅಮರಿಂದರ್ ಸಿಂಗ್ ಗೆ ಲಾಭವಾಗುವ ಸಾಧ್ಯತೆ ಇದೆ.

Share