Connect with us


      
ಸಾಮಾನ್ಯ

ರೈತರು ರೈತೋದ್ಯಮಿಗಳಾಗಲು ಆಹಾರ ಉದ್ಯಮದಿಂದ ಸುವರ್ಣಾವಕಾಶ

Kumara Raitha

Published

on

ಡಾ. ಎ.ಬಿ. ಪಾಟೀಲ

ಅಂಕಣ: ಕೃಷಿ ದೃಷ್ಟಿಕೋನ -೧

 (ಯು.ಎನ್.ಐ.) ನಮ್ಮ ದೇಶದ ರೈತರು ನಿರಂತರವಾಗಿ ದುಡಿಯುತ್ತಾ ಕೊರೊನಾ ಮಹಾಮಾರಿ ಬಾಧಿತ ಅವಧಿಯಲ್ಲಿಯೂ ಕೂಡಾ ದೇಶಕ್ಕೆ ಅನ್ನ ನೀಡುತ್ತಾ ಸದಾ ಅನ್ನದಾತನಾಗಿದ್ದಾರೆ. ಆಧುನಿಕ ಕೃಷಿ ಪದ್ದತಿಗಳನ್ನು ಅಳವಡಿಸಿಕೊಂಡು ೨೦೨೦-೨೧ ನೇ ಸಾಲಿನಲ್ಲಿ ದೇಶದ ಆಹಾರೋತ್ಪಾದನೆ ೩೦೫ ದಶಲಕ್ಷ ಟನ್‌ಗಳ ಹಾಗೂ ಹಣ್ಣು ಮತ್ತು ತರಕಾರಿಗಳ ೩೨೦ ದಶಲಕ್ಷ ಟನ್‌ಗಳ ಉತ್ಪಾದನೆಯ ಕೊಡುಗೆ ನೀಡಿರುತ್ತಾರೆ.

ಕೊಯ್ಲೋತ್ತರ ನಂತರ ಶೇಖರಣೆಯಲ್ಲಿ, ಸಾಗಾಣಿಕೆಯಲ್ಲಿ ಹಾಗೂ ಮಾರಾಟ ಮಾಡುವ ಮುಂಚೆ ಹಣ್ಣು ಮತ್ತು ತರಕಾರಿಗಳಲ್ಲಿ ಶೇ. ೨೫ ರಿಂದ ೩೦ ರಷ್ಟು ಹಾಗೂ ಆಹಾರ ಧಾನ್ಯಗಳಲ್ಲಿ ಶೇ. ೮ ರಿಂದ ೧೦ ರಷ್ಟು ಪ್ರತಿ ವರ್ಷ ನಷ್ಟವಾಗುತ್ತದೆ. ಇದನ್ನು ಆಧರಿಸಿ ಒಂದು ಕಾಳು ಉಳಿಸುವುದು ಎರಡು ಕಾಳು ಬೆಳೆಸಿದಂತೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಕೋಯ್ಲೋತ್ತರ ನಂತರದ ನಷ್ಟವನ್ನು ತಡೆಯಲು ವೈಜ್ಞಾನಿಕ ಪದ್ದತಿಯಲ್ಲಿ ಶೇಖರಣೆ, ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಮಾಡಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿದ್ದಲ್ಲಿ ರೈತನಿಗೆ ಅಧಿಕ ಲಾಭ ದೊರೆಯುತ್ತದೆ.

ಆಹಾರ ಉತ್ಪಾದನೆಯೊಂದಿಗೆ ಆಹಾರ ಸಂಸ್ಕರಣೆಗೆ ಮಹತ್ವ ನೀಡಲಾಗಿದೆ. ರೈತರೇ ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು, ವಿಂಗಡಿಸಲು, ಗ್ರೇಡಿಂಗ್ ಮಾಡಲು, ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಲು ಆದ್ಯತೆ ನೀಡಲಾಗಿದೆ.  ಅಸಂಘಟಿತ ವಲಯದಲ್ಲಿ ಈಗಾಗಲೇ ಕೆಲವು ವರ್ಷಗಳಿಂದ ಸಣ್ಣ ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳನ್ನು ಪ್ರಾಥಮಿಕ ಹಂತದಲ್ಲಿ ಸಂಸ್ಕರಿಸುತ್ತಿದ್ದಾರೆ. ಈ ರೀತಿ ಪ್ರಾರಂಭಿಸಿದ ಘಟಕಗಳನ್ನು ಆಧುನಿಕ ಯಂತ್ರೋಪಕರಣಗಳ ಮೂಲಕ ಹಾಗೂ ಸರ್ಕಾರದ ಧನ ಸಹಾಯದ ಮೂಲಕ ಬಲವರ್ಧನೆಗೊಳಿಸಿ ಸಂಸ್ಕರಣಾ ಘಟಕಗಳನ್ನು, ವೇರ್‌ಹೌಸ್‌ಗಳನ್ನು, ಶೀಥಲ ಗೃಹಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉಧ್ಯಮಗಳ ಕ್ರಮಬದ್ಧಗೊಳಿಸುವ ಯೋಜನೆಯನ್ನು ೨೦೨೦-೨೧ ರಿಂದ ಐದು ವರ್ಷಗಳ ಅವಧಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ೬೦ : ೪೦ ರ ಅನುಪಾತದ ಅನುದಾನದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು  ಕೃಷಿಕರ ಆದಾಯವನ್ನು ದ್ವಿಗುಣಗೊಳಿಸಲು ಆಹಾರ ಸಂಸ್ಕರಣೆ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಗಮನಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಮುಂದಿನ ಐದು ವರ್ಷಗಳವರೆಗೆ ಆಹಾರ ಸಂಸ್ಕರಣೆಗಾಗಿ ೧೦ ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟು, ಒಟ್ಟು ೨ ಲಕ್ಷ ಆಹಾರ ಸಂಸ್ಕರಣಾ ಆಧುನಿಕ ಘಟಕಗಳನ್ನು ಪ್ರಾರಂಭಿಸಲು ಗುರಿ ಹಾಕಿಕೊಳ್ಳಲಾಗಿದೆ. ಇದರಂತೆ ಕರ್ನಾಟಕ ರಾಜ್ಯಕ್ಕೆ ೪೯೩.೬೫ ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದ್ದು, ಮುಂದಿನ ೫ ವರ್ಷಗಳಲ್ಲಿ ೧೦,೭೮೪ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಗುರಿ ನೀಡಲಾಗಿದೆ.

ಯೋಜನೆಯನ್ನು ರಾಜ್ಯದಲ್ಲಿ ಕಾರ್ಯರೂಪಕ್ಕೆ ತರಲು ಕೃಷಿ ಇಲಾಖೆಯನ್ನು ನೋಡಲ್ ಇಲಾಖೆಯೆಂದು, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿ. ಸಂಸ್ಥೆಯನ್ನು ರಾಜ್ಯದ ನೋಡೆಲ್ ಏಜೆನ್ಸಿಯೆಂದು ಹಾಗೂ ಮೈಸೂರಿನಲ್ಲಿರುವ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯನ್ನು   ತಾಂತ್ರಿಕ ಸಂಸ್ಥೆಯನ್ನಾಗಿ ಅಧಿಕೃತವಾಗಿ ನೇಮಿಸಲಾಗಿದೆ.

ಈ ಯೋಜನೆಯಲ್ಲಿ ಸರ್ಕಾರವು “ಒಂದು ಜಿಲ್ಲೆ-ಒಂದು ಉತ್ಪನ್ನ” ಮಾರ್ಗವನ್ನು ಅನುಸರಿಸುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಮಾರುಕಟ್ಟೆಯನ್ನು ಸೃಷ್ಟಿಸುವ ದೃಷ್ಟಿಯಿಂದ ಆಸಕ್ತಿಯುಳ್ಳ ಉತ್ಸಾಹಿ ಉದ್ಯಮಿಗಳು ಹಾಗೂ ಈಗಾಗಲೇ ಸಣ್ಣ ಪ್ರಮಾಣದಲ್ಲಿ ಪ್ರಾಥಮಿಕ ಹಂತದ ಆಹಾರ ಸಂಸ್ಕರಣೆಯಲ್ಲಿ ತೊಡಗಿಸಿಕೊಂಡವರಿಗೆ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಶೇ. ೩೫ ರಷ್ಟು ಸಾಲ ಸಂಪರ್ಕಿತ ಸಹಾಯ ಧನವನ್ನು ಗರಿಷ್ಟ ೧೦ ಲಕ್ಷ ರೂ.ಗಳವರೆಗೆ ಪ್ರೋತ್ಸಾಹ ಧನವಾಗಿ ನೀಡಲಾಗುತ್ತಿದೆ. ಸ್ವಸಹಾಯ ಗುಂಪುಗಳಿಗೆ ಹಾಗೂ ರೈತ ಉತ್ಪಾದಕ ಸಂಸ್ಥೆಗಳಿಗೆ ಶೇ. ೩೫ ರ ಸಾಲ ಸಂಪರ್ಕಿತ ಸಹಾಯ ಧನವನ್ನು ಒದಗಿಸಲಾಗುತ್ತದೆ. ಈ ಕುರಿತು ರಾಜ್ಯ ಸರ್ಕಾರವು ಆಹಾರ ಸಂಸ್ಕರಣೆ ಉದ್ಯಮಗಳ ಪ್ರೋತ್ಸಾಹಕ್ಕಾಗಿ ರಾಜ್ಯ ಸರ್ಕಾರದ ವತಿಯಿಂದ ಇನ್ನೂ ಶೇ. ೧೫ ರಷ್ಟು ಹೆಚ್ಚಿನ ಸಹಾಯ ಧನವನ್ನು ನೀಡಲು ೨೦೨೧-೨೨ ರ ಆಯವ್ಯದ ಭಾಷಣದಲ್ಲಿ ಘೋಷಿಸಿರುವುದನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆಯು ಚಾಲ್ತಿಯಲ್ಲಿರುತ್ತದೆ.

ಕಿರು ಉದ್ಯಮ ಸ್ಥಾಪಿಸುವವರು ಶೇ. ೧೦ ರಷ್ಟು ಹಣವನ್ನು ತಮ್ಮ ವಂತಿಕೆಯಾಗಿ ಇರಿಸಿಕೊಳ್ಳಬೇಕಾಗುತ್ತದೆ. ಅರ್ಜಿದಾರರು ಆಯಾ ಕೃಷಿ ಉತ್ಪನ್ನಗಳ ಸಂಸ್ಕರಣೆ ಕುರಿತು ತಾಂತ್ರಿಕ ಮಾಹಿತಿಯನ್ನು ಉಳ್ಳವರಾಗಿರಬೇಕಾಗುತ್ತದೆ. ಸರ್ಕಾರದಿಂದ ಉಚಿತವಾಗಿ ಈ ಕುರಿತು ತರಬೇತಿ ನೀಡಲಾಗುತ್ತದೆ. ಉತ್ಸಾಹಿ ಉದ್ದಿಮೆದಾರರು ೧೮ ವರ್ಷದ ಮೇಲ್ಪಟ್ಟವರಿರಬೇಕಾಗುತ್ತದೆ. ಸಂಸ್ಥೆಗಳಾಗಿದ್ದಲ್ಲಿ ಕನಿಷ್ಟ ೩ ವರ್ಷದ ಸಂಸ್ಕರಣಾ ಅನುಭವ ಹೊಂದಿದವರಾಗಿರಬೇಕು.

ಅರ್ಜಿ ಸಲ್ಲಿಸಬಯಸುವವರು http://mofpi.nic.in /pmfme/ ಪೋರ್ಟಲ್‌ನಲ್ಲಿ ಅರ್ಜಿ ವಿವರಗಳನ್ನು ಭರ್ತಿ ಮಾಡಬೇಕಾಗಿರುತ್ತದೆ ಅಥವಾ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಮೂಲಕ ಸಹ ಅರ್ಜಿ ವಿವರಗಳನು ಭರ್ತಿ ಮಾಡಿಸಬಹುದಾಗಿರುತ್ತದೆ. ಜಿಲ್ಲಾ ಮಟ್ಟದಲ್ಲಿ ನೇಮಿಸಲ್ಪಟ್ಟ ಸಂಪನ್ಮೂಲ ವ್ಯಕ್ತಿಗಳು ಅರ್ಜಿ ಹಾಗೂ ಯೋಜನಾ ವರದಿಯನ್ನು ಪರಿಶೀಲಿಸಿ ಜಿಲ್ಲಾ ಮಟ್ಟದ ಸಮಿತಿಗೆ ಸಲ್ಲಿಸುತ್ತಾರೆ. ಜಿಲ್ಲಾ ಮಟ್ಟದ ಸಮಿತಿಯ ಅಧ್ಯಕ್ಷರು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಾಗಿದ್ದು, ಸದರಿ ಅರ್ಜಿಗಳನ್ನು ಸಮಿತಿಯಲ್ಲಿಟ್ಟು, ಅರ್ಹ ಅರ್ಜಿಗಳನ್ನು ಆಯಾ ಜಿಲ್ಲೆಗಳಲ್ಲಿ ಸಹಾಯ ಧನ ನೀಡಲು ಫಲಾನುಭವಿಗಳು ಆಯ್ಕೆ ಮಾಡಿಕೊಂಡ ಬ್ಯಾಂಕ್‌ಗಳಿಗೆ ಸಾಲ ಮಂಜೂರಾತಿಗಾಗಿ ಕಳುಹಿಸುತ್ತಾರೆ. ಸಂಸ್ಥೆಗಳ ಗುಂಪು ಅರ್ಜಿಗಳಾಗಿದ್ದಲ್ಲಿ ಅವುಗಳನ್ನು ಜಿಲ್ಲಾ ಸಮಿತಿಯು ನೋಡಲ್ ಏಜೆನ್ಸಿಯಾದ ಕೆಪೆಕ್ ಸಂಸ್ಥೆಗೆ ವರ್ಗಾಯಿಸಲಾಗುತ್ತದೆ. ಬ್ಯಾಂಕ್‌ಗಳಿಗೆ ಹಾಗೂ ಅರ್ಜಿದಾರರಿಗೆ ಮಾಹಿತಿ ನೀಡಲು ಜಿಲ್ಲಾ ಸಂಪನ್ಮೂಲ ವ್ಯಕ್ತಿಯವರು ಸಹಕರಿಸುತ್ತಾರೆ.

ಬ್ಯಾಂಕಿನಿಂದ ಸಾಲ ಮಂಜೂರಾದ ಮೇಲೆ ಬ್ಯಾಂಕ್‌ಗಳಿಗೆ ಸಹಾಯ ಧನವನ್ನು ವರ್ಗಾಯಿಸಲಾಗುತ್ತದೆ. ಒಂದು ವೇಳೆ ಅರ್ಜಿಗಳು ಸ್ವಸಹಾಯ ಗುಂಪು ಅಥವಾ ರೈತ ಉತ್ಪಾದಕ ಸಂಸ್ಥೆಗಳಿಂದ ಗುಂಪು ಅರ್ಜಿಗಳಾದಲ್ಲಿ ಜಿಲ್ಲಾ ಮಟ್ಟದ ಸಮಿತಿಯು, ರಾಜ್ಯದ ನೋಡಲ್ ಸಂಸ್ಥೆಯಾದ ಕೆಪೆಕ್ ಸಂಸ್ಥೆಗೆ ಅರ್ಜಿ ಹಾಗೂ ಯೋಜನಾ ವರದಿಗಳನ್ನು ಸಲ್ಲಿಸುತ್ತದೆ. ತದನಂತರ ಕೆಪೆಕ್ ಸಂಸ್ಥೆಯು ಸದರೀ ಅರ್ಜಿಗಳನ್ನು ರಾಜ್ಯ ಮಟ್ಟದ ಅನುಮೋದನಾ ಸಮಿತಿ ಇವರಿಗೆ ಅನುಮೋದನೆಗೆ ಸಲ್ಲಿಸುತ್ತದೆ. ಒಂದು ವೇಳೆ ಯೋಜನಾ ವೆಚ್ಚವು ಹೆಚ್ಚಾಗಿದ್ದು, ೧೦ ಲಕ್ಷ ರೂ.ಗಳಿಗೂ ಹೆಚ್ಚು ಸಹಾಯಧನ ಬೇಕಾಗಿದ್ದಲ್ಲಿ ಸದರೀ ಅರ್ಜಿಗಳನ್ನು ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಉಧ್ಯಮಗಳ ಮಂತ್ರಾಲಯಕ್ಕೆ ಅನುಮೋದನೆಗಾಗಿ ಕಳುಹಿಸಲಾಗುವುದು.

ಸ್ವಸಹಾಯ ಗುಂಪಿನ ಸದಸ್ಯರುಗಳಿಗೆ  ಯೋಜನೆಯಲ್ಲಿ ೪೦ ಸಾವಿರ ರೂ.ಗಳ ಸೀಡ್ ಕ್ಯಾಪಿಟಲ್ ಸಪೋರ್ಟ್ ಪಡೆಯಲೂ ಅವಕಾಶವಿರುತ್ತದೆ. ಈ ಸೀಡ್ ಹಣವನ್ನು ರಾಜ್ಯ ಮಟ್ಟದ ಸ್ವಸಹಾಯ ಸಂಘಗಳ ಫೆಡರೇಷನ್‌ಗಳಿಗೆ ಗ್ರಾಂಟ್ ಎಂದು ನೀಡಲಾಗುತ್ತದೆ. ಫೆಡರೇಷನ್‌ಗಳು ಮುಂದುವರೆದು ಸ್ವಸಹಾಯ ಗುಂಪಿನ ಸದಸ್ಯರುಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವಾಗಿ ನೀಡುತ್ತವೆ. ಈ ಹಣದಲ್ಲಿ ಸ್ವಸಹಾಯ ಗುಂಪಿನ ಸದಸ್ಯರುಗಳು ಸಂಸ್ಕರಣೆಗೆ ಅವಶ್ಯವಿರುವ ಸಣ್ಣ ಯಂತ್ರೋಪಕರಣಗಳ ಖರೀದಿಗಾಗಿ ಅಥವಾ ವರ್ಕಿಂಗ್ ಕ್ಯಾಪಿಟಲ್ ಆಗಿ ಬಳಸಿಕೊಳ್ಳಬಹುದಾಗಿರುತ್ತದೆ. ಈ ರೈತ ಸಂಸ್ಥೆಗಳು ಅಭಿವೃದ್ಧಿ ಪಡಿಸಿದ ಪದಾರ್ಥಗಳನ್ನು ಮಾರಾಟ ಮಾಡಲು ಹಾಗೂ ಬ್ರಾಂಡಿಂಗ್ ಮಾಡಲೂ ಕೂಡಾ ಯೋಜನಾ ವೆಚ್ಚದ ಶೇ. ೫೦ ರಷ್ಟು ಅನುದಾನವನ್ನು ಸಹಾಯ ಧನವಾಗಿ ಪಡೆಯಲು ಅವಕಾಶ ಮಾಡಿಕೊಡಲಾಗಿರುತ್ತದೆ.

ರಾಜ್ಯದಲ್ಲಿ ಕಿರು ಆಹಾರ ಉದ್ದಿಮೆದಾರರನ್ನು ಬಲವರ್ಧನೆಗೊಳಿಸಲು ಹಾಗೂ ಸಂಘಟಿಸಲು ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉಧ್ಯಮಗಳ ಕ್ರಮಬದ್ಧಗೊಳಿಸುವ ಯೋಜನೆ ಒಂದು ಸುವರ್ಣಾವಕಾಶವನ್ನು ಕಲ್ಪಿಸುತ್ತದೆ. ಈ ಯೋಜನೆಯಡಿಯಲ್ಲಿ ಈಗಾಗಲೇ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಿಗೆ ೧೨ ಇನ್‌ಕ್ಯೂಬೆಷನ್ ಕೇಂದ್ರಗಳು ಮಂಜೂರಾಗಿವೆ. ಹಂಚಿಕೆಯಾದ ೧೯ ಕೋಟಿ ರೂ.ಗಳ ಪೈಕಿ ಈಗಾಗಲೇ ೯.೭೩ ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿರುತ್ತದೆ. ಇದಲ್ಲದೆ ಈ ಯೋಜನೆಯಡಿ ಈಗಾಗಲೇ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಗುರುತಿಸಿದ ೧೭೫೦ ಸ್ವಸಹಾಯ ಗುಂಪಿನ ಅರ್ಹ ಸದಸ್ಯರಿಗೆ, ಪ್ರತಿ ಸದಸ್ಯರಿಗೆ ೪೦,೦೦೦ ರೂ.ಗಳಂತೆ ಈಗಾಗಲೇ ೬.೮೬ ಕೋಟಿ ರೂ.ಗಳ ಪ್ರೋತ್ಸಾಹ ಧನವನ್ನು ಫೆಡರೇಷನ್‌ಗಳ ಮೂಲಕ ನೀಡಲಾಗಿದೆ. ಈವರೆಗೆ ಒಟ್ಟು ೫೮೮ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಅರ್ಜಿಗಳು ಪೋರ್ಟಲ್‌ನಲ್ಲಿ ಸಲ್ಲಿಕೆಯಾಗಿರುತ್ತವೆ. ಜಿಲ್ಲಾ ಮಟ್ಟದ ಸಮಿತಿಯ ಅನುಮೋದನೆಯಿಂದ ಬ್ಯಾಂಕುಗಳಿಗೆ ಸಲ್ಲಿಸಿದ ಅರ್ಜಿಗಳ ಸಂಖ್ಯೆ ೪೨೬ ಆಗಿದ್ದು, ಈ ಪೈಕಿ ಈಗಾಗಲೇ ೬೭ ಘಟಕಗಳಿಗೆ ಸಾಲ ಮಂಜೂರಾಗಿರುತ್ತದೆ.

೨೦೨೧-೨೨ ನೇ ಸಾಲಿನಲ್ಲಿ ರಾಜ್ಯದ ೩೦ ಜಿಲ್ಲೆಗಳಿಂದ ಒಟ್ಟು ಆಯ್ಕೆ ಮಾಡಿದ ೫೦೦ ಕಿರು ಆಹಾರ ಉದ್ದಿಮೆಗಳನ್ನು ಪ್ರಾರಂಭಿಸಲು ಆಸಕ್ತಿಯುಳ್ಳ ಹಾಗೂ ರೈತ ಉತ್ಪಾದಕ ಸಂಸ್ಥೆಯ ಸದಸ್ಯರುಗಳಿಗೆ ಮೈಸೂರಿನಲ್ಲಿರುವ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಿAದ ಒಂದು ವಾರದ ತರಬೇತಿಯನ್ನು ನೀಡಲು ಕಾರ್ಯಕ್ರಮವನ್ನು ಹಾಕಿಕೊಂಡಿದ್ದು, ಈಗಾಗಲೇ ೩೫೦ ಫಲಾನುಭವಿಗಳಿಗೆ ತರಬೇತಿ ಒದಗಿಸಲಾಗಿದೆ. ರಾಷ್ಟç ಮಟ್ಟದಲ್ಲಿ ಯೋಜನೆಯ ಮೊದಲನೇ ವರ್ಷದ ಪ್ರಗತಿಯನ್ನು ಗಮನಿಸಿದಾಗ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿರುವುದು ಸಂತೋಷದ ವಿಷಯವಾಗಿರುತ್ತದೆ.

ಈ ಯೋಜನೆಯಲ್ಲಿ ಗುರುತಿಸಿದ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಗೆ ಸೂಕ್ತ ತರಬೇತಿ ನೀಡುವುದು, ಈ ಯೋಜನೆಯ ಮಾರ್ಗಸೂಚಿಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳುವುದು, ಮೇಲಿಂದ ಮೇಲೆ ಮಾಧ್ಯಮಗಳ ಮೂಲಕ ಹಾಗೂ ಭಿತ್ತಿ ಪತ್ರಗಳ ಮೂಲಕ ಪ್ರಚಾರ ಕೈಗೊಳ್ಳುವುದು ಮತ್ತು ರಾಜ್ಯಕ್ಕೆ ಯೋಜನೆಯಲ್ಲಿ ನೀಡಿದ ಎಲ್ಲಾ ಘಟಕಗಳ ಗುರಿಯನ್ನು ಐದು ವರ್ಷಗಳಲ್ಲಿ ಯಶಸ್ವಿಯಾಗಿ ತಲುಪಿದಲ್ಲಿ ತೃಪ್ತಿಕರ ಪ್ರಗತಿಯೊಂದಿಗೆ ಕರ್ನಾಟಕ ರಾಜ್ಯವು ಆಹಾರ ಸಂಸ್ಕರಣೆಯಲ್ಲಿ ಮುಂಚೂಣಿಯಲ್ಲಿ ಕಾಣಬಹುದಾಗಿದೆ. ಒಟ್ಟಾರೆ ರಾಜ್ಯದಲ್ಲಿ ಆಹಾರ ಉಧ್ಯಮದ ಬೆಳವಣಿಗೆ ವಿಶೇಷವಾಗಿ ಆಹಾರ ಸಂಸ್ಕರಣೆ ಘಟಕಗಳನ್ನು ಸ್ಥಾಪಿಸುವಲ್ಲಿ ಹಾಗೂ ಕಿರು ಆಹಾರ ಉದ್ದಿಮೆದಾರರ ಬಲವರ್ಧನೆಗೆ ಈ ಯೋಜನೆಯು ತುಂಬ ಸಹಕಾರಿಯಾಗಿರುತ್ತದೆ.

ಲೇಖಕರ ಪರಿಚಯ:

ಡಾ. ಎ.ಬಿ. ಪಾಟೀಲ್‌ ಅವರು ರಾಷ್ಟ್ರದ ಖ್ಯಾತ ಕೃಷಿವಿಜ್ಞಾನಿಗಳ ಸಾಲಿಗೆ ಸೇರಿದವರು. ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ಘಟಕದ ನಿರ್ದೇಶಕರಾಗಿದ್ದರು. ಆ ಅವಧಿಯಲ್ಲಿ ವಿಶ್ವವಿದ್ಯಾಲಯದ ಸಂಶೋಧನೆಗಳನ್ನು ರೈತರಿಗೆ ವಿಶೇಷವಾಗಿ ಸಣ್ಣ – ಮಧ್ಯಮ ರೈತರಿಗೆ ತಲುಪಿಸಲು ಇವರು ಹಮ್ಮಿಕೊಂಡ ಕಾರ್ಯಕ್ರಮಗಳು ಮಾದರಿಯಾಗಿವೆ. ಇವರ ಸೇವೆಯನ್ನು ಗಮನಿಸಿ ಕರ್ನಾಟಕ ಸರ್ಕಾರ ಇವರನ್ನು ಕೃಷಿ ಸಚಿವರ ವಿಶೇಷ ಸಲಹೆಗಾರರನ್ನಾಗಿ ನೇಮಿಸಿದೆ. ಪಾಟೀಲರು ಬರೆಯುವ ಲೇಖನಗಳು “ಕೃಷಿ ದೃಷ್ಟಿಕೋನ” ಹೆಸರಿನಲ್ಲಿ ಪ್ರತಿ ಸೋಮವಾರ ಪ್ರಕಟವಾಗುತ್ತದೆ.

Share