Connect with us


      
ದೇಶ

ಸುದೀರ್ಘ ಹೋರಾಟದ ಹಾದಿಯಿಂದ ಮನೆಯತ್ತ ತೆರಳುತ್ತಿರುವ ರೈತರು

Vanitha Jain

Published

on

ನವದೆಹಲಿ, ಡಿಸೆಂಬರ್ 11(ಯು.ಎನ್.ಐ) ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ವಿರೋಧಿ ಕಾಯ್ದೆಗಳ ರದ್ದುಗೊಳಿಸುವಂತೆ ದೆಹಲಿಯ ಸಿಂಘು, ಟಿಕ್ರಿ ಮತ್ತು ಘಾಜಿಪುರ ಗಡಿಗಳಲ್ಲಿ ಸುದೀರ್ಘ 15 ತಿಂಗಳು ಹೋರಾಟ ನಡೆಸಿದ್ದ ರೈತರು ಇಂದು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.

ದೆಹಲಿ ಗಡಿಭಾಗಗಳಲ್ಲಿ ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಮನೆಗಳನ್ನು ತೆರವು ಮಾಡುತ್ತಿರುವ ಪಂಜಾಬ್, ಹರಿಯಾಣ ರೈತರು ವಿಜಯಯಾತ್ರೆ ನಡೆಸುವ ಮೂಲಕ ತಮ್ಮ ಊರನ್ನು ತಲುಪಲಿದ್ದಾರೆ.

ರೈತರು ಬರುವ ಹಾದಿಯನ್ನೇ ಎದುರು ನೋಡುತ್ತಿರುವ ಪ್ರತಿಯೊಬ್ಬರು ಟ್ರ್ಯಾಕ್ಟರ್ ಮೂಲಕ ತಮ್ಮ ಮನೆಗಳನ್ನು ತಲುಪುತ್ತಿರುವ ರೈತರಿಗೆ ಸ್ವಾಗತ ಕೋರಲು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿಶೇಷ ಏರ್ಪಾಡುಗಳನ್ನು ಮಾಡಿಕೊಳ್ಳಲಾಗಿದೆ.

ಶುಕ್ರವಾರ ವಿಜಯಯಾತ್ರೆ ನಡೆಸಲು ರೈತರು ಯೋಜಿಸಿಕೊಂಡಿದ್ದರು. ಆದರೆ ತಮಿಳುನಾಡಿನ ಕುನೂರಿನಲ್ಲಿ ನಡೆದ ವಿಮಾನ ಪತನದಲ್ಲಿ ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ 13 ಮಂದಿ ನಿಧನ ಹಿನ್ನೆಲೆ ಮುಂದೂಡಲಾಯಿತು.

ಈ ಕುರಿತು ಮಾತನಾಡಿದ ರಾಕೇಶ್ ಟಿಕಾಯತ್, ರೈತರು ಇಂದು ತಮ್ಮ ತಮ್ಮ ಸ್ಥಳಗಳನ್ನು ಖಾಲಿ ಮಾಡಲಿದ್ದಾರೆ. ಈ ಹೋರಾಟದ ಯಶಸ್ವಿಗೆ ಸಹಕರಿಸಿದವರೊಟ್ಟಿಗೆ ಮಾತನಾಡುತ್ತೇವೆ, ಭೇಟಿ ಮಾಡುತ್ತೇವೆ. ಅವರ ಸಲುವಾಗಿ ಪ್ರಾರ್ಥನೆಗೈಯ್ಯುತ್ತೇವೆ. ಜನರು ಈಗಾಗಲೇ ಗಡಿಪ್ರದೇಶಗಳನ್ನು ತೆರವುಗೊಳಿಸುವ ಪ್ರಯತ್ನದಲ್ಲಿದ್ದಾರೆ. ಇದು ತೆರವಾಗಲು 4 ರಿಂದ 5 ದಿನಗಳು ತೆಗೆದುಕೊಳ್ಳುತ್ತದೆ. ನಾನು ಡಿಸೆಂಬರ್ 15ರಂದು ಹೊರಡುತ್ತೇನೆ ಎಂದು ಹೇಳಿದರು.

ವಿವಾದಾತ್ಮಕ ಕೃಷಿ ಕಾನೂನುಗಳನ್ನು ಚಳಿಗಾಲದ ಅಧಿವೇಶನದಲ್ಲಿ ರದ್ದುಗೊಳಿಸಿರುವ ಕೇಂದ್ರ ಸರ್ಕಾರ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದಾಗಿ ರೈತರಿಗೆ ಲಿಖಿತ ಭರವಸೆ ನೀಡಿದ ನಂತರವೇ ಗಡಿಪ್ರದೇಶಗಳನ್ನು ತೆರವು ಗೊಳಿಸುವ ನಿರ್ಣಯ ತೆಗೆದುಕೊಂಡರು.

Share