Connect with us


      
ದೇಶ

ಬಂಗಾಳ ವಿಧಾನಸಭೆಯಲ್ಲಿ ಮಾರಾಮಾರಿ: ಬಿಜೆಪಿ ಐವರು ಶಾಸಕರು ಅಮಾನತು

Iranna Anchatageri

Published

on

ಕೋಲ್ಕತ್ತಾ: ಮಾರ್ಚ್ 28 (ಯು.ಎನ್.ಐ.) ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಶಾಸಕರ ಮಧ್ಯೆ ಘರ್ಷಣೆ ನಡೆದಿದೆ. ಎರಡೂ ಪಕ್ಷಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಟಿಎಂಸಿ ಶಾಸಕ ಅಸಿತ್ ಮಜುಂದಾರ್ ಮತ್ತು ಬಿಜೆಪಿಯ ಮನೋಜ್ ತಿಗ್ಗಾ ಪರಸ್ಪರ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಘಟನೆಯ ವೇಳೆ ಟಿಎಂಸಿ ಮುಖಂಡರು ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ, ಬಂಗಾಳದ ವಿರೋಧ ಪಕ್ಷದ ನಾಯಕ ಶುಭೇಂದು ಅಧಿಕಾರಿ ಸೇರಿದಂತೆ ಐವರು ಬಿಜೆಪಿ ಶಾಸಕರನ್ನು ಸ್ಪೀಕರ್ ಅಮಾನತುಗೊಳಿಸಿದ್ದಾರೆ.

ಯಾವ ಕಾರಣಕ್ಕೆ ವಿವಾದ?
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಇಂದು ಬೆಳಗ್ಗೆಯಿಂದಲೇ ಕಾನೂನು ಸುವ್ಯವಸ್ಥೆ ವಿಚಾರವಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ಪ್ರತಿಪಕ್ಷಗಳು ಆಗ್ರಹಿಸಿದವು. ಇದರಿಂದ ಕೆರಳಿದ ಟಿಎಂಸಿ ಶಾಸಕರು, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಉಭಯ ಪಕ್ಷಗಳ ನಡುವಿನ ವಾಗ್ವಾದ ಜಗಳಕ್ಕೆ ತಿರುಗಿತು. ಬಿರ್‌ಭೂಮ್‌ನ ಹಿಂಸಾಚಾರ ಕುರಿತು ಚರ್ಚೆಗೆ ಒತ್ತಾಯಿಸಿರುವುದಾಗಿ ಬಿಜೆಪಿ ಶಾಸಕರು ಆರೋಪಿಸಿದರು, ಬಳಿಕ ಟಿಎಂಸಿ ಶಾಸಕರು ಗದ್ದಲ ನಡೆಸಿದರು. ಈ ಮಧ್ಯೆ, ಸ್ಪೀಕರ್ ಕ್ರಮ ಕೈಗೊಂಡು ಮುಂದಿನ ಆದೇಶದವರೆಗೆ ಐವರು ಶಾಸಕರನ್ನು ಅಮಾನತುಗೊಳಿಸಿದರು. ಅಮಾನತುಗೊಂಡಿರುವ ನಾಯಕರಲ್ಲಿ ಶುಭೇಂದು ಅಧಿಕಾರಿ, ಮನೋಜ್ ತಿಗ್ಗಾ, ನರಹರಿ ಮಹ್ತೋ, ಶಂಕರ್ ಘೋಷ್, ದೀಪಕ್ ಬರ್ಮನ್ ಹೆಸರು ಸೇರಿದೆ. ಇದರ ಬೆನ್ನಲ್ಲೇ ಸದನದೊಳಗೆ ತೃಣಮೂಲ ಕಾಂಗ್ರೆಸ್ ಶಾಸಕರು ತಮ್ಮ ಪಕ್ಷದ ಹಲವು ಶಾಸಕರ ಮೇಲೆ ಬಿಜೆಪಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಶುಭೇಂದು ಅಧಿಕಾರಿ ನೇತೃತ್ವದಲ್ಲಿ ಸುಮಾರು 25 ಬಿಜೆಪಿ ಶಾಸಕರು ವಿಧಾನಸಭೆಯಿಂದ ಹೊರನಡೆದರು.

ಈ ಎಲ್ಲ ಘಟನೆ ಬಳಿಕ ಮಾತನಾಡಿದ ಬಿಜೆಪಿ ನಾಯಕ ಶುಭೇಂದು ಅಧಿಕಾರಿ, ಹಲ್ಲೆ ಘಟನೆ ಮತ್ತು ಸ್ಪೀಕರ್ ಅಮಾನತುಗೊಳಿಸಿದ ನಿರ್ಧಾರದ ಬಗ್ಗೆ ಟಿಎಂಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸದನದ ಕೊನೆಯ ದಿನವಾದ ನಾವು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದ್ದೆವು, ಅದನ್ನು ಮಾಡದ ನಂತರ ನಾವು ಸಂವಿಧಾನಾತ್ಮಕ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದೆವು, ನಂತರ ಸಿವಿಲ್ ಡ್ರೆಸ್ ಧರಿಸಿದ್ದ ಪೊಲೀಸ್ ಸಿಬ್ಬಂದಿ ಮತ್ತು ಟಿಎಂಸಿ ಶಾಸಕರು ನಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಹೇಳಿದರು. “ನಾವು ತೃಣಮೂಲ ಕಾಂಗ್ರೆಸ್ನ ಗೂಂಡಾಗಳು ಮತ್ತು ಪೊಲೀಸರ ವಿರುದ್ಧ ಪಾದಯಾತ್ರೆ ನಡೆಸುತ್ತೇವೆ, ನಾವು ಈ ಬಗ್ಗೆ ಸ್ಪೀಕರ್ ಬಳಿಗೂ ಹೋಗುತ್ತೇವೆ. ಬಂಗಾಳದ ಪರಿಸ್ಥಿತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು” ಎಂದು ಅವರು ಹೇಳಿದರು.

“ಶಾಸಕರು ಸದನದ ಒಳಗೂ ಸುರಕ್ಷಿತವಾಗಿಲ್ಲ… ಕಾನೂನು ಸುವ್ಯವಸ್ಥೆ ವಿಚಾರವಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತನಾಡುತ್ತಿದ್ದಂತೆ ತೃಣಮೂಲ ಶಾಸಕರ ವಿಪ್ ಮನೋಜ್ ತಿಗ್ಗಾ ಸೇರಿದಂತೆ ನಮ್ಮ 8-10 ಶಾಸಕರನ್ನು ಥಳಿಸಿದ್ದಾರೆ” ಎಂದು ಅಧಿಕಾರಿ ತಿಳಿಸಿದ್ದಾರೆ.

ಟಿಎಂಸಿ ಹೇಳಿಕೆ ಏನು?
ಇದೇ ವೇಳೆ, ವಿಧಾನಸಭೆಯಲ್ಲಿ ಅರಾಜಕತೆ ಸೃಷ್ಟಿಸಲು ಬಿಜೆಪಿ ನಾಟಕವಾಡುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಹಾಗೂ ರಾಜ್ಯ ಸಚಿವ ಫಿರ್ಹಾದ್ ಹಕೀಮ್ ಸುದ್ದಿಗಾರರಿಗೆ ತಿಳಿಸಿದ್ದಾರೆ. “ಸದನದಲ್ಲಿದ್ದ ನಮ್ಮ ಕೆಲವು ಶಾಸಕರು ಗಾಯಗೊಂಡಿದ್ದಾರೆ. ಬಿಜೆಪಿ ನಡೆಸಿದ ಈ ಕೃತ್ಯವನ್ನು ನಾವು ಖಂಡಿಸುತ್ತೇವೆ” ಎಂದರು.

Share