Connect with us


      




ಕರ್ನಾಟಕ

ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ; ವಿಧಾನಸಭೆ ಶಾಸಕರ ಕಿಚ್ಚು

Iranna Anchatageri

Published

on

ಬೆಳಗಾವಿ (ಸುವರ್ಣ ವಿಧಾನಸೌಧ) ಡಿಸೆಂಬರ್ 16 (ಯು.ಎನ್.ಐ.) ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಧ್ವಜಕ್ಕೆ ಅವಮಾನ ಮಾಡಿರುವ ಪ್ರಕರಣ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಈ ವೇಳೆ ಜೆಡಿಎಸ್ ಶಾಸಕರು ಬಾವುಟ ಹಿಡಿದು ಘೋಷಣೆ ಕೂಗಿದ್ದರಿಂದ 10 ನಿಮಿಷಗಳ ಕಾಲ ಸದನದ ಕಲಾಪವನ್ನು ಮುಂದೂಡಲಾಯಿತು.

ಮಹಾರಾಷ್ಟ್ರದಲ್ಲಿ ಕಳೆದ ಮಂಗಳವಾರ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟಿರುವ ವಿಚಾರವನ್ನು ಮಳವಳ್ಳಿ ಜೆಡಿಎಸ್ ಶಾಸಕ ಅನ್ನದಾನಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಪ್ರತಿ ವರ್ಷ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಎಂಇಎಸ್ ಪುಂಡರ ಪುಂಡಾಟ ಹೆಚ್ಚಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎರಡು ದಿನಗಳ ಹಿಂದೆ ಕೊಲ್ಲಾಪುರದಲ್ಲಿ ಕನ್ನಡ ಬಾವುಟಕ್ಕೆ ಎಂಇಎಸ್ ಸದಸ್ಯರು ಬೆಂಕಿ ಇಟ್ಟಿದ್ದಾರೆ. ಆದರೆ ಬೆಳಗಾವಿ ವಿಧಾನಸಭೆಯಲ್ಲಿ ನಾವು ಮೌನ ಪ್ರೇಕ್ಷಕರಾಗಿ ನೋಡುತ್ತಿದ್ದೇವೆ. ಈ ಧ್ವಜ ಕನ್ನಡಾಂಬೆ. ಈ ನನ್ನ ತಾಯಿಗೆ ಬೆಂಕಿ ಹಚ್ಚಿದ್ದಾರೆ. ಮಹಾರಾಷ್ಟ್ರ ಸರ್ಕಾರ ಏನು ಮಾಡುತ್ತಿದೆ? ಮಂಗಳವಾರ ಬೆಂಕಿ ಇಟ್ಟಿದ್ದಾರೆ ಇಂದು ಗುರುವಾರ ಮನಸಿಗೆ ತುಂಬಾ ನೋವಾಗಿದೆ ಎಂದು ಆಕ್ರೋಶ ಹೊರ ಹಾಕಿದರು.

8 ಸಾಹಿತಿಗಳು ಜ್ಞಾನ ಪೀಠ ಪಡೆದ ರಾಜ್ಯ ಇದು. ಆದರೆ ನಾವೆಲ್ಲ ಮೌನವಹಿಸಿದ್ದೇವೆ. ಉತ್ತಮ ಸಂಸ್ಕೃತಿ ಉಳ್ಳಂತ ಜನರನ್ನು ಎಂಇಎಸ್ ಸದಸ್ಯರು ಪದೇ ಪದೇ ಕೆರಳಿಸುವಂತೆ ಕೆಲಸ ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವಾಗಲೇ ಎಂಇಎಸ್ ಕನ್ನಡಿಗರನ್ನು ಕೆಣಕುವ ಕಾರ್ಯಕ್ಕೆ ಕೈ ಹಾಕುತ್ತಾರೆ. ಕನ್ನಡಿಗರಾದ ನಾವು ಯಾವುದೇ ರಾಜ್ಯದ, ಯಾವುದೇ ಧರ್ಮದ ಭಾವನೆಗಳಿಗೆ ನೋವು ಮಾಡುವದಿಲ್ಲ.. ಸೌಮ್ಯ ಜೀವಿಗಳಾದ ನಮಗೆ ಇಂದು ಬಹಳಷ್ಟು ನೋವಾಗಿದೆ. ಪತ್ರಿಕೆಗಳಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟಿರುವ ಮುಖಪಟದಲ್ಲಿ ಪ್ರಕಟಿಸಲಾಗಿದೆ. ನಮ್ಮ ರಾಜ್ಯ ಬೇರೆ ರಾಜ್ಯಗಳಿಗೆ ಕುಡಿಯಲು ನೀರು ಕೊಡುತ್ತದೆ ಎಂದು ಹೇಳಿದ ಶಾಸಕ ಅನ್ನದಾನಿ, ಸರ್ಕಾರದ ಈ ಸಂದರ್ಭದಲ್ಲಿ ಯಾವ ಕ್ರಮಕೈಗೊಳ್ಳಲಿದೆ ಎಂದು ಹೇಳಿ, ಸದನದ ಬಾವಿಗೆ ಆಗಮಿಸಿದರು. ಕನ್ನಡ ಧ್ವಜದೊಂದಿಗೆ ಕನ್ನಡಿಗರಿಗೆ ಅವಮಾನವಾಗಿದೆ ಎಂದು ಸದನದ ಬಾವಿಯಲ್ಲಿ ಘೋಷಣೆ ಕೂಗಿದರು. ಶಾಸಕ ಅನ್ನದಾನಿ ಅವರೊಂದಿಗೆ ಇತರ ಸದಸ್ಯರು ಬೆಂಬಲ ನೀಡಿ, ಸಭಾಧ್ಯಕ್ಷರ ಪೀಠದ ಮುಂದೆ ಘೋಷಣೆ ಕೂಗಲಾರಂಭಿಸಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ರಾಜಕಾರಣ ಮಾಡುತ್ತಿದ್ದಾರೆ ಎಂದು ಸಚಿವ ಈಶ್ವರಪ್ಪ ಆರೋಪಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ಸುವರ್ಣಸೌಧದ ಹೊರಗೆ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು, ಟ್ರ್ಯಾಕ್ಟರ್ ನಲ್ಲಿ ಸುವರ್ಣ ಸೌಧಕ್ಕೆ ಬರಲು ಅನುಮತಿ ಕೇಳುತ್ತಿದ್ದಾರೆ. ಆದರೆ, ಭದ್ರತಾ ಸಿಬ್ಬಂದಿ ಒಳಗಡೆ ಬಿಡುತ್ತಿಲ್ಲ. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದು ಹೇಳಿ ಸಭೆಯನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.

Share