Connect with us


      




ದೇಶ

ಮಧ್ಯಪ್ರದೇಶದಲ್ಲಿ ಹಿಂಸಾಚಾರ ನಡೆದು 8 ದಿನದ ಬಳಿಕ ಮೊದಲ ಸಾವಿನ ವರದಿ

Lakshmi Vijaya

Published

on

ಇಂದೋರ್, (ಮಧ್ಯಪ್ರದೇಶ): ಏಪ್ರಿಲ್ 18 (ಯು.ಎನ್.ಐ.) ರಾಮನವಮಿ ಮೆರವಣಿಗೆ ವೇಳೆ ಮಧ್ಯಪ್ರದೇಶದ ಖಾರ್ಗೋನ್ ನಲ್ಲಿ ನಡೆದ ಹಿಂಸಾಚಾರ ಘಟನೆಯಲ್ಲಿ ಮೊದಲ ಸಾವಿನ ವರದಿಯಾಗಿದೆ. ಘರ್ಷಣೆ ನಡೆದ ಎಂಟು ದಿನಗಳ ನಂತರ ಶವ ಪತ್ತೆಯಾಗಿದೆ.

ಏಪ್ರಿಲ್ 10 ರ ಹಿಂಸಾಚಾರದ ಬಳಿಕ 30 ವರ್ಷ ವಯಸ್ಸಿನ ಇಬಾರೀಷ್ ಖಾನ್ ಕಾಣೆಯಾಗಿದ್ದರು. ಅವರ ಕುಟುಂಬವು ಆತನನ್ನು ಹುಡುಕುತಿತ್ತು. ಆದರೆ ನಿನ್ನೆ ತಡರಾತ್ರಿ, ಖಾರ್ಗೋನ್‌ನಿಂದ ಸುಮಾರು 120 ಕಿಮೀ ದೂರದಲ್ಲಿರುವ ಇಂದೋರ್‌ನಲ್ಲಿರುವ ಎಂವೈ ಆಸ್ಪತ್ರೆಯ ಶವಾಗಾರದಲ್ಲಿ ಇಬರೀಶ್ ಖಾನ್ ಅವರ ಕುಟುಂಬವು ಅವರ ದೇಹವನ್ನು ಗುರುತಿಸಿದೆ. ಪೊಲೀಸರು ಸಾವನ್ನು ಮರೆಮಾಚಲು ಯತ್ನಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.ಘರ್ಷಣೆ ಬಳಿಕ ನಾಪತ್ತೆಯಾಗಿದ್ದ ಇಬರೀಶ್ ಖಾನ್ ಪತ್ತೆಗೆ ಆತನ ಕುಟುಂಬಸ್ಥರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.

ಖಾರ್ಗೋನ್‌ನಲ್ಲಿ ಫ್ರೀಜರ್ ಸೌಲಭ್ಯಗಳಿಲ್ಲದ ಕಾರಣ ಶವ ಇಂದೋರ್‌ನಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ. ಖಾರ್ಗೋನ್‌ನ ಆನಂದ್ ನಗರ ಪ್ರದೇಶದಲ್ಲಿ ಕೋಮುಗಲಭೆಯ ಮರುದಿನ ಅಪರಿಚಿತ ಶವ ಪತ್ತೆಯಾಗಿತ್ತು. ತಲೆಗೆ ಪೆಟ್ಟಾಗಿ ಇಬರೀಶ್ ಮೃತಪಟ್ಟಿದ್ದರು. ನಿನ್ನೆ ಅವರ ಮೃತದೇಹವನ್ನು ಕುಟುಂಬದವರು ಗುರುತಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಸ್ಥಳೀಯ ಪೊಲೀಸರ ಪ್ರಕಾರ, ಘರ್ಷಣೆಯ ರಾತ್ರಿ ಇಬಾರೀಷ್ ಖಾನ್ ಅವರನ್ನು ಏಳು-ಎಂಟು ಜನರು ಕೊಲೆ ಮಾಡಿದ್ದಾರೆ. ಹಿಂಸಾಚಾರ ನಡೆದ ನಾಲ್ಕು ದಿನಗಳ ನಂತರ, ಏಪ್ರಿಲ್ 14 ರಂದು ತಡವಾಗಿ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.

ಖಾನ್ ಅವರ ದೇಹವನ್ನು ಇಂದೋರ್‌ನ ಎಂವೈ ಆಸ್ಪತ್ರೆಯಲ್ಲಿ ಫ್ರೀಜರ್‌ನಲ್ಲಿ ಇರಿಸಲಾಗಿತ್ತು. ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಇಂದು ಮುಂಜಾನೆ ಖಾರ್ಗೋನ್ ಗೆ ತರಲಾಯಿತು.

 

 

Share