Connect with us


      
ದೇಶ

ಒಮೈಕ್ರಾನ್ ಪತ್ತೆ ಮಾಡುವ ಮೊದಲ ಕಿಟ್‌ಗೆ ಐಸಿಎಂಆರ್‌ನಿಂದ ಅನುಮೋದನೆ

UNI Kannada

Published

on

OMISURE FIRSTOMICRON TEST KIT

ನವದೆಹಲಿ : ಜನವರಿ 04 (ಯು.ಎನ್.ಐ.) ಕರೋನಾದ ಹೊಸ ರೂಪಾಂತರವಾದ ಒಮೈಕ್ರಾನ್ ಅತಿ ವೇಗವಾಗಿ ಹರಡುತ್ತಿದೆ. ಈ ನಡುವೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹತ್ವದ ನಿರ್ಧಾರ ಕೈಗೊಂಡಿದೆ. ಐಸಿಎಂಆರ್ ಮೊದಲ ಒಮೈಕ್ರಾನ್ ಪತ್ತೆ ಕಿಟ್ ಅನ್ನು ಅನುಮೋದಿಸಿದೆ. ಇದನ್ನು ಟಾಟಾ ಮೆಡಿಕಲ್ ಸಿದ್ಧಪಡಿಸಿದ್ದು, ಇದರ ಹೆಸರು “ಓಮೈಸ್ಯೂರ್” (Omisure) ಎಂದಾಗಿದೆ.

ಮೂಲಗಳ ಪ್ರಕಾರ ಮುಂಬೈನ ಟಾಟಾ ಮೆಡಿಕಲ್ (ಟಾಟಾ ಮೆಡಿಕಲ್ & ಡಯಾಗ್ನೋಸ್ಟಿಕ್ಸ್) ಕಿಟ್ ಅನ್ನು ಡಿಸೆಂಬರ್ 30 ರಂದು ಅನುಮೋದಿಸಲಾಗಿದ್ದು, ಅದರ ಮಾಹಿತಿಯು ಈಗ ಮುನ್ನೆಲೆಗೆ ಬಂದಿದೆ. ಸದ್ಯಕ್ಕೆ, ದೇಶದಲ್ಲಿ ಒಮೈಕ್ರಾನ್ ಪತ್ತೆಹಚ್ಚಲು ಮತ್ತೊಂದು ಕಿಟ್ ಅನ್ನು ಬಳಸಲಾಗುತ್ತಿದೆ. ಆ ಮಲ್ಟಿಪ್ಲೆಕ್ಸ್ ಕಿಟ್ ಅನ್ನು ಅಮೆರಿಕದ ಥರ್ಮೋ ಫಿಶರ್ ಮಾರಾಟ ಮಾಡುತ್ತಿದೆ. ಈ ಕಿಟ್ S-ಜೀನ್ ಟಾರ್ಗೆಟ್ ಫೇಲ್ಯೂರ್ (SGTF) ತಂತ್ರವನ್ನು ಬಳಸಿಕೊಂಡು ಒಮೈಕ್ರಾನ್ ಅನ್ನು ಪತ್ತೆ ಮಾಡುತ್ತದೆ. ಈಗ ಟಾಟಾ ಅನುಮೋದಿಸಿದ ಕಿಟ್‌ನ ಹೆಸರು ಟಾಟಾ ಎಂಡಿ ಚೆಕ್ ಆರ್‌ಟಿ-ಪಿಸಿಆರ್ ಓಮೈಸ್ಯೂರ್.

ದೇಶದಲ್ಲಿ ವೇಗವಾಗಿ ಹೆಚ್ಚುತ್ತಿರುವ ರೂಪಾಂತರಿ ಒಮೈಕ್ರಾನ್, ಇದನ್ನು ಡೆಲ್ಟಾ ಅಥವಾ ಡೆಲ್ಟಾ ಪ್ಲಸ್‌ನಂತೆ ಮಾರಣಾಂತಿಕವೆಂದು ಪರಿಗಣಿಸಲಾಗುವುದಿಲ್ಲಾವಾದರೂ ಇದರ ಪಸರಿಸುವಿಕೆಯ ತೀವ್ರತೆ ಹೆಚ್ಚೇ ಆಗಿದೆ. ದೇಶದಲ್ಲಿ ಕಳೆದ ಭಾನುವಾರದವರೆಗೆ ಒಟ್ಟು ಒಮೈಕ್ರಾನ್ ಪ್ರಕರಣಗಳ ಸಂಖ್ಯೆ 1,892 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಅತಿ ಹೆಚ್ಚು 568 ಮತ್ತು 382 ಒಮೈಕ್ರಾನ್ ಪ್ರಕರಣಗಳಿವೆ. ಒಮೈಕ್ರಾನ್‌ನ 1,892 ರೋಗಿಗಳಲ್ಲಿ, 766 ರೋಗಿಗಳು ಚೇತರಿಸಿಕೊಂಡಿದ್ದಾರೆ.

ಒಮೈಕ್ರಾನ್‌ನಿಂದಾಗಿ ಕೊರೋನಾ ಪ್ರಕರಣಗಳಲ್ಲಿ ಜಿಗಿತವೂ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 37,379 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. 11,007 ಚೇತರಿಸಿಕೊಂಡಿದ್ದಾರೆ ಮತ್ತು 124 ಜನರು ಕೊರೋನಾದಿಂದ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.

Share