Connect with us


      




ಕರ್ನಾಟಕ

ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್ಸ್, ಬಂಟಿಂಗ್ಸ್ ತೆಗೆಯುವಂತೆ ಖಡಕ್ ಸೂಚನೆ

Iranna Anchatageri

Published

on

ಬೆಂಗಳೂರು: ಫೆಬ್ರವರಿ 28 (ಯು.ಎನ್.ಐ.) ನಗರದಲ್ಲಿನ ಅನಧಿಕೃತ ಫ್ಲೆಕ್ಸ್, ಬ್ಯಾನರ್ಸ್, ಬಂಟಿಂಗ್ಸ್ ಗಳನ್ನು ತೆರವುಗೊಳಿಸುವ ಕೆಲಸ ಇನ್ನಷ್ಟು ವೇಗವಾಗಿ ನಡೆಯಬೇಕಿದ್ದು, ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಅಧಿಕಾರಿಗಳು ತತ್‌ಕ್ಷಣ ಕಾರ್ಯಪ್ರವೃತ್ತರಾಗಿ ತೆರವು ಕಾರ್ಯಾಚರಣೆ ನಡೆಸಬೇಕೆಂದು ಮುಖ್ಯ ಆಯುಕ್ತರಾದ ಶ್ರೀ ಗೌರವ್ ಗುಪ್ತ ರವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬಂಟಿಂಗ್ಸ್ ಮತ್ತು ಬ್ಯಾನರ್ಸ್ ಗಳ ತೆರವುಗೊಳಿಸುವಿಕೆ ಬಗ್ಗೆ ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಬ್ಯಾನರ್, ಫ್ಲೆಕ್ಸ್ ಗಳನ್ನು ವ್ಯಾಪಕವಾಗಿ ಅಳವಡಿಸಲಾಗುತ್ತಿದ್ದು, ಆಯಾ ವಲಯ ವ್ಯಾಪ್ತಿಯಲ್ಲಿಯ ಸ್ಥಳೀಯ ಅಧಿಕಾರಿಗಳು ಯಾವುದೇ ಫ್ಲೆಕ್ಸ್ ಗಳನ್ನು ಅಳವಡಿಸಲು ಬಿಡಬಾರದು. ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಸುವಂತಹವರ ಮೇಲೆ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಎಫ್.ಐ.ಆರ್ ದಾಖಲಿಸಲು ಸೂಚನೆ ನೀಡಿದರು.

ಚುನಾವಣೆಯ ಸಂದರ್ಭದಲ್ಲಿ ಹೇಗೆ ನಗರವು ಬ್ಯಾನರ್ಸ್, ಫ್ಲೆಕ್ಸ್ ಗಳಿಂದ ಮುಕ್ತವಾಗಿರುತ್ತದೆಯೋ ಅದೇ ರೀತಿ ಈಗಲೂ ಕೂಡ ನಗರವು ಬ್ಯಾನರ್ಸ್, ಫ್ಲೆಕ್ಸ್ ಗಳಿಂದ ಮುಕ್ತವಾಗಿರಬೇಕು. ನಗರದಲ್ಲಿ ಎಲ್ಲೆಲ್ಲಿ ಹೆಚ್ಚಾಗಿ ಫ್ಲೆಕ್ಸ್, ಬ್ಯಾನರ್ ಗಳನ್ನು ಅಳವಡಿಸಲಾಗಿದೆಯೋ ಅಂತಹ ಸ್ಥಳಗಳಲ್ಲಿ ಪೊಲೀಸ್ ಸಹಯೋಗದ ಜೊತೆಗೆ ಮಾರ್ಷಲ್‌ಗಳನ್ನು ಸಹ ನಿಯೋಜನೆ ಮಾಡಿಕೊಂಡು ತೆರವುಗೊಳಿಸಲು ಮುಂದಾಗಬೇಕು. ಪಾಲಿಕೆಯ ಶಿಲ್ಟ್ ಅಂಡ್ ಟ್ರ್ಯಾಕ್ಟರ್, ಪ್ರಹಾರಿ ಸೇರಿದಂತೆ ಹೆಚ್ಚುವರಿಯಾಗಿ ಇನ್ನಿತರೆ ವಾಹನಗಳು ಹಾಗೂ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡು ತೆರವು ಕಾರ್ಯಾರಣೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಫ್ಲೆಕ್ಸ್, ಬ್ಯಾನರ್ಸ್, ಬಂಟಿಗ್ಸ್, ಭಿತ್ತಿಪತ್ರ, ಬಾವುಟಗಳು ಸೇರಿದಂತೆ ಇತ್ಯಾದಿ ಜಾಹೀರಾತು/ಪ್ರಕಟಣೆಗಳ ಅಳವಡಿಕೆಯು ಬಿಬಿಎಂಪಿ ಕಾಯ್ದೆ 2020 ಮತ್ತು ಕರ್ನಾಟಕ ಮುಕ್ತ ಸ್ಥಳಗಳ(ವಿರೂಪಗೊಳಿಸುವಿಕೆ ತಡೆ) ಕಾಯ್ದೆ 1981ರ ಕಲಂ(3)ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಆದರೂ ಸಹ ನಗರದಲ್ಲಿ ಮತ್ತೆ ಮತ್ತೆ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ಸ್ಗಳನ್ನು ಅಳವಡಿಸಿ ನಗರದ ಸೌಂದರ್ಯ ಆಳಾಗುವಂತಹ ಕೆಲಸ ಮಾಡಲಾಗುತ್ತಿದೆ. ಈ ಸಂಬಂಧ ಪಾಲಿಕೆಯ ಎಲ್ಲಾ ವಲಯಗಳಲ್ಲಿಯೂ ಅಧಿಕಾರಿಗಳು ಕೂಡಲೆ ಅಗತ್ಯ ಕ್ರಮಗಳನ್ನು ಕೈಗೊಂಡು ತೆರವು ಕಾರ್ಯಾಚರಣೆ ಮಾಡಿ, ಯಾವುದೇ ಅನಧಿಕೃತ ಫ್ಲೆಕ್ಸ್ ಗಳು ಇರದಂತೆ ಕ್ರಮವಹಿಸಲು ಸೂಚನೆ ನೀಡಿದರು.

ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ಸ್, ಬಂಟಿಗ್ಸ್ಗಳನ್ನು ಅಳವಡಿಸುವ ಪ್ರಕ್ರಿಯೆ ಹೆಚ್ಚಾಗಿದ್ದು, ಇದರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಸಿಬ್ಬಂದಿಯು ಅನಧಿಕೃತ ಫ್ಲೆಕ್ಸ್ ಗಳನ್ನು ತೆರವುಗೊಳಿಸುವ ವೇಳೆ ಪಾಲಿಕೆ ಅಧಿಕಾರಿಗಳ ಜೊತೆ ತೆರಳಿ ಅಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಇದಕ್ಕೆ ಪೊಲೀಸ್ ಇಲಾಖೆಗೆ ಸಹಕಾರ ಅತ್ಯಗತ್ಯ ಎಂದು ಮುಖ್ಯ ಆಯುಕ್ತರು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ರವರಿಗೆ ಮನವಿ ಮಾಡಿದರು. ಈ ವೇಳೆ ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ರವರು ಪ್ರತಿಕ್ರಿಯಿಸಿ, ಪಾಲಿಕೆಯ ಜೊತೆಗೆ ನಮ್ಮ ಅಧಿಕಾರಿಗಳು ಕೈಜೋಡಿಸಿ ಕಾರ್ಯನಿರ್ವಹಿಸಲಿದ್ದು, ಪಾಲಿಕೆ ಅಧಿಕಾರಿಗಳಿಗೆ ಬೇಕಾದಂತಹ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಪಾಲಿಕೆಯ ಎಲ್ಲಾ ವಲಯ ಆಯುಕ್ತರುಗಳು, ಹಣಕಾಸು ವಿಭಾಗದ ಅಪರ ಆಯುಕ್ತರು ವೆಂಕಟೇಶ್.ಎಸ್, ಎಲ್ಲಾ ವಲಯ ಜಂಟಿ ಆಯುಕ್ತರುಗಳು, ಎಲ್ಲಾ ವಲಯ ಮುಖ್ಯ ಇಂಜಿನಿಯರ್‌ಗಳು, ಎಲ್ಲಾ ವಿಭಾಗೀಯ ಕಾರ್ಯಪಾಲಕ ಇಂಜಿನಿಯರ್‌ಗಳು ಇತರ ಅಧಿಕಾರಿಗಳು ಉಪಸ್ಥಿರಿದ್ದರು.

Share