Connect with us


      
ಜಾನಪದ

ಜಾನಪದ ಸಾಹಿತ್ಯ

pratham

Published

on

ಕನ್ನಡ ಜಾನಪದ:
ಪಾಶ್ಚಾತ್ಯ ದೇಶಗಳಲ್ಲಿ ಜಾನಪದ ಸಂಗ್ರಹ ಹಾಗೂ ಅಧ್ಯಯನಗಳ ಬಗ್ಗೆ 19ನೆಯ ಶತಮಾನದಲ್ಲಿ ವಿಶೇಷವಾದ ಆಸಕ್ತಿ ಮೂಡಿ ಆ ನಿಟ್ಟಿನಲ್ಲಿ ಉತ್ತಮ ಸಾಧನೆಯನ್ನು ಅಲ್ಲಿಯ ವಿದ್ವಾಂಸರು ಮೆರೆದರು. ಜಾನಪದ ಸಂಬಂಧವಾದ ವಿಷಯಗಳಿಗೆ ಪ್ರಚಲಿತವಾಗಿದ್ದ ಪಾಪ್ಯುಲರ್ ಆಂಟಿಕ್ವಿಟೀಸ್ ಎಂಬ ಹೆಸರಿಗೆ ಬದಲಾಗಿ ಈಗ ಅತ್ಯಂತ ಜನಪ್ರಿಯತೆಯನ್ನು ಸಾಧಿಸಿಕೊಂಡಿರುವ ಫೋಕ್ಲೋರ್ (ಜಾನಪದ) ಎಂಬ ಪದವನ್ನು 1846ರಲ್ಲಿ ಡಬ್ಲ್ಯೂ. ಜೆ. ಥಾಮ್ಸ್‌ ಬಳಕೆಗೆ ತಂದ ಎರಡು ದಶಕಗಳಲ್ಲೇ ಇಂಗ್ಲೆಂಡಿನಲ್ಲಿ ಇಂಗ್ಲಿಷ್ ಫೋಕ್ಲೋರ್ ಸೊಸೈಟಿ ಸ್ಥಾಪಿತವಾಗಿ ವಿಶ್ವದಾದ್ಯಂತ ಜಾನಪದ ಅಧ್ಯಯನಕ್ಕೆ ಒಂದು ಹೊಸ ತಿರುವನ್ನು ಕೊಟ್ಟಿತು. ಅನೇಕ ಪ್ರಸಿದ್ಧ ವಿದ್ವಾಂಸರು ಆ ಕ್ಷೇತ್ರವನ್ನು ಪ್ರವೇಶಿಸಿ ಶಾಸ್ತ್ರೀಯ ತಳಹದಿಯ ಮೇಲೆ ಜಾನಪದ ಸಂಶೋಧನೆಯನ್ನು ರೂಪಿಸಿದರು. ವಿಶ್ವದ ನಾನಾ ಕಡೆಗಳಲ್ಲಿ ಸಂಗ್ರಹಕಾರ್ಯ ವ್ಯವಸ್ಥಿತವಾಗಿ ನಡೆಯತೊಡಗಿ ಅಪಾರ ಸಾಹಿತ್ಯರಾಶಿ 19ನೆಯ ಶತಮಾನದ ಅಂತ್ಯದ ವೇಳೆಗೇ ವಿದ್ವಾಂಸರಿಗೆ ಲಭ್ಯವಾಯಿತು.
ಭಾರತದಲ್ಲಿಯೂ ಜಾನಪದ ಸಂಗ್ರಹಕಾರ್ಯ ಕಳೆದ ಶತಮಾನದಲ್ಲಿಯೇ ಆರಂಭವಾಯಿತು. ಪಾಶ್ಚಾತ್ಯ ವಿದ್ವಾಂಸರೂ ಅಧಿಕಾರಿಗಳೂ ಭಾರತೀಯ ವಿದ್ವಾಂಸರೂ ಭಾರತದ ನಾನಾ ಕಡೆಗಳಲ್ಲಿ ಜನಪದ ಕಥೆಗಳನ್ನೂ ಗಾದೆಗಳನ್ನೂ ಲಾವಣಿಗಳನ್ನೂ ಸಂಪ್ರದಾಯ, ನಂಬಿಕೆ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಸಾಹಿತ್ಯವನ್ನೂ ಅಲ್ಲಲ್ಲಿ ಸಂಗ್ರ್ರಹಿಸಿದರು. ಈ ಎಲ್ಲ ಸಾಹಿತ್ಯವೂ ಇಂಗ್ಲಿಷಿಗೆ ಅನುವಾದಿತವಾಗಿ ಪ್ರಕಟವಾದುದರಿಂದ ವಿಶ್ವಮಟ್ಟದಲ್ಲಿ ಭಾರತೀಯ ಜಾನಪದದ ಕಡೆ ಪ್ರಸಿದ್ಧ ವಿದ್ವಾಂಸರ ದೃಷ್ಟಿ ಹರಿಯಲು ಕಾರಣವಾಯಿತು.
ಕಳೆದ ಶತಮಾನದಲ್ಲಿ ನಡೆದ ಸಂಗ್ರಹಕಾರ್ಯ ಬಹುಮಟ್ಟಿಗೆ ಉತ್ತರ ಭಾರತಕ್ಕೆ ಸೀಮಿತವಾಯಿತು. ದಕ್ಷಿಣ ಭಾರತದಲ್ಲಿ ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳ ಭಾಷೆಗಳಿಗೆ ಸಂಬಂಧಿಸಿದಂತೆ ವ್ಯಾಪಕವಾದ ಸಂಗ್ರಹಕಾರ್ಯ ನಡೆಯಲಿಲ್ಲ. ಗಾದೆಗಳು, ಕಥೆಗಳು ಮತ್ತು ಲಾವಣಿಗಳಿಗೆ ಸಂಬಂಧಿಸಿದಂತೆ ಅಷ್ಟಿಷ್ಟು ಸಂಗ್ರಹ ಕಾರ್ಯ ನಡೆಯದಿದ್ದರೂ ಅದು ಅಸಮಗ್ರವಾದುದು. ಕನ್ನಡದಲ್ಲಿಯೂ ಇದೇ ಸ್ಥಿತಿಯಾಯಿತು. ಇತರ ಕ್ಷೇತ್ರಗಳಲ್ಲಿ ಪ್ರಸಿದ್ಧರಾದ ಕೆಲವು ಪಾಶ್ಚಾತ್ಯ ವಿದ್ವಾಂಸರು ಜಾನಪದ ಸಂಗ್ರಹ ಕಾರ್ಯವನ್ನು ಸ್ವಲ್ಪಮಟ್ಟಿಗೆ ನಡೆಸಿದ್ದರೂ ಅಷ್ಟೇನೂ ಗಣನೀಯ ಪ್ರಮಾಣದಲ್ಲಿ ಆ ಕಾರ್ಯ ನಡೆಯಲಿಲ್ಲ ಎಂದೇ ಹೇಳಬೇಕು.
ಜಾನಪದ ಸಂಗ್ರಹದ ಪ್ರಥಮ ಪ್ರಯತ್ನ
ಕನ್ನಡದಲ್ಲಿ ಜಾನಪದ ಸಂಗ್ರಹದ ಪ್ರಥಮ ಪ್ರಯತ್ನವನ್ನು 1816ರ ವೇಳೆಗೇ ಗುರುತಿಸಬಹುದು. ಈ ಅವಧಿಯಲ್ಲಿ ಪ್ರಕಟವಾದ ಅಬೈಡುಬ್ಯೊಸನ ಹಿಂದೂ ಮ್ಯಾನರ್ಸ್‌, ಕಸ್ಟಮ್ಸ್‌ ಅಂಡ್ ಸೆರೆಮೊನೀಸ್ ಎಂಬ ಗ್ರಂಥದಲ್ಲಿ ಕನ್ನಡ ಜನಪದ ಕಥೆಗಳ ಕೆಲವು ಭಿನ್ನರೂಪಗಳನ್ನು (ವೇರಿಯಂಟ್ಸ್‌) ಕಾಣಬಹುದು. ಮತಪ್ರಚಾರಕನಾಗಿ ಕನ್ನಡನಾಡಿನ ಕೆಲವು ಭಾಗಗಳಲ್ಲಿ ಸಂಚಾರ ಮಾಡಿದ ಈ ಫ್ರಂಚ್ ಮಹಾಶಯ ಅನೇಕ ಜಾನಪದ ಸಂಪ್ರದಾಯಗಳನ್ನು ತನ್ನ ಗ್ರಂಥದಲ್ಲಿ ಗುರುತಿಸಿದ್ದಾನೆ. ದೊಡ್ಡ ಸ್ವಾಮಿ ಎಂದು ಜನಪ್ರಿಯನಾಗಿದ್ದ ಈತ ಜನಜೀವನದೊಡನೆ ಅತ್ಯಂತ ಹತ್ತಿರದ ಸಂಬಂಧವನ್ನು ಇಟ್ಟುಕೊಂಡು ಸ್ವಾರಸ್ಯವಾದ ರೀತಿಯಲ್ಲಿ ಅನೇಕ ವಿಷಯಗಳನ್ನು ನಿರೂಪಿಸಿದ್ದಾನೆ.
ಚಾರಲ್ಸ್‌ ಇ. ಗೋವರ್
ಕನ್ನಡ ಜಾನಪದ ಸಂಗ್ರಹದ ಇತಿಹಾಸದಲ್ಲಿ ಚಾರಲ್ಸ್‌ ಇ. ಗೋವರನ ಹೆಸರು ಅತ್ಯಂತ ಗಮನಾರ್ಹವಾದುದು. ಕಳೆದ ಶತಮಾನದ ಮಧ್ಯಭಾಗದಲ್ಲಿ ಪ್ರಕಟವಾದ “ಪೋಕ್ ಸಾಂಗ್ಸ್‌ ಆಫ್ ಸದರನ್ ಇಂಡಿಯ” ಎಂಬ ತನ್ನ ಗ್ರಂಥದಲ್ಲಿ ಈತ ಭಾರತದ ಪ್ರಮುಖ ಭಾಷೆಗಳ ಜನಪದಗೀತೆಗಳನ್ನು ಇಂಗ್ಲಿಷಿಗೆ ಅನುವಾದಿಸಿ ಪ್ರಕಟಿಸಿದ್ದಾನೆ. ಈತನ ಕೃತಿಯಲ್ಲಿ ಕನ್ನಡ ಜನಪದ ಗೀತೆಗಳಿಗೇ ಆದ್ಯತೆ ಇದ್ದು 28 ಹಾಡುಗಳು ಪ್ರಥಮಭಾಗದಲ್ಲಿ ಪ್ರಕಟವಾಗಿದ್ದರೂ ಅವುಗಳಲ್ಲಿ ಬಹುಪಾಲು ದಾಸರ ಕೀರ್ತನೆಗಳ ಅನುವಾದಗಳಾಗಿವೆ. ದಾಸಪರಂಪರೆಯ ಹಾಡುಗಾರರಿಂದ ಇವನ್ನು ಸಂಗ್ರಹಿಸಿದ ಇಬ್ಬರು ಮಿಷನರಿಗಳು (ಎ. ಜೆ. ಲೈಲೆ ಹಾಗೂ ಎಸ್. ಡಾಲ್ಜೆಲ್) ದಾಸರ ಪದಗಳು ಎಂಬ ಶೀರ್ಷಿಕೆಯಲ್ಲಿ ಅವನ್ನು ಗೋವರನಿಗೆ ನೀಡಿದ್ದಾರೆ. ಅವರೇ ಅನುವಾದಿಸಿ ಕೊಟ್ಟ ಈ ಕೀರ್ತನೆಗಳನ್ನು ಗೋವರ್ ಕನ್ನಡ ಹಾಡುಗಳು ಎಂದು ಕರೆದು ಅವುಗಳ ಬಗ್ಗೆ ವಿವರವಾದ ವಾಖ್ಯೆ ಮಾಡಿದ್ದಾನೆ. ಆದರೆ ಶುದ್ಧ ಜನಪದ ಗೀತೆಗಳಾವು ಗೋವರನ ಗಮನಕ್ಕೆ ಬಂದಂತೆ ತೋರುವುದಿಲ್ಲ. ಗೋವರನಿಗೂ ಮೊದಲೇ 24 ಹಾಡುಗಳನ್ನು ಪ್ರಕಟಿಸಿದ್ದ ಮೊಗ್ಲಿಂಗ್ನ ಕೃತಿಯನ್ನೂ ಈ ದೃಷ್ಟಿಯಿಂದಲೇ ಪರಿಶೀಲಿಸಬೇಕಾಗಿದೆ.
ಗೋವರನ ಸಂಕಲನದಲ್ಲಿ ಕೆಲವು ಬಡಗ ಜನಪದಗೀತೆಗಳು ಹಾಗೂ ಕೊಡಗಿನ ಜನಪದಗೀತೆಗಳು ಲಭ್ಯವಾಗುತ್ತವೆ. ಕೊಡಗಿನ ಹುತ್ತರಿಹಾಡು, ಮದುವೆಯ ಹಾಡುಗಳು, ಸಂಸ್ಕಾರ ಗೀತೆಗಳು, ಶಿಶುಪ್ರಾಸಗಳು ಇಲ್ಲಿ ಗಮನಾರ್ಹವಾಗಿವೆ.
ಗೋವರನ ಅನಂತರ ಪ್ರಸಿದ್ಧ ಪ್ರಾಕ್ತನ ಸಂಶೋಧಕನಾದ ಜೆ. ಎಫ್. ಫ್ಲೀಟ್ ಜಾನಪದ ಸಂಬಂಧವಾದ ಆಂಟಿಕ್ವೆರಿಯ ಸಂಪುಟಗಳಲ್ಲಿ 1885ರ ವೇಳೆಗೆ ಈತ ಪ್ರಕಟಿಸಿದ ಲಾವಣಿಗಳು ಈತನ ಸಂಗ್ರಹಾಸಕ್ತಿಗೂ ಸಂಶೋಧನ ನಿಷ್ಠೆಗೂ ಸಂಪಾದನೆ ವೈಶಿಷ್ಟ್ಯಕ್ಕೂ ಉತ್ತಮ ನಿದರ್ಶನವಾಗಿವೆ. ಕಿತ್ತೂರಿನ ಈರವ್ವ, ಸಂಗೊಳ್ಳಿ ರಾಯಣ್ಣ, ಬಾದಾಮಿಯ ರಾಣಮಂಡಲ ಕೋಟೆಯ ಮುತ್ತಿಗೆ, ನರಗುಂದದ ವಿಜಯ, ಆದಾಯ ತೆರಿಗೆಯ ಜಾರಿ, ಹಲಗಲಿಯ ಬೇಡರು, ಹಳ್ಳಿಯ ಜಮೀನ್ದಾರ, ಆಂಗ್ಲರಾಷ್ಟ್ರ ವೈಭವದ ಹಾಡು-ಮುಂತಾದವನ್ನು ಗಮನಿಸಿದಾಗ ಫ್ಲೀಟನ ದೃಷ್ಟಿ ವಿಶೇಷವಾಗಿ ಜಾನಪದದ ಒಂದು ಸೀಮಿತ ಹಿನ್ನಲೆಗೆ ಮಾತ್ರ ಮೀಸಲಾಗಿತ್ತು.-ಎಂಬುದು ಸ್ಪಷ್ಟವಾಗುತ್ತದೆ. ಏಕೆಂದರೆ ಆತ ಸಂಗ್ರಹಿಸಿದ ಲಾವಣಿಗಳು ಆಂಗ್ಲ ಪ್ರಭುತ್ವ ಹಾಗೂ ಅದರ ಬಗ್ಗೆ ಜನಸಾಮಾನ್ಯರ ಪ್ರತಿಕ್ರಿಯೆಗಳನ್ನು ಮಾತ್ರ ಪ್ರತಿಬಿಂಬಿಸುತ್ತವೆ. ಕಿತ್ತೂರಿನ ಪತನವಾದ ಮೇಲೆ ಹುಟ್ಟಿಕೊಂಡ ಲಾವಣಿಗಳಾದುದರಿಂದ ಕನ್ನಡಿಗರು ಆಂಗ್ಲರ ದಾಳಿ ಹಾಗೂ ದಬ್ಬಾಳಿಕೆಗಳನ್ನು ಹೇಗೆ ಕಂಡಿದ್ದಾರು ಎಂಬುದಕ್ಕವು ಸಾಕ್ಷಿಗಳಾಗಿವೆ. ಸಾಹಿತ್ಯಕ ದೃಷ್ಟಿಯಿಂದಲೂ ಐತಿಹಾಸಿಕ ದೃಷ್ಟಿಯಿಂದಲೂ ಈ ಲಾವಣಿಗಳು ಅತ್ಯಂತ ಮಹತ್ತ್ವದ ಕಾಣಿಕೆಗಳಾಗಿವೆ. ಆದರೆ ಫ್ಲೀಟನಂಥ ವಿದ್ವಾಂಸನ ದೃಷ್ಟಿ ಜಾನಪದ ಕ್ಷೇತ್ರಕ್ಕೆ ಹೊರಳಿಯೂ ಮಿಕ್ಕ ಅದರ ಅನಂತ ಪ್ರಕಾರಗಳನ್ನು ಗುರುತಿಸದೆ ಹೋದುದು ಆಶ್ಚರ್ಯಕರವಾಗಿದೆ. ಉತ್ತರ ಕರ್ಣಾಟಕದ ಈ ಲಾವಣಿಗಳಿಗೆ ಕನ್ನಡ ಮೂಲ, ಇಂಗ್ಲಿಷ್ ಅನುವಾದ, ಅದಕ್ಕೆ ಸಂಬಂಧಿಸಿದ ಟಿಪ್ಪಣಿಗಳು ಮುಂತಾದವನ್ನು ಫ್ಲೀಟ್ ಅತ್ಯಂತ ಪಾಂಕ್ತವಾಗಿ ಒದಗಿಸಿ ಉಪಕರಿಸಿದ್ದಾನೆ. ಇಷ್ಟು ಸರ್ವಸಮರ್ಪಕ ಸಂಪಾದನಾ ದೃಷ್ಟಿಯಿಂದ ಕೂಡಿದ ಕನ್ನಡ ಜಾನಪದ ಸಂಕಲನಗಳು ವಿರಳವೆಂದೇ ಹೇಳಬೇಕು.

ಕೃಪೆ: ವಿಕಿಪೀಡಿಯಾ

Share